Monday, 23rd December 2024

Physical Abuse: ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದಲೇ ಲೈಂಗಿಕ ದೌರ್ಜನ್ಯ; ಕೃತ್ಯ ಖಂಡಿಸಿ ಯಡ್ರಾಮಿಯಲ್ಲಿ ಬೃಹತ್‌ ಪ್ರತಿಭಟನೆ

Physical Abuse

ಕಲಬುರಗಿ: ಐದನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನೇ ಲೈಂಗಿಕ ದೌರ್ಜನ್ಯ (Physical Abuse) ಎಸಗಿದ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕು ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ನಡೆದಿದ್ದು, ಖಾಸಗಿ ಶಾಲಾ ಮುಖ್ಯಸ್ಥ ಹಾಜಿಮಲಂಗ ಗಣಿಯಾರನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯ ಖಂಡಿಸಿ ತಾಲೂಕಿನ ವಿವಿಧ ಸಂಘಟನೆಗಳು ಯಡ್ರಾಮಿ ಬಂದ್ ಮಾಡಿ ಮಂಗಳವಾರ ಪ್ರತಿಭಟನೆ ನಡೆಸಿ, ಆರೋಪಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದರಿಂದ ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಖಾಸಗಿ ಶಾಲೆಯೊಂದರಲ್ಲಿ 11 ವರ್ಷದ ಸಂತ್ರಸ್ತ ಬಾಲಕಿ ಕಳೆದ ಎರಡು-ಮೂರು ವರ್ಷಗಳಿಂದ ಓದುತ್ತಿದ್ದಾಳೆ. ಸದ್ಯ ಮಗು ಐದನೇ ತರಗತಿ ಓದುತ್ತಿದ್ದು, ಶಾಲೆಯ ಮುಖ್ಯಸ್ಥ ಹಾಜಿಮಲಂಗ ಗಣಿಯಾರ ಕಳೆದ ಎರಡು ದಿನದ ಹಿಂದೆ ಶಾಲೆಯಲ್ಲಿ ಲೈಂಗಿ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಷಯವನ್ನು ಮನೆಯಲ್ಲಿ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಹೀಗಾಗಿ ಮಗು ಮನೆಯಲ್ಲಿ ತಿಳಿಸಲು ಹಿಂಜರಿದಿದೆ.

ನಂತರ ಪಕ್ಕದ ಮನೆಯವರ ಮುಂದೆ ಮಗು ವಿಷಯ ತಿಳಿಸಿದ್ದು, ಅವರು ಮಗುವಿನ ತಂದೆ, ತಾಯಿಗೆ ವಿಷಯ ತಿಳಿಸಿದ್ದಾರೆ. ನಂತರ ಸಂತ್ರಸ್ತ ಮಗುವಿನ ಪಾಲಕರು ತಮ್ಮ ಸಮುದಾಯದ ಎಲ್ಲ ಹಿರಿಯರೊಂದಿಗೆ ಚರ್ಚಿಸಿ ಸೋಮವಾರ ಸಾಯಂಕಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು, ಆರೋಪಿಯನ್ನು ಸೋಮವಾರ ಡಿ.02 ರಾತ್ರಿ ಬಂಧಿಸಿದ್ದಾರೆ. ಈ ವಿಷಯ ತಾಲೂಕಿನಾದ್ಯಂತ ಹರಡಿದ್ದು ಮಂಗಳವಾರ ಬೆಳಿಗ್ಗೆ ಬಂಜಾರ ಸಮುದಾಯ ಸೇರಿದಂತೆ ಪಟ್ಟಣದ ವಿವಿಧ ಸಂಘಟನೆಗಳು ಸೇರಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ರಸ್ತೆ ತಡೆದು ಪ್ರತಿಭಟನೆ ನಡೆಸಿವೆ. ಪಟ್ಟಣ ಬಿಗುವಿನಿಂದ ಕೂಡಿದ್ದು, ಮುಂಜಾಗ್ರತೆಯಿಂದ ಸ್ಥಳೀಯ ಶಾಲೆಗಳಿಗೆ ರಜೆ ಘೋಷಿಸಿದ್ದರು.

ಈ ಸುದ್ದಿಯನ್ನೂ ಓದಿ | Viral Video: ಎರಡು ಬಸ್‍ಗಳ ಮುಖಾಮುಖಿ ಡಿಕ್ಕಿ; 34 ಪ್ರಯಾಣಿಕರಿಗೆ ಗಾಯ

ಯುವಕ ಚುಡಾಯಿಸಿದ್ದಕ್ಕೆ ಬಾಲಕಿ ಆತ್ಮಹತ್ಯೆ; ಮೂವರ ಬಂಧನ

ವಿಜಯಪುರ: ಯುವಕ ಚುಡಾಯಿಸಿದ್ದಕ್ಕೆ ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ. ಪ್ರೀತಿ ಹೆಸರಿನಲ್ಲಿ ಯುವಕನೊಬ್ಬ ಕಿರುಕುಳ ನೀಡುತ್ತಿದ್ದರಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಅಪ್ರಾಪ್ತ ವಯಸ್ಸಿನ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಳೆದ ಹಲವು ದಿನಗಳಿಂದ ಅಪ್ರಾಪ್ತ ಬಾಲಕಿ ಹಿಂದೆ ಯುವಕ ಬಿದ್ದಿದ್ದ. ಪ್ರೀತಿ ಹೆಸರಿನಲ್ಲಿ ಬಾಲಕಿಗೆ ಸಂಗಮೇಶ್ ಜುಂಜವಾರ ಎಂಬಾತ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಬಾಲಕಿ ಕಾಲೇಜಿಗೆ ಹೋಗುವಾಗ ಮೈಕೈ ಮುಟ್ಟಿ ಆರೋಪಿ ಮಾತನಾಡಿಸುತ್ತಿದ್ದ. ಅಲ್ಲದೇ ಆಕೆಯ ಜತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಹೀಗಾಗಿಯೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ನನ್ನ ಪ್ರೀತಿಸು ಎಂದು ಬಾಲಕಿಗೆ ಸಂಗಮೇಶ್ ಬಲವಂತ ಮಾಡುತ್ತಿದ್ದ. ಸಂಗಮೇಶನನ್ನು ಪ್ರಶ್ನಿಸಿದ್ದ ಬಾಲಕಿಯ ಸಹೋದರಿಯ ಮೇಲೆ ಕೂಡ ಆತ ಹಲ್ಲೆ ಮಾಡಿದ್ದ. ಅಲ್ಲದೆ ಸಂಗಮೇಶ ವಿರುದ್ಧ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ನವೆಂಬರ್ 27ರಂದು ಮುದ್ದೇಬಿಹಾಳ ಠಾಣೆಯಲ್ಲಿ ಅಪ್ರಾಪ್ತ ಬಾಲಕಿ ದೂರು ನೀಡಿದ್ದಳು.

ಸಂಗಮೇಶ್, ಮೌನೇಶ್ ಮಾದರ ಹಾಗೂ ಚಿದಾನಂದ ಕಟ್ಟಿಮನಿ ವಿರುದ್ಧ ದೂರು ಸಲ್ಲಿಸಲಾಗಿತ್ತು. ಮೂವರ ವಿರುದ್ಧ ಪೊಲೀಸರು ಇದೀಗ ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ಬಾಲಕಿ ಸಾವಿಗೆ ಯುವಕರ ಕಿರುಕುಳವೇ ಕಾರಣ ಎಂದು ಬಾಲಕಿಯ ಪೋಷಕರು, ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಘಟನೆಗೆ ಆರೋಪಿ ಸಂಗಮೇಶನ ಕಿರುಕುಳವೇ ಕಾರಣವೆಂದು ಆರೋಪಿಸಿ ಮುದ್ದೇಬಿಹಾಳ ಪೊಲೀಸ್ ಠಾಣೆ ಎದುರಿಗೆ ಬಾಲಕಿ ಶವ ಇಟ್ಟು ಹೋರಾಟ ಮಾಡಲು ಪೋಷಕರು, ಅವರ ಸಮಾಜದ ಸ್ವಾಮೀಜಿಗಳು, ಮುಖಂಡರು ಸಿದ್ಧತೆ ನಡೆಸುತ್ತಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ | Viral News: 31 ವರ್ಷಗಳ ಹಿಂದೆ ಕಿಡ್ನ್ಯಾಪ್ ಆಗಿದ್ದವ ಮರಳಿ ಬಂದ- ಆದರೆ ಈ ಕಹಾನಿಯಲ್ಲಿದೆ ಒಂದು ರೋಚಕ ಟ್ವಿಸ್ಟ್!