ಫ್ಲೋರಿಡಾ: ಕುಡಿದ ಮತ್ತಿನಲ್ಲಿದ್ದ ಜನರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬ ಪರಿಜ್ಞಾನವೇ ಇರುವುದಿಲ್ಲ. ಇಂತಹ ಕುಡುಕರ ಕಾರ್ಯದಿಂದ ಅದಷ್ಟೋ ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಫ್ಲೋರಿಡಾದಲ್ಲಿ ಕೂಡ ಕುಡಿದ ಮತ್ತಿನಲ್ಲಿದ್ದ ಮಹಿಳೆಯೊಬ್ಬಳು ತನ್ನ ಗೆಳೆಯನನ್ನು ಕೊಲೆ ಮಾಡಿ ಈಗ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾಳೆ. ಆಕೆ ಕುಡಿದ ಮತ್ತಿನಲ್ಲಿ ತನ್ನ ಗೆಳೆಯನನ್ನು ಸೂಟ್ಕೇಸ್ನಲ್ಲಿ ಹಾಕಿ ಜಿಪ್ ಲಾಕ್ ಮಾಡಿದ್ದಾಳೆ. ಇದರಿಂದ ಆತ ಉಸಿರುಗಟ್ಟಿ(Murder Case) ಸಾವನಪ್ಪಿದ್ದಾರೆ. ಹೀಗಾಗಿ ಮಹಿಳೆಗೆ ಕೊಲೆ ಅಪರಾಧಕ್ಕಾಗಿ ಫ್ಲೋರಿಡಾದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
47 ವರ್ಷದ ಸಾರಾ ಬೂನ್ ವಿರುದ್ಧ 2020ರಲ್ಲಿ 42 ವರ್ಷದ ಜಾರ್ಜ್ ಟೊರೆಸ್ ಅವರ ಸಾವಿನ ಆರೋಪ ಹೊರಿಸಲಾಗಿತ್ತು. ವಿಚಾರಣೆಯ ಸಮಯದಲ್ಲಿ, ಬೂನ್ ತಾನು ಟೊರೆಸ್ ಕೈಯಲ್ಲಿ ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾಗಿದ್ದೇನೆ. ಹಾಗಾಗಿ ಆತನನ್ನು ಕೊಂದೆ ಎಂದು ಹೇಳಿದ್ದಾಳೆ. ಹಾಗೇ ಅವಳು ಈ ಕೊಲೆ ಅಪರಾಧಕ್ಕಾಗಿ 15 ವರ್ಷಗಳ ಶಿಕ್ಷೆಯನ್ನು ಕಡಿಮೆ ಮಾಡುವ ಮನವಿ ಒಪ್ಪಂದವನ್ನು ತಿರಸ್ಕರಿಸಿದ್ದಾಳೆ ಎನ್ನಲಾಗಿದೆ.
ಬೂನ್ ತಾನು ಅನೇಕ ವರ್ಷಗಳಿಂದ ಟೊರೆಸ್ನಿಂದ ಶೋಷಣೆಗೆ ಒಳಗಾಗಿದ್ದೆನೆ ಮತ್ತು ತನ್ನ ಕೃತ್ಯಗಳಿಗೆ ಕ್ಷಮೆಯಾಚಿಸುತ್ತೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. “ರಾಕ್ಷಸನನ್ನು ಪ್ರೀತಿಸಿದ್ದಕ್ಕಾಗಿ ನಾನು ನನ್ನನ್ನು ಕ್ಷಮಿಸುತ್ತೇನೆ. ಇಷ್ಟು ಕಷ್ಟ ನೀಡಿದರೂ ನಾನು ಅವನನ್ನು ಪ್ರೀತಿಸುವುದನ್ನು ಎಂದಿಗೂ ನಿಲ್ಲಿಸಲಿಲ್ಲ. ಆದೇ ಈ ರೀತಿ ಆಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ನನ್ನನ್ನು ಕ್ಷಮಿಸಿ ಎಂದು ಜಾರ್ಜ್ ಟೊರೆಸ್ ಹಾಗೂ ಅವನ ಕುಟುಂಬದವರಲ್ಲಿ ಕ್ಷಮೆ ಕೇಳಿದ್ದಾಳೆ.
ಅವಳು ಅವನನ್ನು ಸೂಟ್ಕೇಸ್ನಲ್ಲಿ ಜಿಪ್ ಮಾಡಿದ ನಂತರ, ಅವಳು ಅವನ ವಿಡಿಯೊಗಳನ್ನು ರೆಕಾರ್ಡ್ ಮಾಡಿದ್ದಾಳೆ. ಅದರಲ್ಲಿ , ಅವನು ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದು ಕೂಗುವುದು ಮತ್ತು ಅವಳ ಹೆಸರನ್ನು ಕರೆಯುವುದನ್ನು ಕೇಳಬಹುದು.
ಕುಡಿದ ಮತ್ತಿನಲ್ಲಿದ್ದ ಆಕೆ ಟೊರೆಸ್ ಸ್ವತಃ ಸೂಟ್ಕೇಸ್ನಿಂದ ಹೊರಬರಬಹುದೆಂದು ಮಲಗಲು ಹೋಗಿದ್ದಳಂತೆ. ಮರುದಿನ ಬೆಳಿಗ್ಗೆ ಎಚ್ಚರವಾದಾಗ, ಟೊರೆಸ್ ಅನ್ನು ಕಾಣಲಿಲ್ಲ. ಆದರೆ ನಂತರ ಅವನು ಸೂಟ್ಕೇಸ್ನಲ್ಲಿದ್ದಾನೆ ಎಂದು ನೆನಪಿಸಿಕೊಂಡು ಸೂಟ್ಕೇಸ್ ಅನ್ನು ಓಪನ್ ಮಾಡಿದಾಗ ಟೊರೆಸ್ ಪ್ರತಿಕ್ರಿಯಿಸಲಿಲ್ಲ. ಆಗ ಸಹಾಯಕ್ಕಾಗಿ ಪೊಲೀಸರಿಗೆ ಕರೆ ಮಾಡಿದ್ದಾಳಂತೆ. ವಿಚಾರಣೆಯ ಸಮಯದಲ್ಲಿ, ಬೂನ್ , ಟೊರೆಸ್ ತನಗೆ ಹಾನಿ ಮಾಡುತ್ತಾನೆ ಎಂದು ಭಾವಿಸಿ ಅವನನ್ನು ಸೂಟ್ಕೇಸ್ನಲ್ಲಿ ಇರಿಸಿದೆ. ಆ ಮೂಲಕ ತಾನು ತನ್ನ ಆತ್ಮರಕ್ಷಣೆಗಾಗಿ ಹೀಗೆ ಮಾಡಿದ್ದೆ ಎಂದು ಹೇಳಿದ್ದಾಳೆ.
ಇದನ್ನೂ ಓದಿ: ‘ಡಾಕ್ಟರ್-ಡಾಕ್ಟರ್’ ಆಟವಾಡಿದ ಮಕ್ಕಳು ಕೀಟನಾಶಕ ಸೇವಿಸಿದರು!
ಆಕೆಯ ಫೋನ್ನಲ್ಲಿದ್ದ ವಿಡಿಯೊಗಳನ್ನು ಪೊಲೀಸರು ಪರಿಶೀಲಿಸಿದ ನಂತರ ಆಕೆಯ ವಿರುದ್ಧ ಕೊಲೆಯ ಆರೋಪ ದಾಖಲಿಸಲಾಗಿದೆ. ಇತ್ತೀಚೆಗೆ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ ಆಕೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.