ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ (Bengaluru news) 10 ಕಿ. ಮೀ. ಉದ್ದದ ಹೊಸ ಎಕ್ಸ್ಪ್ರೆಸ್ ವೇ (Expressway) ನಿರ್ಮಾಣವಾಗಲಿದೆ. ಇದು ಬನಶಂಕರಿಯಿಂದ (Banashankari) ಕನಕಪುರ ರಸ್ತೆಯನ್ನು (Kanakapura road) ನೈಸ್ ರಸ್ತೆಯನ್ನು (Nice Road) ಸಂಪರ್ಕಿಸಲಿದೆ.
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅಂದಾಜು 1,200 ಕೋಟಿ ರೂ. ಮೊತ್ತದ ಈ ಪ್ರಸ್ತಾವಿತ ಯೋಜನೆಯನ್ನು ಜಾರಿಗೊಳಿಸುವ ಕುರಿತು ಆಸಕ್ತಿ ತೋರಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಡಿಪಿಆರ್ ತಯಾರಿ ಉಸ್ತುವಾರಿ ಮಾಡಲಿದ್ದು, ಯೋಜನೆ ಜಾರಿಯಾದರೆ ನಗರದ ಮಧ್ಯಭಾಗದ ವಾಹನ ದಟ್ಟಣೆ ನಿವಾರಣೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಬನಶಂಕರಿ- ನೈಸ್ ರಸ್ತೆ ಸಂಪರ್ಕಿಸಲು 10 ಕಿ. ಮೀ. ಉದ್ದದ 4 ಪಥದ ಎಕ್ಸ್ಪ್ರೆಸ್ ವೇ ನಿರ್ಮಾಣ ಮಾಡುವುದು ಈ ಪ್ರಸ್ತಾವಿತ ಯೋಜನೆಯಾಗಿದೆ. ಈ ರಸ್ತೆ ಡಿ. ಕೆ. ಶಿವಕುಮಾರ್ ಅವರ ತವರು ಕ್ಷೇತ್ರ ಕನಕಪುರಕ್ಕೆ ಸಂಪರ್ಕ ಕಲ್ಪಿಸಲು ಸಹ ಅನುಕೂಲವಾಗಲಿದೆ. ಬನಶಂಕರಿ ಬಳಿ ಈಗಿರುವ ವಾಹನ ದಟ್ಟಣೆ, ನಮ್ಮ ಮಟ್ರೋ ಆದ ಮೇಲೆ ಉಂಟಾಗುತ್ತಿರುವ ದಟ್ಟಣೆ ಪರಿಹಾರವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಬೆಂಗಳೂರು ನಗರ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಕನಕಪುರ ರಸ್ತೆಯೂ ಒಂದಾಗಿದೆ. ಈಗ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ನಮ್ಮ ಮೆಟ್ರೋ ಮಾರ್ಗವೂ ಇರುವ ಕಾರಣ ವಾಹನಗಳ ಸಂಖ್ಯೆ, ರಸ್ತೆ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಕುರಿತು ಚರ್ಚಿಸಲಾಗಿದ್ದು, ಎಕ್ಸ್ಪ್ರೆಸ್ ವೇ ಪ್ರಸ್ತಾಪವನ್ನು ಮುಂದಿಡಲಾಗಿದೆ.
ಕನಕಪುರ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೇರೆ ಕ್ರಮ ಅನಿವಾರ್ಯವಾಗಿದೆ. ಇಲ್ಲಿ ಮೆಟ್ರೋ ಪಿಲ್ಲರ್ಗಳು ಇರುವ ಕಾರಣ ಗ್ರೇಡ್ ಸಪರೇಟರ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಎಕ್ಸ್ಪ್ರೆಸ್ ವೇ ನಿರ್ಮಾಣ ಮಾಡುವುದು ಯೋಜನೆಯಾಗಿದೆ. ಈ ಕುರಿತು ಅಧಿಕಾರಿಗಳು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಿದ್ದು, ಬಳಿಕ ಈ ಯೋಜನೆ ಅಂತಿಮ ಚಿತ್ರಣವನ್ನು ಪಡೆಯಲಿದೆ.
ಕನಕಪುರ ರಸ್ತೆಯಲ್ಲಿರುವ ಬೆಂಗಳೂರು ಜಲಮಂಡಳಿ ಪೈಪ್ಲೈನ್ನಿಂದ ಬನಶಂಕರಿ ತನಕ ಎಕ್ಸ್ಪ್ರೆಸ್ ವೇ ನಿರ್ಮಾಣ ಮಾಡಬೇಕು ಎಂಬುದು ಪ್ರಸ್ತಾವಿತ ಯೋಜನೆ. ಈ ಕುರಿತು ಕಾರ್ಯ ಸಾಧ್ಯತಾ ವರದಿ ಮತ್ತು ಡಿಪಿಆರ್ ಅನ್ನು ತಯಾರು ಮಾಡುವ ಕಾರ್ಯವನ್ನು ತಕ್ಷಣ ಆರಂಭಿಸಬೇಕು ಎಂದು ಬಿಬಿಎಂಪಿ ಜಲಮಂಡಳಿಗೆ ಸಹ ನಿರ್ದೇಶನ ನೀಡಿದೆ.
ಬಿಎಂಆರ್ಸಿಎಲ್ನ ರಾಗಿಗುಡ್ಡದ ಡಬಲ್ ಡೆಕ್ಕರ್ ಫ್ಲೈ ಓವರ್, ಬನಶಂಕರಿ ಮತ್ತು ಸುತ್ತಮುತ್ತಲೂ ಉಂಟಾಗುತ್ತಿರುವ ಸಂಚಾರ ದಟ್ಟಣೆ ಮತ್ತು ಭವಿಷ್ಯದಲ್ಲಿ ಹೆಚ್ಚಾಗುವ ವಾಹನಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಎಕ್ಸ್ಪ್ರೆಸ್ ವೇ ನಿರ್ಮಾಣವಾಗಲಿದೆ. ಇದಕ್ಕೆ ಡಿಪಿಆರ್ ಸಿದ್ಧಪಡಿಸಲು ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತಾವಿತ ಬನಶಂಕರಿ-ನೈಸ್ ರಸ್ತೆ 10 ಕಿ. ಮೀ. ಉದ್ದದ ಎಕ್ಸ್ಪ್ರೆಸ್ ವೇ ಯೋಜನೆಗೆ ವಿರೋಧವೂ ವ್ಯಕ್ತವಾಗಿದೆ. ಈ ಯೋಜನೆಯ ವೆಚ್ಚ ಸುಮಾರು 1,200 ಕೋಟಿ ರೂ.ಗಳು. ಇದರ ಜೊತೆಗೆ ಸುರಂಗ ಮಾರ್ಗ, ಸ್ಕೈಡೆಕ್ ಯೋಜನೆ ಎಂದು ಹೊಸ ಹೊಸ ಯೋಜನೆಗೆ ಸಾವಿರಾರು ಕೋಟಿ ಹಾಕುವ ಮೊದಲು ಬಾಕಿ ಉಳಿದಿರುವ ಯೋಜನೆ ಪೂರ್ಣಗೊಳಿಸಿ ಎಂದು ಒತ್ತಾಯಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಹೊಸ ರಸ್ತೆ ಯೋಜನೆಗಳಿಗೆ ಹಣ ಹಾಕುವ ಬದಲು ನಮ್ಮ ಮೆಟ್ರೋ ಸಂಪರ್ಕ ಜಾಲವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ. ಈಗಿರುವ ಮಾರ್ಗದಲ್ಲಿಯೇ ಸಾರ್ವಜನಿಕ ಸಾರಿಗೆ ಸಂಪರ್ಕ ಉತ್ತಮಗೊಳಿಸಲು ಗಮನಹರಿಸಿ ಎಂದು ಸರ್ಕಾರವನ್ನು ಆಗ್ರಹಿಸಲಾಗುತ್ತಿದೆ.
ಇದನ್ನೂ ಓದಿ: Karnataka’s Economy: ಏರುಗತಿಯಲ್ಲಿ ರಾಜ್ಯದ ಆರ್ಥಿಕತೆ, ಮೂಲಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ: ಸಿಎಂ