ಬೆಂಗಳೂರು: ರಾಜಧಾನಿಯ (Bengaluru news) ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. 36.59 ಕಿಲೋಮೀಟರ್ ಉದ್ದದ ಸರ್ಜಾಪುರ-ಹೆಬ್ಬಾಳ ಮೆಟ್ರೋ ರೆಡ್ ಲೈನ್‌ಗೆ (Red Line) ರಾಜ್ಯ ಸಚಿವ ಸಂಪುಟ (Karnataka Cabinet) ಅನುಮೋದನೆ ನೀಡಿದೆ.
ನಮ್ಮ ಮೆಟ್ರೋ ಇದೀಗ ಬೆಂಗಳೂರಿನ ಜೀವನಾಡಿಗಳಲ್ಲಿ ಒಂದಾಗಿದೆ. ನಗರದ ಬಹುತೇಕ ಮಂದಿ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಮೆಟ್ರೋ ಅವಲಂಬಿಸಿದ್ದಾರೆ. ಮೆಟ್ರೋ ದಿನದಿಂದ ದಿನಕ್ಕೆ ಭಾರೀ ಜನಮನ್ನಣೆ ಪಡೆಯುತ್ತಿದೆ. ಪ್ರಯಾಣಿಕರ ಬೇಡಿಕೆ ಮೇರೆಗೆ ಮೆಟ್ರೋ ಜಾಲ ವಿಸ್ತರಣೆಯಾಗುತ್ತಲಿದೆ. ಇದೀಗ ರೆಡ್ ಲೈನ್ ಮೆಟ್ರೋ ಕಾಮಗಾರಿ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ರಲ್ಲಿ ಸರ್ಜಾಪುರ- ಹೆಬ್ಬಾಳದವರೆಗೆ ಉದ್ದೇಶಿಸಿರುವ 36.59 ಕಿಲೋ ಮೀಟರ್ ಉದ್ದದ ರೆಡ್ ಲೈನ್ ಮೆಟ್ರೋ ಕಾಮಗಾರಿ ಯೋಜನಾ ಪೂರ್ವ ಸಿದ್ಧತೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಸರ್ಜಾಪುರ-ಹೆಬ್ಬಾಳದವರೆಗೆ 36.59ಕಿ.ಮೀ ಉದ್ದದ ಮೆಟ್ರೋ ಮಾರ್ಗವನ್ನು 28,405 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. 17 ಮೆಟ್ರೋ ನಿಲ್ದಾಣ ಒಳಗೊಂಡ 22.14 ಕಿ.ಮೀ. ಎಲಿವೇಟೆಡ್ ಮಾರ್ಗ ಹಾಗೂ 11 ನಿಲ್ದಾಣ ಒಳಗೊಂಡ 14.45 ಕಿ.ಮೀ ಸುರಂಗ ಮಾರ್ಗದ ಕಾಮಗಾರಿ ನಡೆಯಲಿದೆ.
ಕೆಂಪು ಮಾರ್ಗದ ಪ್ರತಿ ಕಿಲೋ ಮೀಟರ್ ಮೆಟ್ರೋ ಮಾರ್ಗ ನಿರ್ಮಾಣಕ್ಕೆ 776 ಕೋಟಿ ರೂಪಾಯಿ ವೆಚ್ಚ ಆಗಲಿದೆ. ಈ ಹಂತ ಪೂರ್ಣ ಆದರೆ ನಗರದಲ್ಲಿ ಒಟ್ಟು 258 ಕಿಲೋ ಮೀಟರ್ ಮೆಟ್ರೋ ಮಾರ್ಗ ಸಿದ್ಧವಾಗಲಿದೆ. ಸಂಪುಟದ ಅನುಮೋದನೆ ಪಡೆದ ಈ ಯೋಜನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಆಗಲಿದೆ. ಮುಂದಿನ ಒಂದು ವರ್ಷದೊಳಗೆ ಕೇಂದ್ರದ ಅನುಮೋದನೆ ಸಿಗುವ ಸಾಧ್ಯತೆಯಿದೆ. 2026ರಲ್ಲಿ ಇದರ ಕಾಮಗಾರಿ ಆರಂಭ ಆಗಲಿದ್ದು, 2031ಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇಬ್ಬಲೂರು, ಅಗರ, ಡೈರಿ ಸರ್ಕಲ್, ಕೆಆರ್ ಸರ್ಕಲ್ ಹಾಗೂ ಹೆಬ್ಬಾಳದಲ್ಲಿ 5 ಇಂಟರ್ ಚೇಂಜ್ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಸರ್ಜಾಪುರ, ಕಾಡ ಅಗ್ರಹಾರ ರೋಡ್, ಸೋಮಪುರ, ದೊಮ್ಮಸಂದ್ರ, ಮುತ್ತನಲ್ಲೂರು ಕ್ರಾಸ್, ಕೊಡತಿ ಗೇಟ್, ಅಂಬೇಡ್ಕರ್ ನಗರ, ಕಾರ್ಮಲ್ ರಾಂ, ದೊಡ್ಡಕನ್ನೆಲಿಯಲ್ಲಿ ನಿಲ್ದಾಣಗಳಿರಲಿವೆ. ಕಲ್ಕೊಂಡರಹಳ್ಳಿ, ಬೆಳ್ಳಂದೂರು ಗೇಟ್, ಇಬ್ಬಲೂರು, ಅಗರ, ಜಕ್ಕಸಂದ್ರ, ಕೋರಮಂಗಲ 3rd ಬ್ಲಾಕ್, ಕೋರಮಂಗಲ ಎರಡನೇ ಬ್ಲಾಕ್, ಡೈರಿ ಸರ್ಕಲ್, ನಿಮ್ಹಾನ್ಸ್, ಶಾಂತಿನಗರ, ಟೌನ್ ಹಾಲ್, ಕೆಆರ್ ಸರ್ಕಲ್, ಬಸವೇಶ್ವರ ಸರ್ಕಲ್, ಬೆಂಗಳೂರು ಗಾಲ್ಫ್ ಕೋರ್ಸ್, ಮೇಕ್ರಿ ಸರ್ಕಲ್, ಪ್ಯಾಲೇಸ್ ಗುಟ್ಟಳ್ಳಿ, ವೆಟರ್ನರಿ ಕಾಲೇಜು, ಗಂಗಾನಗರ, ಹೆಬ್ಬಾಳದಲ್ಲಿ ನಿಲ್ದಾಣಗಳಿರಲಿವೆ.
ಇದನ್ನೂ ಓದಿ: Namma Metro: ನಾಗಸಂದ್ರ – ಮಾದಾವರ ನಮ್ಮ ಮೆಟ್ರೋ ಹಸಿರು ಮಾರ್ಗ ಸಂಚಾರಕ್ಕೆ ಮುಕ್ತ