Friday, 27th December 2024

Model Ravena Hanniely: ಮತ್ತೊಮ್ಮೆ ವರ್ಜಿನ್‌ ಆಗೋಕೆ ಈ ರೂಪದರ್ಶಿ ಖರ್ಚು ಮಾಡುತ್ತಿರುವ ಹಣವೆಷ್ಟು ಗೊತ್ತೇ?

Model Ravena Hanniely

ಬ್ರೆಜಿಲ್‌ನ ಇನ್‌ಫ್ಲುಯೆನ್ಸರ್‌ ರವೀನಾ ಹೆನೀಲೆ (Model Ravena Hanniely) ಒಬ್ಬರು ಪುನಃ ವರ್ಜಿನ್‌ ಆಗುವುದಕ್ಕೋಸ್ಕರ ಅತ್ಯಂತ ದುಬಾರಿಯಾದ ವೆಜೈನಲ್‌ ರಿಜುವಿನೇಶನ್‌ ಅನ್ನುವ ಪ್ರಕ್ರಿಯೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಸರಿಸುಮಾರು ಹದಿನಾರು ಲಕ್ಷ ರೂ. ಖರ್ಚು ಮಾಡುವುದಕ್ಕೆ ತಯಾರಾಗಿದ್ದಾರೆ.

ರವೀನಾ ಹೆನೀಲೆ ಅನ್ನುವ 23 ವರ್ಷದ ರೂಪದರ್ಶಿ ಹೈಮೆನೊಪ್ಲಾಸ್ಟಿಗೆ ಒಳಗಾಗಲು ನಿರ್ಧರಿಸಿದ್ದಾರೆ. ಇದರಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಹರಿದು ಹೋಗಿರುವ ಕನ್ಯಾಪೊರೆಯನ್ನು ಹೊಲಿಗೆಗಳಿಂದ ಜೋಡಿಸಿ ಪುನಃಸ್ಥಾಪಿಸುತ್ತಾರೆ. ಈ ವಿಧಾನವು ಹೆನೀಲೆ ಅವರ ವೈಯಕ್ತಿಕ ಹಾಗೂ ವೃತ್ತಿಪರ ಜೀವನದ ʻಹೊಸ ಆರಂಭʼದ ಸಂಕೇತ ಎನ್ನಲಾಗಿದೆ.

“ಈ ವಿಧಾನವು ನನ್ನ ಬದುಕಿಗೆ ಅಪೂರ್ವವಾದ ಹಾಗೂ ಹೊಸ ಅರ್ಥವನ್ನು ನೀಡಲಿದೆ. ನಾನು ಮತ್ತೊಮ್ಮೆ ಕನ್ಯೆಯಾಗಬೇಕು. ಇದು ನನ್ನ ಸ್ವಾಭಿಮಾನಕ್ಕಾಗಿ ಹಾಗೂ ವೈಯಕ್ತಿಕ ಕಾರಣದಿಂದಾಗಿ ಅತ್ಯಂತ ಮುಖ್ಯವಾದ ಪ್ರಕ್ರಿಯೆ” ಎಂದು ಹೆನೀಲೆ ಹೇಳಿಕೊಂಡಿದ್ದಾರೆ.

Model Ravena Hanniely

ಇನ್‌ಸ್ಟಾಗ್ರಾಂನಲ್ಲಿ 2.5 ಲಕ್ಷ ಫಾಲೊವರ್ಸ್‌ಗಳನ್ನು ಹೊಂದಿರುವ ಹೆನೀಲೆ ಈ ಪ್ರಕ್ರಿಯೆಯಿಂದ ಮಾನಸಿಕ ಲಾಭಗಳೂ ಇವೆ ಎಂದು ಹೇಳಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ದಿನ ಇನ್ನೂ ನಿಗದಿಯಾಗಿಲ್ಲ. ಆದರೆ ತಮ್ಮ ನಿರ್ಧಾರದ ಬಗ್ಗೆ ದೃಢವಾಗಿರುವ ಅವರು, “ವೈದ್ಯರು ಶಿಫಾರಸು ಮಾಡಿದ ಅವಧಿಯವರೆಗೆ ಲೈಂಗಿಕ ಸಂಪರ್ಕದಿಂದ ದೂರವಿರುವುದು ಸೇರಿದಂತೆ ಎಲ್ಲ ಸಲಹೆಗಳನ್ನು ಅನುಸರಿಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.

ಹೆನೀಲೆ ಈ ಬಗ್ಗೆ ಗಟ್ಟಿ ನಿರ್ಧಾರ ಮಾಡಿದ್ದರೂ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯು ವೈದ್ಯಕೀಯ ವೃತ್ತಿಪರರಲ್ಲಿ ಕಳವಳವನ್ನು ಹುಟ್ಟು ಹಾಕಿದೆ.

ಲಂಡನ್‌ನಲ್ಲಿರುವ ವೈದ್ಯಕೀಯ ಕ್ಲಿನಿಕ್‌ ಒಂದರ ಡಾ.ಹಾನಾ ಸಲುಸೋಲಿಯಾ ನ್ಯೂಯಾರ್ಕ್‌ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ, ”ಹೈಮನೊಪ್ಲಾಸ್ಟಿ ಎನ್ನುವುದು ಮಾನ್ಯತೆ ಪಡೆದಿರುವ ಒಂದು ಕಾಸ್ಮೆಟಿಕ್‌ ಸರ್ಜರಿಯಾಗಿದೆ. ಆದರೆ ಇದರಿಂದ ಕನ್ಯತ್ವವನ್ನು ಪುನಃಸ್ಥಾಪಿಸಲಾಗುವುದು ಎನ್ನುವುದು ಸುಳ್ಳು. ಅಲ್ಲದೆ, ಈ ಪ್ರಕ್ರಿಯೆಯಿಂದ ಸೋಂಕು ಉಂಟಾಗುವ ಅಪಾಯವಿದೆ. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಹಾಗೂ ನಂತರದಲ್ಲಿ ರಕ್ತಸ್ರಾವ ಉಂಟಾಗುವ ಸಾಧ್ಯತೆ ಇದೆ. ಗಾಯ ಗುಣಮುಖ ಆಗುವ ಹಾಗೂ ಫಲಿತಾಂಶದ ವಿಷಯದಲ್ಲಿ ಅತೃಪ್ತಿ ಉಂಟಾಗುವ ಸಂಭವವೂ ಇದೆ” ಎಂದಿದ್ದಾರೆ.

”ಅತ್ಯುನ್ನತ ಶಸ್ತ್ರಚಿಕಿತ್ಸಕರು ನೈತಿಕ ಮಾನದಂಡಗಳಿಗನುಗುಣವಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಿದರೆ ಸಂಭಾವ್ಯ ಅಪಾಯವನ್ನು ಕಡಿಮೆ ಮಾಡಬಹುದು. ಆದರೆ ಇದು ದೈಹಿಕ ಆರೋಗ್ಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಬದಲಾಗಿ ನೈತಿಕ ಪ್ರಶ್ನೆಗಳನ್ನೂ ಹುಟ್ಟು ಹಾಕುತ್ತದೆ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದಿನದಲ್ಲಿ ಸಾವಿರ ಮಂದಿಯೊಂದಿಗೆ ಸೆಕ್ಸ್‌ ಮಾಡುವುದೇ ಗುರಿ: ಟ್ರೇನಿಂಗ್‌ನಲ್ಲಿ ಬ್ಯುಸಿ ಆದ ನಟಿ!

ತನ್ನ ನಿರ್ಧಾರದ ಪ್ರಾಮುಖ್ಯತೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಅರಿತುಕೊಂಡಿರುವ ಹೆನೀಲೆ ”ಬೇಸರದ ಸಂಗತಿ ಎಂದರೆ, ಇಂಥ ನಿರ್ಧಾರಗಳನ್ನು ಅನೇಕರು ಅರ್ಥ ಮಾಡಿಕೊಳ್ಳುವುದಿಲ್ಲ ಹಾಗೂ ಬೆಂಬಲಿಸುವುದಿಲ್ಲ. ನಾವು ಇನ್ನೊಬ್ಬರ ಬಗ್ಗೆ ತೀರ್ಮಾನ ಕೈಗೊಳ್ಳುವುದನ್ನು ಬಿಟ್ಟು, ಅವರ ನಿರ್ಧಾರಗಳನ್ನು ಗೌರವಿಸಲು ಕಲಿಯಬೇಕು” ಎಂದು ಹೇಳಿಕೊಂಡಿದ್ದಾರೆ.