Friday, 27th December 2024

Pushpa 2 Collection: ರಿಲೀಸ್‌ ಆದ ಮೂರೇ ದಿನಕ್ಕೆ 500 ಕೋಟಿ ರೂ. ಕ್ಲಬ್‌ ಸೇರಿದ ‘ಪುಷ್ಪ 2’; ದಾಖಲೆ ಬರೆದ ಅಲ್ಲು ಅರ್ಜುನ್‌ ಚಿತ್ರ

Pushpa 2 Collection

ಹೈದರಾಬಾದ್‌: ದೇಶಾದ್ಯಂತ ಸದ್ಯ ‘ಪುಷ್ಪ 2’ (Pushpa 2) ಹವಾ ಜೋರಾಗಿಯೇ ಬೀಸುತ್ತಿದೆ. ಟಾಲಿವುಡ್‌ನ ಪ್ರಸಿದ್ಧ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್‌ ಬ್ಯಾನರ್‌ನಡಿ ಅದ್ಧೂರಿಯಾಗಿ ನಿರ್ಮಿಸಿರುವ ಈ ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆ ಕಂಡದ್ದು, ಹಲವು ದಾಖಲೆಗಳನ್ನು ಬ್ರೇಕ್‌ ಮಾಡಿ ಬಾಕ್ಸ್‌ ಆಫೀಸ್‌ನಲ್ಲಿ ಮುನ್ನುಗ್ಗುತ್ತಿದೆ. ಡಿ. 5ರಂದು ರಿಲೀಸ್‌ ಆಗಿರುವ ಸುಕುಮಾರ್‌-ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ಈ ಚಿತ್ರ ಮೊದಲ ದಿನದಿಂದಲೇ ದಾಖಲೆಯ ಕಲೆಕ್ಷನ್‌ ಮಾಡಿ ಇದೀಗ 3 ದಿನಗಳಲ್ಲಿ ಜಾಗತಿಕವಾಗಿ 500 ಕೋಟಿ ರೂ. ಕ್ಲಬ್‌ ಸೇರಿದೆ. ಆ ಮೂಲಕ ದಕ್ಷಿಣ ಭಾರತದ ಚಿತ್ರವೊಂದು ಮಹತ್ವದ ಮೈಲಿಗಲ್ಲು ನೆಟ್ಟಿದೆ (Pushpa 2 Collection).

ಅತೀ ವೇಗವಾಗಿ 500 ಕೋಟಿ ರೂ. ಕ್ಲಬ್‌ ಸೇರಿದ ಭಾರತದ ಮೊದಲ ಚಿತ್ರ ಎನ್ನುವ ಖ್ಯಾತಿಯೂ ಇದೀಗ ʼಪುಷ್ಪ 2ʼ ಪಾಲಾಗಿದೆ. ಈ ಮೂಲಕ ಬಾಲಿವುಡ್‌ನ ಸೂಪರ್‌ ಸ್ಟಾರ್‌ಗಳನ್ನೂ ಅಲ್ಲು ಅರ್ಜುನ್‌ ಹಿಂದಿಕ್ಕಿದ್ದಾರೆ. ʼʼಭಾರತದ ಅತಿ ದೊಡ್ಡ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಹಲವು ದಾಖಲೆಗಳನ್ನು ಬ್ರೇಕ್‌ ಮಾಡಿದ್ದು, ಅತಿ ವೇಗವಾಗಿ 500 ಕೋಟಿ ರೂ. ಕ್ಲಬ್‌ ಸೇರಿದ ಮೊದಲ ಚಿತ್ರವೆಂಬ ಖ್ಯಾತಿಗೆ ಪಾತ್ರವಾಗಿದೆʼʼ ಎಂದು ಮೈತ್ರಿ ಮೂವಿ ಮೇಕರ್ಸ್‌ ಎಕ್ಸ್‌ನಲ್ಲಿ ಬರೆದುಕೊಂಡಿದೆ.

ಭಾರತದಲ್ಲಿ ಕಲೆಕ್ಷನ್‌ ಎಷ್ಟಾಯ್ತು?

ಸುಕುಮಾರ್‌ ನಿರ್ದೇಶನದ ʼಪುಷ್ಪ 2ʼ 2021ರಲ್ಲಿ ತೆರೆಕಂಡ ʼಪುಷ್ಪʼ ಚಿತ್ರದ ಮುಂದುವರಿದ ಭಾಗವಾಗಿದ್ದು, ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಮತ್ತು ಫಹಾದ್‌ ಫಸಿಲ್‌ ನಟನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ದೇವಿಶ್ರೀ ಪ್ರಸಾದ್‌ ಅವರ ಸಂಗೀತವೂ ಗಮನ ಸೆಳೆಯುತ್ತಿದ್ದು, ಚಿತ್ರದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದೆ. ಮೊದಲ ದಿನವೇ ಭಾರತದಲ್ಲಿ 179.25 ಕೋಟಿ ರೂ. ಗಳಿಸಿದ ಈ ಸಿನಿಮಾ 2ನೇ ದಿನ 97 ಕೋಟಿ ರೂ. ದೋಚಿಕೊಂಡಿದೆ. ಇನ್ನು ಮೂರನೇ ದಿನವಾದ ಶನಿವಾರ 120 ಕೋಟಿ ರೂ. ಬಾಚಿಕೊಂಡಿದ್ದು, 3 ದಿನಗಳ ಒಟ್ಟು ಗಳಿಕೆ 396.25 ಕೋಟಿ ರೂ. ಭಾನುವಾರ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಈ ಪೈಕಿ ಹಿಂದಿಯೊಂದರಲ್ಲೇ 200 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದೆ. ಇನ್ನು ತೆಲುಗಿನಲ್ಲಿ 154.55 ಕೋಟಿ ರೂ., ತಮಿಳಿನಲ್ಲಿ 21.6 ಕೋಟಿ ರೂ., ಕನ್ನಡದಲ್ಲಿ 2.45 ಕೋಟಿ ರೂ. ಮತ್ತು ಮಲಯಾಳಂನಲ್ಲಿ 8.65 ಕೋಟಿ ರೂ. ಗಳಿಸಿದೆ.

ಸಾವಿರ ಕೋಟಿ ರೂ. ಗುರಿ

3 ದಿನಗಳಲ್ಲೇ 500 ಕೋಟಿ ರೂ. ಕ್ಲಬ್‌ ಸೇರಿರುವ ʼಪುಷ್ಪ 2ʼ ಸದ್ಯ ಸಾವಿರ ಕೋಟಿ ರೂ. ಕ್ಲಬ್‌ನತ್ತ ತನ್ನ ದೃಷ್ಟಿ ನೆಟ್ಟಿದೆ. ಇದೇ ವೇಗವನ್ನು ಕಾಯ್ದುಕೊಂಡರೇ ಅತೀ ಶೀಘ್ರದಲ್ಲೇ ಈ ಐತಿಹಾಸಿಕ ದಾಖಲೆ ನಿರ್ಮಿಸಲಿದೆ ಎಂದು ಸಿನಿಮಾ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

ಈ ಸುದ್ದಿಯನ್ನೂ ಓದಿ: Pushpa 2 movie: ಪುಷ್ಪ-2 ಸಿನಿಮಾ ನೋಡುವ ಆತುರ; ರೈಲಿಗೆ ಸಿಲುಕಿ ಅಭಿಮಾನಿ ಸಾವು