ಚೆನ್ನೈ : ತಮಿಳುನಾಡಿನ ಚೆನ್ನೈನಲ್ಲಿ ಮಾನಸಿಕ ಅಸ್ವಸ್ಥ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ(Physical Abuse) ಎಸಗಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ತಂದೆ ಅಯನಾವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಂತರ ಚೆನ್ನೈ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಆರೋಪಿಗಳಾದ ನರೇಶ್ ಮತ್ತು ಸುರೇಶ್‍ನನ್ನು ಬಂಧಿಸಲಾಗಿದ್ದು, ಇನ್ನು ಉಳಿದ ಏಳು ಜನರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ವರದಿಯಾಗಿದೆ.
ನಡೆದಿದ್ದೇನು?
ಇಬ್ಬರು ಆರೋಪಿಗಳಾದ ನರೇಶ್ ಮತ್ತು ಸುರೇಶ್ ತನ್ನ ಸ್ನೇಹಿತರೊಂದಿಗೆ ಸಂತ್ರಸ್ತೆಯನ್ನು ಚೆನ್ನೈನ ವಾಲ್‌ಟ್ಯಾಕ್ಸ್ ರಸ್ತೆಯಲ್ಲಿರುವ ಲಾಡ್ಜ್‌ಗೆ ಕರೆದೊಯ್ದು ಪದೇ ಪದೇ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ, ಸಂತ್ರಸ್ತೆ ಹೊಟ್ಟೆ ನೋವಿನಂತಹ ಸಮಸ್ಯೆ ಸೇರಿದಂತೆ ಕೆಲವು ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದಳು. ನಂತರ ಆಕೆ ನಡೆದ ಘಟನೆಯ ಬಗ್ಗೆ ತಂದೆಯ ಬಳಿ ಹೇಳಿದಾಗ ಅವರು ದೂರು ದಾಖಲಿಸಿದ್ದಾರೆ.
ಸಂತ್ರಸ್ತೆಗೆ ಆರೋಪಿಗಳನ್ನು ಕಳೆದ ವರ್ಷ ಆಕೆಯ ಕಾಲೇಜಿನ ಸ್ನೇಹಿತನೊಬ್ಬ ಪರಸ್ಪರ ಪರಿಚಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತು ಇನ್ನೂ ಕೆಲವರು ಸೋಶಿಯಲ್ ಮೀಡಿಯಾ ಮೂಲಕ ಆಕೆಯ ಸ್ನೇಹ ಬೆಳೆಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅತ್ಯಾಚಾರದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ನ್ಯಾಯ್ ಸಂಹಿತಾ (ಬಿಎನ್ಎಸ್) ನ ಎಂಟು ಸೆಕ್ಷನ್‍ಗಳು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಒಂದು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಹಿಡಿಯಲು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎನ್ನಲಾಗಿದೆ.
ಮಾನಸಿಕ ಅಸ್ವಸ್ಥ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಹಿನ್ನಲೆಯಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತನಿಖೆಯ ವಿಳಂಬಕ್ಕೆ ಕಾರಣವಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ಬಿಜೆಪಿ ಪಕ್ಷವು ಉಪ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಅರ್ಜಿ ಸಲ್ಲಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಕಳ್ಳತನಕ್ಕೂ ಮುನ್ನ ಈ ಕಿಲಾಡಿ ಕಳ್ಳ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ
ಈ ನಡುವೆ, ಅಖಿಲ ಭಾರತ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಈ ಪ್ರಕರಣದಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಮತ್ತು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. “ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವಲ್ಲಿ ಡಿಎಂಕೆ ಸರ್ಕಾರ ವಿಫಲವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಅಪರಾಧಿಗಳಿಗೆ ಕಠಿಣ ಕಾನೂನು ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಮಹಿಳೆಯರ ವಿರುದ್ಧದ ಈ ರೀತಿಯ ಅಪರಾಧಗಳನ್ನು ತಡೆಗಟ್ಟಲು, ಅಂತಹ ದೂರುಗಳ ಬಗ್ಗೆ ವಿಳಂಬವಿಲ್ಲದೆ ಗಂಭೀರ ತನಿಖೆ ನಡೆಸಬೇಕೆಂದು ನಾನು ಎಂ.ಕೆ.ಸ್ಟಾಲಿನ್, ಡಿಎಂಕೆ ಸರ್ಕಾರವನ್ನು ಒತ್ತಾಯಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.