Friday, 27th December 2024

Asteria Aerospace: ಆಸ್ಟರಿಯಾ ಏರೋಸ್ಪೇಸ್‌ನಿಂದ ಎಟಿ- 15 VTOL ಡ್ರೋನ್‌ ಪೂರೈಕೆ; ಭಾರತೀಯ ಸೇನೆ ಕಣ್ಗಾವಲಿಗೆ ಬಲ

Asteria Aerospace

ಬೆಂಗಳೂರು: ಆಸ್ಟರಿಯಾ ಏರೋಸ್ಪೇಸ್ (Asteria Aerospace) ಎಂಬುದು ಸಂಪೂರ್ಣವಾಗಿ ಎಲ್ಲವನ್ನೂ ದೇಶೀಯವಾಗಿ ಸಿದ್ಧಪಡಿಸಿ, ಉತ್ಪಾದನೆ ಮಾಡುತ್ತಿರುವ ಡ್ರೋನ್ ತಂತ್ರಜ್ಞಾನ ಕಂಪನಿಯಾಗಿದ್ದು, ಈ ಕಂಪನಿಯು ಇದೀಗ ಪ್ರಮುಖ ಘೋಷಣೆಯೊಂದನ್ನು ಮಾಡಿದೆ. ಅದರ ಪ್ರಕಾರ, ಕಂಪನಿಯು ತನ್ನ ಎಟಿ- 15 (AT-15) ವರ್ಟಿಕಲ್ ಟೇಕ್‌ಆಫ್ ಅಂಡ್ ಲ್ಯಾಂಡಿಂಗ್ (VTOL) ಡ್ರೋನ್‌ಗಳ ಅತಿದೊಡ್ಡ ಒಪ್ಪಂದವನ್ನು ಭಾರತೀಯ ಸೇನೆಗೆ ಯಶಸ್ವಿಯಾಗಿ ತಲುಪಿಸಿರುವುದಾಗಿ ತಿಳಿಸಿದೆ. ಈ ಮಹತ್ವದ ಮೈಲುಗಲ್ಲು “ಆತ್ಮನಿರ್ಭರ್ ಭಾರತ್‌” ಎಂಬ ಸಂಕಲ್ಪಕ್ಕೆ ಪೂರಕವಾದ ಮತ್ತು ರಕ್ಷಣಾ ಹಾಗೂ ತಾಯ್ನಾಡಿನ ಭದ್ರತಾ ಸಂಸ್ಥೆಗಳ ಕಠಿಣವಾದ ಅವಶ್ಯಕತೆಗಳೊಂದಿಗೆ ತಂತ್ರಜ್ಞಾನದಲ್ಲಿ ಅತ್ಯಾಧುನಿಕವಾದದ್ದನ್ನು ಪೂರೈಸುವ ಆಸ್ಟರಿಯಾದ ಬದ್ಧತೆಯನ್ನು ಒತ್ತಿಹೇಳುತ್ತದೆ.

ಈ ಕುರಿತು ಆಸ್ಟರಿಯಾ ಏರೋಸ್ಪೇಸ್‌ನ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ನೀಲ್ ಮೆಹ್ತಾ ಮಾತನಾಡಿ, ʼಭಾರತೀಯ ರಕ್ಷಣಾ ಸಚಿವಾಲಯಕ್ಕೆ ಆಸ್ಟರಿಯಾದಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಎಟಿ- 15 ಕಣ್ಗಾವಲು ಡ್ರೋನ್‌ಗಳ ಈ ವಿತರಣೆಯು ನಮ್ಮ ರಕ್ಷಣಾ ಪಡೆಗಳ ಬದಲಾವಣೆ ಕಾಣುತ್ತಿರುವ ಅಗತ್ಯಗಳನ್ನು ಪೂರೈಸುವುದಕ್ಕೆ ನಮ್ಮ ಬಲವಾದ ಬೆಂಬಲವನ್ನು ಪ್ರದರ್ಶಿಸುತ್ತದೆʼ ಎಂದು ತಿಳಿಸಿದ್ದಾರೆ. ಈ ‘ಮ್ಯಾನ್ ಪೋರ್ಟಬಲ್ʼ ಡ್ರೋನ್‌ಗಳು ಹೆಚ್ಚಿನ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಅಂದರೆ, ಎತ್ತರದ ಪ್ರದೇಶಗಳಲ್ಲಿ ಅತ್ಯುತ್ತಮ ಫ್ಲೈಟ್ ಹಾರಾಟ ಕಾರ್ಯಕ್ಷಮತೆ, ಇಂಟಿಗ್ರೇಟೆಡ್ ಹೈ-ರೆಸಲ್ಯೂಷನ್ ಹಗಲು ಮತ್ತು ರಾತ್ರಿ ಕ್ಯಾಮೆರಾಗಳು, ನಿಖರ ಶಸ್ತ್ರಾಸ್ತ್ರ ಗುರಿಗೆ ಬೆಂಬಲ ನೀಡುವಂಥದ್ದಾಗಿದೆ. ಭಾರತೀಯ ಸೇನೆಯ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸ ನಮಗಿದೆʼ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ | Expressway: ಬೆಂಗಳೂರಿನ ಬನಶಂಕರಿಯಿಂದ ನೈಸ್‌ ರಸ್ತೆಗೆ 10 ಕಿಮೀ ಎಕ್ಸ್‌ಪ್ರೆಸ್‌ವೇ

ವಿಶಿಷ್ಟವಾಗಿ ಸಂಯೋಜನೆಗೊಂಡ ರೆಕ್ಕೆ ವಿನ್ಯಾಸದೊಂದಿಗೆ ಆಸ್ಟರಿಯಾದ ಎಟಿ-15 ಡ್ರೋನ್ ಫ್ಲೈಟ್ ಕಾರ್ಯಕ್ಷಮತೆಗೆ ಅತ್ಯುತ್ತಮ ಗುಣಮಟ್ಟದ ಏರೋಡೈನಮಿಕ್ಸ್ ಒದಗಿಸುತ್ತದೆ ಮತ್ತು ಸಮುದ್ರ ಮಟ್ಟಕ್ಕಿಂತ 6000 ಮೀಟರ್ ಎತ್ತರದ ತನಕ ಕಾರ್ಯ ನಿರ್ವಹಿಸುವುದಕ್ಕೆ ಅತಿ ಹೆಚ್ಚಿನ ಗಾಳಿಗೆ ಪ್ರತಿರೋಧವನ್ನು ಒಡ್ಡಲು ಸಾಧ್ಯವಿದೆ. ಇದರ ಲಂಬವಾದ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯವು ಸೀಮಿತವಾದ ಪ್ರವೇಶ ಹಾಗೂ ನಿರ್ಗಮನ ಪ್ರದೇಶದಿಂದಲೂ ವಾಪಸ್ ಪಡೆದುಕೊಳ್ಳಲು ಸಹಾಯ ಮಾಡುತ್ತದೆ.

ಎಟಿ-15 120 ನಿಮಿಷಗಳವರೆಗೆ ಹಾರಾಟದ ಸಮಯವನ್ನು ಹೊಂದಿದೆ ಮತ್ತು 20 ಕಿಮೀ ದೃಷ್ಟಿ ರೇಖೆಯ ವ್ಯಾಪ್ತಿಯನ್ನು ಹೊಂದಿದೆ. ಇದು ದೀರ್ಘಾವಧಿಯ ಕಣ್ಗಾವಲು ಹಾಗೂ ಮಿಲಿಟರಿ ಕಾರ್ಯಾಚರಣೆಗಳನ್ನು ವಿಶಾಲ ವ್ಯಾಪ್ತಿಯ ಪ್ರದೇಶಗಳಲ್ಲಿ ಖಾತ್ರಿಪಡಿಸುತ್ತದೆ. ಡ್ರೋನ್‌ನಲ್ಲಿ ಹೆಚ್ಚಿನ ಜೂಮ್ ಸಾಮರ್ಥ್ಯದೊಂದಿಗೆ ಸಂಯೋಜಿತ ಇಒ-ಐಆರ್ (EO-IR) ಪೇಲೋಡ್ ಇದ್ದು, ಹಗಲು ಮತ್ತು ರಾತ್ರಿಯಲ್ಲಿ ಹೆಚ್ಚಿನ ಸ್ಟ್ಯಾಂಡ್‌ಆಫ್ ದೂರದಿಂದ ನಿರ್ಣಾಯಕ ವೈಮಾನಿಕ ಗುಪ್ತಚರ ಸಂಗ್ರಹವನ್ನು ಸಕ್ರಿಯಗೊಳಿಸುತ್ತದೆ. ಇಷ್ಟೇ ಅಲ್ಲದೆ, ಡ್ರೋನ್ ಅನ್ನು ಸಂಪೂರ್ಣವಾಗಿ ಕಾಂಪೋಸಿಟ್ ವಸ್ತುಗಳಿಂದ ನಿರ್ಮಿಸಲಾಗಿದೆ, ಇದು ಡ್ರೋನ್ ಅನ್ನು ದೃಢ, ಹಗುರ ಮತ್ತು ವ್ಯಕ್ತಿ ಪೋರ್ಟಬಲ್ ಮಾಡುತ್ತದೆ.

ಆಸ್ಟರಿಯಾ ಏರೋಸ್ಪೇಸ್ 28,000 ಚದರ ಅಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಜ್ಜಾಗಿರುವ ವಿನ್ಯಾಸ ಮತ್ತು ಉತ್ಪಾದನಾ ಕೇಂದ್ರವನ್ನು ಬೆಂಗಳೂರಿನಲ್ಲಿ ಹೊಂದಿದೆ. ಇದು ಡಿಎಸ್ಐಆರ್‌ನಿಂದ ಮಾನ್ಯತೆ ಪಡೆದ ಸಂಶೋಧನೆ ಹಾಗೂ ಅಭಿವೃದ್ಧಿ ಪ್ರಯೋಗಾಲಯದೊಂದಿಗೆ ಭವಿಷ್ಯಕ್ಕೆ ಉಪಯುಕ್ತವಾಗುವಂಥ ಉತ್ಪನ್ನಗಳನ್ನು ಅತ್ಯುತ್ಕೃಷ್ಟ ಗುಣಮಟ್ಟದ ಪ್ರಮಾಣದೊಂದಿಗೆ ಹಾಗೂ ನಿಯಮಾವಳಿ ಅನುಸಾರ ನಿರ್ಮಾಣ ಮಾಡುವ ವ್ಯವಸ್ಥೆಯನ್ನು ಹೊಂದಿದೆ. ಇದರ ಜತೆಗೆ ಕಂಪನಿಯು ಗುರುಗ್ರಾಮ್‌ನಲ್ಲಿ ಕಾರ್ಯತಂತ್ರ ಉಪಸ್ಥಿತಿಯನ್ನು ನಿರ್ವಹಿಸುತ್ತಿದ್ದು, ಸರ್ಕಾರ ಹಾಗೂ ರಕ್ಷಣಾ ಸಂಸ್ಥೆಗಳಂಥ ವೈವಿಧ್ಯ ಗ್ರಾಹಕರಿಗೆ ಅಗತ್ಯವಾದದ್ದನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ.

ಈ ಸುದ್ದಿಯನ್ನೂ ಓದಿ | School Holidays: 2025ನೇ ಸಾಲಿನ ಶಾಲಾ ರಜಾ ದಿನಗಳ ಪಟ್ಟಿ ಇಲ್ಲಿದೆ ನೋಡಿ

ಆಸ್ಟರಿಯಾ ಏರೋಸ್ಪೇಸ್ ಮತ್ತು ಅದ ಉತ್ಪನ್ನಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, https://asteria.co.in/ ಗೆ ಭೇಟಿ ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.