ಹೈದರಾಬಾದ್: ಈ ವರ್ಷದ ಬಹು ನಿರೀಕ್ಷಿತ ʼಪುಷ್ಪ 2ʼ (Pushpa 2) ಚಿತ್ರ ಕೊನೆಗೂ ರಿಲೀಸ್ ಆಗಿದೆ. ಡಿ. 5ರಂದು ತೆರೆಕಂಡ ಟಾಲಿವುಡ್‌ನ ಮಾಸ್ ನಿರ್ದೇಶಕ ಸುಕುಮಾರ್, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ಈ ಚಿತ್ರ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ಮೊದಲ ದಿನವೇ ಕೋಟಿ ಕೋಟಿ ರೂ. ಬಾಚಿಕೊಂಡು ದಾಖಲೆ ನಿರ್ಮಿಸಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಮತ್ತೊಮ್ಮೆ ಮೋಡಿ ಮಾಡಿದ್ದು, ಫಹದ್ ಫಾಸಿಲ್ ನಟನೆಗೆ ಪೂರ್ಣಾಂಕ ಸಿಕ್ಕಿದೆ. ಈ ಮಧ್ಯೆ ʼಪುಷ್ಪ 2ʼ ಒಟಿಟಿಗೆ ಯಾವಾಗ ಲಗ್ಗೆ ಇಡಲಿದೆ ಎನ್ನುವ ಚರ್ಚೆ ಆರಂಭವಾಗಿದೆ (Pushpa 2 OTT Release).
ಭಾರತದಲ್ಲಿ ಮೊದಲ ದಿನ ಅತೀ ಹೆಚ್ಚು ಗಳಿಸಿದ ಚಿತ್ರ; ʼಆರ್‌ಆರ್‌ಆರ್ʼ ದಾಖಲೆ ಉಡೀಸ್
ಮೊದಲ ದಿನ ಬಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎನ್ನುವ ದಾಖಲೆ ಇದೀಗ ಅಲ್ಲು ಅರ್ಜುನ್‌ನ ʼಪುಷ್ಪ 2ʼ ಪಾಲಾಗಿದೆ. ಈ ಮೂಲಕ ಟಾಲಿವುಡ್‌ನ ಚಿತ್ರ ಮಾಂತ್ರಿಕ ರಾಜಮೌಳಿ ನಿರ್ದೇಶನದ, ರಾಮ್ ಚರಣ್, ಜೂ.ಎನ್‌ಟಿಆರ್ ನಟನೆಯ ʼಆರ್‌ಆರ್‌ಆರ್ʼ ಚಿತ್ರದ ಹೆಸರಿನಲ್ಲಿದ್ದ ರೆಕಾರ್ಡ್ ಬ್ರೇಕ್ ಮಾಡಿದೆ. ʼಪುಷ್ಪ 2ʼ ಬಿಡುಗಡೆಯಾದ ಡಿ. 5ರಂದು ಭಾರತವೊಂದರಲ್ಲೇ ಬರೋಬ್ಬರಿ 175 ಕೋಟಿ ರೂ. ಗಳಿಸಿದೆ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 228 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ.
❤️🔥 Looks like the wait was worth it! ❤️🔥
— Rashmika Mandanna (@iamRashmika) December 5, 2024
Thankyou everyone! ❤️ https://t.co/RqPmOFi4DW
ಸುಮಾರು 6 ಭಾಷೆಗಳಲ್ಲಿ, 12,000 ಥಿಯೇಟರ್‌ಗಳಲ್ಲಿ ʼಪುಷ್ಪ 2ʼ ತೆರೆಕಂಡಿದೆ. 2022ರಲ್ಲಿ ಬಿಡುಗಡೆಯಾದ ʼಆರ್‌ಆರ್‌ಆರ್ʼ ಮೊದಲ ದಿನ ಭಾರತದಲ್ಲಿ 133 ಕೋಟಿ ರೂ. ಬಾಚಿಕೊಂಡಿತ್ತು. ಸುಮಾರು 2 ವರ್ಷಗಳ ಬಳಿಕ ಪುಷ್ಪರಾಜ್‌ನ ಅಬ್ಬರಕ್ಕೆ ಈ ದಾಖಲೆ ಮುರಿದಿದೆ. ʼಆರ್‌ಆರ್‌ಆರ್ʼ ಮೊದಲ ದಿನ ಜಾಗತಿಕವಾಗಿ 223 ಕೋಟಿ ರೂ. ಗಳಿಸಿತ್ತು.
ಒಟಿಟಿಗೆ ಯಾವಾಗ?
ʼಪುಷ್ಪ 2ʼ ಚಿತ್ರದ ಎಲ್ಲ ಭಾಷೆಗಳ ಒಟಿಟಿ ಪ್ರಸಾರದ ಹಕ್ಕನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ. ದಾಖಲೆಯ 270 ಕೋಟಿ ರೂ.ಗೆ ರೈಟ್ಸ್ ಬಿಕರಿಯಾಗಿದೆ ಎನ್ನಲಾಗಿದೆ. ಥಿಯೇಟರ್‌ಗಳಲ್ಲಿ ರಿಲೀಸ್ ಆದ ಕನಿಷ್ಠ 8 ವಾರಗಳ ನಂತರ ಒಟಿಟಿಯಲ್ಲಿ ರಿಲೀಸ್ ಮಾಡಬೇಕು ಎನ್ನುವ ಒಪ್ಪಂದದ ಮೇರೆಗೆ ಹಕ್ಕನ್ನು ಮಾರಾಟ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆ ಪ್ರಕಾರ 2025ರ ಫೆಬ್ರವರಿ 2ನೇ ವಾರ ʼಪುಷ್ಪ 2ʼ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.
2021ರಲ್ಲಿ ತೆರೆಕಂಡ ʼಪುಷ್ಪʼ ಚಿತ್ರದ ಮುಂದುವರಿದ ಭಾಗವಾಗಿರುವ ಇದರಲ್ಲಿ ತಾರಕ್ ಪೊನ್ನಪ್ಪ, ಜಗಪತಿ ಬಾಬು, ಡಾಲಿ ಧನಂಜಯ್ ಮತ್ತಿತರರು ನಟಿಸಿದ್ದಾರೆ. ಕನ್ನಡತಿ ಶ್ರೀಲೀಲಾ ಐಟಂ ಸಾಂಗ್‌ನಲ್ಲಿ ಅಲ್ಲು ಅರ್ಜುನ್ ಜತೆ ಸೊಂಟ ಬಳುಕಿಸಿ ಗಮನ ಸೆಳೆದಿದ್ದಾರೆ.
ಈ ಸುದ್ದಿಯನ್ನೂ ಓದಿ: Pushpa 2 Box office collection: ಮೊದಲನೇ ದಿನದ ಗಳಿಕೆಯಲ್ಲಿ ಆರ್‌ಆರ್‌ಆರ್ ದಾಖಲೆ ಮುರಿದ ಪುಷ್ಪಾ-2..?