Tuesday, 17th December 2024

Assembly Winter Session: ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ; ಬಿಸಿ ಬಿಸಿ ಚರ್ಚೆ

suvarna soudha

ಬೆಳಗಾವಿ: ಬೆಳಗಾವಿಯ (Belagavi news) ಸುವರ್ಣ ವಿಧಾನಸೌಧದಲ್ಲಿ (Suvarna vidhana soudha) ಇಂದು (ಡಿ.9) ಚಳಿಗಾಲದ ಅಧಿವೇಶನ (karnataka assembly winter session) ಆರಂಭವಾಗಲಿದ್ದು, ಡಿಸೆಂಬರ್‌ 20ರವರೆಗೆ ನಡೆಯಲಿದೆ. ಇಂದು ಬೆಳಗ್ಗೆ 11ಗಂಟೆಗೆ ಅಧಿವೇಶನ ಆರಂಭವಾಗಲಿದೆ.

ಈ ಬಾರಿಯ ಚಳಿಗಾಲ ಅಧಿವೇಶನ ಬಿಸಿ ಬಿಸಿ ಚರ್ಚೆ, ವಾಕ್ಸಮರಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಬಳ್ಳಾರಿಯಲ್ಲಿ ಬಾಣಂತಿಯರ ಸಾವು, ಶಿಶುಗಳ ಸಾವು, ವಕ್ಫ್ ವಿವಾದ, ಮುಡಾ ಅಕ್ರಮ, ಪಡಿತರ ಚೀಟಿ ಗೊಂದಲ ಮುಂತಾದವುಗಳನ್ನು ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದಿರುವ ಮುಡಾ ಹಗರಣದ ಆರೋಪ, ವಕ್ಫ್ ಆಸ್ತಿ ವಿವಾದಗಳು ಬಿಸಿಬಿಸಿ ವಾಗ್ಯುದ್ಧಕ್ಕೆ ಕಾರಣವಾಗಬಹುದು. ಹಾಗೇ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಾದ ಮೂಲಭೂತ ಸೌಕರ್ಯದ ವಿಚಾರ ಕೂಡ ಈ ಬಾರಿ ಆ ಕಡೆಯ ಶಾಸಕರಿಂದ ಪ್ರಸ್ತಾಪ ಆಗಬಹುದು.

ಬೆಳಗಾವಿಯಲ್ಲಿ ಅಧಿವೇಶನ ನಡೆದಾಗ ಸಾಮಾನ್ಯವಾಗಿ ಪಂಚಮಸಾಲಿ ಮೀಸಲಾತಿ ವಿಚಾರ ಉಲ್ಬಣಗೊಳ್ಳುತ್ತದೆ. ಈ ಬಾರಿಯೂ ಪಂಚಮಸಾಲಿಗಳು ಭಾರಿ ಶಕ್ತಿಪ್ರದರ್ಶನಕ್ಕೆ ತಯಾರಿ ನಡೆಸಿಕೊಂಡಿದ್ದರು. ಇನ್ನು ಬಿಜೆಪಿಗೆ ಬಿಸಿ ತುಪ್ಪವಾಗಿರುವ ಯತ್ನಾಳ್, ಸದನದಲ್ಲಿ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಕಮಲ ಪಡೆಗೆ ಆತಂಕ ತಂದೊಡ್ಡಿದೆ. ವಿಪಕ್ಷ ನಾಯಕ ಆರ್‌.ಅಶೋಕ್, ಯತ್ನಾಳ್‌ರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ಯುದ್ಧಕ್ಕಿಳಿದು ಸರ್ಕಾರಕ್ಕೆ ಖೆಡ್ಡಾ ತೋಡಲು ಸಜ್ಜಾಗಿದ್ದಾರೆ.

ಒಟ್ಟಿನಲ್ಲಿ ಜನ ಪ್ರತಿನಿಧಿಗಳ ಮಾತಿನ ಯುದ್ಧಕ್ಕೆ ಬೆಳಗಾವಿಯ ಸುವರ್ಣ ಸೌಧ ಸಾಕ್ಷಿಯಾಗಲಿದೆ. ಸುವರ್ಣ ಸೌಧದಲ್ಲಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಊಟ, ವಸತಿ, ಕಚೇರಿ ಸೇರಿ ಎಲ್ಲಾ ಹಂತದಲ್ಲಿ ಸಿದ್ಧತೆ ನಡೆದಿದೆ. 2,750 ಕೊಠಡಿಗಳಲ್ಲಿ ಸಚಿವರು, ಶಾಸಕರು, ಅಧಿಕಾರಿಗಳಿಗೆ 6 ಕಡೆ ವಸತಿ ವ್ಯವಸ್ಥೆ ಮಾಡಲಾಗಿದೆ. ಬಂದೋಬಸ್ತ್​ಗೆ 6 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: Winter session: ಡಿ.9 ರಿಂದ 20 ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ