Tuesday, 7th January 2025

IND vs AUS 2nd Test: ಟ್ರಾವಿಸ್‌ ಹೆಡ್‌ ಶತಕ, ಎರಡನೇ ದಿನವೂ ಭಾರತಕ್ಕೆ ಹಿನ್ನಡೆ!

India vs Australia 2nd Test Day 2 Highlights from Adelaide Oval, Adelaide

ಅಡಿಲೇಡ್‌: ಇಲ್ಲಿನ ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಿಂಕ್‌ ಬಾಲ್‌ ಟೆಸ್ಟ್‌ (IND vs AUS 2nd Test) ಪಂದ್ಯದ ಎರಡನೇ ದಿನವೂ ಭಾರತ ತಂಡ ಭಾರಿ ಹಿನ್ನಡೆಯನ್ನು ಅನುಭವಿಸಿದ್ದು, ಸೋಲಿನ ಭೀತಿಗೆ ಒಳಗಾಗಿದೆ. ಆದರೆ, ಟ್ರಾವಿಸ್‌ ಹೆಡ್‌ ಸ್ಪೋಟಕ ಶತಕ ಹಾಗೂ ಆಸೀಸ್‌ ವೇಗಿಗಳ ಮಾರಕ ದಾಳಿಯ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ತಂಡ ಎರಡನೇ ಟೆಸ್ಟ್‌ ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದೆ.

ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 180 ರನ್‌ಗಳಿಗೆ ಆಲ್‌ಔಟ್‌ ಆಗಿದ್ದ ಭಾರತ ತಂಡ, ಆಸ್ಟ್ರೇಲಿಯಾ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ ಬಹುಬೇಗ ಆಲ್‌ಔಟ್‌ ಮಾಡಬೇಕೆಂಬ ಕನಸು ಭಗ್ನವಾಯಿತು. ಪಂದ್ಯದ ಎರಡನೇ ದಿನವಾದ ಶನಿವಾರ ಭಾರತ ತಂಡಕ್ಕೆ ಮಾರ್ನಸ್‌ ಲಾಬುಶೇನ್‌ ಹಾಗೂ ಟ್ರಾವಿಸ್‌ ಹೆಡ್‌ ಕಾಟ ಕೊಟ್ಟರು.

ಭರ್ಜರಿ ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌

ಅಜೇಯರಾಗಿ ಶನಿವಾರ ಬ್ಯಾಟಿಂಗ್‌ ಮುಂದುವರಿಸಿದ ಮಾರ್ನಸ್‌ ಲಾಬುಶೇನ್‌ 126 ಎಸೆತಗಳಲ್ಲಿ 64 ರನ್‌ ಗಳಿಸಿ ನಿತೀಶ್‌ ರೆಡ್ಡಿಗೆ ವಿಕೆಟ್‌ ಒಪ್ಪಿಸಿದರು. ಸ್ಟೀವನ್‌ ಸ್ಮಿತ್‌, ಮಿಚೆಲ್‌ ಮಾರ್ಷ್‌, ಅಲೆಕ್ಸ್‌ ಕೇರಿ ಹೆಚ್ಚು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ, ಟ್ರಾವಿಸ್‌ ಹೆಡ್‌ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಭಾರತೀಯ ಬೌಲರ್‌ಗಳಿಗೆ ಬೆವರಿಳಿಸಿದರ. ಇವರು ಆಡಿದ 141 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 17 ಬೌಂಡರಿಗಳೊಂದಿಗೆ 141 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಟೆಸ್ಟ್‌ ವೃತ್ತಿ ಜೀವನದಲ್ಲಿ ಎಂಟನೇ ಶತಕವನ್ನು ಪೂರ್ಣಗೊಳಿಸಿದರು.

ಟ್ರಾವಿಸ್‌ ಹೆಡ್‌ ಅವರ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡ, 87.3 ಪ್ರಥಮ ಇನಿಂಗ್ಸ್‌ನಲ್ಲಿ 337 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ಕಾಂಗರೂ ಪಡೆ 157 ರನ್‌ಗಳ ದೊಡ್ಡ ಮುನ್ನಡೆಯನ್ನು ಪಡೆಯಿತು. ಭಾರತದ ಪರ ಜಸ್‌ಪ್ರೀತ್‌ ಬುಮ್ರಾ ಮತ್ತು ಮೊಹಮ್ಮದ್‌ ಸಿರಾಜ್‌ ತಲಾ 4 ವಿಕೆಟ್‌ಗಳನ್ನು ಕಬಳಿಸಿದರು.

ಐದು ವಿಕೆಟ್‌ ಕಳೆದುಕೊಂಡ ಭಾರತ ತಂಡ

ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತದ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತ ತಂಡ, ಎರಡನೇ ದಿನ ದಿನದಾಟದ ಅಂತ್ಯಕ್ಕೆ 24 ಓವರ್‌ಗಳಿಗೆ ಐದು ವಿಕೆಟ್‌ಗಳ ನಷ್ಟಕ್ಕೆ 128 ರನ್‌ಗಳ್ನು ಕಲೆ ಹಾಕಿದ್ದು, ಇನ್ನೂ 29 ರನ್‌ ಹಿನ್ನಡೆಯಲ್ಲಿದೆ. ಕ್ರೀಸ್‌ನಲ್ಲಿ ರಿಷಭ್‌ ಪಂತ್‌ (28*) ಮತ್ತು ನಿತೀಶ್‌ ಕುಮಾರ್‌ ರೆಡ್ಡಿ (15*) ಇದ್ದಾರೆ.

ಸ್ಟಾರ್‌ ಬ್ಯಾಟ್ಸ್‌ಮನ್‌ಗಳ ವೈಫಲ್ಯ

ಪ್ರಥಮ ಇನಿಂಗ್ಸ್‌ನಂತೆ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದಾರೆ. ಕೆಎಲ್‌ ರಾಹುಲ್‌ 7 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, ವಿರಾಟ್‌ ಕೊಹ್ಲಿ ಮತ್ತು ನಾಯಕ ರೋಹಿತ್‌ ಶರ್ಮಾ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಆದರೆ, ಯಶಸ್ವಿ ಜೈಸ್ವಾಲ್‌ (24 ರನ್‌) ಹಾಗೂ ಶುಭಮನ್‌ ಗಿಲ್‌ (28 ರನ್‌)‌ ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಎಡವಿದರು. ಇದೀಗ ಭಾರತ ತಂಡಕ್ಕೆ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ ಇದ್ದಾರೆ. ಪಂತ್‌-ನಿತೀಶ್‌ ರೆಡ್ಡಿ ಜೊತೆಗೆ ಆರ್‌ ಅಶ್ವಿನ್‌ ಇದ್ದಾರೆ. ಈ ಮೂವರು ಬ್ಯಾಟ್ಸ್‌ಮನ್‌ಗಳು ನಾಳೆ ವಿಕೆಟ್‌ ಒಪ್ಪಿಸಿದರೆ, ಆಸ್ಟ್ರೇಲಿಯಾ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಗೆಲುವು ಪಡೆಯಲಿದೆ.

ಸ್ಕೋರ್‌ ವಿವರ (ಎರಡನೇ ದಿನದಾಟದ ಅಂತ್ಯಕ್ಕೆ)

ಭಾರತ ತಂಡ: ಪ್ರಥಮ ಇನಿಂಗ್ಸ್‌ನಲ್ಲಿ 44.1 ಓವರ್‌ಗಳಲ್ಲಿ 180-10 (ನಿತೀಶ್‌ ಕುಮಾರ್‌ ರೆಡ್ಡಿ 42,ಕೆಎಲ್‌ ರಾಹುಲ್‌ 37, ಶುಭಮನ್‌ ಗಿಲ್‌ 31, ಆರ್‌ ಅಶ್ವಿನ್‌ 22 ರನ್‌; ಮಿಚೆಲ್‌ ಸ್ಟಾರ್ಕ್‌ 48ಕ್ಕೆ 6, ಪ್ಯಾಟ್‌ ಕಮಿನ್ಸ್‌ 41 ಕ್ಕೆ 2, ಸ್ಕಾಟ್‌ ಬೋಲೆಂಡ್‌ 54ಕ್ಕೆ 2)

ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌ನಲ್ಲಿ 87.3 ಓವರ್‌ಗಳಲ್ಲಿ 337-10 (ನೇಥನ್‌ ಮೆಕ್‌ಸ್ವೀನಿ 39, ಮಾರ್ನಸ್‌ ಲಾಬುಶೇನ್‌ 64; ಟ್ರಾವಿಸ್‌ ಹೆಡ್‌ 140; ಜಸ್‌ಪ್ರೀತ್‌ ಬುಮ್ರಾ 61 ಕ್ಕೆ 4, ಮೊಹಮ್ಮದ್‌ ಸಿರಾಜ್‌ 98ಕ್ಕೆ 4)

ಭಾರತ: ದ್ವಿತೀಯ ಇನಿಂಗ್ಸ್‌ನಲ್ಲಿ 24 ಓವರ್‌ಗಳಲ್ಲಿ 128-5 (ರಿಷಭ್‌ ಪಂತ್‌ 28*, ಶುಭಮನ್‌ 28, ಯಶಸ್ವಿ ಜೈಸ್ವಾಲ್‌ 24; ಪ್ಯಾಟ್‌ ಕಮಿನ್ಸ್‌ 33ಕ್ಕೆ 2, ಸ್ಕಾಟ್‌ ಬೋಲೆಂಡ್‌ 39 ಕ್ಕೆ2)

ಈ ಸುದ್ದಿಯನ್ನು ಓದಿ: IND vs AUS: ಬ್ರಾಡ್‌ಮನ್‌ ದಾಖಲೆ ಸರಿಗಟ್ಟಿದ ಟ್ರಾವಿಸ್‌ ಹೆಡ್‌