ಬೆಂಗಳೂರು: ರಾಜಧಾನಿಯ ಹೃದಯಭಾಗದಲ್ಲಿರುವ ಕಿಂಗ್ಫಿಶನ್ ಟವರ್ನಲ್ಲಿ (Kingfisher towers) ಇನ್ಫೋಸಿಸ್ (Infosys) ನಾರಾಯಣ ಮೂರ್ತಿ (Narayana Murthy) ದುಬಾರಿ ಮೌಲ್ಯದ ಫ್ಲ್ಯಾಟ್ ಖರೀದಿಸಿದ್ದಾರೆ. ಈ ಕಟ್ಟಡದ 16ನೇ ಮಹಡಿಯಲ್ಲಿ ನಾರಾಯಣ ಮೂರ್ತಿ ಮನೆ ಖರೀದಿಸಿದ್ದು, ಇದೇ ಕಟ್ಟಡದ 23ನೇ ಮಹಡಿಯಲ್ಲಿ ಸುಧಾ ಮೂರ್ತಿ (Sudha Murthy) ಅವರು ಇನ್ನೊಂದು ಮನೆ ಹೊಂದಿದ್ದಾರೆ.
ನಾರಾಯಣ ಮೂರ್ತಿ ಅವರು ಖರೀದಿಸಿದ ಮನೆ ಬರೋಬ್ಬರಿ 8,400 ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಫ್ಲ್ಯಾಟ್ನ್ನು ನಾರಾಯಣ ಮೂರ್ತಿ ಬರೋಬ್ಬರಿ 50 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಒಂದು ಚದರ ಅಡಿಗೆ 59,500 ರೂಪಾಯಿಯಂತೆ 50 ಕೋಟಿ ರೂಪಾಯಿ ನೀಡಿ ಮನೆ ಕೊಂಡುಕೊಂಡಿದ್ದಾರೆ. ಅತ್ಯಂತ ಐಷಾರಾಮಿ ಮನೆ ಇದಾಗಿದೆ. 5 ಕಾರು ಪಾರ್ಕಿಂಗ್ ಸೌಲಭ್ಯವೂ ಇದೆ. ಕಿಂಗ್ಫಿಶನ್ ಟವರ್ ಬೆಂಗಳೂರಿನ ಅತೀ ದುಬಾರಿ ವಸತಿ ಜಾಗ ಎಂದೇ ಗುರುತಿಸಿಕೊಂಡಿದೆ.
ಈ ಮನೆ ಖರೀದಿ ಮೂಲಕ ನಾರಾಯಣ ಮೂರ್ತಿ ಬೆಂಗಳೂರಿನಲ್ಲಿ ತಮ್ಮ 2ನೇ ಮನೆ ಖರೀದಿಸಿದ್ದಾರೆ. ನಾರಾಯಣ ಮೂರ್ತಿ ಕಿಂಗ್ಫಿಶರ್ ಟವರ್ನಲ್ಲಿರುವ ಮನೆಯನ್ನು ಮುಂಬೈ ಮೂಲದ ಉದ್ಯಮಿಯಿಂದ ಖರೀದಿಸಿದ್ದಾರೆ. ಸುಮಾರು 10 ವರ್ಷಗಳ ಹಿಂದೆ ಈ ಉದ್ಯಮಿ ಈ ಮನೆ ಖರೀದಿಸಿದ್ದರಂತೆ. ನಾರಾಯಣ ಮೂರ್ತಿ ಒಟ್ಟು ಆಸ್ತಿ 2024ರಲ್ಲಿ ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಬರೋಬ್ಬರಿ 530 ಕೋಟಿ ಅಮೆರಿಕನ್ ಡಾಲರ್ ಎಂದು ಅಂದಾಜಿಸಿದೆ.
ಯುಬಿ ಸಿಟಿ ಹೌಸ್ ಆವರಣದಲ್ಲಿ ಕಿಂಗ್ಫಿಶನ್ ಟವರ್ ಹಾಗೂ ಕ್ಯಾಂಪಸ್ ಒಟ್ಟು 4.5 ಏಕರೆ ಹೊಂದಿದೆ. ಇದು ಬೆಂಗಳೂರಿನ ಹೃದಯಭಾಗದಲ್ಲಿದೆ. ಕಿಂಗ್ಫಿಶರ್ ಟವರ್ನಲ್ಲಿರುವ ಪ್ರತಿ ಫ್ಲಾಟ್ 8,400 ಚದರ ಅಡಿ ವಿಸ್ತೀರ್ಣ ಹೊಂದಿದೆ. ಒಟ್ಟು ಮೂರು ಬ್ಲಾಕ್ ಹೊಂದಿದೆ. ವಿಜಯ್ ಮಲ್ಯ ಪೂರ್ವಜರಿದ್ದ ಹಳೇ ಮನೆಯನ್ನು ಕೆಡವಿ ಉದ್ಯಮಿ ವಿಜಯ್ ಮಲ್ಯ ಇಲ್ಲಿ ಕಿಂಗ್ಫಿಶರ್ ಟವರ್, ಯುಬಿ ಸಿಟಿ ನಿರ್ಮಾಣ ಮಾಡಿದ್ದರು.
ಕಿಂಗ್ಫಿಶರ್ ಟವರ್ ನಾರಾಯಣ ಮೂರ್ತಿ ಕುಟುಂಬಕ್ಕೆ ಹೊಸದಲ್ಲ. ನಾಲ್ಕು ವರ್ಷಗಳ ಹಿಂದೆ ರಾಜ್ಯ ಸಭಾ ಸದಸ್ಯೆ, ನಾರಾಯಣ ಮೂರ್ತಿ ಪತ್ನಿ ಸುಧಾ ಮೂರ್ತಿ ಇಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ. ಕಿಂಗ್ಫಿಶರ್ ಟವರ್ನ 23ನೇ ಮಹಡಿಯಲ್ಲಿ ಸುಧಾ ಮೂರ್ತಿ ಮನೆ ಇದೆ. ನಾಲ್ಕು ವರ್ಷಗಳ ಹಿಂದೆ 29 ಕೋಟಿ ರೂಪಾಯಿ ನೀಡಿ ಸುಧಾ ಮೂರ್ತಿ ಈ ಮನೆ ಖರೀದಿಸಿದ್ದರು. ಇದೀಗ 16ನೇ ಮಹಡಿಯಲ್ಲಿನ ಮನೆ ಖರೀದಿಗೆ ನಾರಾಯಣ ಮೂರ್ತಿ 50 ಕೋಟಿ ರೂಪಾಯಿ ನೀಡಿದ್ದಾರೆ.
ಇದೇ ಟವರ್ನಲ್ಲಿ ಬಯೋಕಾನ್ ಚೇರ್ಮೆನ್ ಕಿರನ್ ಮುಜುಮ್ದಾರ್ ಕೂಡ ಮನೆ ಹೊಂದಿದ್ದಾರೆ. ಇದೇ ಟವರ್ನಲ್ಲಿ ಹಾಲಿ ಇಂಧನ ಸಚಿವ ಕೆಜೆ ಜಾರ್ಜ್ ಪುತ್ರ ರಾಣಾ ಜಾರ್ಜ್ 35 ಕೋಟಿ ರೂಪಾಯಿ ನೀಡಿ ಕೆಲ ವರ್ಷಗಳ ಹಿಂದೆ ಮನೆ ಖರೀದಿಸಿದ್ದಾರೆ. 2017ರಲ್ಲಿ ಕೆಜೆ ಜಾರ್ಜ್ ಒಡೆತನದ ಎಂಬಸಿ ಗ್ರೂಪ್ 50 ಕೋಟಿ ರೂಪಾಯಿಗೆ ಮನೆ ಒಂದನ್ನು ಮಾರಾಟ ಮಾಡಿತ್ತು. ಈ ಮನೆಯನ್ನು ಕ್ವೆಸ್ಟ್ ಎಂಜಿನಿಯರಿಂಗ್ ಸಿಇಒ ಅಜಿತ್ ಪ್ರಭು ಖರೀದಿಸಿದ್ದರು.
ಇದನ್ನೂ ಓದಿ: ಸುಧಾಮೂರ್ತಿ ಅವರ ಕಾಲಿಗೆ ಬಿದ್ದಿದ್ದೇ ತಪ್ಪಾಯ್ತಾ ?