Monday, 23rd December 2024

Comedian Sunil Pal: ಕಿಡ್ನ್ಯಾಪಿಂಗ್‌ ಕಹಿ ಅನುಭವ ಬಿಚ್ಚಿಟ್ಟ ಹಾಸ್ಯನಟ ಸುನಿಲ್ ಪಾಲ್; ಅಷ್ಟಕ್ಕೂ ನಡೆದಿದ್ದೇನು?

Comedian Sunil Pal

ಹಾಸ್ಯನಟ ಸುನಿಲ್ ಪಾಲ್(Comedian Sunil Pal) ಅವರು ಈ ಹಿಂದೆ ನಡೆದ ತಮ್ಮ ಅಪಹರಣದ ಸಮಯದಲ್ಲಿ ಏನೆಲ್ಲಾ ಆಯ್ತು ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಪಹರಣದ ನಂತರ ಅವರು ಅನುಭವಿಸಿದ 24 ಗಂಟೆಗಳ ಭಯಾನಕ ವಿವರವನ್ನು ನೆನಪಿಸಿಕೊಂಡಿದ್ದಾರೆ. ಈ ಆಘಾತಕಾರಿ ಅನುಭವದ ಬಗ್ಗೆ ಮಾಧ್ಯಮವೊಂದರ ಜತೆ ಮಾತನಾಡಿದ ಅವರು, “ಅದರ ಬಗ್ಗೆ ಯೋಚಿಸಲು ನನಗೆ ಸಮಯ ಬೇಕು. ಆ ವಿಚಾರದಲ್ಲಿ ನಾನು ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ. ನಾನು ಭಯಭೀತನಾಗಿದ್ದೇನೆ. ಅದು ನನ್ನ ಜೀವನದ ಅತ್ಯಂತ ಕೆಟ್ಟ ಸಮಯ. ಅದರಿಂದ ಹೊರಬರಲು ನನಗೆ ಸಮಯ ಮತ್ತು ಉತ್ತಮವಾದ ಸ್ಥಳ ಬೇಕುʼʼ ಎಂದಿದ್ದಾರೆ.

Comedian Sunil Pal

5 ಸ್ಟಾರ್ ಹೋಟೆಲ್ ಒಳಗೆ ಆಯೋಜಿಸಲಾದ ಖಾಸಗಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಹಾಸ್ಯ ಪ್ರದರ್ಶನ ನೀಡಲು ತನ್ನನ್ನು ಆಹ್ವಾನಿಸಲಾಗಿತ್ತು ಎಂದು ಸುನಿಲ್ ಪಾಲ್ ಬಹಿರಂಗಪಡಿಸಿದ್ದಾರೆ. ಆದರೆ ದಾರಿಯಲ್ಲಿ ಬರುವಾಗ ಅವರನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಲಾಯಿತು. ಮಂಗಳವಾರ (ಡಿಸೆಂಬರ್ 4) ಅವರು ಕಾಣೆಯಾದ ನಂತರ, ಅವರ ಪತ್ನಿ ಸರಿತಾ ಪೊಲೀಸರಿಗೆ ದೂರು ನೀಡಿ ಪತಿಯನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದರು.

ಘಟನೆಗೆ ನಡೆದಿದ್ದು ಹೇಗೆ?

ಸುನಿಲ್ ಪಾಲ್ ಅವರು ಈಗ ತಮ್ಮ ಕೆಟ್ಟ ಪರಿಸ್ಥಿತಿಯ ಬಗ್ಗೆ ಮಾಧ್ಯಮವೊಂದರಲ್ಲಿ ತೆರೆದಿಟ್ಟಿದ್ದಾರೆ.  “ಇದು ಪ್ರೀ ಪ್ಲ್ಯಾನ್ ಕಿಡ್ನಾಪಿಂಗ್ ಆಗಿದೆ. ಡಿಸೆಂಬರ್ 2ರಂದು ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿತ್ತು. ಅವರು ನನಗೆ 50 ಪ್ರತಿಶತದಷ್ಟು ಅಡ್ವಾನ್ಸ್ ಕೂಡ ನೀಡಿದ್ದರು. ಅವರು ವಿಮಾನ ನಿಲ್ದಾಣದಲ್ಲಿ ಪಿಕ್ ಅಪ್‌ಗಾಗಿ ಕಾರನ್ನು ಕಳುಹಿಸಿದ್ದಾರೆ. ಆದರೆ ಒಂದು ಗಂಟೆಯ ನಂತರ ನನ್ನನ್ನು ಮತ್ತೊಂದು ವಾಹನಕ್ಕೆ ಸ್ಥಳಾಂತರಿಸಲಾಯಿತು. ಆಗ ನನಗೆ ಕೆಟ್ಟ ಸಮಯ ಪ್ರಾರಂಭವಾಗಿತ್ತು. ಅವರು ನನ್ನನ್ನು ಅಪಹರಿಸಿದ್ದಾರೆ, ನನ್ನ ಕಣ್ಣುಗಳನ್ನು ಕಟ್ಟಿ ಒಂದು ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ನನಗೆ ತಿಳಿಯಿತು.  ಅವರು ತಮ್ಮ ಬಳಿ ಶಸ್ತ್ರಾಸ್ತ್ರಗಳಿವೆ. ಹಾಗಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಜೀವಕ್ಕೆ ಅಪಾಯವಿದೆ ಎಂದು ಒತ್ತಿ ಹೇಳಿದ್ದಾರೆ.  ಅಲ್ಲಿ 7-8 ಜನರಿದ್ದರು, ಕೆಲವರು ಕುಡಿದ ಮತ್ತಿನಲ್ಲಿ  ನನ್ನ ಮೇಲೆ ಕೂಗಾಡುತ್ತಿದ್ದರು.” ಎಂದು ಅವರು ಹೇಳಿದ್ದಾರೆ.

ಮಾತು ಮುಂದುವರಿಸಿದ ಅವರು,  “ಅಪಹರಣಕಾರರು 20 ಲಕ್ಷ ರೂ. ಬೇಡಿಕೆ ಇಟ್ಟಿದ್ದರು.  ನಾನು ಮುಂಬೈನಲ್ಲಿರುವ ಅನೇಕ ಸ್ನೇಹಿತರಿಗೆ ಹಣವನ್ನು ಸಂಗ್ರಹಿಸಲು ಕರೆ ಮಾಡಿದೆ ಮತ್ತು ತನ್ನನ್ನು ಬಿಡುಗಡೆ ಮಾಡಲು  7.5-8 ಲಕ್ಷ ರೂ. ನೀಡುವುದಾಗಿ ಮನವೊಲಿಸಿದೆ. ಇದಕ್ಕೆ ಒಪ್ಪಿದ ಅಪಹರಣಕಾರರು ಹಣ ವರ್ಗಾಯಿಸಿದಾಗ ಅವರು ನನ್ನನ್ನು ಸಂಜೆಯ ವೇಳೆ ಬಿಡುಗಡೆ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.

Comedian Sunil Pal

“ಈ ಬಗ್ಗೆ ಪ್ರಕರಣ ದಾಖಲಿಸುವಂತೆ ಪೊಲೀಸರು ನನ್ನನ್ನು ಕೇಳಿದ್ದಾರೆ. ಆದರೆ ನಾನು ತುಂಬಾ ಆಘಾತಕ್ಕೊಳಗಾಗಿದ್ದೇನೆ. ನಾನು ಪ್ರಕರಣ ದಾಖಲಿಸುತ್ತೇನೋ ಇಲ್ಲವೋ ನನಗೆ ಗೊತ್ತಿಲ್ಲ. ಅವರು ನನಗೆ ಬೆದರಿಕೆಗಳನ್ನು ಸಹ ನೀಡಲಿಲ್ಲ, ಆದರೆ ನಾನು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡರೆ ಅವರು ನನ್ನ ಕುಟುಂಬಕ್ಕೆ ಹಾನಿ ಮಾಡುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟಾಯ್ಲೆಟ್ ಕಮೋಡ್ ಒಳಗೆ ಸಿಲುಕಿಕೊಂಡ ಉಡದ ಮರಿ; ಮುಂದೇನಾಯ್ತು? ವಿಡಿಯೊ ನೋಡಿ

ಸುನಿಲ್ ಪಾಲ್ 2005ರಲ್ಲಿ ಸ್ಟ್ಯಾಂಡ್-ಅಪ್ ಹಾಸ್ಯ ಸರಣಿ ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್‍ನಲ್ಲಿ ಮೊದಲ ಬಹುಮಾನವನ್ನು ಗೆದ್ದ ನಂತರ ಖ್ಯಾತಿಯನ್ನು ಪಡೆದರು. ʼಭಾವನಾವೊ ಕೋ ಸಂಜೋʼ, ʼಫಿರ್ ಹೇರಾ ಫೇರಿʼ, ʼಅಪ್ನಾ ಸಪ್ನಾ ಮನಿ ಮನಿʼ ಮತ್ತು ʼಬಾಂಬೆ ಟು ಗೋವಾʼ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.