Wednesday, 25th December 2024

ದಿಲ್ಜಿತ್ ಸಿಂಗ್‌ಗೆ ಕನ್ನಡ ಹೇಳಿಕೊಟ್ಟ ದೀಪಿಕಾ ಪಡುಕೋಣೆ; ಮಗು ಜನಿಸಿದ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ನಟಿಗೆ ಸಿಕ್ತು ನೆಟ್ಟಿಗರ ಮೆಚ್ಚುಗೆ

ಬೆಂಗಳೂರು: ಕನ್ನಡ ಚಿತ್ರರಂಗದಿಂದ ಸಿನಿಮಾ‌ ಪಯಣ ಶುರು ಮಾಡಿ ಇದೀಗ ಬಾಲಿವುಡ್​ನಲ್ಲಿ (Bollywood) ಸ್ಟಾರ್ ನಾಯಕಿಯಾಗಿ ಮಿಂಚುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಅವರು ನಟ ರಣವೀರ್ ಸಿಂಗ್ (Ranveer Singh) ಮದುವೆಯಾಗಿ, ಬಾಲಿವುಡ್​ನ ಕ್ಯೂಟ್ ಕಪಲ್ ಅಂತಾನೇ ಕರೆಯಿಸಿಕೊಂಡಿದ್ದಾರೆ. ಸದ್ಯಕ್ಕೆ ದೀಪಿಕಾ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video)​ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬೆಂಗಳೂರಿನಲ್ಲಿ ನಡೆದ ದಿಲ್ಜಿತ್ ದೋಸಾಂಜ್ (Diljit Dosanjh) ಅವರ ಮ್ಯೂಸಿಕ್ ಕನ್ಸರ್ಟ್‌ನಲ್ಲಿ ಕನ್ನಡದಲ್ಲಿ ಮಾತನಾಡಿ ದೀಪಿಕಾ ಪಡುಕೋಣೆ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಪಾಪ್ ಸೆನ್ಸೇಶನ್ ದಿಲ್ಜಿತ್ ದೋಸಾಂಜ್ ದಿಲ್ ಲೂಮಿನಾಟಿ ಮ್ಯೂಸಿಕ್ ಕನ್ಸರ್ಟ್ ಬೆಂಗಳೂರಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಮ್ಯೂಸಿಕ್ ಶೋದಲ್ಲಿ ದೀಪಿಕಾ ಕನ್ನಡ ಮಾತಾನಾಡುವ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ಈ ಮ್ಯೂಸಿಕ್ ಶೋ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ನಡೆದ ಗಾಯಕ ದಿಲ್ಜಿತ್ ದೋಸಾಂಜ್ ಅವರ ಲೈವ್‌ ಮ್ಯೂಸಿಕ್‌ ಕನ್ಸರ್ಟ್‌ನಲ್ಲಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಭಾಗವಹಿಸಿ ನೆರೆದಿದ್ದವರನ್ನು ಆಕರ್ಷಿಸಿದರು. ಮಗಳು ದುವಾ ಪಡುಕೋಣೆ ಸಿಂಗ್ (Dua Padukone) ಜನಿಸಿದ ಬಳಿಕ ಮೊದಲ ಸಲ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಕಲರ್‌ಫುಲ್‌ ಮ್ಯೂಸಿಕ್‌ ಕನ್ಸರ್ಟ್‌ನ ಬಗೆಬಗೆ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿಯೂ ಹರಿದಾಡುತ್ತಿವೆ.

ವೇದಿಕೆಗೆ ದೀಪಿಕಾ ಬರುವಾಗಲೇ ಫ್ಯಾನ್ಸ್ ಚಪ್ಪಾಳೆ, ಶಿಳ್ಳೆ ಹೊಡೆಯುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ದೀಪಿಕಾ ಪಡುಕೋಣೆ ವೇದಿಕೆ ಏರುತ್ತಾಲೇ ನಮಸ್ಕಾರ ಬೆಂಗಳೂರು ಎಂದಾಗ ದಿಲ್ಜಿತ್ ನಾನು ಈಗಾಗಲೇ ಇದನ್ನು ಹೇಳಿದ್ದೇನೆ. ನಮಸ್ಕಾರ ಬೆಂಗಳೂರು ಹೇಗಿದ್ದೀರಿ ಎಂಬುದಾಗಿ ಕೇಳಿದ್ದೇನೆ ಎಂದರು. ಆಗ ನಟಿ ದೀಪಿಕಾ ನಾನು ಚಿಕ್ಕವಳಿದ್ದಾಗ ಶಾಲೆಯಲ್ಲಿ ಕನ್ನಡವನ್ನು ಕಲಿತಿದ್ದೇನೆ ಎಂದು ಹೇಳಿದರು. ಅದರ ಜತೆಗೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುವುದನ್ನು ಕೂಡ ಹೇಳಿಕೊಟ್ಟರು. ಇದರಿಂದ ಪ್ರೇಕ್ಷಕರ ಹರ್ಷೋದ್ಗಾರ ಮತ್ತಷ್ಟು ಹೆಚ್ಚಿತು.

ಇದನ್ನೂ ಓದಿ: Billionaires In India: ಶತಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ; ಜಾಗತಿಕವಾಗಿ ಭಾರತಕ್ಕೆ ಎಷ್ಟನೇ ಸ್ಥಾನ?

ಇನ್ನು, ಮತ್ತೊಂದು ಕಡೆ ದೀಪಿಕಾರನ್ನು ದಿಲ್ಜಿತ್ ಹಾಡಿ ಹೋಗಳಿದ್ದಾರೆ. ನೀವು ಈಗಾಗಲೇ ಅದ್ಭುತವಾದ ಕೆಲಸವನ್ನು ಮಾಡಿದ್ದೀರಿ. ಇದು ನಮಗೆಲ್ಲಾ ಹೆಮ್ಮೆ ತರುವ ವಿಚಾರ, ನನ್ನ ಈ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ನಾನು ನಿಮಗೆ ಧನ್ಯವಾದಗಳನ್ನು ಹೇಳಬೇಕು ಎಂದು ದಿಲ್ಜಿತ್ ಹೇಳಿದ್ದಾರೆ. ದೀಪಿಕಾ ಹಾಗೇ ಹೇಳುತ್ತಿದ್ದಂತೆ, ನೆರೆದಿದ್ದ ಜನತೆ ಸಹ ದೀಪಿಕಾ ಕನ್ನಡಕ್ಕೆ ಶಿಳ್ಳೆ ಚಪ್ಪಾಳೆ ತಟ್ಟಿದ್ದಾರೆ.

ಗಾಯಕ ದಿಲ್ಜೀತ್‌ಗೆ ಕನ್ನಡ ಕಲಿಸಿದ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿಯೂ ವೈರಲ್‌ ಆಗಿದೆ. ಜತೆಗೆ ದಿಲ್ಜಿತ್‌ ಜತೆ ಸೇರಿ ಹಾಡುಗಳಿಗೆ ಧ್ವನಿಗೂಡಿಸಿದ್ದಾರೆ. ನಿಂತಲ್ಲೇ ಹೆಜ್ಜೆಹಾಕಿದ್ದಾರೆ. ಈ ಲೈವ್‌ ಕನ್ಸರ್ಟ್‌ನ ಬಿಡಿ ಬಿಡಿ ವಿಡಿಯೊಗಳು ಈಗ ಜಾಲತಾಣದಲ್ಲಿ ನೋಡುಗರ ಗಮನ ಸೆಳೆಯುತ್ತಿವೆ. ಬಹುದಿನಗಳ ಬಳಿಕ ದೀಪಿಕಾ ಅವರನ್ನು ನೋಡಿದ ಅಭಿಮಾನಿಗಳು ಖುಷಿಯಲ್ಲಿದ್ದಾರೆ.

ಸದ್ಯ ದೀಪಿಕಾ ಪಡುಕೋಣೆ ಮಗುವಿನ ಆರೈಕೆಯಲ್ಲಿದ್ದಾರೆ. ಮಗಳು ದುವಾ ಜತೆಗೆ ತಾಯ್ತನದ ಖುಷಿಯನ್ನು ಕಳೆಯುತ್ತಿದ್ದಾರೆ. ಸದ್ಯಕ್ಕೆ ಸಿನಿಮಾ ಕೆಲಸಗಳಿಂದ ಕೆಲ ಕಾಲ ದೂರ ಉಳಿದಿರುವ ದೀಪಿಕಾ, ದುವಾಳಿಗಾಗಿಯೇ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ. ದೀಪಿಕಾ ಹೇಳಿಕೊಟ್ಟ ಕನ್ನಡದಲ್ಲಿ ತಪ್ಪಿದ್ದರೂ ದೊಡ್ಡ ವೇದಿಕೆಯೊಂದರಲ್ಲಿ ಮಾತೃಭಾಷೆ ಮಾತನಾಡಲು ಯತ್ನಿಸಿದ್ದು ನೆಟ್ಟಿಗರ ಗಮನ ಸೆಳೆದಿದೆ.