Saturday, 28th December 2024

Viral News: ಹೊಟ್ಟೆಗೆ ಗುಂಡೇಟು ಬಿದ್ದರೂ ಜೀಪನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಪ್ರಯಾಣಿಕರ ಪ್ರಾಣ ಕಾಪಾಡಿದ ಚಾಲಕ!

ಪಟ್ನಾ: ಬಿಹಾರದಿಂದ (Bihar) ಬಂದಿರುವ ಸುದ್ದಿಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral News) ಆಗುತ್ತಿದೆ. ಜೀಪ್ ಚಾಲಕನೊಬ್ಬ, ತನ್ನ ಹೊಟ್ಟೆಗೆ ಗುಂಡೇಟು ಬಿದ್ದಿದ್ದರೂ ಎದೆಗುಂದದೆ ಕಿಲೋಮೀಟರ್ ಗಟ್ಟಲೆ ಜೀಪನ್ನು ಸುರಕ್ಷಿತವಾಗಿ ಚಾಲನೆ ಮಾಡಿಕೊಂಡು ಜೀಪಿನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಿದ ಘಟನೆಯೊಂದನ್ನು ಪಿಟಿಐ (PTI) ವರದಿ ಮಾಡಿದೆ.

ಈ ಘಟನೆ, ಭೋಜ್ ಪುರ (Bhojpur ) ಜಿಲ್ಲೆಯಲ್ಲಿ ಡಿ.4ರ ತಡರಾತ್ರಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸಂತೋಷ್ ಸಿಂಗ್ ಎಂಬ ಜೀಪು ಚಾಲಕ ಒಂದು ‘ತಿಲಕ’ ಸಮಾರಂಭದಲ್ಲಿ ಭಾಗವಹಿಸಿ ಸುಮಾರು 14-15 ಪ್ರಯಾಣಿಕರೊಂದಿಗೆ ಜೀಪು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ, ಬೈಕ್ ನಲ್ಲಿ ಬಂದ ಇಬ್ಬರು ಸಶಸ್ತ್ರಧಾರಿಗಳು ಸಿಂಗ್ ಅವರ ಜೀಪನ್ನು ಚೇಸ್ ಮಾಡ್ಕೊಂಡು ಬಂದು ಗುಂಡು ಚಲಾಯಿಸಿದ್ದಾರೆ. ಗುಂಡೇಟಿಗೆ ಒಳಗಾದ ಚಾಲಕ ಸಿಂಗ್ ಅವರಿಗೆ ತೀವ್ರ ರಕ್ತಸ್ರಾವವಾಗಲು ಪ್ರಾರಂಭಗೊಂಡಿತು. ತೀವ್ರ ರಕ್ತಸ್ರಾವ ಮತ್ತು ಸಹಿಸಲಸಾಧ್ಯವಾದ ನೋವಿನ ನಡುವೆಯೂ ಜೀಪನ್ನು ಸ್ವಲ್ಪದೂರ ಚಲಾಯಿಸಿಕೊಂಡು ಹೋಗಿ ದುಷ್ಕರ್ಮಿಗಳಿಂದ ಪ್ರಯಾಣಿಕರು ಸೇಫ್ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಜೀಪನ್ನು ನಿಲ್ಲಿಸಿದ್ದಾನೆ.

ಜೀಪನ್ನು ಚಾಲಕ ಸಿಂಗ್ ಸುರಕ್ಷಿತ ಸ್ಥಳಕ್ಕೊಯ್ದು ಅಲ್ಲಿ ನಿಲ್ಲಿಸುತ್ತಿದ್ದಂತೆ, ಜೀಪಿನಲ್ಲಿದ್ದ ಪ್ರಯಾಣಿಕರು ಘಟನೆಯ ಬಗ್ಗೆ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳು ಚಾಲಕನನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ.

‘ಆಸ್ಪತ್ರೆಯಲ್ಲಿ ಸಿಂಗ್ ಅವರಿಗೆ ಅಪರೇಷನ್ ನಡೆಸಿ ಅವರ ಹೊಟ್ಟೆಯಲ್ಲಿದ್ದ ಬುಲೆಟನ್ನು ಹೊರ ತೆಗೆಯಲಾಗಿದೆ. ಮತ್ತು ಸಿಂಗ್ ಇದೀಗ ಅಪಾಯದಿಂದ ಪಾರಾಗಿದ್ದಾರೆ. ಆದರೆ ಇನ್ನು ಕೆಲವು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿರಲಿದ್ದಾರೆ’ ಎಂದು ಜಗದೀಶಪುರದ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ರಾಜೀವ್ ಚಂದ್ರ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.

ದುಷ್ಕರ್ಮಿಗಳು ನಡೆಸಿದ ಈ ಗುಂಡಿನ ದಾಳಿಯಿಂದ ಚಾಲಕ ಸಿಂಗ್ ಅವರ ಹೊಟ್ಟೆಯೊಳಗೆ ಹೊಕ್ಕಿದ ಬುಲೆಟ್ ಅವರ ಕರುಳನ್ನು ಘಾಸಿಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. “ಗಾಯಳುವಿಗೆ ಪ್ರಮುಖ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ ಮತ್ತು ಹಾನಿಗೊಳಗಾದ ದೇಹದ ಭಾಗಗಳನ್ನು ಸರಿಪಡಿಸಲಾಗಿದೆ. ಗಾಯಾಳುವನ್ನು ಕನಿಷ್ಟ ಒಂದು ವಾರಗಳ ಕಾಲ ನಿಗಾದಲ್ಲಿರಿಸಲಾಗುವುದು’ ಎಂದು ಆಸ್ಪತ್ರೆಯ ವೈದ್ಯರಾಗಿರುವ ಡಾ. ವಿಕಾಸ್ ಸಿಂಗ್ ಅವರು ಮಾಧ್ಯಮಗಳಿಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Babri Masjid Demolition: ಬಾಬ್ರಿ ಮಸೀದಿ ಧ್ವಂಸ ಸಮರ್ಥಿಸಿಕೊಂಡ ಶಿವಸೇನೆ; ಎಂವಿಎ ಒಕ್ಕೂಟದಿಂದ ಹೊರಬಂದ ಸಮಾಜವಾದಿ ಪಕ್ಷ

ಘಟನೆಗೆ ಸಂಬಂಧಿಸಿದಂತೆ ಸಿಂಗ್ ಅವರ ಕುಟುಂಬದವರು ದೂರು ದಾಖಲಿಸಿದ್ದಾರೆ, ಇದರ ಆಧಾರದಲ್ಲಿ ಪೊಲೀಸರು ಎಫ್.ಐ.ಆರ್. (FIR) ದಾಖಲಿಸಿದ್ದಾರೆ. ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದೀಗ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವ ಮಾಹಿತಿಯಂತೆ, ದುಷ್ಕರ್ಮಿಗಳು ಆ ದಿನದಂದು ಈ ಪ್ರದೇಶದಲ್ಲಿ ಬೇರೊಂದು ವಾಹನವನ್ನು ಟಾರ್ಗೆಟ್ ಮಾಡಿದ್ದರು. ಇದೀಗ ಪೊಲೀಸರು ಆರೋಪಿಗಳ ರೇಖಾ ಚಿತ್ರವನ್ನು ಬಿಡುಗಡೆ ಮಾಡಿದ್ದು ಆರೋಪಿಗಳ ಪತ್ತೆಗೆ ಸ್ಥಳೀಯರ ಸಹಕಾರವನ್ನು ಕೋರಿದ್ದಾರೆ.

ಇನ್ನು ಈ ಪ್ರಕರಣದ ತನಿಖೆಯಲ್ಲಿ ಫಾರೆನ್ಸಿಕ್ ತಂಡ ಹಾಗೂ ಜಿಲ್ಲಾ ಗುಪ್ತಚರ ಅಧಿಕಾರಿಗಳೂ ಸಹ ಪೊಲೀಸರಿಗೆ ಸಹಕಾರ ನೀಡಲಿದ್ದಾರೆ ಎಂದು ಎಸ್.ಡಿ.ಪಿ.ಒ. ಮಾಹಿತಿ ನೀಡಿದ್ದಾರೆ. “ತನಿಖೆ ಮುಂದುವರೆದಿದೆ ಮತ್ತು ನಾವು ಚಾಲಕನ ಹೇಳಿಕೆಯನ್ನು ಪಡೆದುಕೊಂಡಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಒಟ್ಟಿನಲ್ಲಿ, ದುಷ್ಕರ್ಮಿಗಳ ಗುಂಡಿನ ಬೇಟೆ ಯಾರೋ ಆಗಬೇಕಾಗಿದ್ದು, ಜೀಪ್ ಚಾಲಕ ದುಷ್ಕರ್ಮಿಗಳ ಗುಂಡೇಟಿಗೆ ಸಿಲುಕಿದರೂ, ತನ್ನ ಜೀಪಿನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ ಈ ಚಾಲಕನ ಸಾಹಸಕ್ಕೆ ಇದೀಗ ನೆಟ್ಟಿಗರು ಸಿಕ್ಕಾಪಟ್ಟೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.