Friday, 27th December 2024

Pushpa 2: ‘ಪುಷ್ಪ 2’ ಚಿತ್ರಕ್ಕೂ ತಟ್ಟಿದ ಪೈರಸಿ ಕಾಟ; ಬಿಡುಗಡಯಾದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್‌: ಕಲೆಕ್ಷನ್‌ಗೆ ಪೆಟ್ಟು?

Pushpa 2

ಹೈದರಾಬಾದ್‌: ಈ ವರ್ಷದ ಬಹು ನಿರೀಕ್ಷಿತ ಚಿತ್ರ ʼಪುಷ್ಪ 2ʼ (Pushpa 2) ವಿಶ್ವಾದ್ಯಂತೆ ಅದ್ಧೂರಿಯಾಗಿ ತೆರೆಗೆ ಬಂದಿದೆ. ತೆಲುಗು ಜತೆಗೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಸಿನಿಮಾ ರಿಲೀಸ್‌ ಆಗಿದೆ. ಅಲ್ಲು ಅರ್ಜುನ್‌ (Allu Arjun), ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯ ಸಿನಿಮಾ ಗುರುವಾರ (ಡಿ. 5) ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ವೀಕ್ಷಕರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಲ್ಲು ಅರ್ಜುನ್‌ ಅಭಿಮಾನಿಗಳಲ್ಲಿ ಸಡಗರ ಮನೆ ಮಾಡಿದೆ. ಈ ಮಧ್ಯೆ ಚಿತ್ರ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಸಿನಿಮಾ ತಂಡದ ಚಿಂತೆಗೆ ಕಾರಣವಾಗಿದೆ.

ಈಗಾಗಲೇ ಚಿತ್ರ ನೋಡಿದ ಅಲ್ಲು ಅರ್ಜುನ್‌ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಬ್ಲಾಕ್‌ ಬಸ್ಟರ್‌ ಆಗುತ್ತೆ, ದಾಖಲೆಯ ಕಲೆಕ್ಷನ್‌ ಮಾಡುತ್ತೆ ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ. ಪುಷ್ಪರಾಜ್‌ ಆಗಿ ಅಲ್ಲು ಅರ್ಜುನ್‌ ಮತ್ತೊಮ್ಮೆ ತೆರೆ ಮೇಲೆ ಅಬ್ಬರಿಸಿದ್ದು, ಶ್ರೀವಲ್ಲಿಯಾಗಿ ರಶ್ಮಿಕಾ ಮೋಡಿ ಮಾಡಿದ್ದಾರೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಪುಷ್ಪರಾಜ್‌ನ ಎಂಟ್ರಿ ಸೀನ್‌, ಜಾತ್ರೆಯ ದೃಶ್ಯಕ್ಕೆ ವೀಕ್ಷಕರು ಬಹುಪರಾಕ್‌ ಎಂದಿದ್ದಾರೆ. ಈ ಮೂಲಕ ಮೊದಲ ದಿನವೇ ದಾಖಲೆಯ ಕಲೆಕ್ಷನ್‌ನತ್ತ ಸಿನಿಮಾತಂಡ ಕಣ್ಣು ನೆಟ್ಟಿದೆ. ಆದರೆ ಇದೀಗ ಪೈರಸಿ ಕಾಟ ತಲೆನೋವಾಗಿ ಕಾಡುತ್ತಿದೆ.

ಪೈರಸಿ ಕಾಟ

ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಪೈರಸಿ ಕಾಪಿ ಕಾಣಿಸಿಕೊಂಡಿದೆ. ಮೂವಿರೂಲ್ಸ್‌, ತಮಿಳ್‌ರಾಕರ್ಸ್‌, ಬಾಲಿ4ಯು, ಮೂವೀಸ್‌ಅಡ್ಡ ಮುಂತಾದ ವೆಬ್‌ಸೈಟ್‌ಗಳಲ್ಲಿ ʼಪುಷ್ಪ 2ʼ ಚಿತ್ರದ ಎಚ್‌ಡಿ ವಿಡಿಯೊ ಲೀಕ್‌ ಆಗಿದೆ. ಇಲ್ಲಿ ಉಚಿತ ಡೌನ್‌ಲೋಡ್‌ಗೆ ಸಿಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಈ ಮೊದಲು ಚಿತ್ರದ ಕೆಲವೊಂದು ದೃಶ್ಯಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದವು. ಅದಾದ ಬಳಿಕ ಇದನ್ನು ಡಿಲೀಟ್‌ ಮಾಡಲಾಗಿತ್ತು. ಇದೀಗ ಇಡೀ ಚಿತ್ರವೇ ಲೀಕ್‌ ಆಗಿದ್ದು, ಕಲೆಕ್ಷನ್‌ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಅಲ್ಲು ಅರ್ಜುನ್‌ಗೆ ಮತ್ತೊಂದು ರಾಷ್ಟ್ರ ಪ್ರಶಸ್ತಿ?

ಸುಕುಮಾರ್‌ ನಿರ್ದೇಶನದ ʼಪುಷ್ಪʼ ಚಿತ್ರದ ಸೀಕ್ವೆಲ್‌ ಆಗಿರುವ ʼಪುಷ್ಪ 2ʼ ಅನ್ನು ಅದ್ಧೂರಿಯಾಗಿಯೇ ಕಟ್ಟಿ ಕೊಡಲಾಗಿದೆ. ʼಪುಷ್ಪʼ ಚಿತ್ರದ ಕಥೆ ಇಲ್ಲಿ ಮುಂದುವರಿದಿದೆ. ʼಪುಷ್ಪʼ ಚಿತ್ರಕ್ಕಾಗಿ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಅಲ್ಲು ಅರ್ಜುನ್‌ ಈ ಚಿತ್ರದ ಮೂಲಕ ಮತ್ತೊಂದು ಅವಾರ್ಡ್‌ ಮುಡಿಗೇರಿಸಿಕೊಳ್ಳಲಿದ್ದಾರೆ ಎಂದೇ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. 3 ಗಂಟೆ 20 ನಿಮಿಷದ ಈ ಚಿತ್ರ ಎಲ್ಲೂ ಬೋರ್‌ ಹೊಡೆಸುವುದಿಲ್ಲ ಎನ್ನುವುದು ಫ್ಯಾನ್ಸ್‌ ಅಭಿಮತ. ಲೋಕಲ್‌ ಸ್ಮಗ್ಲರ್‌ ಆಗಿದ್ದ ಪುಷ್ಪ ರಾಜ್ ಈ ಭಾಗದಲ್ಲಿ ಇಂಟರ್‌ ನ್ಯಾಷನಲ್ ಲೆವೆಲ್‌ಗೆ ಬೆಳೆದಿದ್ದಾನೆ. ಹೀಗಾಗಿ ಅದಕ್ಕೆ ತಕ್ಕಂತೆ ಅದ್ಧೂರಿಯಾಗಿ ಕಟ್ಟಿಕೊಡಲಾಗಿದೆ. ಈ ಸಿನಿಮಾದಲ್ಲಿ ಸುಕುಮಾರ್ ಅವರ ಬರಹಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಫಹದ್ ಫಾಸಿಲ್ ಪಾತ್ರ ಕೂಡ ಕೆಲವು ಕಡೆಗಳಲ್ಲಿ ಮಾತ್ರ ಎದ್ದು ಕಾಣಿಸುತ್ತದೆ ಎನ್ನುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸುತ್ತದೆ. ಜತೆಗೆ ಕೆಲವೊಂದು ಕಡೆ ಎಳೆದಂತೆ ಭಾಸವಾಗುತ್ತದೆ ಎನ್ನುವುದು ಹಲವರ ದೂರು.

ಈ ಸುದ್ದಿಯನ್ನೂ ಓದಿ: Pushpa 2 The Rule review: ಪುಷ್ಪಾ-2 ಹೇಗಿದೆ?, 3 ಗಂಟೆ 20 ನಿಮಿಷದ ಸಿನಿಮಾ ಬೋರ್ ಆಗುತ್ತಾ?