Thursday, 21st November 2024

ಗೂಗಲ್‌ನಿಂದ ಏಕಸ್ವಾಮ್ಯದ ಗೂಗ್ಲಿ

ಬಡೆಕ್ಕಿಲ ಪ್ರದೀಪ 

ಟೆಕ್‌ಟಾಕ್‌

ಗೂಗಲ್ ಲೋಕ ಅಂದರೇ ಹಾಗೆ. ಅದು ನಮ್ಮನ್ನು ಹೇಗೆ ಆವರಿಸಿದೆ ಅನ್ನುವುದರ ಅರಿವೇ ನಮಗಾಗಿಲ್ಲ. ಸಾಮಾನ್ಯ ಯೋಚನೆ ಯಿಂದ ನೋಡಿದರೆ ಅಂತಹಾ ದೊಡ್ಡ ರೀತಿಯಲ್ಲಿ ಆವರಿಸಿದೆ ಅಂದನಿಸದಿದ್ದರೂ ಇದೊಂದು ರೀತಿಯ ಮಹ ದಾಲಿಂಗನ. ಅದರ ಕಬಂಧ ಬಾಹುಗಳು ಎಲ್ಲೆಡೆಯೂ ಹಬ್ಬಿದೆ.

ಹಾಗೆ ನೋಡಿದರೆ ನಮ್ಮ ಸುತ್ತ ಕೇವಲ ಬೆರಳೆಣಿಕೆಯಷ್ಟು ಸಂಸ್ಥೆಗಳು ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹಿಡಿತವನ್ನು ದಿನೇ ದಿನೇ ಬಿಗಿಗೊಳಿಸುತ್ತಾ ಸಾಗುತ್ತಿವೆ. ಅವುಗಳಲ್ಲಿ ಮುಖ್ಯವಾಗಿ, ಕೇಳಿಸಿಕೊಳ್ಳುವ ಹೆಸರುಗಳಲ್ಲಿ ಗೂಗಲ್ ಒಂದಾದರೆ ಇನ್ನೊಂದು ಫೇಸ್ ಬುಕ್. ಗೂಗಲ್ ಸರ್ಚ್ ಎಂಜಿನ್‌ನ ಮೂಲಕ ಶುರು ಮಾಡಿದ ತನ್ನ ಕಾರ್ಯಾಚರಣೆಯನ್ನು ಈಗ ಬೆಳೆಸಿದ ರೀತಿ ಹೇಗಿದೆ ಎಂದರೆ, ನಮ್ಮೆಲ್ಲರ ಜೇಬಿನೊಳಗೆ ಕೂತು ನಾವು ಮಾಡುವ ಪ್ರತಿಯೊಂದು ಕೆಲಸ, ಹೋಗುವ ಪ್ರತಿ ಊರು, ಕೇರಿ, ಆಡುವ ಪ್ರತಿ ಮಾತು, ಮಾಡುವ ಪ್ರತಿ ಪಾವತಿ, ಹೀಗೆ ಎಲ್ಲೆಲ್ಲ ಸಾಧ್ಯವೋ ಅಲ್ಲೆಲ್ಲಾ ತನ್ನ ಕಿವಿ-ಕಣ್ಣನ್ನು ಇಟ್ಟು ಕೊಂಡಿದೆ.

ಇದರಿಂದ ನಮಗೇನಾದೀತು ಅನ್ನುವವರು ಒಂದೆಡೆಯಾದರೆ, ಇನ್ನೊಂದೆಡೆ, ನಮ್ಮ ಗೌಪ್ಯ ಮಾಹಿತಿಗಳನ್ನೇ ಬಂಡವಾಳವನ್ನಾ ಗಿಸಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವಲ್ಲಿ ಅದರ ನಿತ್ಯ ಕರ್ಮಗಳನ್ನು ಮುಂದುವರೆಸಿದೆ. ಇದೇ ನಿಟ್ಟಿನಲ್ಲಿ ಫೇಸ್‌ಬುಕ್ ಕೂಡ ಸಾಗಿದ್ದರೂ, ಅದರ ವಿಧಾನ ಸ್ವಲ್ಪ ವಿಭಿನ್ನ. ಇವೆಲ್ಲವನ್ನು ಸ್ವಲ್ಪ ಕ್ಷಣಗಳಿಗೆ ಗೌಣವೆಂದುಕೊಂಡರೂ, ತಾನು ಬಿಟ್ಟು ಉಳಿದ ವರು ಇಲ್ಲದೇ ಇರುವ ಹಾಗೆ ನೋಡಿಕೊಳ್ಳುವ ಪ್ರಯತ್ನದವರೆಗೂ ಬಂದರೆ ಆಗ ಸ್ವಲ್ಪ ಕಷ್ಟವಾದೀತು.

ಅಲ್ಲವೇ? ಈಗ ಆಗಿರುವುದೂ ಅದೇ ಅನ್ನುವ ರೀತಿಯ ಕೆಲವು ದೂರುಗಳಿಗೆ ಕಿವಿ ಕೊಟ್ಟಿರುವ ಕಾಂಪಿಟೀಶನ್ ಕಮಿಶನ್ ಆಫ್ ಇಂಡಿಯಾ (ಸಿಸಿಐ- ಭಾರತೀಯ ಸ್ಪರ್ಧಾ ಆಯೋಗ) ಅನ್ನುವ ಆರೋಗ್ಯಕರ ಸ್ಪರ್ಧಾತ್ಮಕ ವ್ಯವಸ್ಥೆಯನ್ನು ನೋಡಿಕೊಳ್ಳಲೆಂದೇ ಇರುವ ಆಯೋಗವು, ಗೂಗಲ್ ಪೇಯನ್ನು ಗೂಗಲ್ ತನ್ನ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪ್ರಮುಖ ಯುಪಿಐ ಪೇಮೆಂಟ್ ಆಯ್ಕೆ ಯಾಗಿಸಿ, ಉಳಿದ ಯುಪಿಐ ಸಂಸ್ಥೆಗಳಿಗೆ ಅವಕಾಶ ನೀಡದಿರುವ ಕುರಿತಾಗಿ ಪರಿಶೀಲನೆ ನಡೆಸಲಿದೆ.

ಏನಿದು ದೂರು?
ಅನಾಮಿಕ ದೂರುದಾರರು ನೀಡಿರುವ ಮಾಹಿತಿಯನ್ನಾಧರಿಸಿ ಕ್ರಮ ಕೈಗೊಳ್ಳುವತ್ತ ತನ್ನ ಪರಿಶೀಲನೆಯನ್ನು ಆರಂಭಿಸಿರುವ ಸಿಸಿಐ ಪಡೆದಿರುವ ಮಾಹಿತಿಯ ಪ್ರಕಾರ, ಗೂಗಲ್ ತಾನು ಒಂದೆಡೆ ಆಂಡ್ರಾಯ್ಡ್’ನ ಸ್ಟೋರ್ ಅನ್ನು ನಡೆಸುವುದಲ್ಲದೇ, ಅದರಲ್ಲಿ ತನ್ನ ಆಪ್‌ಗಳನ್ನು ನೀಡಬಯಸುವ ಡೆವಲಪರ್‌ಗಳು ಹಾಗೂ ಉಪಯೋಗಿಸುವವರು, ಇಬ್ಬರಿಗೂ ಅನನುಕೂಲಕರ ವಾತಾ ವರಣವನ್ನು ಸೃಷ್ಟಿಸಿದೆ ಅನ್ನುವುದು.

ಒಂದೆಡೆ ಆಪ್ ಡೆವಲಪರ್‌ಗಳಿಗೆ ಅದು 30 ಶೇಕಡಾದಷ್ಟು ಕಮಿಶನ್ ಅನ್ನು ಹಾಕುವುದರಲ್ಲಿ ತೊಡಗುವ ಮೂಲಕ, ಹಾಗೂ ಕೇವಲ ತನ್ನದೇ ಪೇಮೆಂಟ್ ಆಯ್ಕೆಯನ್ನು ಬಳಸಬೇಕು ಎನ್ನುವ ತಾಕೀತನ್ನು ಹಾಕೋ ಮೂಲಕ, ದೈತ್ಯ ರೂಪದಲ್ಲಿ ಬೆಳೆ ದಿರುವ ಆಂಡ್ರಾಯ್ಡ್‌ ಲೋಕದಲ್ಲಿರುವ ಬಳಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ದೊಡ್ಡ ತೊಡಕಾಗಿ ಪರಿಣಮಿಸಿರುವುದರಿಂದ ಡೆವಲಪರ್‌ಗಳಿಗೆ, ಅದರಲ್ಲೂ ಚಿಕ್ಕ ಡೆವಲಪರ್‌ಗಳಿಗೆ ಹಾಕಿದ ಬಂಡವಾಳವನ್ನು ಮತ್ತೆ ಗಿಟ್ಟಿಸಿಕೊಳ್ಳುವಲ್ಲಿ ಭಾರಿ ತೊಂದರೆ
ನೀಡುವುದು ಒಂದೆಡೆಯಾದರೆ, ಇನ್ನೊಂದೆಡೆ ಗ್ರಾಹಕರಿಗೂ ಯುಪಿಐ ಪೇಮೆಂಟ್ ಆಯ್ಕೆಗಳಲ್ಲಿ ಕೇವಲ ಗೂಗಲ್ ಪೇ ಮಾತ್ರ ಇರುವುದರಿಂದ ಬೇರೆ ಆಪ್‌ಗಳನ್ನು ಬಳಸುವವರಿಗೆ ಬಳಸಲು ಅಸಾಧ್ಯವೆನಿಸುತ್ತಿದೆ.

ತನ್ನ ಸ್ಪರ್ಧಿಗಳಿಗೆ ಯುಪಿಐ ಪೇಮೆಂಟ್ ಆಯ್ಕೆಯ ವಿಭಾಗದಲ್ಲಿ ಅವಕಾಶವನ್ನು ನಿರಾಕರಿಸಿರುವುದನ್ನು ಗಮನಿಸಿರುವ ಸಿಸಿಐ ಈ ಕುರಿತು ತನಿಖೆಯಾಗಲೇಬೇಕು ಎಂದು ತನ್ನ ಡೈರೆಕ್ಟರ್ ಜನರಲ್ ಅನ್ನು ಆ ಕೆಲಸಕ್ಕೆ ನಿಯೋಜಿಸಿದೆ. ಗ್ರಾಹಕರ ಆಯ್ಕೆಯನ್ನು ಸೀಮಿತಗೊಳಿಸುವುದು ತಪ್ಪಾಗಿ ಕಾಣಿಸುತ್ತಿದ್ದು, ಇನ್ನೊಂದೆಡೆ ಆಪ್‌ಗಳನ್ನು ಡೆವಲಪ್ ಮಾಡುವವರಿಗೆ ಬೇರೆ ಪೇಮೆಂಟ್ ವ್ಯವಸ್ಥೆಯನ್ನು ಬಳಸುವುದನ್ನು ತಡೆಯುತ್ತಿರುವುದೂ ಮೇಲ್ನೋಟಕ್ಕೆ ಸ್ಪರ್ಧಿಗಳನ್ನು ಚಿವುಟುವ, ಹಾಗೂ ತನ್ನ ಸಾಮ್ರಾಜ್ಯಕ್ಕೆ ಯಾರನ್ನೂ ಬಿಡಗೊಡದ ಪ್ರವೃತ್ತಿಯನ್ನು ಗೂಗಲ್ ತೋರಿಸುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.

ಗೂಗಲ್ ನಿಯಂತ್ರಣ
ಗೂಗಲ್ ಪ್ಲೇ ಸ್ಟೋರ್ ಆಂಡ್ರಾಯ್ಡ್‌‌ನ 90 ಶೇಕಡಾ ಡೌನ್‌ಲೋಡನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವುದರಿಂದ, ಸಹಜವಾಗಿ ಅದರೊಳಗಿನ ಎಲ್ಲಾ ಪೇಮೆಂಟ್ ಗಳೂ ಅದರ ಮೂಲಕವೇ ಆಗಬೇಕಿರುವುದರಿಂದ ಹೆಚ್ಚಿನ ಪೇಮೆಂಟ್‌ಗಳನ್ನು ಗೂಗಲ್ ತಾನೇ
ನಿಯಂತ್ರಣ ಮಾಡುತ್ತಿರುವುದು ಕಂಡುಬರುತ್ತಿದೆ ಎಂದಿದೆ ಸಿಸಿಐ. ಜೊತೆಗೆ ಆಂಡ್ರಾಯ್ಡ್‌ ಮೇಲಿನ ತನ್ನ ಹಿಡಿತದಿಂದಾಗಿ ಅದು ಮಾರುಕಟ್ಟೆಯನ್ನು ತನ್ನ ಕಪಿಮುಷ್ಟಿಯಲ್ಲಿರಿಸಿಕೊಂಡಿರುವುದೂ, ತಥಾಕಥಿತ 30 ಶೇಕಡಾ ಕಮಿಶನ್ ಅನ್ನು ಅದು ಹೇರು ತ್ತಿರುವುದೂ ನ್ಯಾಯಸಮ್ಮತವೆಂದು ತೋರುತ್ತಿಲ್ಲ ಎಂದಿದೆ ಸಿಸಿಐ.

ಈ ಮೂಲಕ ಗೂಗಲ್ ಕೇವಲ ಹಣ ಮಾಡುವುದು ಒಂದೆಡೆಯಾದರೆ, ಇನ್ನೊಂದೆಡೆ, ತನ್ನ ಆಪ್‌ಗಳಿಗೆ ಹೋಲಿಸಿದರೆ ಸ್ಪರ್ಧಿ ಗಳಿಗೆ ಇರಲು ಹೆಚ್ಚು ಹಣದ ಡಿಮ್ಯಾಂಡ್ ಮಾಡುವ ಮೂಲಕ, ಅವು ಬೆಳೆಯಗೊಡದಿರುವಂತೆ ನೋಡುವುದೂ ಸೇರಿದೆ ಅನ್ನುವ ಪರಿಸ್ಥಿತಿಯೂ ಕಾಣಸಿಗುತ್ತದೆ. ಹಾಡಿನ ಸ್ಟ್ರೀಮಿಂಗ್, ಇ-ಬುಕ್, ಆಡಿಯೋ ಬುಕ್‌ಗಳ ರೀತಿಯ ವ್ಯವಸ್ಥೆಗಳಲ್ಲಿ ಆಪ್ ಡೆವಲಪ್ ಮಾಡುವವರು ನೀಡಬೇಕಾದ ಕಮಿಶನ್ ಅನ್ನು ಗಮನಿಸಿ ತಮ್ಮ ಚಂದಾ ಬೆಲೆಯನ್ನು ಏರಿಸಿದರೆ ಗ್ರಾಹಕರಿಗೆ ಹೊಡೆತ ಬೀಳುವುದಲ್ಲದೇ, ಒಟ್ಟಾರೆ ಅನುಭವದ ಮೇಲೂ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದಿದೆ ಆಯೋಗ.

ಈ ರೀತಿಯ ವ್ಯವಸ್ಥೆಯಿಂದಾಗಿ ಗೂಗಲ್ ಈ ಹಿಂದೆ 2018ರಲ್ಲಿ ಆನ್ ಲೈನ್ ಸರ್ಚ್‌ನಲ್ಲಿ ತಾನು ತನಗಿಷ್ಟ ಬಂದ ಪೇಜ್‌ಗಳನ್ನು ಮೇಲ್ಪಂಕ್ತಿಯಲ್ಲಿ ತೋರಿಸುವುದಕ್ಕಾಗಿ ಸಿಸಿಐನಿಂದ ದಂಡ ವಿಧಿಸಿಕೊಂಡಿತ್ತು. ಇದೀಗ ಈ ಹೊಸ ದೂರಿನನ್ವಯ ಮತ್ತೆ ತನಿಖೆ ಗಿಳಿದಿರುವ ಆಯೋಗ ಗೂಗಲ್ ಪೇ, ಗೂಗಲ್ ಪ್ಲೇ ಸ್ಟೋರ್, ಆಂಡ್ರಾಯ್ಡ್‌, ಹೀಗೆ ಹಲವು ಕಂಪೆನಿಗಳ ಸಂಕೀರ್ಣ ವ್ಯವಸ್ಥೆಯನ್ನೇ ಪ್ರಶ್ನಿಸಿರುವ ಕಾರಣ, ಈ ಎಲ್ಲಾ ಕಂಪೆನಿಗಳನ್ನು ನಡೆಸುವ ಆಲ್ಫಬೆಟ್, ಗೂಗಲ್ ಎಲ್‌ಎಲ್‌ಸಿ, ಗೂಗಲ್ ಐರ್‌ಲೆಂಡ್, ಗೂಗಲ್ ಇಂಡಿಯಾ, ಗೂಗಲ್ ಇಂಡಿಯಾ ಡಿಜಿಟಲ್ ಎನ್ನುವ ಐದು ಸಂಸ್ಥೆಗಳ ವಿರುದ್ಧ ತನಿಖೆ ನಡೆಸಲು ಆರಂಭಿಸಿದೆ.

ಪಾವತಿ ವಿಧಾನದಲ್ಲಿ ತಾರತಮ್ಯ
ಗೂಗಲ್ ಪೇ ಮೂಲಕ ಪೇ ಮಾಡುವುದಾದರೆ ಅದರ ವಿಧಾನವು ವಿಭಿನ್ನವಾಗಿದ್ದು (ಇಂಟೆಂಟ್ ಫ್ರೋ) ಅದು ಉಳಿದ ಯುಪಿಐ ಆಪ್‌ಗಳಿಗೆ ನೀಡಿರುವ ವಿಧಾನ (ಕಲೆಕ್ಟ್ ಫ್ರೋ)ಕ್ಕೆ ಹೋಲಿಸಿದರೆ ವೇಗವಾಗಿ ಪ್ರಾಸೆಸ್ ಮಾಡುವುದರಿಂದ ಗ್ರಾಹಕರನ್ನು ಉಳಿದ
ಆಯ್ಕೆಗಳನ್ನು ಬಳಸದಂತೆ ಮಾಡುವ ತಂತ್ರದಂತೆ ತೋರುತ್ತದೆ. ಇದರಿಂದಾಗಿ, ಕ್ರಮೇಣ ಜನರು ಗೂಗಲ್ ಪೇ ಮಾತ್ರ ಉಪಯೋಗಿಸುವಂತಾಗುತ್ತದೆ.