Saturday, 28th December 2024

Deadly Accident: ಅಬ್ಬಾ…ಎದೆ ಝಲ್ಲೆನಿಸುತ್ತೆ ಈ ವಿಡಿಯೊ! ಓವರ್‌ ಸ್ಪೀಡ್‌ಗೆ ಐವರು ವಿದ್ಯಾರ್ಥಿಗಳೂ ಸೇರಿ ಏಳು ಮಂದಿ ದುರ್ಮರಣ

ಅಹ್ಮದಾಬಾದ್‌:‌ ಕಾರೊಂದು ಡಿವೈಡರ್(Divider)​ ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ವಿದ್ಯಾರ್ಥಿಗಳು ಸೇರಿ ಏಳು ಮಂದಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಇಂದು(ಡಿ.9) ಗುಜರಾತ್‌ನ (Gujarat) ಜುನಾಗಢದಲ್ಲಿ(Junagadh) ನಡೆದಿದೆ(Deadly Accident). ಓವರ್‌ ಸ್ಪೀಡ್‌ನಲ್ಲಿ ಬಂದ ವಿದ್ಯಾರ್ಥಿಗಳ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ಪಲ್ಟಿಯಾಗಿದ್ದು, ಎದುರಿಗೆ ವೇಗವಾಗಿ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ ಪರಿಣಾಮವಾಗಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ(Car Collide).

ಐವರು ವಿದ್ಯಾರ್ಥಿಗಳು ಒಂದು ಕಾರಿನಲ್ಲಿ ಪರೀಕ್ಷೆಗಾಗಿ ಕಾಲೇಜಿಗೆ ತೆರಳುತ್ತಿದ್ದರೆ, ಇನ್ನಿಬ್ಬರು ಮತ್ತೊಂದು ಕಾರಿನಲ್ಲಿದ್ದರು. ಡೆಡ್ಲಿ ಆಕ್ಸಿಡೆಂಟ್‌ ಪರಿಣಾಮ ಎರಡೂ ಕಾರಿನಲ್ಲಿದ್ದ ಒಂಬತ್ತು ಮಂದಿ ಪೈಕಿ ಏಳು ಜನ ದುರ್ಮರಣ ಹೊಂದಿದ್ದಾರೆ ಎಂಬ ಮಾಹಿತಿಯಿದೆ. ಭೀಕರ ಅಪಘಾತದ ರಭಸಕ್ಕೆ ಕಾರುಗಳು ಗುರುತು ಹಿಡಿಯಲಾಗದಷ್ಟು ಜಖಂಗೊಂಡಿವೆ ಎಂದು ತಿಳಿದು ಬಂದಿದೆ.

ರಸ್ತೆ ಬದಿಯಲ್ಲಿದ್ದ ಅಂಗಡಿಗಳಿಗೂ ಬೆಂಕಿ

ಇನ್ನು ಎರಡು ಕಾರುಗಳ ನಡುವಿನ ಭಾರೀ ಡಿಕ್ಕಿಯಿಂದಾಗಿ ವಾಹನದ ಸಿಎನ್‌ಜಿ ಸಿಲಿಂಡರ್‌(CNG Cylinder) ಒಂದೊಂದಾಗಿ ಸ್ಫೋಟಗೊಂಡು ಕಾರಿಗೆ ಬೆಂಕಿ ಹೊತ್ತಿಕೊಂಡು ರಸ್ತೆಯ ಸಮೀಪವಿದ್ದ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದ ಪರಿಣಾಮ ದೊಡ್ಡ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಬೆಂಗಾವಲು ಪಡೆ, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು ಆಂಬ್ಯುಲೆನ್ಸ್‌ಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

ಘಟನೆಯನ್ನು ನೇರವಾಗಿ ಕಂಡ ಸ್ಥಳೀಯರ ಮಾಹಿತಿ ಪ್ರಕಾರ ಅಪಘಾತವು ಬೆಳಗ್ಗೆ 8 ಗಂಟೆ ಸುಮಾರಿಗೆ ನಡೆದಿದೆ. “ಭೀಕರವಾದ ಶಬ್ದ ಕೇಳಿದ ತಕ್ಷಣ ನಾನು ಘಟನಾ ಸ್ಥಳಕ್ಕೆ ಓಡಿ ಬಂದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸ್ಫೋಟದ ಸದ್ದು ಕೇಳಿದಾಗ ನಾನು ಹತ್ತಿರದ ಹೋಟೆಲ್‌ನಲ್ಲಿದ್ದೆ” ಎಂದು ದಿಲೀಪ್ ಸಿಂಗ್ ಸಿಸೋಡಿಯಾ ಎಂಬಾತ ಪೊಲೀಸರಿಗೆ ತಿಳಿಸಿದ್ದಾರೆ.

ಒಂದು ಕಾರಿನಲ್ಲಿ ನಾಲ್ವರು ಹಾಗೂ ಇನ್ನೊಂದು ವಾಹನದಲ್ಲಿ ಐವರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರು ಧಗಧಗನೆ ಹೊತ್ತಿ ಉರಿಯುತ್ತಿದ್ದ ಪರಿಣಾಮ ಕಾರಿನೊಳಗಿದ್ದವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಮೃತರನ್ನು ವೀಣು ದೇವಶಿ ವಾಲಾ, ನಿಕುಲ್ ವಿಕ್ರಮ್ ಕುವಾಡಿಯಾ, ಓಂ ರಜನಿಕಾಂತ್ ಮುಗ್ರಾ, ರಾಜು ಕಾಂಜಿ ಗೋನೆ, ಧರಮ್ ವಿಜಯ್ ಗೋರ್, ಅಕ್ಸರ್ ದವೆ ಮತ್ತು ರಾಜು ಕಾಂಜಿ ಭೂತಾನ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೀಕರ ರಸ್ತೆ ಅಪಘಾತ; ಟ್ರೈನಿ ಪೈಲಟ್‌ಗಳಿಬ್ಬರು ಸಾವು

ಮಹಾರಾಷ್ಟ್ರದ ಬಾರಾಮತಿಯ ಭಿಗ್ವಾನ್ ರಸ್ತೆಯಲ್ಲಿ ಇಂದು (ಡಿ.9) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಟ್ರೈನಿ ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಕಲೆ ಹಾಕಿದ್ದಾರೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಕಾರು ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಅಪಘಾತದಲ್ಲಿ ಇಬ್ಬರು ಟ್ರೈನಿ ಪೈಲಟ್‌ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಕಿಡಿಗೇಡಿ; ಡೆಡ್ಲಿ ಆಕ್ಸಿಡೆಂಟ್‌ ನಂತ್ರ ಸ್ಟೈಲ್‌ ಆಗಿ ಸಿಗರೇಟ್‌ ಸೇದುತ್ತಾ ನಿಂತ ಭೂಪ!