Friday, 27th December 2024

Pushpa 2 Movie: ‘ಪುಷ್ಪ 2’ ಚಿತ್ರ ಪ್ರದರ್ಶನದ ವೇಳೆ ಯಡವಟ್ಟು;‌ ಆರಂಭದಲ್ಲಿ ಮೊದಲಾರ್ಧದ ಬದಲು ದ್ವಿತೀಯಾರ್ಧ ಪ್ರದರ್ಶನ!

Pushpa 2 Movie

ತಿರುವನಂತಪುರಂ: ದೇಶಾದ್ಯಂತ ʼಪುಷ್ಪ 2ʼ ಚಿತ್ರ (Pushpa 2 Movie) ಕಮಾಲ್‌ ಮಾಡುತ್ತಿದೆ. ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ರೂ. ಬಾಚುತ್ತಿದೆ. ಡಿ. 5ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗಿರುವ ಈ ಚಿತ್ರವನ್ನು ಎಲ್ಲ ಭಾಷಿಕರು ಎರಡೂ ಕೈ ಚಾಚಿ ಸ್ವಾಗತಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸುಕುಮಾರ್‌-ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲು ಅರ್ಜುನ್‌ ಅವರಿಗೆ ಕೇರಳದಲ್ಲಿಯೂ ಹಲವು ಅಭಿಮಾನಿಗಳಿದ್ದು, ಅಲ್ಲಿಯೂ ಉತ್ತಮ ಗಳಿಕೆ ಕಾಣುತ್ತಿದೆ. ಈ ಮಧ್ಯೆ ಕೊಚ್ಚಿಯ ಥಿಯೇಟರ್‌ ಚಿತ್ರದ ಆರಂಭದಲ್ಲಿ ಮೊದಲಾರ್ಧ ಬದಲು ದ್ವಿತೀಯಾರ್ಧ ಪ್ರದರ್ಶಿಸಿ ಯಡವಟ್ಟು ಮಾಡಿ ನಗೆ ಪಾಟೀಲಿಗಿಡಾಗಿದೆ.

ಕೊಚ್ಚಿಯ ಸ್ಕ್ವರ್‌ ಮಾಲ್‌ನ ಸಿನಿಪೊಲಿಸ್‌ನ ಥಿಯೇಟರ್‌ನಲ್ಲಿ ಶುಕ್ರವಾರ (ಡಿ. 6) ಈ ಯಡವಟ್ಟು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಶೇಷ ಎಂದರೆ ವೀಕ್ಷಕರಿಗೆ ಈ ಯಡವಟ್ಟು ಇಂಟರ್‌ವೆಲ್‌ ತನಕ ಗಮನಕ್ಕೇ ಬಂದಿರಲಿಲ್ಲ. ಇತ್ತೀಚಿನ ಚಿತ್ರಗಳಲ್ಲಿ ಹೊಸ ಹೊಸ ಪ್ರಯೋಗ ನಡೆಯುತ್ತಿರುವುದರಿಂದ ಇದು ಕೂಡ ಅಂತಹದ್ದೇ ಶೈಲಿ ಎಂದುಕೊಂಡು ಹಲವರು ಸುಮ್ಮನಾಗಿದ್ದರಂತೆ.

ಶುಕ್ರವಾರ ಸಂಜೆ 6:30ರ ಶೋ ವೇಳೆ ಈ ಘಟನೆ ನಡೆದಿದೆ. ಇಂಟರ್‌ವೆಲ್‌ ವೇಳೆಗೆ ಚಿತ್ರದ ಕೊನೆ ಭಾಗದಲ್ಲಿ ಪ್ರದರ್ಶಿಸುವ ಎಂಡ್‌ ಕ್ರೆಡಿಟ್‌‌ ತೆರೆ ಮೇಲೆ ಪ್ರತ್ಯಕ್ಷವಾದಾಗಲೇ ಪ್ರೇಕ್ಷಕರಿಗೆ ನಡೆದ ಯಡವಟ್ಟು ಮನದಟ್ಟಾಗಿದ್ದು ಎಂದು ಮೂಲಗಳು ತಿಳಿಸಿವೆ. ಆಗಲೇ 3 ಗಂಟೆ 20 ನಿಮಿಷಗಳ ಚಿತ್ರದ ಮೊದಲಾರ್ಧದ ಬದಲು ದ್ವಿತೀಯಾರ್ಧವನ್ನು ತೋರಿಸಲಾಗಿದೆ ಎಂಬ ವಿಚಾರ ಬೆಳಕಿಗೆ ಬಂತು. ವರದಿಗಳ ಪ್ರಕಾರ ಕೆಲವು ಪ್ರೇಕ್ಷಕರು ಮರುಪಾವತಿಗೆ ಒತ್ತಾಯಿಸಿದರೆ, ಇತರರು ಚಿತ್ರದ ಮೊದಲಾರ್ಧವನ್ನು ಪ್ರದರ್ಶಿಸಲು ಪಟ್ಟು ಹಿಡಿದರು.

ಒತ್ತಡಕ್ಕೆ ಮಣಿದ ಸಿನಿಪೊಲಿಸ್ ಆಡಳಿತ ಮಂಡಳಿಯು ರಾತ್ರಿ 9 ಗಂಟೆಗೆ ಚಿತ್ರದ ಮೊದಲಾರ್ಧವನ್ನು 10 ಪ್ರೇಕ್ಷಕರಿಗಾಗಿ ಪ್ರದರ್ಶಿಸಿತು ಎಂದು ವರದಿಯಾಗಿದೆ. ಉಳಿದ ಪ್ರೇಕ್ಷಕರಿಗೆ ಮರುಪಾವತಿ ಮಾಡುವ ಭರವಸೆ ನೀಡಿದೆ.

ಯಡವಟ್ಟು ಗಮನಕ್ಕೇ ಬರಲಿಲ್ಲ

ಈ ಬಗ್ಗೆ ಪ್ರೇಕ್ಷಕರು ಪ್ರತಿಕ್ರಿಯಿಸಿ, ನಡೆದ ಯಡವಟ್ಟು ಗಮನಕ್ಕೆ ಬರಲಿಲ್ಲ ಎಂದು ತಿಳಿಸಿದ್ದಾರೆ. ಸಿನಿಮಾ ಪ್ರಸ್ತುತ ಪಡಿಸುವ ಕ್ರಮದಲ್ಲಿಇತ್ತೀಚೆಗೆ ಸಾಕಷ್ಟು ಬದಲಾವಣೆಯಾಗಿದೆ. ಹೊಸ ಹೊಸ ಪ್ರಯೋಗದೊಂದಿಗೆ ಚಿತ್ರ ತೆರೆ ಕಾಣುತ್ತಿವೆ. ಹಿಂದೆ ನಡೆದ ಘಟನೆಯನ್ನು ಮೊದಲಿಗೆ ತಂದು ಅದರ ಹಿನ್ನೆಲೆಯನ್ನು ಬಳಿಕ ಪ್ರದರ್ಶಿಸುವ ಮಾದರಿಯ (Non-linear films) ಚಿತ್ರಗಳು ಇತ್ತೀಚೆಗೆ ಸಾಕಷ್ಟು ಸದ್ದು ಮಾಡುತ್ತಿವೆ. ಇಂತಹ ಚಿತ್ರಗಳು ಜನಪ್ರಿಯವಾಗುತ್ತಿವೆ. ಸಾಂಪ್ರದಾಯಿಕ ಕಥೆ ಹೇಳುವ ನಿಯಮವನ್ನು ಮೀರಿ ತಯಾರಾಗುವ ಇಂತಹ ಚಿತ್ರಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿವೆ. ಇದು ಕೂಡ ಅಂತಹದ್ದೇ ಪ್ರಯೋಗಾತ್ಮಕ ಚಿತ್ರ ಎಂದುಕೊಂಡು ಸಿನಿಮಾ ವೀಕ್ಷಿಸಿದೆವು ಎಂದು ಹಲವರು ನಗುತ್ತಾ ತಿಳಿಸಿದ್ದಾರೆ.

2021ರಲ್ಲಿ ತೆರೆಕಂಡ ʼಪುಷ್ಪʼ ಸೀಕ್ವೆಲ್‌ ಆಗಿರುವ ಈ ನಚಿತ್ರದಲ್ಲಿ ಫಹದ್‌ ಫಾಸಿಲ್‌, ತಾರಕ್‌ ಪೊನ್ನಪ್ಪ, ಡಾಲಿ ಧನಂಜಯ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Pushpa 2 The Rule review: ಪುಷ್ಪಾ-2 ಹೇಗಿದೆ?, 3 ಗಂಟೆ 20 ನಿಮಿಷದ ಸಿನಿಮಾ ಬೋರ್ ಆಗುತ್ತಾ?