ಟೆಕ್ಸಾಸ್ : ಕ್ರಿಸ್‌ಮಸ್ ಹಬ್ಬ ಹತ್ತಿರ ಬರುತ್ತಿದೆ. ಹಬ್ಬವನ್ನು ಸಂಭ್ರಮಿಸಲು ಎಲ್ಲಾ ಕಡೆ ಜನರು ಹಲವಾರು ರೀತಿಯಲ್ಲಿ ತಯಾರಿಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಟೆಕ್ಸಾಸ್‍ನಲ್ಲಿ ಸಾವಿರಾರು ಡ್ರೋನ್‍ಗಳು ರಾತ್ರಿಯ ವೇಳೆ ಆಕಾಶದಲ್ಲಿ ಬೆಳಗುತ್ತಾ ಸಾಂತಾಕ್ಲಾಸ್ ತನ್ನ ಜಾರುಬಂಡಿಯಲ್ಲಿ ಎರಡು ರೈನ್‌ಡೀರ್‌ಗಳೊಂದಿಗೆ ಸವಾರಿ ಮಾಡುವುದನ್ನು ತೋರಿಸಲಾಗಿತ್ತು. ಇದು ಹಬ್ಬದ ಉತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಸುಂದರವಾದ ದೃಶ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಅಮೆರಿಕ ಮೂಲದ ಸ್ಕೈ ಎಲಿಮೆಂಟ್ಸ್ ಎಂಬ ಡ್ರೋನ್ ಕಂಪನಿಯು ಟೆಕ್ಸಾಸ್ ಮ್ಯಾನ್ಸ್ಫೀಲ್ಡ್‌ನಲ್ಲಿ ಅದ್ಭುತ ಪ್ರದರ್ಶನದೊಂದಿಗೆ ರಾತ್ರಿ ಆಕಾಶವನ್ನು ಬೆಳಗಿಸುವ ಮೂಲಕ ಕ್ರಿಸ್‌ಮಸ್ ಕಂಪನಗಳನ್ನು ಹರಡಿದೆ. ಕ್ರಿಸ್ಮಸ್ ಹಬ್ಬಕ್ಕೂ ಮುಂಚಿತವಾಗಿ 5,000 ಡ್ರೋನ್‍ಗಳನ್ನು ಆಕಾಶದಲ್ಲಿ ಹಾರಿಸಲಾಗಿದೆ. ಹಾರುವ ಯುಎವಿಗಳನ್ನು ಒಳಗೊಂಡ ಈ ಪ್ರದರ್ಶನದಲ್ಲಿ ಸಾಂತಾಕ್ಲಾಸ್ ಜಾರುಬಂಡಿಯಲ್ಲಿ ಸವಾರಿ ಮಾಡುತ್ತಾ ಜನರನ್ನು ಭೇಟಿ ಮಾಡಲು ಬರುವಂತೆ ಬಹಳ ಅದ್ಭುತವಾದ ದೃಶ್ಯವನ್ನು ಜನರು ವೀಕ್ಷಿಸುವಂತೆ ಮಾಡಿತು. ಕ್ರಿಸ್‌ಮಸ್ ಉಡುಗೊರೆ ತರುವ ಸಾಂತಾ ಅವರನ್ನು ಸ್ವಾಗತಿಸಲು ಮತ್ತು ಹುರಿದುಂಬಿಸಲು ಸಜ್ಜುಗೊಳಿಸಲಾದ ಈ ಸಾವಿರಾರು ಡ್ರೋನ್‍ಗಳ ಮೂಲಕ ಆಕಾಶವು ಮಿನುಗುವಂತೆ ಮಾಡಲಾಗಿತ್ತು.
ಡ್ರೋನ್ ಪ್ರದರ್ಶನದ ಈ ಅದ್ಭುತವಾದ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿದೆ. ವೀಕ್ಷಕರನ್ನು ರಂಜಿಸಲು ಸ್ಕೈ ಎಲಿಮೆಂಟ್ಸ್ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಮ್ಯಾನ್ಸ್ಫೀಲ್ಡ್‌ನ ಮೈದಾನದ ಮೇಲೆ ಸಿಬ್ಬಂದಿಗಳು ಸೇರಿ ಭವ್ಯ ಪ್ರದರ್ಶನಕ್ಕೆ ತಯಾರಿ ನಡೆಸುವ ಮೂಲಕ ಈ ವಿಡಿಯೊ ಶುರುವಾಗುತ್ತದೆ. ಡ್ರೋನ್ ಕಂಪನಿಯು ಡ್ರೋನ್‍ಗಳನ್ನು ಹಾರಿಸುವ ಮೊದಲು ಅವುಗಳನ್ನು ಹುಲ್ಲಿನ ಹಾಸಿಗೆಯ ಮೇಲೆ ಸರಿಯಾಗಿ ಜೋಡಿಸಿ ನಿಲ್ಲಿಸಿದೆ. ಸೂರ್ಯಾಸ್ತದ ನಂತರ, ಆಕಾಶವು ಕತ್ತಲಾಗುತ್ತಿದ್ದಂತೆ, ಡ್ರೋನ್‍ಗಳು ಟೆಕ್ಸಾಸ್ ಆಕಾಶದಲ್ಲಿ ಹಾರುತ್ತಾ ಸಾಂತಾ ಕ್ಲಾಸ್‍ನ್ನು ಅವರ ಸಾಂಪ್ರದಾಯಿಕ ವಾಹನವನ್ನು ಏರಿ ಸವಾರಿ ಮಾಡುವುದನ್ನು ಹೋಲುವ ಅದ್ಭುತವಾದ ದೃಶ್ಯವನ್ನು ಸೃಷ್ಟಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ:ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯನ್ನು ರೆಸ್ಟ್ ಹೌಸ್‌ಗೆ ಕರೆದ ಪಿಡಬ್ಲ್ಯೂಡಿ ಎಂಜಿನಿಯರ್; ಮುಂದೇನಾಯ್ತು? ವಿಡಿಯೊ ಇದೆ
ಕ್ರಿಸ್‌ಮಸ್ ಥೀಮ್ ಡ್ರೋನ್ ಲೈಟ್ ಶೋನ ವಿಡಿಯೊವನ್ನು ಡಿಸೆಂಬರ್ 6 ರಂದು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲಾಗಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು, 99 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಶೇಷವೆಂದರೆ, ಈ ವರ್ಷದ ಆರಂಭದಲ್ಲಿ, ಸ್ಕೈ ಎಲಿಮೆಂಟ್ಸ್ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿತು.