ಬೆಂಗಳೂರು: ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ (Bengaluru- Ayodhya Flight) ಕಾರ್ಯಾಚರಣೆಯನ್ನು ಇಂಡಿಗೋ ಏರ್‌ಲೈನ್ಸ್ (Indigo Airlines) ಸಂಸ್ಥೆ ಡಿಸೆಂಬರ್ 31ರಿಂದ ಪ್ರಾರಂಭಿಸಲಿದೆ. ಇದರ ಜೊತೆಗೆ, ಬೆಂಗಳೂರಿನಿಂದ ಗೋರಖ್‌ಪುರಕ್ಕೂ ವಿಮಾನಗಳು (Air travel) ವರ್ಷಾಂತ್ಯದಿಂದ ಪ್ರಾರಂಭವಾಗಲಿವೆ.
ತನ್ನ ದೇಶೀಯ ನೆಟ್‌ವರ್ಕ್ ಅನ್ನು ವಿಸ್ತರಿಸಲು ನಿರ್ಧರಿಸಿರುವ ಇಂಡಿಗೋ ಏರ್‌ಲೈನ್ಸ್, ಡಿಸೆಂಬರ್ 31ರಿಂದ ಬೆಂಗಳೂರು ಮತ್ತು ಅಯೋಧ್ಯೆಯನ್ನು ಸಂಪರ್ಕಿಸುವ ದೈನಂದಿನ ನೇರ ವಿಮಾನಯಾನವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಏರ್‌ಲೈನ್ ತನ್ನ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲು ಸಜ್ಜಾಗಿದೆ. ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಗಳಿಗಾಗಿ ವಿಮಾನಗಳನ್ನು ಸಾರಿಗೆ ವಿಧಾನವಾಗಿ ಆಯ್ಕೆ ಮಾಡುವಲ್ಲಿ ಗರಿಷ್ಠ ಪ್ರಯಾಣಿಕರನ್ನು ಆಕರ್ಷಿಸಲು ಅನುಕೂಲಕರ ಸಮಯದಲ್ಲಿ ವಿಮಾನಗಳನ್ನು ನಿಗದಿಪಡಿಸಲಾಗುವುದು ಎಂದು ಅದು ಹೇಳಿದೆ.
“ಬೆಂಗಳೂರಿನಿಂದ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ದೈನಂದಿನ ವಿಮಾನಗಳ ಪ್ರಾರಂಭವು ದೇಶದಲ್ಲಿ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಆಳವಾದ ಆಧ್ಯಾತ್ಮಿಕ ಪ್ರಾಮುಖ್ಯತೆಯ ನಗರವಾದ ಅಯೋಧ್ಯೆಗೆ ಪ್ರವಾಸ ಹೋಗಲು ನಮ್ಮ ಗ್ರಾಹಕರಿಗೆ ಸಮಯೋಚಿತವಾದ ದೈನಂದಿನ ವಿಮಾನಗಳು ನೆರವಾಗಲಿದ್ದು, ಇಂಡಿಗೋದ ವ್ಯಾಪಕ ನೆಟ್‌ವರ್ಕ್ ಅನ್ನು ಮತ್ತಷ್ಟು ಬಲಪಡಿಸಲಿದೆ” ಎಂದು ಇಂಡಿಗೋದ ಜಾಗತಿಕ ಮಾರಾಟದ ಮುಖ್ಯಸ್ಥ ವಿನಯ್ ಮಲ್ಹೋತ್ರಾ ಹೇಳಿದ್ದಾರೆ.
ಆರಂಭಿಕ ಹಂತದಲ್ಲಿ ವಿಮಾನಗಳು ಹಗಲಿನ ಸಮಯದಲ್ಲಿ ಹಾರಾಡಲಿವೆ. ವಿಮಾನ 6E 934 ಬೆಳಿಗ್ಗೆ 11.40ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಮಧ್ಯಾಹ್ನ 2.25ಕ್ಕೆ ಅಯೋಧ್ಯೆಗೆ ಆಗಮಿಸಲಿದೆ. ಹಿಂದಿರುಗುವ ಪ್ರಯಾಣದಲ್ಲಿ, 6E 926 ವಿಮಾನವು ಅಯೋಧ್ಯೆಯಿಂದ ಮಧ್ಯಾಹ್ನ 2.55 ಕ್ಕೆ ಹೊರಟು ಸಂಜೆ 5.30 ಕ್ಕೆ ಬೆಂಗಳೂರು ತಲುಪುತ್ತದೆ.
ಬೆಂಗಳೂರು-ಗೋರಖ್‌ಪುರ
ಇಂಡಿಗೋ ಏರ್‌ಲೈನ್ಸ್ ಡಿಸೆಂಬರ್ 31ರಿಂದ ಬೆಂಗಳೂರಿನಿಂದ ಗೋರಖ್‌ಪುರಕ್ಕೆ ತನ್ನ ದೈನಂದಿನ ವಿಮಾನಗಳನ್ನು ಪುನರಾರಂಭಿಸಲಿದೆ. ಪ್ರಸ್ತುತ, ಇಂಡಿಗೋ ಏರ್‌ಲೈನ್ಸ್ ವೆಬ್‌ಸೈಟ್ ಜನವರಿ 6 ಮತ್ತು 7ರಂದು ಬೆಂಗಳೂರು-ಗೋರಖ್‌ಪುರ ಮಾರ್ಗದಲ್ಲಿ ಎರಡು ವಿಮಾನಗಳನ್ನು ನಿಗದಿಪಡಿಸಿದೆ.
“ಇಂಡಿಗೊ ತನ್ನ ಗ್ರಾಹಕರಿಗೆ ಬೆಂಗಳೂರಿನಿಂದ ಗೋರಖ್‌ಪುರಕ್ಕೆ ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ತಮ ಸೇವೆಯನ್ನು ಒದಗಿಸಲಿದೆ. ಪೂರ್ವ ಉತ್ತರ ಪ್ರದೇಶದ ಪ್ರಮುಖ ಭಾಗವಾದ ಗೋರಖ್‌ಪುರವು ಜೈನ ಮತ್ತು ಬೌದ್ಧ ಧರ್ಮದಂತಹ ಅನೇಕ ಭಾರತೀಯ ಧರ್ಮಗಳ ಪ್ರಮುಖ ಭಾಗವಾಗಿದೆ. ಧಾರ್ಮಿಕ ಭಾವನೆಗಳ ಜೊತೆಗೆ ಸಾಂಸ್ಕೃತಿಕ, ಸಾಹಸ ಮತ್ತು ಆಧ್ಯಾತ್ಮಿಕ ಭಾವನೆಗಳನ್ನು ತೃಪ್ತಿಪಡಿಸುತ್ತದೆ. ಗೋರಖ್‌ಪುರದಿಂದ ಬೆಂಗಳೂರಿಗೆ ಹಿಂದಿರುಗುವ ವಿಮಾನವು ಇಂಡಿಗೋ ಸಿಬ್ಬಂದಿ ಒದಗಿಸುವ ಅತ್ಯುತ್ತಮ ಪರ್ಕ್‌ಗಳೊಂದಿಗೆ ನಿಮ್ಮ ಪ್ರವಾಸವನ್ನು ಸ್ಮರಣೀಯಗೊಳಿಸಲಿದೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: ಗುವಾಹಟಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ