ಬೆಂಗಳೂರು: ಇಂದು ಮುಂಜಾನೆ ಮೃತಪಟ್ಟ ಎಸ್‌ಎಂ ಕೃಷ್ಣ (SM Krishna Death) ಅವರು ಒಮ್ಮೆ ಕೇಂದ್ರದಲ್ಲಿ ಪ್ರಧಾನ ಮಂತ್ರಿ (Prime Minister) ಆಗುವ ಅವಕಾಶವಿತ್ತು; ಆದರೆ ಅದು ಸ್ವಲ್ಪದರಲ್ಲಿ ತಪ್ಪಿಹೋಗಿತ್ತು. ಇದನ್ನು ಅವರ ಆತ್ಮಚರಿತ್ರೆಯಲ್ಲಿ ಬರೆಯಲಾಗಿದೆ.
2004ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರ ಕಳೆದುಕೊಂಡು ಕೇಂದ್ರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಕಾಂಗ್ರೆಸ್ ಮುಂದೆ ಎರಡು ಅವಕಾಶಗಳಿದ್ದವು. ಸೋನಿಯಾ ಗಾಂಧಿ ಪ್ರಧಾನಿ ಆಗಬೇಕೆಂದು ಕಾಂಗ್ರೆಸ್ ಬಯಸಿದ್ದರೂ ಸ್ವತಃ ಸೋನಿಯಾ ಅವರೇ ಅದರಿಂದ ಹಿಂದೆ ಸರಿದರು. ಆಗ ಪ್ರಧಾನಿ ಯಾರಾಗಬೇಕು ಎಂದು ಚರ್ಚೆ ಪಕ್ಷದೊಳಗೆ ನಡೆದಾಗ, ಮನಮೋಹನ್ ಸಿಂಗ್ ಜತೆಗೆ ಎಸ್‌ಎಂ ಕೃಷ್ಣ ಹೆಸರೂ ಮುನ್ನೆಲೆಗೆ ಬಂತು. ಈ ವಿಚಾರವನ್ನು ಖುದ್ದು ಮನಮೋಹನ್ ಸಿಂಗ್ ಅವರೇ ಎಸ್‌ಎಂ ಕೃಷ್ಣ ಅವರಿಗೆ ಮುಂದೆ ತಿಳಿಸಿದ್ದರು.
ಮುಂದೆ ಮನಮೋಹನ್ ಸಿಂಗ್ ಅವರೇ ಪ್ರಧಾನಿಯಾದರು. ಈ ಮೂಲಕ ದೇವೇಗೌಡರ ನಂತರ ಕರ್ನಾಟಕಕ್ಕೆ ಎರಡನೇ ಬಾರಿಗೆ ಬರಲಿದ್ದ ಪ್ರಧಾನಿ ಹುದ್ದೆ ಕೈತಪ್ಪಿತು. ಪ್ರಧಾನಿ ಹುದ್ದೆ ಮನಮೋಹನ್ ಪಾಲಾದ ಬಳಿಕ ಕರ್ನಾಟಕದಲ್ಲಿಯೂ ರಾಜಕೀಯ ಚಿತ್ರಣ ಬದಲಾಯಿತು. ಜನರ ನಾಡಿ ಮಿಡಿತವನ್ನು ತಪ್ಪಾಗಿ ಅರ್ಥೈಸಿದ ಎಸ್‌ಎಂ ಕೃಷ್ಣ ಲೋಕಸಭೆ ಚುನಾವಣೆ ಜತೆಗೆ ರಾಜ್ಯ ಅವಧಿಪೂರ್ವ ವಿಧಾನಸಭಾ ಚುನಾವಣೆಯನ್ನು ನಡೆಸಲು ಮುಂದಾದರು.
ಆದರೆ ಕಾಂಗ್ರೆಸ್ಗೆ ನಿರೀಕ್ಷಿತ ಸ್ಥಾನಗಳು ಬರಲಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ರಚನೆಯಾಯಿತು. ಈ ಹಂತದಲ್ಲಿ ಕರ್ನಾಟಕದಲ್ಲಿ ಮೊದಲ ಸಮ್ಮಿಶ್ರ ಸರ್ಕಾರ ರಚನೆಯಾಗಲು ನಾಂದಿಯಾಯಿತು. ಕಾಂಗ್ರೆಸ್ನೊಂದಿಗೆ ಜೆಡಿಎಸ್ ಕೈಜೋಡಿಸಿ ಸರಕಾರ ರಚಿಸಿತು. ಈ ಹಂತದಲ್ಲಿ ಎಸ್‌ಎಂ ಕೃಷ್ಣ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರೆಸಲು ಜೆಡಿಎಸ್ ಸಿದ್ಧವಿರಲಿಲ್ಲ. ಧರಂ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲು ಜೆಡಿಎಸ್ ಒತ್ತಾಯಿಸಿತು. ಧರಂ ಸಿಎಂಆದರು.
ಆಗ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದ ಎಸ್ ಎಂ ಕೃಷ್ಣ ಅವರನ್ನು ಸಮಾಧಾನಪಡಿಸಲು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ಸುಮಾರು 4 ವರ್ಷಗಳ ಕಾಲ 2008ರವರೆಗೂ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದರು. ನಂತರ ರಾಜ್ಯಪಾಲರ ಹುದ್ದೆಗೆ ಏಕಾಏಕಿ ರಾಜೀನಾಮೆ ನೀಡಿದ ಎಸ್‌ಎಂ ಕೃಷ್ಣ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದರು. ಆದರೆ ಅಷ್ಟರೊಳಗೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದರಿಂದ ರಾಜ್ಯ ರಾಜಕೀಯ ಚಿತ್ರಣ ಬದಲಾಗಿತ್ತು.
ಹೀಗಾಗಿ ಎಸ್‌ಎಂ ಕೃಷ್ಣ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ದ ಕಾಂಗ್ರೆಸ್, ಅವರನ್ನು ಕೇಂದ್ರ ವಿದೇಶಾಂಗ ಸಚಿವರಾಗಿ ಮಾಡಿತು. 3 ವರ್ಷಗಳ ಕಾಲ ಅವರು ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರು. ಅನಾರೋಗ್ಯ ಕಾರಣದಿಂದ ಅವರು ಆ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ನಂತರ ಕಾಂಗ್ರೆಸ್‌ನಲ್ಲಿ ವರ್ಚಸ್ಸು ಕಳೆದುಕೊಂಡ ಅವರು ಬಿಜೆಪಿಯತ್ತ ಮುಖ ಮಾಡಿದರು.
ಇದನ್ನೂ ಓದಿ: SM Krishna Death: ವರನಟ ರಾಜ್‌ಕುಮಾರ್ ಅಪಹರಣ ಪ್ರಕರಣ ಎದುರಿಸಿದ್ದ ಎಸ್‌ಎಂ ಕೃಷ್ಣ