ನವದೆಹಲಿ: ಭಾರತ ತಂಡದ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿರುವ ಎಂಎಸ್ ಧೋನಿ (MS Dhoni) ಬಗ್ಗೆ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಎಂಎಸ್ ಧೋನಿ ಬಳಿ ನಾನು ಮಾತನಾಡುವುದಿಲ್ಲ ಹಾಗೂ ಅವರ ಜತೆ ಮಾತನಾಡಿ ಇಲ್ಲಿಗೆ 10 ವರ್ಷಗಳು ಕಳೆದಿವೆ ಎಂದು ಸ್ಪಿನ್ ದಂತಕತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಂಎಸ್ ಧೋನಿ ಹಾಗೂ ಹರ್ಭಜನ್ ಸಿಂಗ್ ಇಬ್ಬರೂ ಭಾರತ ತಂಡದಲ್ಲಿ ಜತೆಯಾಗಿ ಹಲವು ವರ್ಷಗಳ ಕಾಲ ಆಡಿದ್ದಾರೆ ಹಾಗೂ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. 2007 ಮತ್ತು 2011ರಲ್ಲಿ ವಿಶ್ವಕಪ್ ಗೆದ್ದಿದ್ದ ಭಾರತ ತಂಡದಲ್ಲಿ ಈ ಇಬ್ಬರೂ ಆಡಿದ್ದರು. ಏಕದಿನ ವಿಶ್ವಕಪ್ ಬಳಿಕ ಈ ಇಬ್ಬರೂ ಆಟಗಾರರು ಜತೆಯಾಗಿ ಭಾರತ ತಂಡದಲ್ಲಿ ಆಡಿಯೇ ಇಲ್ಲ.
2015ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆಗೆ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಆದರೂ 2015ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಭಾರತ ತಂಡದಲ್ಲಿ ಹರ್ಭಜನ್ ಸಿಂಗ್ ಹಾಗೂ ಯುವರಾಜ್ ಸಿಂಗ್‌ಗೆ ಸ್ಥಾನ ಸಿಕ್ಕಿರಲಿಲ್ಲ. ಆದರೆ, 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಎಂಎಸ್ ಧೋನಿ ಹಾಗೂ ಹರ್ಭಜನ್ ಸಿಂಗ್ ಜೊತೆಯಲ್ಲಿ ಆಡಿದ್ದರು. ನಂತರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಜ್ಜಿ ಆಡಿದ್ದರು ಆದರೆ, ಸ್ಪಿನ್ ದಿಗ್ಗಜನ ಜೊತೆ ಧೋನಿ ಅಷ್ಟೊಂದು ಆತ್ಮೀಯವಾಗಿ ಮಾತನಾಡಿರಲಿಲ್ಲ.
ಎಂಎಸ್ ಧೋನಿ ಜೊತೆ ಮಾತನಾಡಿಲ್ಲ: ಹರ್ಭಜನ್ ಸಿಂಗ್
“ಇಲ್ಲ, ನಾನು ಎಂಎಸ್ ಧೋನಿ ಬಳಿ ಮಾತನಾಡಿಲ್ಲ. ನಾನು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವಾಗ ಕೊನೆಯ ಬಾರಿ ಅವರ ಬಳಿ ಮಾತನಾಡಿದ್ದೆ. ಅದು ಬಿಟ್ಟರೆ ಅವರ ಬಳಿ ಮಾತನಾಡಿಯೇ ಇಲ್ಲ. ಇಲ್ಲಿಗೆ 10 ವರ್ಷಗಳು ಕಳೆದಿವೆ. ಅವರ ಬಳಿ ಯಾವುದೇ ಕಾರಣಗಳಿಲ್ಲ. ಇದರ ಹಿಂದೆ ಯಾವ ಕಾರಣ ಇದೆ ಎಂದು ನನಗೆ ಗೊತ್ತಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ವೇಳೆ ನಾವು ಮಾತನಾಡಿದ್ದೆವು. ಆದರೆ, ಇದು ಕೇವಲ ಮೈದಾನಕ್ಕೆ ಮಾತ್ರ ಸೀಮಿತವಾಗಿತ್ತು. ಇದಾದ ಬಳಿಕ ಅವರು ನನ್ನ ಕೊಠಡಿಯ ಬಳಿ ಎಂದೂ ಬಂದಿರಲಿಲ್ಲ ಹಾಗೂ ನಾನು ಕೂಡ ಅವರ ಕೊಠಡಿ ಬಳಿ ಹೋರಲಿಲ್ಲ,” ಎಂದು ನ್ಯೂಸ್ 18ಗೆ ಹರ್ಭಜನ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಯುವರಾಜ್ ಸಿಂಗ್ ಹಾಗೂ ಆಶಿಶ್ ನೆಹ್ರಾ ಜತೆ ನಿರಂತರ ಸಂಪರ್ಕದಲ್ಲಿದ್ದೆ ಎಂದು ಹೇಳಿಕೊಂಡ ಹರ್ಭಜನ್ ಸಿಂಗ್, ಎಂಎಸ್ ಧೋನಿ ವಿಷಯ ಬಂದಾಗ ಒಂದು ಹೆಜ್ಜೆ ಹಿಂದೆ ಇಡುತ್ತಿದ್ದರು. ಭಾರತದ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಪಿನ್ ದಂತಕತೆ, ಎಂಎಸ್ ಧೋನಿ ವಿರುದ್ದ ನೇರವಾಗಿ ಟೀಕೆ ಮಾಡಲಿಲ್ಲ. ಆದರೆ, ಅವರೊಂದಿಗಿನ ತಮ್ಮ ಸಂವಹನದ ಬಗ್ಗೆ ಹೇಳಿಕೊಂಡಿದ್ದಾರೆ.
ಎಂಎಸ್ ಧೋನಿ ವಿರುದ್ಧದ ನನಗೆ ಯಾವುದೇ ಬೇಸರವಿಲ್ಲ
“ಅವರ ವಿರುದ್ಧ ನನಗೆ ಯಾವುದೇ ತಕರಾರು ಇಲ್ಲ. ಅವರು ಏನಾದರೂ ನನ್ನ ಬಳಿ ಹೇಳುವ ಹಾಗಿದ್ದರೆ ನೇರವಾಗಿ ನನಗೆ ಕರೆ ಮಾಡಿ ಹೇಳಲಿ. ಅವರು ಏನಾದರೂ ಮಾಡಿದ್ದರೆ, ಅವರು ಈಗಲಾದರೂ ನನಗೆ ಹೇಳಲಿ. ನಾನಂತೂ ಅವರಿಗೆ ಕರೆ ಮಾತನಾಡಲು ಯಾವತ್ತಿಗೂ ಪ್ರಯತ್ನಿಸಲಿಲ್ಲ ಏಕೆಂದರೆ ನನ್ನಲ್ಲಿ ಸಾಕಷ್ಟು ಉತ್ಸಾಹವಿದೆ. ನನ್ನ ಕರೆಯನ್ನು ಯಾರೂ ಸ್ವೀಕರಿಸುತ್ತಾರೆ, ಅವರಿಗೆ ಮಾತ್ರ ನಾನು ಕರೆ ಮಾಡುತ್ತೇನೆ. ಅದು ಬಿಟ್ಟರೆ ಬೇರೆ ಯಾವುದಕ್ಕೂ ನನಗೆ ಸಮಯವಿಲ್ಲ. ನನ್ನ ಸ್ನೇಹಿತರ ಜೊತೆ ನಾನು ನಿರಂತರ ಸಂಪರ್ಕದಲ್ಲಿರುತ್ತೇನೆ. ನಾನು ಗೌರವ ನೀಡಿದರೆ, ಅವರು ಕೂಡ ನನಗೆ ಗೌರವ ನೀಡುತ್ತಾರೆಂಬ ನಿರೀಕ್ಷೆ ನನಗೆ ಇದೆ ಅಥವಾ ಅವರು ನನಗೆ ಪ್ರತಿಕ್ರಿಯೆ ನೀಡಬಹುದು. ಒಮ್ಮೆ ಅಥವಾ ಎರಡು ಬಾರಿ ನನ್ನ ಕರೆಗೆ ಪ್ರತಿಕ್ರಿಯೆ ಸಿಕ್ಕಿಲ್ಲವಾದರೆ, ನಿಮ್ಮ ರೀತಿ ಅಗತ್ಯವಿದ್ದಾಗ ಮಾತ್ರ ಭೇಟಿಯಾಗುತ್ತೇನೆ,” ಎಂದು ಎಂಎಸ್ ಧೋನಿ ವಿರುದ್ಧ ಹರ್ಭಜನ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನು ಓದಿ: IPL 2025: ಪೃಥ್ವಿ ಶಾ ಅನ್‌ಸೋಲ್ಡ್ ಆಗಲು ಕಾರಣ ತಿಳಿಸಿದ ಮೊಹಮ್ಮದ್ ಕೈಫ್!