Friday, 27th December 2024

Rashmika Mandanna: ಬಹಿರಂಗವಾಗಿಯೇ ‘ಗರ್ಲ್‌ಫ್ರೆಂಡ್‌’ ರಶ್ಮಿಕಾ ಮಂದಣ್ಣ ಪರಿಚಯಿಸಿದ ವಿಜಯ್‌ ದೇವರಕೊಂಡ

Rashmika Mandanna

ಹೈದದಾಬಾದ್‌: ‘ಕಿರಿಕ್‌ ಪಾರ್ಟಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ರಶ್ಮಿಕಾ ಮಂದಣ್ಣ(Rashmika Mandanna) ಸದ್ಯ ನ್ಯಾಷನ್‌ ಕ್ರಷ್‌ ಆಗಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಮಲಯಾಳಂ ಹೊರತುಪಡಿಸಿ ದಕ್ಷಿಣ ಭಾರತದ ಎಲ್ಲ ಚಿತ್ರರಂಗದಲ್ಲಿ ಕಾಣಿಸಿಕೊಂಡ ಅವರು ಹಿಂದಿಯಲ್ಲೂ ಮೋಡಿ ಮಾಡುತ್ತಿದ್ದಾರೆ. ಎಲ್ಲ ಚಿತ್ರರಂಗದ ಟಾಪ್‌ ಹೀರೊಗಳ ಜತೆಗೆ ತೆರೆ ಹಂಚಿಕೊಳ್ಳುತ್ತಿರುವ ಅವರು ಸದ್ಯ ಟಾಲಿವುಡ್‌ನ ಪ್ಯಾನ್‌ ಇಂಡಿಯಾ ಚಿತ್ರ ʼಪುಷ್ಪ 2ʼ (Pushpa 2) ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಡಿ. 5ರಂದು ತೆರೆಕಂಡಿರುವ ಈ ಚಿತ್ರ ಈಗಾಗಲೇ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ. ಈ ಮಧ್ಯೆ ರಶ್ಮಿಕಾ ಅಭಿನಯದ ಹೊಸ ತೆಲುಗು ಚಿತ್ರ ‘ದಿ ಗರ್ಲ್​ಫ್ರೆಂಡ್​’ (The Girlfriend)ನ ಟೀಸರ್‌ ರಿಲೀಸ್‌ ಆಗಿದೆ. ಈ ಚಿತ್ರದಲ್ಲಿ ಅವರಿಗೆ ಕನ್ನಡ ನಟ, ‘ದಿಯಾ’ ಖ್ಯಾತಿಯ ದೀಕ್ಷಿತ್‌ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಟೀಸರ್‌ ರಿಲೀಸ್‌ ಮಾಡಿದ ವಿಜಯ್‌ ದೇವರಕೊಂಡ

ರಾಹುಲ್ ರವೀಂದ್ರನ್ ನಿರ್ದೇಶನದ ಈ ‘ದಿ ಗರ್ಲ್​ಫ್ರೆಂಡ್​’ ಚಿತ್ರದ ಟೀಸರ್‌ ಅನ್ನು ಟಾಲಿವುಡ್‌ನ ಸೂಪರ್‌ ಸ್ಟಾರ್‌ ವಿಜಯ್‌ ದೇವರಕೊಂಡ ರಿಲೀಸ್‌ ಮಾಡಿದ್ದಾರೆ. ನಿಜ ಜೀವನದಲ್ಲಿ ರಶ್ಮಿಕಾ ಮಂದಣ್ಣ ಅವರು ವಿಜಯ್‌ ದೇವರಕೊಂಡ ಅವರ ಗರ್ಲ್‌ಫ್ರೆಂಡ್‌ ಎನ್ನುವ ಸುದ್ದಿ ಹಬ್ಬಿದ್ದು, ಇದೀಗ ಅವರೇ ಟೀಸರ್‌ ರಿಲೀಸ್‌ ಮಾಡಿ ಗಮನ ಸೆಳೆದಿದ್ದಾರೆ.

2018ರಲ್ಲಿ ತೆರೆಕಂಡ ʼಗೀತಾ ಗೋವಿಂದಂʼ ಸಿನಿಮಾದಲ್ಲಿ ವಿಜಯ್‌ ಮತ್ತು ರಶ್ಮಿಕಾ ಮೊದಲ ಬಾರಿ ಜತೆಯಾಗಿ ನಟಿಸಿದ್ದರು. ಅಂದಿನಿಂದ ಇವರಿಬ್ಬರು ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇಬ್ಬರೂ ಬಾಯಿ ಬಿಟ್ಟಿಲ್ಲ. ಅದಾಗ್ಯೂ ಇವರಿಬ್ಬರು ಶೀಘ್ರದಲ್ಲೇ ಹಸೆಮಣೇರುತ್ತಾರೆ ಎನ್ನುವ ಸುದ್ದಿ ದಟ್ಟವಾಗಿ ಹಬ್ಬಿದೆ. ಈ ಮಧ್ಯೆ ವಿಜಯ್‌ ʼದಿ ಗರ್ಲ್‌ಫ್ರೆಂಡ್‌ʼ ಟೀಸರ್‌ ಬಿಡುಗಡೆ ಮಾಡಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಶೀಘ್ರದಲ್ಲೇ ಇವರಿಬ್ಬರು ಡೇಟಿಂಗ್‌ ವಿಚಾರ ಬಹಿರಂಗಪಡಿಸಲಿದ್ದಾರೆ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ.

ಟೀಸರ್‌ನಲ್ಲಿ ಏನಿದೆ?

ಸದ್ಯ ಹೊರಬಿದ್ದಿರುವ ಟೀಸರ್‌ ಮೂಲಕ ರಶ್ಮಿಕಾ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಅವರ ಪಾಲಿಗೆ ಇದು ಮತ್ತೊಂದು ಹಿಟ್‌ ಚಿತ್ರವಾಗಲಿದೆ ಎನ್ನುವ ಲೆಕ್ಕಾಚಾರ ಈಗಾಗಲೇ ಆರಂಭವಾಗಲಿದೆ. ʼʼಜಗತ್ತಿಗೆ ʼದಿ ಗರ್ಲ್​ಫ್ರೆಂಡ್ʼ ಪರಿಚಯಿಸುತ್ತಿದ್ದೇನೆ. ಈ ಟೀಸರ್​ನ ಪ್ರತಿ ದೃಶ್ಯವೂ ನನಗೆ ಇಷ್ಟವಾಯ್ತು. ನಮ್ಮಂಥ ಹಲವು ನಟರಿಗೆ ರಶ್ಮಿಕಾ ಅದೃಷ್ಟದ ನಟಿ. ಅವರು ದೊಡ್ಡ ಸ್ಟಾರ್​ ನಟಿಯಾಗಿ ಬೆಳೆದಿದ್ದರೂ ನಾನು 8 ವರ್ಷಗಳ ಹಿಂದೆ ಭೇಟಿಯಾದ ಹುಡುಗಿಯ ರೀತಿಯೇ ಇದ್ದಾರೆ. ಅವರಿಗೆ ಇನ್ನಷ್ಟು ಯಶಸ್ಸು ಸಿಗಲೆಂದು ಹಾರೈಸುತ್ತೇನೆʼʼ ಎಂದು ವಿಜಯ್ ದೇವರಕೊಂಡ ಟೀಸರ್‌ ರಿಲೀಸ್‌ ಮಾಡಿ ಶುಭ ಹಾರೈಸಿದ್ದಾರೆ.

ಟೀಸರ್‌ನಲ್ಲಿ ರಶ್ಮಿಕಾ ಸರಳವಾಗಿ ಕಾಣಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದು ಮಹಿಳಾ ಪ್ರಧಾನ ಚಿತ್ರದಂತೆ ಕಾಣಿಸುತ್ತಿದ್ದು, ಅವರು ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸುತ್ತಿದ್ದಾರೆ. ಪ್ರೇಮಕಥೆಯ ಈ ಸಿನಿಮಾದ ಟೀಸರ್‌ನಲ್ಲಿ ದೀಕ್ಷಿತ್‌ ಶೆಟ್ಟಿ ಕೂಡ ಮಿಂಚಿದ್ದಾರೆ. ಚಿತ್ರ ಯಾವಾಗ ತೆರೆ ಕಾಣಲಿದೆ ಎನ್ನುವುದನ್ನು ಸಿನಿಮಾ ತಂಡ ಇನ್ನೂ‍ ಘೋಷಿಸಿಲ್ಲ.

ಈ ಸುದ್ದಿಯನ್ನೂ ಓದಿ: Pushpa 2 Collection: ‘ಪುಷ್ಪ 2’ ಅಬ್ಬರಕ್ಕೆ ಬಾಕ್ಸ್‌ ಆಫೀಸ್‌ ಶೇಕ್‌; 2 ದಿನಗಳಲ್ಲಿ ಬರೋಬ್ಬರಿ 417 ಕೋಟಿ ರೂ. ಬಾಚಿಕೊಂಡ ಅಲ್ಲು ಅರ್ಜುನ್‌ ಚಿತ್ರ