Friday, 27th December 2024

Lion Rescue: ಸಿಂಹಗಳು ರೈಲ್ವೆ ಹಳಿ ದಾಟುತ್ತಿದ್ದರೆ ಈ ಲೋಕೋ ಪೈಲಟ್‍ಗಳು ಮಾಡಿದ್ದೇನು ಗೊತ್ತಾ?

Lion Rescue

ಗಾಂಧಿನಗರ: ಇತ್ತೀಚೆಗೆ ಗುಜರಾತ್‍ನ ಭಾವನಗರ ರೈಲ್ವೆ ವಿಭಾಗದ ಲೋಕೋ ಪೈಲಟ್‍ಗಳು ಸಂಭವಿಸಬಹುದಾದ ರೈಲು ಅಪಘಾತಗಳಿಂದ ಸಿಂಹಗಳನ್ನು(Lion Rescue) ಉಳಿಸುವ ಮೂಲಕ ವನ್ಯಜೀವಿ ಸುರಕ್ಷತೆಯ ಬಗ್ಗೆ ತಮಗಿರುವ ಕಾಳಜಿಯನ್ನು  ಪ್ರದರ್ಶಿಸಿದ್ದಾರೆ. ಇತ್ತೀಚೆಗೆ ಮುಂಜಾನೆಯ ವೇಳೆ  ನಾಲ್ಕು ಸಿಂಹಗಳು ಲಿಲಿಯಾ ಮೋಟಾ-ಸಾವರ್ಕುಂಡ್ಲಾ ವಿಭಾಗದ ನಡುವೆ ರೈಲ್ವೆ ಹಳಿಯನ್ನು ದಾಟಿ ಹೋಗುವಾಗ ಲೋಕೋ ಪೈಲಟ್ ವಿವೇಕ್ ವರ್ಮಾ ಮತ್ತು ಹಿರಿಯ ಸಹಾಯಕ ಲೋಕೋ ಪೈಲಟ್ ಅಶುತೋಷ್ ಮಿಶ್ರಾ ಅವರು ಹಪಾದಿಂದ ಪಿಪಾವವ್ ಬಂದರಿಗೆ ಗೂಡ್ಸ್ ರೈಲಿನಲ್ಲಿ ಬರುವಾಗ ಸಿಂಹಗಳನ್ನು ಕಂಡು ತಕ್ಷಣ  ತುರ್ತು ಬ್ರೇಕ್ ಹಾಕಿದ್ದಾರೆ.

ಒಂದು ಸಿಂಹವು ಹಳಿಯನ್ನು ದಾಟುತ್ತಿದ್ದಂತೆ ಇವರಿಬ್ಬರು ತಾಳ್ಮೆಯಿಂದ ಕಾದಿದ್ದಾರೆ. ಆದರೆ  ನಂತರ ಇತರ ಮೂರು ಸಿಂಹಗಳು ಬಂದಾಗ ರೈಲು ವ್ಯವಸ್ಥಾಪಕ ಮತ್ತು ಸಾವರ್ಕುಂಡ್ಲಾದ ಉಪ ನಿಲ್ದಾಣದ ಅಧೀಕ್ಷಕರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಆಗ ಅರಣ್ಯ ರಕ್ಷಣಾ ಅಧಿಕಾರಿಗಳು ಬಂದು ಸಿಂಹಗಳು ಸುರಕ್ಷಿತವಾಗಿ ದೂರ ಸರಿಯುವಂತೆ ಮಾಡಿದ್ದಾರೆ. ನಂತರ ಅವರು ತಮ್ಮ ರೈಲು ಪ್ರಯಾಣವನ್ನು ಮುಂದುವರಿಸಿದ್ದಾರೆ.

Lion Rescue

ಈ ಘಟನೆಗೆ ಸಂಬಂಧಿಸಿದಂತೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರವೀಶ್ ಕುಮಾರ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹಿಮಾಂಶು ಶರ್ಮಾ ಮತ್ತು ಇತರ ಅಧಿಕಾರಿಗಳು ಪೈಲಟ್‍ಗಳ ಸಮಯೋಚಿತ ಕ್ರಮಗಳನ್ನು ಹೊಗಳಿದ್ದಾರೆ.

ಈ ವರ್ಷ ಮಾತ್ರ ಭಾವನಗರ ರೈಲ್ವೆ ವಿಭಾಗವು ಈ ರೀತಿಯ ತ್ವರಿತ ಕ್ರಮಗಳ ಮೂಲಕ 96 ಕ್ಕೂ ಹೆಚ್ಚು ಸಿಂಹಗಳನ್ನು ರಕ್ಷಿಸಿದೆ. ಅಕ್ಟೋಬರ್ 3, 2024 ರಂದು ಲೋಕೋ ಪೈಲಟ್‍ಗಳಾದ ಬಲಿರಾಮ್ ಕುಮಾರ್ ಮತ್ತು ಚಿಂತನ್ ಕುಮಾರ್ ಅವರು ಜುನಾಗಢ-ಬಿಲ್ಖಾ ವಿಭಾಗದ ಬಳಿ ಪ್ಯಾಸೆಂಜರ್ ರೈಲು ಸಂಖ್ಯೆ 09540 ಅನ್ನು ನಿಲ್ಲಿಸಿ ಸಿಂಹವನ್ನು ಸುರಕ್ಷಿತವಾಗಿ ದಾಟಲು ಅನುವು ಮಾಡಿಕೊಟ್ಟರು. ಸೆಪ್ಟೆಂಬರ್ 19, 2024 ರಂದು ಹಳಿಗಳ ಮೇಲೆ ಸಿಂಹ ಕುಳಿತಿರುವುದನ್ನು ಗಮನಿಸಿದ ಲೋಕೋ ಪೈಲಟ್‍ಗಳಾದ ಚಂದನ್ ಕುಮಾರ್ ಮತ್ತು ಜಗದೀಶ್ ಪ್ರಸಾದ್ ಅವರು ಸ್ಯಾಂಗೀರ್-ಕಾನ್ಸಿಯಾನೇಶ್ ವಿಭಾಗದ ಬಳಿ ಪ್ಯಾಸೆಂಜರ್ ರೈಲು ಸಂಖ್ಯೆ 06394 ಅನ್ನು ನಿಲ್ಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ರೈಲು ಸಂಚಾರಕ್ಕೂ ಕೋತಿಗಳ ಕಾಟ; ಅಷ್ಟಕ್ಕೂ ಆಗಿದ್ದೇನು ಗೊತ್ತಾ? ವಿಡಿಯೊ ಇದೆ

ಈ ವರ್ಷದ ಆರಂಭದಲ್ಲಿ, ಜೂನ್ 17, 2024 ರಂದು, ಲೋಕೋ ಪೈಲಟ್ ಮುಖೇಶ್ ಕುಮಾರ್ ಮೀನಾ ಪಿಪಾವವ್ ಬಂದರು ನಿಲ್ದಾಣದ ಬಳಿ ಗೂಡ್ಸ್ ರೈಲನ್ನು ನಿಲ್ಲಿಸಿ, ಸಂಭವಿಸಬೇಕಾಗಿದ್ದ  ಅಪಘಾತದಿಂದ 10 ಸಿಂಹಗಳ ಗುಂಪನ್ನು ಉಳಿಸಿದ್ದಾರೆ. ಪ್ರತಿಯೊಂದು ಘಟನೆಯು ಗುಜರಾತ್‍ನ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳನ್ನು ರಕ್ಷಿಸುವಲ್ಲಿ ಪೈಲಟ್‍ಗಳ ಸಮರ್ಪಣೆಯನ್ನು ಒತ್ತಿಹೇಳುತ್ತದೆ.