Friday, 27th December 2024

Stock Market Updates: ಸೆನ್ಸೆಕ್ಸ್‌, ನಿಫ್ಟಿ ಭಾರಿ ಜಿಗಿತ; ಆರ್‌ಬಿಐನಿಂದ ಶುಕ್ರವಾರ ಬಡ್ಡಿ ದರ ಇಳಿಕೆ?

Stock Market Updates

ಮುಂಬಯಿ: ಇತ್ತೀಚಿನ ದುರ್ಬಲ ಜಿಡಿಪಿ ಅಂಕಿ ಅಂಶಗಳ ಹೊರತಾಗಿಯೂ, ಷೇರು ಮಾರುಕಟ್ಟೆಯಲ್ಲಿ (Stock Market Updates) ಸೂಚ್ಯಂಕಗಳಾದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸತತ ಐದು ದಿನಗಳಿಂದ ಭಾರಿ ಚೇತರಿಕೆ ದಾಖಲಿಸಿವೆ. ಸೆನ್ಸೆಕ್ಸ್‌ ಕಳೆದ 5 ದಿನಗಳಲ್ಲಿ 2,700 ಅಂಕ ಏರಿಕೆಯಾಗಿದೆ. ಸೆನ್ಸೆಕ್ಸ್‌ ಗುರುವಾರ 809 ಅಂಕ ಹೆಚ್ಚಳವಾಗಿ 81,765ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು. ನಿಫ್ಟಿ 240 ಅಂಕ ಚೇತರಿಸಿ 24,708ಕ್ಕೆ ಸ್ಥಿರವಾಯಿತು. ಷೇರು ಮಾರುಕಟ್ಟೆಯಲ್ಲಿ ಗುರುವಾರ ಟೈಟನ್‌ ಮತ್ತು ಟಿಸಿಎಸ್‌ ಷೇರುಗಳ ದರದಲ್ಲಿ ತಲಾ 3% ಏರಿಕೆಯಾಯಿತು. ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಐಟಿ ಕಂಪನಿಗಳ ಷೇರುಗಳೂ ಸೂಚ್ಯಂಕಗಳ ಏರಿಕೆಗೆ ಪುಷ್ಟಿ ನೀಡಿತು.

ಆರ್‌ಬಿಐ ಶುಕ್ರವಾರ ಬಡ್ಡಿ ದರ ಇಳಿಸಲಿದೆಯೇ?
ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಶುಕ್ರವಾರ ತನ್ನ ದ್ವೈ ಮಾಸಿಕ ಹಣಕಾಸು ನೀತಿ ಪರಾಮರ್ಶೆಯನ್ನು ಪ್ರಕಟಿಸಿಲಿದೆ. ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ರೆಪೊ ದರವನ್ನು ಇಳಿಸುವ ನಿರೀಕ್ಷೆ ಇದೆ. ರೆಪೊ ದರ ಇಳಿಕೆಯಾದರೆ, ಗೃಹ ಸಾಲ, ಕಾರ್ಪೊರೇಟ್‌ ಸಾಲ ಸೇರಿದಂತೆ ರೆಪೊ ದರ ಆಧರಿತ ಸಾಲಗಳ ಬಡ್ಡಿ ದರ ಇಳಿಕೆಯಾಗಲಿದೆ. ಈಗ ರೆಪೊ ದರ 6.5% ರಷ್ಟಿದೆ. ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ದರ ಇಳಿಕೆಯಾಗಿರುವುದರಿಂದ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲು ಆರ್‌ಬಿಐ ರೆಪೊ ದರ ಇಳಿಕೆಗೆ ಒತ್ತಡ ಉಂಟಾಗಿದೆ. ಆರ್‌ಬಿಐ ಶುಕ್ರವಾರ ಬಡ್ಡಿ ದರಗಳ ಬಗ್ಗೆ ಕೈಗೊಳ್ಳಬಹುದಾದ ನಿರ್ಧಾರಗಳು ಷೇರು ಪೇಟೆಯ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ.

ಬಿಟ್‌ ಕಾಯಿನ್‌ ದರ ದಾಖಲೆ ಜಿಗಿತ:
ಈ ನಡುವೆ ಕ್ರಿಪ್ಟೊ ಕರೆನ್ಸಿ ಬಿಟ್‌ ಕಾಯಿನ್‌ ದರ 1 ಲಕ್ಷ ಡಾಲರ್‌ಗೆ ಏರಿಕೆಯಾಗಿದೆ. ಮಾರುಕಟ್ಟೆ ಬಂಡವಾಳ ಮೌಲ್ಯ 2 ಲಕ್ಷ ಕೋಟಿ ಡಾಲರ್‌ಗೆ ಏರಿದ್ದು, ಟೆಸ್ಲಾ, ಫೇಸ್‌ಬುಕ್‌ ಮತ್ತು ಸೌದಿ ಅರಾಮ್ಕೊ ಕಂಪನಿಗಳ ಮಾರುಕಟ್ಟೆ ಮೌಲ್ಯವನ್ನೂ ಹಿಂದಿಕ್ಕಿದೆ. ಬಿಎಸ್‌ಇ ಮತ್ತು ಸಿಡಿಎಸ್‌ಎಲ್‌ ಷೇರುಗಳು ಅನುಕ್ರಮವಾಗಿ 14% ಮತ್ತು 8% ಏರಿಕೆ ದಾಖಲಿಸಿತು. ಸೆಂಟ್ರಲ್‌ ಡೆಪಾಸಿಟರಿ ಸರ್ವೀಸ್‌ (CDSL) ಷೇರಿನ ದರ 1,865 ರೂ.ಗೆ ವೃದ್ಧಿಸಿತು. ಬಿಎಸ್‌ ಇ ಷೇರಿನ ದರ 5,052 ರೂ.ಗೆ ಏರಿತು.‌

ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಎಫೆಕ್ಟ್:
ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಫಲಿತಾಂಶದ ಬಳಿಕ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತೆ ಹೂಡಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಜತೆಗೆ ದೇಶೀಯ ಹೂಡಿಕೆದಾರರು ಕೂಡ ಹೂಡಿಕೆ ಮುಂದುವರಿಸಿದ್ದಾರೆ. ಇದರ ಪರಿಣಾಮ ಷೇರು ಸೂಚ್ಯಂಕಗಳು ಜಿಗಿಯುತ್ತಿವೆ. ಕಳೆದ ಅಕ್ಟೋಬರ್‌, ನವೆಂಬರ್‌ನಲ್ಲಿ 1.15 ಲಕ್ಷ ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ತಿಂಗಳು ಇದುವರೆಗೆ 13,900 ಕೋಟಿ ರೂ. ಷೇರುಗಳನ್ನು ಖರೀದಿಸಿದ್ದಾರೆ.

ಡಿಸೆಂಬರ್‌ನಲ್ಲಿ ಸೂಚ್ಯಂಕ ಏರಿಕೆಯ ಇತಿಹಾಸ:
ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಷೇರು ಮಾರುಕಟ್ಟೆಗಳು ಸಕಾರಾತ್ಮಕವಾಗಿರುತ್ತದೆ. ಕಳೆದ 24 ವರ್ಷಗಳ ಇತಿಹಾಸದಲ್ಲಿ ಬಹುತೇಕ ಸಲ ಡಿಸೆಂಬರ್‌ನಲ್ಲಿ ಷೇರು ಸೂಚ್ಯಂಕಗಳು ಚೇತರಿಸಿತ್ತು. ಸೂಪರ್‌ಮಾರ್ಟ್‌ ದಿಗ್ಗಜ ವಿಶಾಲ್‌ ಮೆಗಾ ಮಾರ್ಟ್‌ ತನ್ನ 8,000 ಕೋಟಿ ರೂ. ಗಾತ್ರದ ಐಪಿಒ ಅನ್ನು ಡಿಸೆಂಬರ್‌ 11ಕ್ಕೆ ಆರಂಭಿಸಲಿದೆ. ಡಿಸೆಂಬರ್‌ 13 ತನಕ ಐಪಿಒ ನಡೆಯಲಿದೆ. ವಿಶಾಲ್‌ ಮೆಗಾ ಮಾರ್ಟ್‌ ಭಾರತದಾದ್ಯಂತ 626 ಮಾಲ್‌ಗಳನ್ನು ಹೊಂದಿದೆ. ಜೊಮ್ಯಾಟೊ ಷೇರು ದರದಲ್ಲಿ ಗುರುವಾರ 6% ಏರಿಕೆಯಾಗಿದ್ದು, 304 ರೂ.ಗೆ ಏರಿಕೆಯಾಯಿತು. ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ ಇದೀಗ 3 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.