ಬೆಂಗಳೂರು: ಎಂಜಿನಿಯರಿಂಗ್ ಸೀಟು ಬ್ಲಾಕಿಂಗ್ ಹಗರಣಕ್ಕೆ (Engineering seat blocking) ಸಂಬಂಧಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿಬ್ಬಂದಿ, ಕಿಂಗ್‌ಪಿನ್ ಸೇರಿ 8 ಮಂದಿ ಬಂಧನವಾಗಿದೆ. 2024-25ನೇ ಸಾಲಿಗಾಗಿ ವಿವಿಧ ಎಂಜಿನಿಯರಿಂಗ್ ಕೋರ್ಸ್ ಪ್ರವೇಶದ ವೇಳೆಯಲ್ಲಿ ಕೆಇಎ ಅಧಿಕಾರಿಯೊಬ್ಬರು ಸೀಟು ಬ್ಲಾಕಿಂಗ್ ಅನುಮಾನದ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ನವೆಂಬರ್ 13 ರಂದು ಈ ಹಗರಣ ಬೆಳಕಿಗೆ ಬಂದಿತ್ತು.
ಹರ್ಷ, ಪ್ರಕಾಶ್, ರವಿಶಂಕರ್, ಪುನೀತ್, ಶಶಿಕುಮಾರ್, ಪುರುಷೋತ್ತಮ್, ಅವಿನಾಶ್ ಸೇರಿ 8 ಮಂದಿಯ ಬಂಧನವಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ತನಿಖೆಯ ಸಂದರ್ಭದಲ್ಲಿ ಮೂರು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತವನ್ನು ಪ್ರಶ್ನಿಸಲಾಗಿದೆ. ಹಗರಣ ಸಂಬಂಧ ಎಂಟು ಜನರನ್ನು ಬಂಧಿಸಿದ್ದೇವೆ. ಅವರಲ್ಲಿ ಒಬ್ಬರು ಕೆಇಎ ಸಿಬ್ಬಂದಿ ಇದ್ದಾರೆ. ಇತರರಲ್ಲಿ ಮಧ್ಯವರ್ತಿಗಳು ಮತ್ತು ಕೆಲವು ಎಂಜಿನಿಯರಿಂಗ್ ಕಾಲೇಜುಗಳ ಕೆಲವು ಸಿಬ್ಬಂದಿ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳನ್ನು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಂತರ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಕೆಇಎ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವಂಚನೆ, ನಂಬಿಕೆ ದ್ರೋಹ, ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಸೀಟು ತೆಗೆದುಕೊಳ್ಳುವ ಉದ್ದೇಶಹೊಂದಿಲ್ಲದ ಕೆಲವು ಅಭ್ಯರ್ಥಿಗಳನ್ನು ಕಾಲೇಜು ಆಯ್ಕೆ ನಮೂದಿಸಲು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೌನ್ಸೆಲಿಂಗ್‌ಗೆ ಹಾಜರಾಗಿ, ಕಾಲೇಜು ಆಯ್ಕೆಯಾಗದೇ ಇರುವವರನ್ನು ಆರೋಪಿಗಳು ಗುರಿಯಾಗಿಸಿಕೊಂಡಿದ್ದರು. ಈ ರೀತಿ ನಾನಾ ಕಾರಣಗಳಿಂದ 2,625 ವಿದ್ಯಾರ್ಥಿಗಳು ಸೀಟ್ ರಿಜೆಕ್ಟ್ ಮಾಡಿದ್ದರು.
ಈ ಸುದ್ದಿಯನ್ನೂ ಓದಿ | BBK 11: ಬಿಗ್ ಬಾಸ್ ಮನೆಯಿಂದ ದಿಢೀರ್ ಹೊರಬಂದ ಚೈತ್ರಾ ಕುಂದಾಪುರ
ಕೆಇಎ ನೌಕರ ಅವಿನಾಶ್ ಸಹಾಯದಿಂದ ಪಡೆದ ಪಾಸ್‌ವರ್ಡ್‌ನಿಂದ ಸರ್ಕಾರಿ ಸೀಟ್ ಪಡೆದು ಕಾಲೇಜು ಆಯ್ಕೆ ಮಾಡಿಕೊಳ್ಳದ ವಿದ್ಯಾರ್ಥಿಗಳ ಸೀಟ್ ಬ್ಲಾಕ್ ಮಾಡಲಾಗುತ್ತಿತ್ತು. ಆ ಸೀಟ್‌ಗಳನ್ನು ಲಕ್ಷಾಂತರ ರೂ.ಗೆ ಮ್ಯಾನೇಜ್‌ಮೆಂಟ್ ಕೋಟಾದಡಿ ಬೇರೆಯವರಿಗೆ ಡೀಲ್ ಮಾಡುತ್ತಿದ್ದರು. ಇನ್ನು ಆರೋಪಿ ಪ್ರಕಾಶ್, ದೂರು ದಾಖಲಾಗಿದೆ ಎಂದು ಗೊತ್ತಾದ ಕೂಡಲೇ, ತಮ್ಮ ಬಳಿಯಿದ್ದ ಲ್ಯಾಪ್‌ಟಾಪ್‌ಗಳನ್ನು ಕಡೂರಿನ ತನ್ನ ಜಮೀನಿನಲ್ಲಿ ಸುಟ್ಟುಹಾಕಿ ಸಾಕ್ಷಿ ನಾಶ ಮಾಡಿದ್ದ. ಸದ್ಯ ಮಲ್ಲೇಶ್ವರಂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.