Friday, 27th December 2024

Prof Srinivas Varakhedi Column: ಮಣಿಮಂಜರಿ ವಿವಾದದ ಸುತ್ತ…

ಪ್ರತಿಸ್ಪಂದನ

ಪ್ರೊ.ಶ್ರೀನಿವಾಸ ವರಖೇಡಿ

ಮಿತ್ರರೇ, ಗಂಭೀರವಾಗಿ ಆಲೋಚಿಸಿ. ‘ಮಣಿಮಂಜರಿ’ ಕೃತಿಯ ಕುರಿತಾಗಿ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಪ್ರಕಟಗೊಂಡ ಎರಡೂ ಲೇಖನಗಳು ತಂತಮ್ಮ ಮಟ್ಟಿಗೆ ಸರಿಯೇ. ಆದರೆ ಇಂಥ ಚರ್ಚೆಗೆ ಈ ವೇದಿಕೆ ಸಲ್ಲ. ಇವತ್ತು ಜಾಗತಿಕವಾಗಿ ಹಿಂದೂ ಧರ್ಮ, ರಾಷ್ಟ್ರಮಟ್ಟದಲ್ಲಿ ಸನಾತನ ವೈದಿಕಧರ್ಮ ಸಂಕಟದಲ್ಲಿರುವಾಗ ಚರ್ಚಿಸಬೇಕಾದ ವಿಷಯಗಳು ಇವಲ್ಲ. ನಮ್ಮ ಹಿರಿಯ ಗುರುಗಳು ಶ್ರೀ ವಿಶ್ವೇಶತೀರ್ಥರು ಈ ವಿವಾದವನ್ನು ಎಂದೂ ಪತ್ರಿಕೆಯ ವೇದಿಕೆಗೆ ಒಯ್ಯಲಿಲ್ಲ, ಸಮನ್ವಯದ ಮಾತುಗಳನ್ನಾಡುತ್ತಿದ್ದರು.

ಶ್ರೀ ವಿಶ್ವಪ್ರಸನ್ನತೀರ್ಥರದೂ ಅದೇ ದಾರಿ, ಅವರಿಗೂ ಈ ಸತ್ಯಾಸತ್ಯಗಳ ಕಲ್ಪನೆ ಇತ್ತು. ಆದರೆ ಅವುಗಳ ಪ್ರಾಸಂಗಿ ಕತೆಯ ಮುಂದೆ ಇವೆಲ್ಲ ನಗಣ್ಯ. ಗುರುಗಳು ದ್ವೈತೋಪಾಸಕರು, ಮಧ್ವಪೀಠದ ಅಧಿಪತಿಗಳು. ಅವರು ಅದ್ವೈತ ಮತವನ್ನು ಪ್ರತಿನಿತ್ಯ ವಿಮರ್ಶಿಸಿದರು, ಅದ್ವೈತ ಮತಾನುಯಾಯಿಗಳನ್ನಲ್ಲ. ವಿದ್ವತ್ ಸಭೆಗಳಲ್ಲಿ ಚರ್ಚಿಸಿದರು, ಸಾರ್ವಜನಿಕ ವೇದಿಕೆಯಲ್ಲಿ ಅಲ್ಲ. ಆಚಾರ್ಯ ಮಧ್ವರೂ ತ್ರಿವಿಕ್ರಮ ಪಂಡಿತರ ಜತೆ ವಾದಿಸಿದರು, ಪಾಮರರ ಜತೆಗಲ್ಲ, ಪಾಮರರ ಎದುರೂ ಅಲ್ಲ. ಇದು ಎರಡೂ ಪಕ್ಷಗಳಿಗೆ ಸಲ್ಲುವ ಮಾತು. ‘ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮ್ ಅಪ್ರಿಯಮ್’.

ಎರಡೂ ಲೇಖನಗಳಿಗೆ ಬೇರೆ ಬೇರೆ ನೆಲೆಗಳಿವೆ. ಇತಿಹಾಸದ ಸತ್ಯ ಅಸತ್ಯಗಳ, ಪ್ರಮಾಣಗಳ ನೆಲೆ ಒಂದಾದರೆ, ಔಚಿತ್ಯದ, ಜನರ ಭಾವನೆಗಳ, ಅದರ ಸಮಕಾಲೀನ ದೃಷ್ಟಿಗಳ ನೆಲೆ ಇನ್ನೊಂದು. ಯಾವುದೂ ತಪ್ಪಲ್ಲ. ಆದರೆ, ಸರಿ ಯಾವುದು? ಇದನ್ನು ಕಾಲವೇ ನಿರ್ಧರಿಸುತ್ತದೆ. ಮಧ್ವರ ಹಾಗೂ ಶಂಕರರ ಧೋರಣೆಗಳು ಬೇರೆ ಬೇರೆ. ಸಹಜ ವಿರೋಧವನ್ನು ಸಮನ್ವಯದಿಂದ ಶಮನ ಮಾಡಲಾಗದು. ಆದರೆ ಆ ತಾತ್ವಿಕ ಭಿನ್ನತೆಯನ್ನು ತಾತ್ವಿಕ ನೆಲೆಯಲ್ಲೇ ಇಟ್ಟು, ಸನಾತನ ಧರ್ಮದ ರಕ್ಷಣೆಗಾಗಿ ನಾವೆಲ್ಲ ಒಂದಾಗುವ ನಿಟ್ಟಿನಲ್ಲಿ ನಡೆಯಬೇಕು. ವಿಧರ್ಮೀಯರ ಕಠೋರ ಕಟು ಕುಸತ್ಯಗಳ ಕುರಿತಾಗಿ ಅಧ್ಯಯನ ನಡೆಸಬೇಕು. ಅದರ ಕುರಿತಾಗಿ ಚರ್ಚೆ ನಡೆಯಬೇಕು.

ಈ ಮಾತುಗಳನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಇದರ ಕುರಿತಾಗಿ ಮತ್ತೆ ನಡೆಯುವ ಚರ್ಚೆಯಿಂದ ಇದು ಬಗೆಹರಿಯದ ಮಾತು. ಇದು ನಮ್ಮ ಗುರುಗಳಿಗೆ ಸಮ್ಮತವಾದ ಮಾತು. ಅವರೂ ‘ಮಣಿಮಂಜರಿ’ಯನ್ನು
ಓದಿದವರು, ಪಾಠ ಮಾಡಿದವರು, ಮಾಡಿಸಿದವರು, ಪರೀಕ್ಷೆ ನಡೆಸಿದವರು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಿಸಲಿಲ್ಲ. ‘ಯದ್ಯದಾಚರತಿ ಶ್ರೇಷ್ಠಃ’. ವಿದ್ವಾಂಸರಾಗಿ ನಮ್ಮೆಲ್ಲರ ಜವಾಬ್ದಾರಿ ಸತ್ಯಕ್ಕಿಂತಲೂ ದೊಡ್ಡದು. ‘ಸತಾಂ ಹಿತಮತ್ಯಂತಮ್ ಸತ್ಯಮ್’. ಇದನ್ನು ಮಧ್ವಾನುಯಾಯಿಗಳಿಗೆ ಪ್ರತ್ಯೇಕ ಹೇಳಬೇಕೇ? ಹಾಗೆಂದು ಸತ್ಯಕ್ಕೆ ದೂರವಾದ ಸಮನ್ವಯವೂ ಸಲ್ಲ.

ಇತಿಹಾಸ ಕೇವಲ ನಮಗೆ ತಿಳಿದ ಸತ್ಯದ ಮೇಲೆ ನಿಲ್ಲುವುದಿಲ್ಲ. ಶತಾವಧಾನಿ ಗಣೇಶರು, ವಿನಾಯಕ ವೆಂ.ಭಟ್ಟರು, ಹೃಷೀಕೇಶರು ಇವರೆಲ್ಲರೂ ಸಹೃದಯಿಗಳೂ ವಿದ್ವಜ್ಜನಪ್ರಿಯರೂ ಹೌದು. ಇವರೆಲ್ಲಾ ನಾನು ಅಪಾರವಾದ ಗೌರವ, ಪ್ರೀತಿ ಇಟ್ಟಿರುವ ವ್ಯಕ್ತಿಗಳು. ಅವರ ಮಾತುಗಳನ್ನು ಅರ್ಥೈಸುವುದಕ್ಕಿಂತ ಮನವನ್ನು ಅರಿಯಬೇಕು. ಸಮಾಜಕ್ಕೆ ಈ ವಿವಾದಗಳನ್ನು ಅರಗಿಸಿಕೊಳ್ಳುವ ಶಕ್ತಿಯಿಲ್ಲ. ಯಾರದೇ ಆತ್ಮಾಭಿಮಾನಕ್ಕೆ ಪೆಟ್ಟಾದಾಗ ಪ್ರತಿಕ್ರಿಯೆಯೂ ಸಹಜ. ಆದರೆ ಅದು ಸಾರ್ವಜನಿಕ ವೇದಿಕೆಯಲ್ಲಿ ಬೇಡ. ಇದಿಷ್ಟೇ ನನ್ನ ನಿವೇದನೆ.

ಕೊನೆಯದಾಗಿ ಇನ್ನೊಂದು ಮಾತು. ಇದು ಮಾಧ್ವ ಪೀಠಾಧಿಪತಿಗಳಲ್ಲಿ ನಮ್ರ ವಿಜ್ಞಾಪನೆ. ‘ಮಣಿಮಂಜರಿ’ ಒಂದು ಕಾವ್ಯವಷ್ಟೇ. ಅದೇನೂ ಸ್ಮೃತಿಗ್ರಂಥವಲ್ಲ. ಅದರ ಪ್ರಾಮಾಣ್ಯ-ಅಪ್ರಾಮಾಣ್ಯಗಳ ಕುರಿತಾದ ಚರ್ಚೆಯು ಸಮಗ್ರ ವೈದಿಕ ಸಮಾಜದ, ಹಿಂದೂ ಧರ್ಮದ ಗೌರವಕ್ಕಿಂತಲೂ ದೊಡ್ಡದಲ್ಲ. ಕಾಲದ ಅವಶ್ಯಕತೆಯನ್ನು ಮನಗಂಡು ನಮ್ಮದೇ ಸಮಾಜದ ಬಹುದೊಡ್ಡ ಸಮುದಾಯಕ್ಕೆ ಮಾನಸಿಕ ಹಿಂಸೆಯಾಗದಂತೆ ನಡೆದುಕೊಳ್ಳುವ ದೃಷ್ಟಿಯಿಂದ ‘ಮಣಿಮಂಜರಿ’ ಕೃತಿಯ ಕೆಲ ವಿವಾದಾಸ್ಪದ ಭಾಗವನ್ನು ಅಧ್ಯಯನದಿಂದ ದೂರವಿಡುವ ನಿರ್ಣಯವನ್ನು ಕೈಗೊಳ್ಳಬೇಕು. ಇದು ಸಾರ್ವಜನಿಕವಾಗಿ ಘೋಷಿತವಾಗಬೇಕು.

ಬ್ರಾಹ್ಮಣ ಸಮಾಜದ ವೇದಿಕೆಗಳಲ್ಲಿ ಈ ನಿರ್ಣಯಕ್ಕೆ ಭವ್ಯಸ್ವಾಗತ ದೊರಕುತ್ತದೆ. ಇದರಿಂದ ಮಮಕಾರದ ಹೊರತಾಗಿ ಕಳೆದುಕೊಳ್ಳುವುದೇನೂ ಇಲ್ಲ, ಆದರೆ ಪಡೆದುಕೊಳ್ಳುವುದು ಬಹಳ. ಇದು ಪರಂಪರೆಯ ಗೌರವವನ್ನು ಹೆಚ್ಚಿಸುತ್ತದೆ. ಅಗೌರವವೇನೂ ಆಗುವುದಿಲ್ಲ. ಈ ವಿಷಯದಲ್ಲಿ ಮುಂಬರುವ ಮಾಧ್ವ ತತ್ತ್ವಜ್ಞಾನ ಸಮ್ಮೇಳನ ದಲ್ಲಿ ಪರಮಪೂಜ್ಯ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಒಂದು ಉತ್ತಮ ನಿರ್ಣಯವಾಗಲಿ. ಶಾಂಕರ-ಮಾಧ್ವ ಸಮುದಾಯ ಗಳ ಸಹಜ ಸಂಬಂಧಕ್ಕೆ ಹೊಸ ನಾಂದಿಯಾಗಲಿ. ಇದು ನನ್ನ ಮನವಿ.

(ಲೇಖಕರು ಕುಲಪತಿಗಳು, ಕೇಂದ್ರೀಯ
ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ)

ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ