ಸಂದರ್ಶನ: ರಂಜಿತ್ ಎಚ್.ಅಶ್ವತ್ಥ
ಪ್ರವಾಹದ ವೇಳೆ ನೀರಿನೊಂದಿಗೆ ಕಸವೂ ಬರುವಂತೆ ಕ್ಲಾಸ್ ಪಕ್ಷವಾಗಿದ್ದ ಬಿಜೆಪಿಯು ಮಾಸ್ ಪಾರ್ಟಿ ಯಾಗಿ ಬದಲಾಗುವ ಹೊಸ್ತಿಲಲ್ಲಿ ಕೆಲವೊಂದಷ್ಟು ಸಮಸ್ಯೆಗಳಾಗಿವೆ. ಇದನ್ನು ಸರಿಪಡಿಸಲು ಮಾಸ್ ಪಕ್ಷವಾಗಿರುವ ಬಿಜೆಪಿಗೆ ಕ್ಲಾಸ್ ನಾಯಕತ್ವದ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಪಟ್ಟರು. ಬೆಳಗಾವಿಯ ಚಳಿಗಾಲ ಅಽವೇಶನದ ಮೊದಲ ದಿನ ವಿಶ್ವವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಸ್ತುತ ಬಿಜೆಪಿ ಪರಿಸ್ಥಿತಿ, ಉಪಚುನಾವಣೆ ಸೋಲು, ಬಣ ರಾಜಕೀಯ, ನಾಯಕತ್ವ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು. ಈ ವೇಳೆ ಹಲವು ವಿಷಯಗಳ ಬಗ್ಗೆ ನೇರವಾಗಿ ಮಾತಾಡದಿದ್ದರೂ, ಸೂಚ್ಯವಾಗಿ ಪಕ್ಷದಲ್ಲಿ ಆಗಿರುವ ಸಮಸ್ಯೆಯ ಬಗ್ಗೆ ಮಾತನಾಡಿzರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಉಪಚುನಾವಣೆ ಚುನಾವಣೆ ಬಳಿಕ ಹೇಗಿದೆ ಪಕ್ಷ?
ಬಿಜೆಪಿ-ಜೆಡಿಎಸ್ ಜಂಟಿಯಾಗಿ ಉಪಚುನಾವಣೆ ಎದುರಿಸಿದ್ದರಿಂದ ಕನಿಷ್ಠ ಎರಡು ಸ್ಥಾನ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿತ್ತು. ಕೆಲವೊಮ್ಮೆ ಅತಿಯಾದ ವಿಶ್ವಾಸ ನಮಗೆ ಮಾರಕವಾಗುತ್ತದೆ. ಅತಿವಿಶ್ವಾಸದ ಕಾರಣದಿಂದ ಅಭ್ಯರ್ಥಿಯ ಆಯ್ಕೆಯಿಂದ ಆರಂಭಗೊಂಡು, ಚುನಾವಣಾ ತಂತ್ರಗಾರಿಕೆಯಲ್ಲಿ ಆಡಳಿತ ಪಕ್ಷಕ್ಕೆ ಕೌಂಟರ್ ಕೊಡುವಲ್ಲಿ ವಿ-ಲವಾಗಿರುವುದನ್ನು ಒಪ್ಪಿಕೊಳ್ಳಲೇಬೇಕು.
ಆದ್ದರಿಂದ ಎನ್ಡಿಎ ಎರಡು ಸ್ಥಾನ ಗೆಲ್ಲುವ ಅವಕಾಶ ಕಳೆದುಕೊಂಡಿದ್ದೇವೆ. ಸಾರ್ವಜನಿಕರಲ್ಲಿ ಆಡಳಿತ ಪಕ್ಷದ
ವಿರುದ್ಧ ಜನಾಕ್ರೋಶವಿತ್ತು ಎಂದು ಹೇಳುವುದಕ್ಕಿಂತ, ಸಂಶಯದ ಲಾಭ ಪಡೆಯಬಹುದಾಗಿತ್ತು. ಮುಡಾ,
ವಾಲ್ಮೀಕಿ, ವಕ್ ಸೇರಿದಂತೆ ಹಲವು ವಿಷಯದಲ್ಲಿ ಜನರಲ್ಲಿ ಸರಕಾರದ ವಿರುದ್ಧ ಭ್ರಮನಿರಸನವಾಗಿದ್ದನ್ನು
ನಾವು ಬಳಸಿಕೊಳ್ಳಬಹುದಾಗಿತ್ತು. ಈ ಅಪನಂಬಿಕೆ ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದೇನೆ. ಇದರೊಂದಿಗೆ
ಉಪಚುನಾವಣೆಯಲ್ಲಿ ನಾವು ಇನ್ನಷ್ಟು ಗಂಭೀರವಾಗಿ ಪರಿಗಣಿಸದೇ ಇರುವುದೇ ಇಂದಿನ ಫಲಿತಾಂಶಕ್ಕೆ
ಕಾರಣ ಎನ್ನಬಹುದು.
ಉಪಚುನಾವಣೆ ಸೋಲಿಗೆ ಅತಿವಿಶ್ವಾಸ ಕಾರಣವೋ? ಬಣ ಬಡಿದಾಟ ಕಾರಣವೋ?
ಉಪಚುನಾವಣೆಗಳಿಗೆ ಬಣದಿಂದ ಯಾವುದೇ ಸಮಸ್ಯೆಯಾಗಲಿಲ್ಲ. ಬಣ ಬಡಿದಾಟ ಜನಮಾನಸದಲ್ಲಿ
ಕಾಣಿಸಿಕೊಂಡಿದ್ದು ಉಪಚುನಾವಣೆಯ ಬಳಿಕ. ಮತದಾರರು ಗೊಂದಲದಲ್ಲಿ ಸಿಲುಕಿಸುವ ಅಥವಾ ಪ್ರತಿಪಕ್ಷದ ಅಭ್ಯರ್ಥಿಗೆ ಬೆಂಬಲಿಸುವ ಕೆಲಸ ಯಾರೂ ಮಾಡಲಿಲ್ಲ. ಆದರೆ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ನಾವು ಮಾಡಿದ ಎಡವಟ್ಟು. ಜೆಡಿಎಸ್ ಅಭ್ಯರ್ಥಿಯ ವಿಷಯದಲ್ಲಿ ನಮಗೆ ವಿಶ್ವಾಸ ಹೆಚ್ಚಿತ್ತು. ಹಾಗೇ ನೋಡಿದರೆ, ಲೋಕಸಭಾ ಚುನಾವಣೆಯ ಬಳಿಕ ಈ ಮೂರು ಉಪಚುನಾವಣೆಗಳು ನಿರೀಕ್ಷಿತವಾಗಿದ್ದವು. ಆದರೆ ಅಂದಿನಿಂದಲೇ ತಯಾರಿ ಆರಂಭಿಸಬೇಕಿತ್ತು. ಸರಕಾರದ ವಿರುದ್ಧವಿದ್ದ ಸಂಶಯವನ್ನು ಜನಾಕ್ರೋಶವಾಗಿ ಪರಿವರ್ತನೆ ಮಾಡಲು ನನ್ನನ್ನು ಸೇರಿದಂತೆ ಎಲ್ಲರೂ ಇನ್ನಷ್ಟು ಪ್ರಯತ್ನ ಹಾಕಬೇಕಿತ್ತು. ಆದರೆ ಆ ಕೆಲಸವನ್ನು ಮಾಡುವಲ್ಲಿ ನಾವು ಎಡವಿದ್ದೇವೆ ಎನ್ನುವುದು ಸ್ಪಷ್ಟ.
ಸರಕಾರದ ವಿರುದ್ಧ ಸಿಕ್ಕ ಅಸಗಳನ್ನು ಬಳಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಯಿತೇ?
ಹೌದು, ಈ ಅಭಿಪ್ರಾಯ ಕಾರ್ಯಕರ್ತರ ಅದಿಯಾಗಿ ಎಲ್ಲರ ಮನಸ್ಸಿನಲ್ಲಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ
ಬಂದ ಬಳಿಕ ಎದುರಾಗಿರುವ ಸಾಲು ಸಾಲು ವಿವಾದಗಳನ್ನು ಬಿಜೆಪಿ ಪಕ್ಷವಾಗಿ ಟಚ್ ಆಂಡ್ ಗೋ ಎನ್ನುವ ರೀತಿ ಮಾಡುತ್ತಿದ್ದೇವೆ.
ಯಾವುದೇ ವಿಷಯವನ್ನು ತಾರ್ತಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ ಎನ್ನುವ ಅಭಿಪ್ರಾಯವಿರುವುದು
ಸ್ಪಷ್ಟ. ಯಾವುದೇ ಒಂದು ವಿವಾದವಿದ್ದರೂ ಅದನ್ನು ಇನ್ನಷ್ಟು ಸೂಕ್ತ ರೀತಿಯಲ್ಲಿ ನಿಭಾಯಿಸಬಹುದಾಗಿತ್ತು.
ಮುಂದಿನ ದಿನಗಳಲ್ಲಿ ಈ ಬಗ್ಗೆ ಪಕ್ಷವಾಗಿ ಇನ್ನಷ್ಟು ಗಮನಹರಿಸಬೇಕಿದೆ.
ವಕ್ಫ್ ವಿಷಯದಲ್ಲಿ ರಾಜ್ಯಾಧ್ಯಕ್ಷರಿಗಿಂತ ಯತ್ನಾಳ ಮೇಲುಗೈ ಸಾಧಿಸಿದರು ಎನಿಸುವುದಿಲ್ಲವೇ?
ಎಲ್ಲರೂ ಎಲ್ಲ ಪಾತ್ರ ನಿರ್ವಹಿಸಲು ಸಾಧ್ಯವಿಲ್ಲ. ಹಿಂದೂತ್ವದ ವಿಷಯದಲ್ಲಿ ಕೆಲವರು ಮಾತ್ರ ಶಕ್ತಿ ತುಂಬಲು ಸಾಧ್ಯ. ಅದೇ ರೀತಿ ರೈತರ ವಿಷಯ ಬಂದಾಗ ಕೆಲ ನಾಯಕರು, ನಗರಾಭಿವೃದ್ಧಿ ವಿಷಯ ಬಂದಾಗ ಇನ್ನುಳಿದ ನಾಯಕರು ಆ ಹೋರಾಟ ಯಶಸ್ವಿಯಾಗಲು ಸಾಧ್ಯ. ಯಾರು ಯಾವ ಹೋರಾಟ ಮಾಡಿದರೆ ಸೂಕ್ತ ಎನಿಸುವು ದೋ ಅವರಿಗೆ ಆ ಹೋರಾಟವನ್ನು ಬಿಟ್ಟುಬಿಡಬೇಕು. ಹಿಂದುತ್ವದ ವಿಷಯದಲ್ಲಿ ಯಾರು ಸೂಕ್ತ ಎನಿಸುವರೋ ಅವರಿಗೆ ಹೋರಾಟದ ಮುಂದಾಳತ್ವ ನೀಡಬೇಕು. ಅದೇ ರೈತರ ವಿಷಯ ಬಂದಾಗ ಇನ್ನುಳಿದವರು ತೆಗೆದು ಕೊಳ್ಳಬೇಕು. ಎಲ್ಲ ಹೋರಾಟಕ್ಕೂ ಸರಿಹೊಂದುವ ನಾಯಕರು ಕೆಲವರು ಮಾತ್ರ ಸಿಗುತ್ತಾರೆ. ನಾವೇ ಎಲ್ಲ
ವನ್ನೂ ಮಾಡುತ್ತೇವೆ, ಹೋರಾಡುತ್ತೇವೆ ಎಂದರೆ ಆಗುವುದಿಲ್ಲ. ಆದ್ದರಿಂದ ಯಾರು ಯಾವುದನ್ನು ನಿಭಾಯಿಸ
ಬೇಕು ಎನ್ನುವುದನ್ನು ಪಕ್ಷದ ಆಂತರಿಕ ಸಭೆಗಳಲ್ಲಿ ನಿರ್ಧರಿಸಬೇಕು.
ಎಲ್ಲರನ್ನು ಒಟ್ಟಿಗೆ ತಗೆದುಕೊಂಡು ಹೋಗುವಲ್ಲಿ ರಾಜ್ಯಾಧ್ಯಕ್ಷರು ವಿಫಲರಾಗಿದ್ದಾರಾ?
ಪ್ರತಿಯೊಂದು ಸಹ ಒಂದು ಅನುಭವ. ನಮ್ಮ ಹಿರಿಯರು ಮಾಡಿರುವ ತಪ್ಪನ್ನು ಪದೇ ಪದೆ ಮಾಡುವ ಬದಲು, ಹೊಸ ಹೊಸ ತಪ್ಪು ಮಾಡಿ ಎನ್ನುವ ಪಾಠ ಮಾಡಿದ್ದಾರೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗುವ ಮೊದಲು ಸಂಘಟನೆಯಲ್ಲಿ ಕಡಿಮೆ ಅವಧಿಗೆ ಕೆಲಸ ಮಾಡಿದ್ದರು. ರಾಜ್ಯಾಧ್ಯಕ್ಷರಾಗುವ ಮೊದಲು ಯುವ ಮೋರ್ಚಾ, ಬಿಜೆಪಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ರಾಜ್ಯಾಧ್ಯಕ್ಷರಾಗಿ ನಿಭಾಯಿಸಬೇಕಿರುವುದು ಬಹುದೊಡ್ಡ ಸಂಗತಿ. ಆದ್ದರಿಂದ ಅನುಭವ ವಾಗುತ್ತಾ ಹೋದಂತೆ ಎಲ್ಲವೂ ಸರಿ ಹೋಗಬಹುದು ಎಂದು ಭಾವಿಸೋಣ.
ಶಿಸ್ತಿನ ಪಕ್ಷದಲ್ಲಿ ಅಶಿಸ್ತು ಹೆಚ್ಚಾಗಿದೆಯೇ?
ಈ ಪ್ರಶ್ನೆಗೆ ಉತ್ತರಿಸುವ ಮೊದಲು ಅನುಶಾಸನ ಎನ್ನುವ ಪದದ ಬಗ್ಗೆ ಹೇಳಬೇಕು. ಅನುಶಾಸನ ಎಂದರೆ ನಮಗೆ
ನಾವೇ ಕೆಲವೊಂದಷ್ಟು ನಿಯಮ ಹಾಕಿಕೊಂಡು ಪಾಲಿಸುವುದಾಗಿದೆ. ಬೇರೆಯವರ ಒತ್ತಡಕ್ಕೆ ಯಾವುದಾದರೂ
ಒಂದನ್ನು ಪಾಲಿಸುವುದು ಶಾಸನ. ನಮಗಾಗಿ ಪಾಲಿಸುವುದು ಅನುಶಾಸನ. ನಮ್ಮಲ್ಲಿ ಈಗ ಅನುಶಾಸನದ
ಕೊರತೆಯಿದೆ. ಈ ಹಿಂದೆ ನಮ್ಮದು ಕ್ಲಾಸ್ ಪಾರ್ಟಿಯಾಗಿತ್ತು. ಆಗ ಶೇ.100ರಷ್ಟು ಶಿಸ್ತಿತ್ತು. ಆದರೆ ಚುನಾವಣಾ ರಾಜಕೀಯದಲ್ಲಿ ಯಶಸ್ಸು ಸಿಗುತ್ತಿರಲಿಲ್ಲ. ವಿಧಾನ ಪರಿಷತ್ ಪದವೀಧರ, ಶಿಕ್ಷಕರ ಕ್ಷೇತ್ರಗಳನ್ನು ಗೆದ್ದರೂ, ತಾಲೂಕು ಪಂಚಾಯಿತಿ ಚುನಾವಣೆ ಗೆಲ್ಲಲು ಆಗುತ್ತಿರಲಿಲ್ಲ. ಆದರೀಗ ಬಿಜೆಪಿ ಮಾಸ್ ಪಾರ್ಟಿಯಾಗಿ ಬದಲಾಗಿದೆ. ದೇಶಾದ್ಯಂತ ಗೆಲುವು ಕಾಣುತ್ತಿದ್ದೇವೆ. ಪ್ರವಾಹದ ಸಮಯದಲ್ಲಿ ನೀರಿನೊಂದಿಗೆ ಕಡ್ಡಿಯೂ ಬರುವಂತೆ ಮಾಸ್ ಪಾರ್ಟಿಯಾಗಿ ಬದಲಾದ ಸಮಯದಲ್ಲಿ ಪಕ್ಷದಲ್ಲಿ ಎಲ್ಲ ರೀತಿಯ ಜನರೂ ಸೇರುತ್ತಾರೆ. ಆದ್ದರಿಂದ ದೌರ್ಬಲ್ಯವೂ ಸೇರಿರುತ್ತದೆ. ಇದನ್ನು ಸರಿಪಡಿಸುವ ಕೆಲಸವಾಗಬೇಕು. ಇದು ನಮ್ಮ ಜವಾಬ್ದಾರಿ. ಮುಂದಿನ ದಿನದಲ್ಲಿ ಮಾಸ್ ಪಾರ್ಟಿ ಯೊಂದಿಗೆ ಕ್ಲಾಸ್ ನಾಯಕತ್ವವನ್ನು ನೀಡಬೇಕು.
ಬಣ ರಾಜಕೀಯಕ್ಕೆ ಕೊನೆಯೆಂದು?
ಈ ಎಲ್ಲವೂ ಕೊನೆಯದಾಗಿ ಬಿಜೆಪಿಯಾಗಿಯೇ ಇರುತ್ತದೆ. ಬಿಜೆಪಿ ಎನ್ನುವುದು ಸಿದ್ಧಾಂತದ ಮೇಲೆ ನಡೆಯುತ್ತದೆ. ಅದು ಹಿಂದುತ್ವ. ಹಿಂದುತ್ವ ಎನ್ನುವುದು, ಯಾವುದೇ ಬಣವಲ್ಲ. ಆದರೆ ರಾಜಕೀಯದಲ್ಲಿ ಎಲ್ಲರಿಗೂ ಆಕಾಂಕ್ಷೆ ಗಳಿರುತ್ತವೆ. ಆದರೆ ವ್ಯಕ್ತಿಗತ ಆಕಾಂಕ್ಷೆ ಪಕ್ಷ ಮೀರಿದ್ದಲ್ಲ. ಪಕ್ಷದ ಆಕಾಂಕ್ಷೆ ದೇಶ ಮೀರಿದ್ದಲ್ಲ. ನಾವು ಈ ಚೌಕಟ್ಟನ್ನು ಹಾಕಿಕೊಂಡರೆ ವೈಯಕ್ತಿಕ, ಪಕ್ಷ ಹಾಗೂ ದೇಶಕ್ಕೆ ಹಿತವಾಗುತ್ತದೆ.
ಸದನದೊಳಗೆ ಸರಕಾರದ ವಿರುದ್ಧ ಹೋರಾಟದಲ್ಲಿ ಪಕ್ಷ ಹಿಂದಿದೆ ಎನಿಸುವುದಿಲ್ಲವೇ?
ಈ ಎಲ್ಲವಕ್ಕೂ ಪರಿಹಾರವೆಂದರೆ ಯಾವ ಪಾತ್ರದಲ್ಲಿ ಯಾರನ್ನು ನೋಡುತ್ತೇವೆ ಎನ್ನುವು ದರ ಮೇಲೆ ನಿಂತಿದೆ.
ಯಾರಿಗೆ ಯಾವ ಜವಾಬ್ದಾರಿ ನೀಡಬೇಕೋ ಅದನ್ನು ನೀಡಿದರೆ ಸರಿ ಹೋಗುತ್ತದೆ. ಕೃಷ್ಣನ ಪಾತ್ರಕ್ಕೆ ದುರ್ಯೋಧ ನನ್ನು ನಿಲ್ಲಿಸಿದರೆ ಅಥವಾ ದುರ್ಯೋಧನ ವ್ಯಕ್ತಿತ್ವಕ್ಕೆ ಕೃಷ್ಣನ ಪಾತ್ರದಾರಿಯನ್ನು ನಿಲ್ಲಿಸಿದರೆ ಸರಿ ಹೋಗುವುದಿಲ್ಲ. ಕೃಷ್ಣನ ಪಾತ್ರಕ್ಕೆ ಕೃಷ್ಣನನ್ನು, ಕರ್ಣ ಪಾತ್ರಕ್ಕೆ ಕರ್ಣನನ್ನು ಕೂರಿಸಬೇಕು. ಅದನ್ನು ಮಾಡುವ ತನಕ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ.
*
ಮಾಸ್ ಪಕ್ಷವಾಗಿರುವ ಬಿಜೆಪಿಗೆ ಮಾಸ್ ನಾಯಕತ್ವದ ಅಗತ್ಯವಿದೆ. ಈ ಮೂಲಕ ಜನ ಒಪ್ಪುವ, ದೇಶದ ಹಿತವನ್ನು
ಗಮನದಲ್ಲಿರಿಸಿಕೊಂಡು ಪಕ್ಷದಲ್ಲಿ ಕೆಲವೊಂದಷ್ಟು ತಿದ್ದುಪಡಿಗಳನ್ನು ಮಾಡಿಕೊಳ್ಳಬೇಕು. ಇದು ನಮ್ಮ
ಜವಾಬ್ದಾರಿಯಾಗಿದೆ.
- ಸಿ.ಟಿ.ರವಿ
ಮಾಸ್ ಪಕ್ಷವಾಗಿರುವ ಬಿಜೆಪಿಗೆ ಮಾಸ್ ನಾಯಕತ್ವದ ಅಗತ್ಯವಿದೆ. ಈ ಮೂಲಕ ಜನ ಒಪ್ಪುವ, ದೇಶದ ಹಿತವನ್ನು ಗಮನದಲ್ಲಿರಿಸಿಕೊಂಡು ಪಕ್ಷದಲ್ಲಿ ಕೆಲವೊಂದಷ್ಟು ತಿದ್ದುಪಡಿಗಳನ್ನು ಮಾಡಿಕೊಳ್ಳಬೇಕು. ಇದು ನಮ್ಮ ಜವಾಬ್ದಾರಿಯಾಗಿದೆ.
-ಸಿ.ಟಿ.ರವಿ
ಇದನ್ನೂ ಓದಿ: #RajeshGowdaInterview