Monday, 23rd December 2024

Delhi Poster War: ದಿಲ್ಲಿಯಲ್ಲಿ ಶುರುವಾಯ್ತು ಪೋಸ್ಟರ್‌ ವಾರ್‌! ʻಪುಷ್ಪʼ ಸ್ಟೈಲ್‌ನಲ್ಲಿ ಆಪ್‌-ಬಿಜೆಪಿ ನಾಯಕರು ಪೋಸ್‌!

Delhi assembly

ನವದೆಹಲಿ: ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆಗೆ ಎದುರು ನೋಡುತ್ತಿರುವ ದೆಹಲಿಯಲ್ಲಿ ಎಲೆಕ್ಷನ್‌(Delhi Assembly Election 2025) ಬಿಸಿ ಜೋರಾಗಿದೆ. ಬಿಜೆಪಿ ಮತ್ತು ಆಡಳಿತರೂಢ ಆಪ್‌ ನಡುವೆ ಈಗಾಗಲೇ ಪೈಪೋಟಿ ಶುರುವಾಗಿದೆ. ಇದಕ್ಕೆ ಪೂರಕ ಎಂಬಂತೆ ಇದೀಗ ಎರಡೂ ಪಕ್ಷಗಳ ನಡುವೆ ಪೋಸ್ಟರ್‌ ವಾರ್‌ ಜೋರಾಗಿದೆ(Delhi Poster War). ಪುಷ್ಪ 2 ಚಿತ್ರದ ಪೋಸ್ಟರ್‌ಗಳನ್ನು ಬಳಸಿಕೊಂಡು ಎರಡೂ ಪಕ್ಷಗಳೂ ತಮ್ಮ ತಮ್ಮ ನಾಯಕರ ಫೋಟೊವನ್ನು ಅದಕ್ಕೆ ಹಾಕಿ ಜನರನ್ನು ಸೆಳೆಯುವ ಪ್ರಯತ್ನದ ಜತೆಗೆ ಪರಸ್ಪರ ಟಾಂಗ್‌ ಕೊಡಲು ಮುಂದಾಗಿವೆ.

ಸಾಮಾಜಿಕ ಜಾಲತಾಣದಲ್ಲಿ ಎರಡೂ ಪಕ್ಷಗಳ ಪೋಸ್ಟರ್‌ ಭಾರೀ ಸದ್ದು ಮಾಡುತ್ತಿದ್ದು, ತಮ್ಮ ತಮ್ಮ ನಾಯಕರ ಫೋಟೊಗಳ ಜತೆಗೆ ಸಿನಿಮಾದ ಫೇಮಸ್‌ ಡೈಲಾಗ್‌ಗಳನ್ನೂ ಪ್ರಿಂಟ್‌ ಮಾಡಲಾಗಿದೆ. ಚಿತ್ರದ ಫೇಮಸ್‌ ಡೈಲಾಗ್‌ ಆಗಿರುವ “ಕೇಜ್ರಿವಾಲ್ ಜುಕೇಗಾ ನಹಿ” ಎಂಬ ಸಾಲುಗಳೊಂದಿಗೆ ಆಪ್‌ ಶನಿವಾರ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಸಾಲುಗಳನ್ನು ದಪ್ಪ ಅಕ್ಷರಗಳಲ್ಲಿ ಪ್ರಿಂಟ್‌ ಮಾಡಲಾಗಿದೆ.

ಕೇಜ್ರಿವಾಲ್ ಅವರು ಪಕ್ಷದ ಚಿಹ್ನೆಯಾದ ಪೊರಕೆಯನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ಹೀರೋ ತರಹ ಪೋಸ್ ನೀಡಿದ್ದಾರೆ. 2013, 2015 ಮತ್ತು 2020ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಚುನಾವಣಾ ಯಶಸ್ಸನ್ನು ಉಲ್ಲೇಖಿಸಿ 4ನೇ ಅವಧಿ ಶೀಘ್ರದಲ್ಲೇ ಬರಲಿದೆ ಎಂಬ ಬರಹವನ್ನೂ ಪೋಸ್ಟರ್‌ನಲ್ಲಿ ಕಾಣಬಹುದಾಗಿದೆ.

ಇನ್ನು ಆಪ್‌ ಪೋಸ್ಟರ್‌ಗೆ ಬಿಜೆಪಿಯೂ ತನ್ನದೇ ಆದ ಸ್ಟೈಲ್‌ನಲ್ಲಿ ಪೋಸ್ಟರ್‌ ಬಿಡುಗಡೆ ಮಾಡಿ ಟಾಂಗ್‌ ಕೊಟ್ಟಿದೆ. ಬಿಜೆಪಿ ಪುಷ್ಪ 2 ಪ್ರೇರಿತ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಸೋಮವಾರ ತಿರುಗೇಟು ಕೊಟ್ಟಿದೆ. ದಿಲ್ಲಿಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಸಿಂಹಾಸನದ ಮೇಲೆ ಸಿನಿಮಾ ನಾಯಕ ಅಲ್ಲು ಅರ್ಜುನ್‌ ಅವರಂತೆ ಪೋಸ್ ಕೊಟ್ಟಿದ್ದು, “ಭ್ರಷ್ಟಾಚಾರಿಯೋಂ ಕೋ ಖತಮ್ ಕರೆಂಗೆ” (ಭ್ರಷ್ಟರನ್ನು ಮುಗಿಸುತ್ತೇವೆ) ಎಂದು ದಪ್ಪ ಅಕ್ಷರದಲ್ಲಿ ಬರೆಯಲಾಗಿದೆ.

ಇನ್ನು ದೆಹಲಿಯಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಆಪ್‌ ಪಕ್ಷ ಈಗಾಗಲೇ ಎರಡು ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. 70 ಸದಸ್ಯ ಬಲದ ಅಸೆಂಬ್ಲಿಯಲ್ಲಿ 62 ಸ್ಥಾನಗಳನ್ನು ಗೆಲ್ಲುವ ಮೂಲಕ 2020 ರಲ್ಲಿ ಬಿಜೆಪಿಯನ್ನು ಸೋಲಿಸಿದ ನಂತರ ಕೇಜ್ರಿವಾಲ್ ನೇತೃತ್ವದ ಆಪ್‌ ದೆಹಲಿಯಲ್ಲಿ ನಾಲ್ಕನೇ ಬಾರಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ.

ಈ ಸುದ್ದಿಯನ್ನೂ ಓದಿ: AAP Candidate List: ಆಪ್‌ ಅಭ್ಯರ್ಥಿ ಪಟ್ಟಿ ರಿಲೀಸ್‌; ಮನೀಶ್‌ ಸಿಸೋಡಿಯಾ ಕ್ಷೇತ್ರ ಬದಲಾವಣೆ