Friday, 20th September 2024

ಕಸ್ತೂರಿ ರಂಗನ್‌ ವರದಿ ಜಾರಿ : ಒಂದು ಅಭಿಪ್ರಾಯ

ದಾಸ್‌ ಕ್ಯಾಪಿಟಲ್‌

ಟಿ.ದೇವಿದಾಸ್‌, ಬರಹಗಾರ, ಶಿಕ್ಷಕ

ಪಶ್ಚಿಮ ಘಟ್ಟಗಳು ಭಾರತೀಯ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ ಹಬ್ಬಿದ ಒಂದು ಪರ್ವತ ಶ್ರೇಣಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾರತದಷ್ಟೇ ಅಲ್ಲ, ಯುರೋಪ್ ದೇಶಗಳ ಮೇಲೂ ಭೌಗೋಳಿಕವಾಗಿ ಇದರ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಭಾವ ಮತ್ತು ಪರಿಣಾಮದ ವಿಸ್ತಾರತೆಯ ವ್ಯಾಪ್ತಿಯನ್ನು ಹೊಂದಿದೆ.

ಪಶ್ಚಿಮಘಟ್ಟ ಪರ್ವತಶ್ರೇಣಿ, ಗುಜರಾತಿನ ತಪತಿನದಿ ಮೂಲದಿಂದ ಆರಂಭವಾಗಿ ಮಹಾರಾಷ್ಟ್ರ ಗೋವಾ, ಕರ್ನಾಟಕ, ಕೇರಳ, ತಮಿಳುನಾಡು, ಕನ್ಯಾಕುಮಾರಿಯವರೆಗೆ ಹಬ್ಬಿ ನಿಂತಿದೆ. ಇದರ ಒಟ್ಟೂ ವಿಸ್ತೀರ್ಣವೇ ಸುಮಾರು 164280 ಚ,ಕಿಮೀ. ಇದು ಭಾರತದ ಪಶ್ಚಿಮ ರಾಜ್ಯಗಳನ್ನು ಒಳಗೊಂಡಿದೆ. ಪಶ್ಚಿಮ ಘಟ್ಟಗಳ ಒಟ್ಟು 164280 ಚ.ಕಿ.ಮೀ. ಪ್ರದೇಶದಲ್ಲಿ ಸುಮಾರು 59,940 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ.

ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆಯ ಉದ್ದೇಶದಿಂದ, ಅದರ ಬಗೆಗೆ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅಧ್ಯಕ್ಷತೆಯಲ್ಲಿ ಕೇಂದ್ರ ಸರಕಾರ ಒಂದು ಸಮಿತಿ ರಚಿಸಿ ಅವರನ್ನು ಈ ವಿಷಯದಲ್ಲಿ ಒಂದು ವರದಿ ಕೊಡಲು ಕೇಂದ್ರ ಸರಕಾರ ನೇಮಿಸಿತು. ಈ ವರದಿ ಯಲ್ಲಿ ಶೇ. 94-97ರಷ್ಟು ಪಶ್ಚಿಮ ಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಬೇಕೆಂದೂ ಮತ್ತು ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳವಾಗ ಅದು ಅಲ್ಲಿಯ ಪರಿಸರವನ್ನು, ಜೀವ ವೈವಿಧ್ಯತೆಯ ಕ್ರಮವನ್ನು ಕೆಡಿಸದಿರುವ ಷರತ್ತಿನ ಮೇಲೆ ಅನುಮತಿ ನೀಡಬೇಕೆಂದು ಶಿಫಾರಸ್ಸು ಮಾಡಿತು.

ಈ ಭಾಗದಲ್ಲಿ ಬಹಳಷ್ಟು ತೋಟಗಳು, ವಸತಿ ಪ್ರದೇಶಗಳು, ಕೃಷಿ ಪ್ರದೇಶವೂ ಸೇರಿತ್ತು. ಇದರಲ್ಲಿ ಆ ಪ್ರದೇಶದ ಮುಕ್ಕಾಲು ಭಾಗವನ್ನು ನಿರ್ಬಂಽತ ಪರಿಸರ ಸೂಕ್ಷ್ಮಪ್ರದೇಶ ವೆಂದು ಪರಿಗಣಿಸಲಾಗಿತ್ತು. ಆ ಕಮಿಟಿಯು ಆ ಪ್ರದೇಶದಲ್ಲಿ ಯಾವುದೇ
ದೊಡ್ಡ ಹೊಸ ಅಣೆಕಟ್ಟುಗಳನ್ನು ಕಟ್ಟಬಾರದು, ಈ ಪ್ರದೇಶ ವಿಶೇಷ ರಕ್ಷಣೆ ಮತ್ತು ಅದರ ಭೂಲಕ್ಷಣ, ವನ್ಯಜೀವಿಗಳ ಕಾಳಜಿ, ಫಲವತ್ತಾದ ಭೂಮಿಯನ್ನು ಉಳಿಸುವ ಅಗತ್ಯವಿದೆ. ಈ ಪ್ರದೇಶದಲ್ಲಿ, ಕೆಲವು ಐತಿಹಾಸಿಕ ಮೌಲ್ಯಗಳು ಸಹ ಇವೆ, ಇತ್ಯಾದಿ ಕಾರಣಗಳನ್ನು ಕೊಟ್ಟಿತ್ತು.

ಅದರಲ್ಲೂ ಅರಣ್ಯ ಇಲಾಖೆಯ ಅಧಿಕಾರಿಗಳೇ ವರದಿ ಬಂದಾಗಲೇ ಅನುಷ್ಠಾನಗೊಳಿಸಲು ಸರಕಾರಕ್ಕೆ ಸಲಹೆ ನೀಡಿದ್ದರು.
ವರದಿ ಜಾರಿ ಕಷ್ಟವೆಂದು ಸರಕಾರ ಕೈಬಿಟ್ಟಿತ್ತು. ಆಗಲೂ ಈ ವರದಿಯು ಸಮಗ್ರತೆಯ ಕೊರತೆಯಿಂದ ವಿರೋಧವನ್ನು
ಎದುರಿಸಬೇಕಾಯಿತು. ತದನಂತರದಲ್ಲಿ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿಯು ರಚನೆಯಾಗಿ ವರದಿಯನ್ನು ಸಲ್ಲಿಸುವಂತೆ ಕೇಳಲಾಯಿತು. ಗಾಡ್ಗೀಳ್ ಸಮಿತಿ ವರದಿಯ ಕುಂದು ಕೊರತೆಯನ್ನು ನೀಗಿಸಲು ಕಸ್ತೂರಿ ರಂಗನ್ ಸಮಿತಿಯನ್ನು ನೇಮಿಸಲಾಯಿತು.

2013ರ ಏಪ್ರಿಲ್ 15ರಂದು ಸಲ್ಲಿಸಿತು. ಇತರ 10 ಸದಸ್ಯರ ಸಮಿತಿಯ ಜೊತೆ, ಕೆ.ಕಸ್ತೂರಿರಂಗನ್ ಸಿದ್ಧಪಡಿಸಿದ ಪಶ್ಚಿಮ
ಘಟ್ಟಗಳ ಈ ಕಸ್ತೂರಿ ರಂಗನ್ ವರದಿಯನ್ನು ಸರಕಾರ ಸ್ವೀಕರಿಸಿದೆ. ಕಸ್ತೂರಿ ರಂಗನ್ ಸಮಿತಿ ತನ್ನ ವರದಿಯಲ್ಲಿ ಜನವಸತಿ ಪ್ರದೇಶವನ್ನು ಉಳಿಸಿಕೊಳ್ಳುವುದರ ಜೊತೆಗೆ ಪಡುವಣ ಘಟ್ಟ ಶ್ರೇಣಿಗಳ ಸಂರಕ್ಷಣೆಯ ಬಗ್ಗೆ ನಿಖರವಾಗಿ ಹೇಳಿತ್ತು. ಆಗಲೂ ಇಲಾಖೆಯ ಅಧಿಕಾರಿಗಳು ಅನುಷ್ಠಾನಕ್ಕೆ ಸಲಹೆ ನೀಡಿದರು. ಆದರೆ ರಾಜಕೀಯ ಕಾರಣಗಳು, ಜನರಿಗೆ ತೊಂದರೆಯಾಗುತ್ತ ದೆಂದು ಸರಕಾರ ತೀರ್ಮಾನ ಕೈಗೊಳ್ಳಲ್ಲಿಲ್ಲ.

ಕಸ್ತೂರಿ ರಂಗನ್ ಸಮಿತಿ ಗುರುತಿಸಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ 59.949 ಸಾವಿರ ಚ.ಕಿ.ವ್ಯಾಪ್ತಿಯ ಪ್ರದೇಶ (ಶೇ.36.49)
ಇಕೋಸೆನ್ಸಿಟಿವ್ ಏರಿಯಾ (ಇಎಸ್‌ಎ)ಕ್ಕೆ ಒಳಪಟ್ಟು ನಿರ್ಬಂಧಿತವಾಗಿರುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳು ಗಾರಿಕೆ, ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಎ ರೀತಿಯ ಗಣಿಗಾರಿಕೆ ಮುಂದಿನ 5 ವರ್ಷ ಮುಗಿಯುತ್ತಿದ್ದಂತೆ ಸ್ಥಗಿತಗೊಳಿಸಬೇಕು.

20000 ಚ,ಮೀ, ವ್ಯಾಪ್ತಿಯಲ್ಲಿ ದೊಡ್ಡದಾದ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಇಎಸ್‌ಎನಿಂದ 10ಕಿ.ಮೀ. ವ್ಯಾಪ್ತಿ ಯಲ್ಲಿ ಯಾವುದೇ ಕಾಮಗಾರಿ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು. ಈ ಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ. ಕೇಂದ್ರ ಸರಕಾರದ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಚಿವಾಲಯವು ಪ್ರಕಟಿಸಿದ ಅಧಿಸೂಚನೆಯಲ್ಲಿ. ಕರ್ನಾಟಕ ರಾಜ್ಯದ 1553 ಕ್ಕೂ ಹೆಚ್ಚು ಹಳ್ಳಿಗಳ 20668 ಚದರ ಕಿ.ಮೀ. ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ-Ecologically Sensitive Area (ESA) zones) ದಲ್ಲಿ ಸೇರಿದೆ. ಮೊದಲ ಎರಡು ಕರಡು ಅಽಸೂಚನೆಯಲ್ಲಿ ಕೇರಳ ರಾಜ್ಯವೂ ಇಎಸ್‌ಎ ಪಟ್ಟಿಯಲ್ಲಿತ್ತು.

ಆದರೆ ಮೂರನೇ ಬಾರಿ ಹೊರಡಿಸಿರುವ ಅಽಸೂಚನೆಯಲ್ಲಿ ಕೇರಳ ಇಲ್ಲ. ಇದಕ್ಕೆ ಕಾರಣ, ಅಲ್ಲಿನ ಸರಕಾರ ಸಲ್ಲಿಸಿರುವ ಮ್ಯಾಪ್ ಸಹಿತ ವಿಸ್ತೃತ ವರದಿ ಮತ್ತು ಈ ಸಂಬಂಧ ರಾಜಕೀಯ ಒತ್ತಡ ಹೇರಿತ್ತು. ಆದರೆ ಕರ್ನಾಟಕ ಸರಕಾರ ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಿಲ್ಲ ಎಂಬ ಆರೋಪವಿದೆ. ಡಾ.ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡಿದರೆ ಪಶ್ಚಿಮ ಘಟ್ಟ ಮತ್ತು ಮಲೆನಾಡು ಪ್ರದೇಶವನ್ನು ಅತೀ ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಲಾಗುತ್ತದೆ.

ಒಂದು ಬಾರಿ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಿದರೆ ಅಲ್ಲಿ ಯಾವುದೇ ರೀತಿಯ ಚಟುವಟಿಕೆಯನ್ನು ನಡೆಸುವಂತಿಲ್ಲ. ರಾಜ್ಯ ಸರಕಾರ ಸಂಪೂರ್ಣವಾಗಿ ತನ್ನ ಹತೋಟಿಯನ್ನು ಕಳೆದುಕೊಂಡು ಕೇಂದ್ರ ಸರಕಾರದ ಸುಪರ್ದಿಗೆ ನೀಡಬೇಕಾಗುತ್ತದೆ. ಪಶ್ಚಿಮ ಘಟ್ಟದಲ್ಲಿ ಅಪರೂಪದ ಪ್ರಾಣಿಪಕ್ಷಿಗಳು, ಗಿಡಮೂಲಿಕೆಗಳು, ವನ್ಯಜೀವಿಗಳು ಇರುವುದರಿಂದ ಇವುಗಳ ಸಂರಕ್ಷಣೆ ಗಾಗಿ ಕೇಂದ್ರ ಸರಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಅಲ್ಲದೆ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸ ಬೇಕಾಗು ತ್ತದೆ.

ಅಲ್ಲದೆ ವಿದ್ಯುತ್, ನೀರಾವರಿ, ಕೈಗಾರಿಕೆ ಸೇರಿದಂತೆ ಯಾವುದೇ ರೀತಿಯ ಹೊಸ ಯೋಜನೆ ಗಳನ್ನು ಜಾರಿ ಮಾಡಬೇಕಾದರೆ ಕೇಂದ್ರ ಸರಕಾರದ ಒಪ್ಪಿಗೆ ಪಡೆಯಬೇಕು. ಡಾ.ಕಸ್ತೂರಿ ರಂಗನ್ ವರದಿಯಿಂದ ಬೆಳಗಾವಿ ಜಿಯ ಖಾನಾಪುರ 62 ಹೆಕ್ಟೇರ್, ಬೆಳಗಾವಿ ಒಂದು ಹೆಕ್ಟೇರ್, ಚಾಮರಾಜನಗರದ ಗುಂಡ್ಲುಪೇಟೆಯ 21, ಚಿಕ್ಕಮಗಳೂರು ಜಿಯ ಚಿಕ್ಕಮಗಳೂರು 27, ಕೊಪ್ಪ 32, ಮೂಡಿಗೆರೆ 27, ನರಸಿಂಹರಾಜಪುರ 35, ಶೃಂಗೇರಿ 26, ಕೊಡಗು ಜಿಯ ಮಡಿಕೇರಿ 23, ಸೋಮವಾರಪೇಟೆಯ 11, ವಿರಾಜಪೇಟೆಯ 21, ಹಾಸನ ಜಿಯ ಆಲೂರು 1, ಸಕಲೇಶಪುರ 34, ದ.ಕನ್ನಡದ ಬೆಳ್ತಂಗಡಿ 17, ಪುತ್ತೂರು 11, ಸುಳ್ಯ 18, ಉ.ಕನ್ನಡ ಜಿಯ ಆಂಕೋಲಾ 43, ಭಟ್ಕಳ 28, ಹೊನ್ನಾವರ 44, ಜೋಯ್ಡಾ 110, ಕಾರವಾರ 39, ಕುಮಟಾ 43, ಸಿದ್ದಾಪುರ 107, ಸಿರಸಿ 125, ಯಪುರ 47, ಮೈಸೂರಿನ ಎಚ್.ಡಿ.ಕೋಟೆ 62, ಶಿವಮೊಗ್ಗದ ಹೊಸನಗರ 126, ಸಾಗರ 134, ಶಿಕಾರಿಪುರ 12, ಶಿವಮೊಗ್ಗ 66, ತೀರ್ಥಹಳ್ಳಿ 146, ಉಡುಪಿಯ ಕಾರ್ಕಳ 13, ಕುಂದಾಪುರದ 24 ಹೆಕ್ಟೇರ್ ಈ ವ್ಯಾಪ್ತಿಗೆ ಒಳಪಡುತ್ತದೆ.

ಕೇಂದ್ರ ಸರಕಾರ ಮೊದಲ ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆ ಹೊರಡಿಸಿದ್ದು 2014ರ ಮಾ.10 ರಂದು. ನಂತರ
ಎರಡನೇ ಕರಡು ಅಧಿಸೂಚನೆಯನ್ನು 2015ರ ಸೆ.4ರಂದು ಹೊರಡಿಸಿತು. ಮೂರನೇ ಕರಡು ಅಧಿಸೂಚನೆಯನ್ನು 2017
ಫೆ.27ರಂದು ಹೊರಡಿಸಿದೆ. ಇಷ್ಟಾದರೂ ಸರಕಾರ ಅಂತಿಮ ಅಧಿಸೂಚನೆ ಹೊರಡಿಸುತ್ತಿಲ್ಲ. ಜನವಿರೋಧ ಕಟ್ಟಿಕೊಳ್ಳುವ ಬದಲು 545 ದಿನಗಳ ಗಡುವು ಸಮೀಪಿಸುತ್ತಿದ್ದಂತೆ ಹೊಸ ಕರಡು ಅಧಿಸೂಚನೆ ಹೊರಡಿಸಲಾಗುತ್ತಿದೆ. ಈ ಅಧಿಸೂಚನೆಯ ವಿರುದ್ಧ ಕೇಂದ್ರಕ್ಕೆ ಮತ್ತೆ ಆಕ್ಷೇಪಣೆ ಸಲ್ಲಿಸಲಾಗುವುದು, ಜನತೆಗೆ ತೊಂದರೆಯಾಗದಂತೆ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಹಿಂದಿನ ಕಾಂಗ್ರೆಸ್ ಸರಕಾರದ ಅರಣ್ಯ ಸಚಿವರು ತಿಳಿಸಿದ್ದರು.

ಅಪಸ್ವರ ಏಕೆ?: ಸೂಕ್ಷ್ಮಪ್ರದೇಶವೆಂದು ಗುರುತಿಸಲಾಗಿರುವ ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆ, ಸಿಮೆಂಟು ಉತ್ಪಾದನೆ, ಕಲ್ಲು
ಗಣಿಗಾರಿಕೆ, ಮರಳು ಗಣಿಗಾರಿಕೆಗಳಿಗೆ ಪೂರ್ಣ ನಿಷೇಧ. ಇರುವಗಣಿಗಾರಿಕೆ ಮುಚ್ಚಲು 5 ವರ್ಷ ಕಾಲಾವಕಾಶ. ಕೆಂಪು ವಲಯದ
ಕೈಗಾರಿಕೆಗಳಿಗೆ ಪೂರ್ಣ ನಿಷೇಧ. ಕಿತ್ತಳೆ ವಲಯ ಕೈಗಾರಿಕೆಗಳಲ್ಲಿ ಆಹಾರ, ಹಣ್ಣು ಸಂಸ್ಕರಣಾ ಕೈಗಾರಿಕೆಗಳಿಗೆ ವಿನಾಯಿತಿ.

20 ಸಾವಿರ ಚದರ ಮೀಟರಿಗಿಂತ ಅಧಿಕ ವಿಸ್ತಾರದ ಬಡಾವಣೆ, ಟೌನ್ ಶಿಪ್ ಮತ್ತು ಕಟ್ಟಡಗಳಿಗೆ ನಿಷೇಧ. ಉಷ್ಣ ಸ್ಥಾವರಗಳಿಗೆ ಅವಕಾಶವಿಲ್ಲ, ಕೆಲವು ಷರತ್ತುಗಳ ಮೇಲೆ ಜಲವಿದ್ಯುತ್ ಯೋಜನೆಗಳಿಗೆ ಅವಕಾಶ. ಕಡಿಮೆ ನೀರಿನ ಹರಿವು ಸಮಯದಲ್ಲಿ ಕೂಡ ಶೇ.30 ಜೀವಿ ಪರಿಸರಾತ್ಮಕ ಹರಿವಿರುವಂತೆ ನೋಡಿಕೊಳ್ಳುವುದು. ನದಿಯ ಹರಿವು, ಅರಣ್ಯ, ಜೀವ ವೈವಿಧ್ಯದ ಮೇಲೆ ಬೀರುವ ಪರಿಣಾಮ, ನಷ್ಟದ ಬಗ್ಗೆ ಅಧ್ಯಯನ ಬಳಿಕವೇ ಯಾವುದೇ ಯೋಜನೆಗೆ ಅವಕಾಶ.

ಒಪ್ಪಬಹುದಾದ ವಿಚಾರಗಳೂ ಇದರಲ್ಲಿವೆ. ಒಪ್ಪಲಾಗದ ವಿಚಾರಗಳು ಇದರಲ್ಲಿವೆ. ಆದರೂ ವಿರೋಧಕ್ಕೆ ಮುಖ್ಯ ಕಾರಣವೇನು?
ಈ ವರದಿ ರೂಪಿಸಿರುವುದರ ದೋಷವಿದೆ. ಇದು ಜನ ಸಮುದಾಯದ ಬೇಡಿಕೆಯಲ್ಲ. ವರದಿ ಸಿದ್ಧಪಡಿಸುವಾಗ ಜನರ ಅಭಿಪ್ರಾ ಯಕ್ಕೆ ಮನ್ನಣೆ ನೀಡಿಲ್ಲ’. ಕಸ್ತೂರಿ ರಂಗನ್ ವರದಿ ವಿದೇಶಿ ಸಂಸ್ಥೆ ಪ್ರಾಯೋಜಿತ ವರದಿ. ಈ ವರದಿ ಅನುಷ್ಠಾನ ಗೊಂಡರೆ ಪರಿಸರ ಸಂರಕ್ಷಣೆ ಅಸಾಧ್ಯ.

ಹಾಗಾಗಿ, ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣ ವಿರೋಧಿಸಬೇಕು. ಇದೊಂದು ಅವೈಜ್ಞಾನಿಕ ವರದಿ. ಪರಿಸರ ಉಳಿಸುವ ನೆಪದಲ್ಲಿ ಆದಿವಾಸಿಗಳ ಬದುಕನ್ನು ಅತಂತ್ರ ಮಾಡುವ ಹುನ್ನಾರವಿದೆ. ಮುಖ್ಯವಾಗಿ ಲಕ್ಷಾಂತರ ಮಂದಿ ಕಾಡಿನ ಮರಗಳನ್ನು ನಂಬಿ ಬದುಕುವುದಕ್ಕಿಂತ ಕಾಡಲ್ಲಿರುವ ಜೇನು, ಅಂಟುವಾಳ, ಸಸ್ಯಜನ್ಯ ಸಂಪತ್ತುಗಳಿಗಾಗಿ ಅವಲಂಬಿಸಿದ್ದಾರೆ. ಆದ್ದರಿಂದ ಇವರ‍್ಯಾರೂ ಕಾಡನ್ನು  ನಾಶಮಾಡಲಾರರು. ಇಂಥವರು ಕಾಡಲ್ಲಿ ಇರುವುದರಿಂದಲೇ ಅಳಿದುಳಿದ ಕಾಡು ರಕ್ಷಣೆಯಾಗುತ್ತಿದೆ; ಹೇಗೆ ಕೋಣಗಳು, ಎಮ್ಮೆಗಳು ಕರಾವಳಿಯಲ್ಲಿ ಕಂಬಳದ ನೆಪದದರೂ ಉಳಿದಿವೆಯೋ ಹಾಗೆ!

ಮೇಲಾಗಿ ಪ್ರಸ್ತುತ ಜಾರಿಯಲ್ಲಿ ಇರುವ ವಿವಿಧ ಕಾನೂನುಗಳ ಮೂಲಕವೇ ಅರಣ್ಯ ಸಂರಕ್ಷಣೆ ಮಾಡಬಹುದು. ಪಶ್ಚಿಮ ಘಟ್ಟ ಉಳಿಸಬೇಕು ಎಂಬ ಕೂಗೆಬ್ಬಿಸಿ, ಅದಕ್ಕಾಗಿ ಹೋರಾಡಿದವರೇ ಮಲೆನಾಡಿಗರು. ಇಂದಿಗೂ ಅರಣ್ಯ ಉಳಿದಿರುವುದು ಅರಣ್ಯವಾಸಿ ಗಳಿಂದಲೇ ಹೊರತು ಅಧಿಕಾರಿಗಳು, ಸರಕಾರಗಳಿಂದ ಅಲ್ಲ’ ಎಂಬ ಇರಾದೆ ಜನತೆಯದ್ದು. ತಪ್ಪೇನಿದೆ ಇದರಲ್ಲಿ ಎಂಬುದು ಅರ್ಥವಾಗುತ್ತಿಲ್ಲ. ನಿತ್ಯ ಬದುಕಿಗೆ ಅಡ್ಡಿಯಾಗುವ ಯೋಜನೆಯನ್ನು ವಿರೋಧಿಸುವುದರಲ್ಲಿ ತಪ್ಪಿಲ್ಲ.

ಅದು ಕೂಡ ಪ್ರಜಾಸತಾತ್ಮಕ ಹಕ್ಕಿನ ಚಲಾವಣೆಯಲ್ಲವೆ? ಮನುಷ್ಯ ತನ್ನ ಉಳಿವಿನ ಚಿಂತನೆಯಷ್ಟೇ ಅಲ್ಲ, ತನ್ನ ಪ್ರದೇಶದ ಅಭಿವೃದ್ಧಿಯ ಚಿಂತನೆಯನ್ನೂ ಮಾಡುತ್ತ ತನ್ನ ಪ್ರಗತಿಯನ್ನೂ ಕಾಣಬಯಸುತ್ತಾನೆ. ಮನುಷ್ಯ ಸಂಕುಲ ಬದುಕಿದ ಮತ್ತು ಬದುಕುವ ಪರಿಯೂ ಹೀಗೆಯೇ ಅಲ್ಲವೆ? ಈಗ ಕರ್ನಾಟಕ ರಾಜ್ಯದ 1553 ಹಳ್ಳಿಗಳಲ್ಲಿ ಆತಂಕವುಂಟಾಗಿದೆ.

ಪ್ರಾಣಿ, ಪಕ್ಷಿ, ಮರಗಳಂತೆ ಮನುಷ್ಯನಿಗೂ ಜೀವನ ನಡೆಸಲು ಅವಕಾಶವಿರಬೇಕು. ಕಸ್ತೂರಿ ರಂಗನ್ ವರದಿ ಜಾರಿಯಾದರೆ
ಕಾಡಿನ ವಾಸಿಸುವ ಮಲೆನಾಡಿಗರ ಬದುಕನ್ನೇ ಕಸಿದುಕೊಂಡಂತಾಗುತ್ತದೆಂಬುದು ಸರಕಾರಕ್ಕೂ ಗೊತ್ತಿಲ್ಲದ ಸಂಗತಿಯೇನಲ್ಲ, ಅಥವಾ ಅರ್ಥವಾಗದ ವಿಚಾರವೇನಲ್ಲ. ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ವಿರೋಧಿಸುವ ಕಾಯಕವನ್ನು ಯಾರೂ ಮಾಡಲಾರರು, ಮಾಡಲೂ ಬಾರದು.

ಆದರೆ ವರದಿಯ ಅನುಷ್ಠಾನಕ್ಕೂ ಮೊದಲು ಅದರಿಂದ ಜನಸಾಮಾನ್ಯರ ಒಟ್ಟು ಬದುಕಿಗೆ ಆಗುವ ಸಮಸ್ಯೆಯೇನು ಎಂಬುದು ಸರಕಾರದ ಮುಖ್ಯ ಆದ್ಯತೆಯಾಗಬೇಕು.

ಒಂದು ಸೂಕ್ಷ್ಮವನ್ನು ಇಲ್ಲಿ ಸರಕಾರ ಗಮನಿಸಬೇಕು: ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಯ ಪ್ರಧಾನ ಉದ್ದೇಶವನ್ನು ಮುಂದಿಟ್ಟುಕೊಂಡು ಪರಿಸರ ತಜ್ಞ ಮಾಧವ ಗಾಡ್ಗೀಳ್ ಅಧ್ಯಕ್ಷತೆಯಲ್ಲಿ ರಚನೆಯಾದ ಸಮಿತಿ ನೀಡಿದ ವರದಿ, ಆನಂತರ ಅದಕ್ಕೆ ಎದುರಾದ ಜನವಿರೋಧ, ಮತ್ತೆ ಅದನ್ನು ಸರಿಪಡಿಸಲು ರಚನೆಯಾದ ವಿಜ್ಞಾನಿ ಕಸ್ತೂರಿ ರಂಗನ್ ಸಮಿತಿ ನೀಡಿದ ವರದಿ, ಇದಕ್ಕೂ ಎದುರಾದ ಜನವಿರೋಧದ ಒಟ್ಟೂ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಲು ಸರಕಾರ ಎಡವಿದ್ದು ಮಾತ್ರ ಸತ್ಯವಾಗಿ ಕಾಣುತ್ತಿದೆ.

ಹಾಗಂತ ಸರಕಾರಕ್ಕೆ ಜನವಿರೋಧದ ಪ್ರಜ್ಞೆಯ ನೆಲೆಗಳು ಅರ್ಥವಾಗಲಿಲ್ಲ ಎಂಬುದು ಸತ್ಯವಲ್ಲ. ಎರಡೂ ವರದಿಗಳು ಪಶ್ಚಿಮ
ಘಟ್ಟಗಳ ಸಂರಕ್ಷಣೆಯ ಕ್ರಮ – ವಿಧಾನಗಳ ಬಗ್ಗೆ ಸವಿವರವಾಗಿ ಹೇಳುತ್ತವೆ. ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಣೆ ಮಾಡ ಬೇಕು. ಅಭಿವೃದ್ಧಿ ಕಾರ್ಯಗಳಿಗೆ ಜೀವ ವೈವಿಧ್ಯದ ಸಂರಕ್ಷಣೆಯ ಹೊಣೆಗಾರಿಕೆಯ ಷರತ್ತನ್ನು ನೀಡಿಯೇ ಅನುಮತಿಯನ್ನು ನೀಡಬೇಕು ಎಂದು ಹೇಳುತ್ತದೆ.

ESA (Ecology Sensitive Area)ಯಿಂದ ಹತ್ತು ಕಿಮೀ ವ್ಯಾಪ್ತಿಯಲ್ಲಿ (ಇಂದು ಮುಖ್ಯ ವಿಚಾರವಿದೆ: ಹತ್ತು ಕಿಮೀ ವ್ಯಾಪ್ತಿ ಬೇಡ,
ಒಂದು ಒಂದೂವರೆ ಕಿಮೀ ವ್ಯಾಪ್ತಿಗೆ ಅದನ್ನು ಇಳಿಸಿ ಎಂಬುದು ವಿರೋಧದ ಒಟ್ಟೂ ಅಭಿಪ್ರಾಯ) ಯಾವುದೇ ಕಾಮಗಾರಿ
ನಡೆಸುವಂತಿಲ್ಲ. ಸಿಮೆಂಟು, ಕಲ್ಲು, ರಾಸಾಯನಿಕ ಬಳಸಲು ಅವಕಾಶವಿಲ್ಲ. ಜನವಸತಿ ನಿರ್ಮಿಸಲು ಅವಕಾಶವಿಲ್ಲ. ಪರಿಸರಕ್ಕೆ ಮತ್ತು ಜೀವವೈವಿಧ್ಯಕ್ಕೆ ಮಾರಕವಾದ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂಬುದು ಎರಡೂ ವರದಿಗಳಲ್ಲಿ ಸ್ಪಷ್ಟವಾಗಿದೆ.

ಹಾಗಾದರೆ ಈ ಪ್ರದೇಶಗಳ ಅಭಿವೃದ್ಧಿಗೆ ಸರಕಾರ ಕೈಗೊಳ್ಳುವ ಅನ್ಯಮಾರ್ಗಗಳು ಯಾವುವು ಎಂಬುದು ಸ್ಪಷ್ಟವಾಗಬೇಕಿದೆ.
ಸರಿ, ಈ ಎರಡೂ ವರದಿಗಳು ಬೆಂಬಲಕ್ಕೂ ಮತ್ತು ವಿರೋಧಕ್ಕೂ ಒಳಪಟ್ಟಿದೆ. ಬೆಂಬಲಿಸಿದವರು ಪರಿಸರ ಸಂರಕ್ಷಣೆಯ
ಚಟುವಟಿಕೆಯ ಮುಂಚೂಣಿಯಲ್ಲಿ ಕಾಣಿಸಿಕೊಂಡವರು. ಹಾಗಂತ ವಿರೋಧಿಸುವವರು ಪರಿಸರ ಸಂರಕ್ಷಣೆಯನ್ನು ವಿರೋಧಿ ಸುವವರು ಎಂಬುದಾಗಿ ಭಾವಿಸುವ ಅಗತ್ಯವಂತೂ ಇಲ್ಲವೇ ಇಲ್ಲ.

ವರದಿಗಳು ಅನುಷ್ಠಾನ ಯೋಗ್ಯವೇ ಸರಿ ಎಂಬುದು ಜನಾಭಿಪ್ರಾಯವಾಗಿದೆ. ಆದರೆ ಈಗಾಗಲೇ ಈ ಪ್ರದೇಶಗಳಲ್ಲಿ ಬದುಕನ್ನು ಕಟ್ಟಿಕೊಂಡಿರುವ ಜನರಿಗೆ ಪರ್ಯಾಯ ಮಾರ್ಗವೇನು ಎಂಬುದೇ ಜನರ ಪ್ರಶ್ನೆಯಾಗಿದೆ. ಸರಕಾರದ ನೀತಿಯನ್ನು ವಿರೋಧಿ ಸುವ ಪ್ರತಿ ಅಭಿಯಾನಗಳು, ಹೋರಾಟಗಳು ಜನರಿಗೆ ಯಾವ ಉತ್ತರವನ್ನು ಸಮರ್ಪಕವಾಗಿ, ಸರಿಯಾಗಿ ನೀಡಲು ಸಾಧ್ಯವಿದೆ ಎಂಬುದನ್ನು ಆಲೋಚಿಸಿಯೇ ಸರಕಾರ ಇಂಥ ದೊಡ್ಡಮಟ್ಟದ ಕ್ರಮಗಳನ್ನು ಜರುಗಿಸಬೇಕು.

ವನ್ಯಜೀವಿಗಳು, ಅರಣ್ಯ ಸಂಪತ್ತು ಇರಬೇಕು, ಉಳಿಬೇಕು, ಬೆಳೆಯಬೇಕು ಎಂಬ ಸಾಮಾನ್ಯ ಪ್ರಜ್ಞೆಯೂ ಜನರಲ್ಲಿ ಇಲ್ಲವೆಂದೇ
ಭಾವಿಸುವುದು ಸರಕಾರದ ಪೆದ್ದುತನವಾಗುತ್ತದೆ. ಕೇವಲ ಸರಕಾರವನ್ನು ವಿರೋಧಿಸುವುದು ಜನ ಹೋರಾಟದ ಹಿಂದಿನ
ಪ್ರಮುಖ ಉದ್ದೇಶವಾಗಿರಲು ಸಾಧ್ಯವಿಲ್ಲ. ಯಾಕೆಂದರೆ ಜನತೆ ಯಾವತ್ತೂ ವಿರೋಧಪಕ್ಷವಾಗಿ ವರ್ತಿಸಲಾರದು. ಈ ಎಚ್ಚರ ದಲ್ಲಿ ವಿರೋಧವಾಗುವ ಜನತೆಯ ಯಾವ ನಿಲುವನ್ನೂ ಸರಕಾರ ಮಾನ್ಯ ಮಾಡಬೇಕು.

ಮಾತುಕತೆಯ ಮೂಲಕ ವಿರೋಧಕ್ಕೆ ಸುಖಾಂತ್ಯವನ್ನು ಕಂಡುಕೊಳ್ಳಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಕ್ಕೆ ಬೆಲೆ ಕೊಟ್ಟಂತಾಗುತ್ತದೆ. ವಿರೋಧವನ್ನು ಹೊರತುಪಡಿಸಿದ ಯಾವ ಮುಂಜಾಗ್ರತೆಯ ಕ್ರಮವೂ ಜನತೆಯ ಬಳಿ ಇರುವುದಿಲ್ಲ. ತಮಗೆ ಬೇಕಾದುದ್ದನ್ನು ಬೇಕಾದ ರೀತಿಯಲ್ಲಿ ಪಡೆಯುವ ಕೊನೆಯ ಮಾರ್ಗವೇ ಪ್ರತಿಭಟನೆ, ಮುಷ್ಕರ, ವಿರೋಧಿ ಸ್ವರೂಪದ ಆಂದೋ ಲನಗಳಾಗಿರುತ್ತವೆ. ಯಾಕೆಂದರೆ ಪ್ರಜಾತಂತ್ರಕ್ಕೆ ವಿರುದ್ಧವಾಗಿ ನಡೆಯುವ ಯಾವ ಕ್ರಮವನ್ನೂ ಪ್ರಜಾಸತ್ತೆ ವಿರೋಧಿಸದೇ ಇರಲಾರದು.

ಯಾಕೆಂದರೆ ಅದು ಪ್ರಜೆಗಳ ಸರಕಾರವಾದ್ದರಿಂದ. ಆಂತರ್ಯದಲ್ಲೂ ಬಾಹ್ಯದಲ್ಲೂ ಭಾರತವನ್ನು ಸಮಾನತೆಯ ಹಸಿವಿನಿಂದ ಮುಕ್ತವಾಗಲು ಗಾಂಽ ಕಂಡುಕೊಂಡ ಮಾರ್ಗಗಳೇ ಸತ್ಯದ ಪಾಲನೆ ಮತ್ತು ಅಹಿಂಸೆಯ ಅನುಸಂಧಾನದಲ್ಲಿ. ಜನರ ವಿರೋಧವು ಹಿಂಸೆಯ ರೂಪವನ್ನು ತಾಳುವುದು ಪ್ರಭುತ್ವವು ಜನತೆಯ ವಿರೋಧವನ್ನು ಕಡೆಗಣಿಸಿದಾಗ, ನಿರ್ಲಕ್ಷಿಸಿದಾಗ. ಊರಿನ ಕಲ್ಪನೆ ಯನ್ನು ಆಧರಿಸಿ ಆಕಾರ ತಳೆಯುವ ರಾಷ್ಟ್ರದ ಹಾಗೂ ಜಗತ್ತಿನ ಕಲ್ಪನೆಗಳು ಸಹಜವಾಗಿರುತ್ತದೆ, ಸುಖವಾಗಿರುತ್ತದೆ. ಇದಕ್ಕೆ ಭಿನ್ನವಾಗಿ ಊರನ್ನು ಕಡೆಗಣಿಸಿ ರಾಷ್ಟ್ರವನ್ನು ಕಟ್ಟಲು ಸಾಧ್ಯವೇ ಇಲ್ಲ.

ವರದಿಯ ಪ್ರಕಾರ ಊರನ್ನು ಬಫರ್ ಝೋನ್‌ಗಳೆಂದು ಪರಿಗಣಿಸಿದರೆ ಯಾವ ಅಭಿವೃದ್ಧಿಯೂ ಆಗಲಾರದು. ಹಾಗಂತ
ಮನುಷ್ಯನ ಇರುವಿಕೆಗೆ ಅಗತ್ಯವೂ ಅನಿವಾರ್ಯವೂ ಆದ ಕಾಡನ್ನು ನಾಶಮಾಡಿ ಊರಿನ ಅಭಿವೃದ್ಧಿ ಸಾಧ್ಯವೇ ಇಲ್ಲ. ಯಾವ ಅಭಿವೃದ್ಧಿಯೂ ನಡೆಯದೆ ಇರುವ ಪ್ರದೇಶಗಳಲ್ಲಿ ಎಲ್ಲವೂ ಇದ್ದ ಹಾಗೆ ಇರಬೇಕು ಎನ್ನುವಲ್ಲಿ ಯಾವ ಅರ್ಥವೂ ಇರುವುದಿಲ್ಲ
ಎಂದೇ ನನಗನಿಸಲು ಕಾರಣ. ಆ ಪ್ರದೇಶದ ವಾಸಿಗಳಿಗೆ ಹೊರಗಿನ ಸಂಪರ್ಕ ಕ್ರಮೇಣ ಕಡಿದು ಹೋಗುವ ಭಯದಿಂದ.

ಈಗಾಗಲೇ ಹುಲಿಯೋಜನೆ ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ. ಬಫರ್ ಝೋನ್ ಗಳೆಂದು ಪರಿಗಣಿಸುವ ಪ್ರದೇಶಗಳಲ್ಲಿ ವಾಸಿಸುವ ಜನರ ನಿತ್ಯದ ಓಡಾಟವನ್ನೂ ಒಂದು ನಿರ್ಬಂಧದೊಳಗೆ ಬಂಧಿಸುವಲ್ಲಿ ಬದುಕಿನ ಎಲ್ಲ ಸಾಧ್ಯತೆಗಳನ್ನು ಮುಚ್ಚಿದ ಹಾಗೆ ಭಾಸವಾಗುತ್ತದೆ. ಹುಲಿಯೋಜನೆ ಈಗಾಗಲೇ ಇದೆ. ಅದರಲ್ಲೂ ಬಫರ್ ಝೋನ್ ಮಾಡುವುದಕ್ಕೆ ಮುಂದಾದರೆ ಈಗಾಗಲೇ ಬದುಕನ್ನು ಕಟ್ಟಿಕೊಂಡವರ ಗತಿಯೇನಾಗಬಹುದು? ಬಹುದೊಡ್ಡ ಪ್ರಮಾಣದಲ್ಲಿ ಜನಸಂಖ್ಯೆ ಮತ್ತು ವಸತಿ
ನಿರ್ಮಾಣಗೊಂಡದಷ್ಟೇ ಅಲ್ಲ, ಶಾಲಾ ಕಾಲೇಜುಗಳಿವೆ. ನಿತ್ಯವೂ ವಿದ್ಯಾಭ್ಯಾಸಕ್ಕೆ ಅಂತ ಮಧ್ಯಮ ಮತ್ತು ಬಡವರ್ಗದವರ ಮಕ್ಕಳು ಓಡಾಡುವ ಮಾರ್ಗವನ್ನು ನಿರ್ದಿಷ್ಟ ನಿಯಮಗಳಿಂದ ಕಟ್ಟಿ ಹಾಕಿದರೆ ಸಮಸ್ಯೆ ಉಲ್ಬಣಿಸದೇ ಇರಲು ಹೇಗೆ ಸಾಧ್ಯ?
ಕೊಡಗು ಮತ್ತು ಕೇರಳದಲ್ಲಿ ಆಗಿರುವ ಪ್ರವಾಹ, ಮಲೆನಾಡಿನಲ್ಲಿ ಆದ ಭೂಕುಸಿತ ಮುಂತಾದ ಅಂಶಗಳನ್ನು ಆಧರಿಸಿ ಕಸ್ತೂರಿ ರಂಗನ್ ವರದಿ ಜಾರಿಯಾಗಬೇಕು ಎಂಬ ಆಗ್ರಹದ ಮಾತುಗಳು ಕೇಳಿ ಬಂದದ್ದಂತೂ ಹೌದೇ ಹೌದು.

ಆದರೆ ವರದಿ ಜಾರಿಯಿಂದ ಸಮಸ್ಯೆಯನ್ನು ಪರಿಹರಿಸಬಹುದೇ ಎಂಬುದು ಸ್ಪಷ್ಟವಾದಂತಿಲ್ಲ. ಈ ಮಧ್ಯೆ ವರದಿ ಜಾರಿ, ಬಫರ್ ಝೋನ್ ಹೇರಿಕೆಯ ಕುರಿತಾದ ಸಮಸ್ಯೆಯನ್ನು ಬಗೆಹರಿಸಲು ಸರಕಾರ ಉಪಸಮಿತಿಯನ್ನು ರಚಿಸಿದೆ ಅಂತ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ. ಮುಂದಿನ ಬೆಳವಣಿಗೆಗಳೇಗುತ್ತದೆಂಬುದನ್ನು ಕಾದೇ ನೋಡಬೇಕಾಗಿದೆ.

ಒಂದಂತೂ ಸತ್ಯ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧದ ನೆಲೆಯಲ್ಲಿ ಮಲೆನಾಡಿನಲ್ಲಿ ಒಂದು ಕ್ರಾಂತಿಕಾರಕ ಸಂಚಲನ ವನ್ನು ಉಂಟುಮಾಡುತ್ತಿರುವುದು ಮಾತ್ರ ಸತ್ಯಸ್ಯ ಸತ್ಯ! ಕೊನೆಯವರೆಗೂ ಇದೊಂದು ರಾಜಕೀಯದ ವಸ್ತುವಾಗೇ ಉಳಿಯದೆ ಒಂದು ಅಂತ್ಯವನ್ನು ಈ ಸರಕಾರ ಕಂಡುಕೊಂಡರೆ ರಾಜ್ಯಕ್ಕೆ ಹಿತ. ಸರಕಾರಕ್ಕೂ ಮುಂದಿನ ಚುನಾವಣೆಯಲ್ಲಿ ಅನುಕೂಲ ವಾದಿತೇನೋ!

ಕೊನೆಯ ಮಾತು: ಯಾವುದೇ ಪಕ್ಷದ ಸರಕಾರ ಅಧಿಕಾರಕ್ಕೆ ಬಂದರೂ ಮಾಡಲೇಬೇಕಾದ ಮತ್ತು ತನ್ನ ಬದ್ಧತೆಯನ್ನು ನಿಯತ್ತಾಗಿ ತೋರಲೇಬೇಕಾದ ಅತಿದೊಡ್ದ ಕಾರ್ಯಗಳೆಂದರೆ, ಜನಹಿತಕ್ಕೆ ವಿರುದ್ಧವಾಗಿ ವರ್ತಿಸದೇ ಇರುವುದು. ಈ ಮಣ್ಣು, ಅನ್ನ, ವಸತಿ, ನೀರನ್ನು ಭವಿಷ್ಯದ ನಮ್ಮ ಮಕ್ಕಳಿಗೆ ಉಳಿಸುವಲ್ಲಿ ಆತ್ಮಪೂರಕವಾಗಿ ಪ್ರಯತ್ನಿಸುವುದು. ಶಿಕ್ಷಣದಿಂದ ಯಾರೂ ಹೊರತಾಗಿರದಂತೆ ನೋಡಿಕೊಳ್ಳುವುದು.