Friday, 27th December 2024

IND vs AUS: ʻರೋಹಿತ್‌ ಶರ್ಮಾ ಬಗ್ಗೆ ಯಾವುದೇ ಅನುಮಾನ ಬೇಡʼ-ನಾಯಕನಿಗೆ ಕಪಿಲ್‌ ದೇವ್‌ ಬೆಂಬಲ!

IND vs AUS: 'Rohit Sharma doesn't have to prove himself, I don't doubt him'- Kapil Dev backs out-of-form Indian Captain

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಎರಡನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದ (IND vs AUS) ಎರಡೂ ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಭಾರತ ತಂಡದ ನಾಯಕ ರೋಹಿತ್‌ ಶರ್ಮಾಗೆ ಮಾಜಿ ನಾಯಕ ಕಪಿಲ್‌ ದೇವ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ರೋಹಿತ್‌ ಶರ್ಮಾ ಈ ಹಿಂದೆ ಭಾರತ ತಂಡಕ್ಕಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಹಾಗಾಗಿ ಅವರ ಸಾಮರ್ಥ್ಯದ ಬಗ್ಗೆ ಅನುಮಾನ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಎರಡನೇ ಮಗುವಿನ ಜನನದ ಕಾರಣ ರೋಹಿತ್‌ ಶರ್ಮಾ ಅವರು ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ, ಪಿಂಕ್‌ ಬಾಲ್‌ ಟೆಸ್ಟ್‌ಗೆ ನೇರವಾಗಿ ಬಂದಿದ್ದ ರೋಹಿತ್‌ ಶರ್ಮಾ, ಪ್ರಥಮ ಇನಿಂಗ್ಸ್‌ನಲ್ಲಿ 3 ರನ್‌ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 6 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದರು. ಆ ಮೂಲಕ ಅವರು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು.

ಅಲ್ಲದೆ ರೋಹಿತ್‌ ಶರ್ಮಾ 2024-25ರ ಸಾಲಿನಲ್ಲಿ ಆಡಿದ 6 ಟೆಸ್ಟ್‌ಗಳಿಂದ 11.83ರ ಸರಾಸರಿಯಲ್ಲಿ ರನ್‌ ಗಳಿಸಿದ್ದರು. ಪ್ರಸಕ್ತ ಆವೃತ್ತಿಯಲ್ಲಿಯೇ ಅಗ್ರ ಆರರಲ್ಲಿ ಅತ್ಯಂತ ಕಡಿಮೆ ರನ್‌ ಗಳಿಸಿದ ಎರಡನೇ ಟೆಸ್ಟ್‌ ತಂಡದ ನಾಯಕ ಎಂಬ ಅನಗತ್ಯ ದಾಖಲೆಯನ್ನು ರೋಹಿತ್‌ ಶರ್ಮಾ ಹೆಗಲೇರಿಸಿಕೊಂಡಿದ್ದಾರೆ. ಆದರೆ, ಮುಂದಿನ ಪಂದ್ಯಗಳಲ್ಲಿ ರೋಹಿತ್‌ ಶರ್ಮಾ ಫಾರ್ಮ್‌ಗೆ ಕಮ್‌ಬ್ಯಾಕ್‌ ಮಾಡಲಿದ್ದಾರೆಂಬ ಬಗ್ಗೆ ಕಪಿಲ್‌ ದೇವ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಪಿಲ್‌ ದೇವ್‌, “ರೋಹಿತ್‌ ಶರ್ಮಾ ಅವರು ಯಾವುದನ್ನೂ ಸಾಬೀತುಪಡಿಸಬೇಕಾದ ಅಗತ್ಯವಿಲ್ಲ. ಅವರು ಹಲವು ವರ್ಷಗಳ ಕಾಲ ಭಾರತ ತಂಡಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ, ಹಾಗಾಗಿ ಇದರ ಬಗ್ಗೆ ಯಾವುದೇ ಅನುಮಾನವಿಲ್ಲ. ನನಗೂ ಕೂಡ ಅವರ ಬಗ್ಗೆ ಯಾವುದೇ ಅನುಮಾನವಿಲ್ಲ. ಅವರು ಮುಂದಿನ ಪಂದ್ಯಗಳಲ್ಲಿ ಫಾರ್ಮ್‌ಗೆ ಕಮ್‌ಬ್ಯಾಕ್‌ ಮಾಡಲಿದ್ದಾರೆ,” ಎಂದು ಅವರು ತಿಳಿಸಿದ್ದಾರೆ.

ರೋಹಿತ್‌ ಶರ್ಮಾ ನಾಯಕತ್ವದ ಬಗ್ಗೆ ಅನುಮಾನ ಬೇಡ: ಕಪಿಲ್‌ ದೇವ್‌

ಬ್ಯಾಟಿಂಗ್‌ ವೈಫಲ್ಯದ ಜೊತೆಗೆ ನ್ಯೂಜಿಲೆಂಡ್‌ ಎದುರು ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ 0-3 ಅಂತರದಲ್ಲಿ ಸೋಲು ಅನುಭವಿಸಿದ ಬಳಿಕ ರೋಹಿತ್‌ ಶರ್ಮಾ ಅವರ ನಾಯಕತ್ವವನ್ನು ಪ್ರಶ್ನೆ ಮಾಡಲಾಗುತ್ತಿದೆ. ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಇತ್ತೀಚೆಗೆ ಟಿ20 ವಿಶ್ವಕಪ್‌ ಗೆದ್ದಿದೆ ಎಂಬ ಸಂಗತಿಯನ್ನು1983ರ ವಿಶ್ವಕಪ್‌ ವಿಜೇತ ನಾಯಕ ನೆನಪಿಸಿದ್ದಾರೆ.

“ಒಂದು ಅಥವಾ ಎರಡು ಪ್ರದರ್ಶನಗಳನ್ನು ನೋಡುವ ಮೂಲಕ ಒಬ್ಬರ ನಾಯಕತ್ವದ ಬಗ್ಗೆ ಅನುಮಾನ ಪಡುವುದು ಬೇಡ. ಆರು ತಿಂಗಳ ಹಿಂದೆ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್‌ ಗೆದ್ದಿದೆ. ಹಾಗಾಗಿ ನೀವು ಈ ರೀತಿಯ ಪ್ರಶ್ನೆಯನ್ನು ನನ್ನನ್ನು ಕೇಳಬಾರದು. ಅವರು ಸಾಮರ್ಥ್ಯ ಹಾಗೂ ಪ್ರತಿಭೆ ಬಗ್ಗೆ ನನಗೆ ಸ್ಷಷ್ಟತೆ ಇದೆ ಹಾಗೂ ಅವರು ಕಮ್‌ಬ್ಯಾಕ್‌ ಮಾಡಲಿದ್ದಾರೆ,” ಎಂದು ಕಪಿಲ್‌ ದೇವ್‌ ತಿಳಿಸಿದ್ದಾರೆ.

ಡಿ.14ಕ್ಕೆ ಎರಡನೇ ಟೆಸ್ಟ್‌ ಪಂದ್ಯ

ಎರಡು ಪಂದ್ಯಗಳ ಬಳಿಕ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು 1-1 ಸಮಬಲ ಕಾಯ್ದುಕೊಂಡಿವೆ. ಇದೀಗ ಉಭಯ ತಂಡಗಳು ಡಿಸೆಂಬರ್‌ 14 ರಂದು ಬ್ರಿಸ್ಬೇನ್‌ನ ದಿ ಗಬ್ಬಾದಲ್ಲಿ ಎರಡನೇ ಟೆಸ್ಟ್‌ ಪಂದ್ಯ ಆರಂಭವಾಗಲಿದೆ.

ಈ ಸುದ್ದಿಯನ್ನು ಓದಿ: IND vs AUS: ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಫಾರ್ಮ್‌ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಚೇತನ್‌ ಶರ್ಮಾ!