ಬೆಂಗಳೂರು: ಇಂದು ಮುಂಜಾನೆ ಮೃತಪಟ್ಟ ಕರ್ನಾಟಕದ ಹಿರಿಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ (SM Krishna death) ಅವರ ರಾಜಕೀಯ ಬದುಕು ಏಳುಬೀಳಿನಿಂದ ಕೂಡಿರುವಂತೆಯೇ, ಅವರ ವೈಯಕ್ತಿಕ ಇಷ್ಟಾನಿಷ್ಟಗಳು ಕೂಡ ವಿಶಿಷ್ಟವಾಗಿದ್ದವು. ಸದಾ ಚೆನ್ನಾಗಿ ದಿರಿಸು ಧರಿಸುತ್ತಿದ್ದ (Dressing sense) ಕೃಷ್ಣ, ಸೂಟು- ಬೂಟು ಇಲ್ಲದೆ ಹೊರಗೆ ಕಾಣಿಸಿಕೊಂಡವರೇ ಅಲ್ಲ.
ಕೃಷ್ಣ ಅವರು ತಮ್ಮ ಸೊಗಸಾದ ಡ್ರೆಸ್ಸಿಂಗ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದ ಅಪರೂಪದ ರಾಜಕಾರಣಿ. ತಮಗಾಗಿಯೇ ಡಿಸೈನ್ ಮಾಡಿದ ಬಟ್ಟೆಗಳನ್ನು ಧರಿಸುತ್ತಿದ್ದರು. ಅದು ಸಾಂಪ್ರದಾಯಿಕ ಪಂಚೆ ಮತ್ತು ಜುಬ್ಬಾ ಆಗಿರಲಿ, ಅನೌಪಚಾರಿಕ ಕುರ್ತಾ ಅಥವಾ ಔಪಚಾರಿಕ ಸೂಟ್ ಆಗಿರಲಿ, ಸಂದರ್ಭಕ್ಕೆ ತಕ್ಕಂತೆ ಸೊಗಸಾದ ಬಟ್ಟೆ ಧರಿಸಿ ಕಾಣಿಸಿಕೊಳ್ಳುತ್ತಿದ್ದರು.
ಸಣ್ಣ ಪ್ರಾಯದಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ಪ್ರಭಾವಕ್ಕೆ ಕೃಷ್ಣ ಒಳಗಾಗಿದ್ದರು. ಮೈಸೂರಿನಲ್ಲಿದ್ದ ರಾಮಕೃಷ್ಣ ಆಶ್ರಮದ ಹಾಸ್ಟೆಲ್‌ನಲ್ಲಿ 6ನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗೆ ಕಲಿತ ಅವರು ಅಲ್ಲಿನ ಶಿಸ್ತು, ಸ್ವಚ್ಛತೆ, ಅಧ್ಯಯನಶೀಲತೆಗಳಿಗೆ ಮಾರು ಹೋಗಿ ಅವುಗಳನ್ನು ರೂಢಿ ಮಾಡಿಕೊಂಡಿದ್ದರು.
ಟೆನಿಸ್ ಮತ್ತು ಸಂಗೀತಪ್ರೀತಿ
ಎಸ್.ಎಂ.ಕೃಷ್ಣ ಅವರಿಗೆ ಟೆನಿಸ್ ಮೇಲೆ ಬಿಡಲಾಗದ ಪ್ರೀತಿ ಇತ್ತು. ಮುಖ್ಯಮಂತ್ರಿಯಾಗಿದ್ದಾಗಲೂ ವಾರಕ್ಕೆ ಎರಡರಿಂದ ಮೂರು ಬಾರಿ ಟೆನಿಸ್ ಕೋರ್ಟ್‌ಗೆ ಭೇಟಿ ನೀಡುತ್ತಿದ್ದರು. ಅವರು ಟೆನಿಸ್ ಅನ್ನು ತಮ್ಮ ದೇಹಕ್ಕೆ ವ್ಯಾಯಾಮವನ್ನು ನೀಡುವ ಕ್ರೀಡೆಯಾಗಿ ಪರಿಗಣಿಸದೆ, ರಾಜಕೀಯ ಒತ್ತಡವನ್ನು ನಿವಾರಿಸುವ ಸಾಧನವೆಂದೂ ಪರಿಗಣಿಸಿದ್ದರು. ಟೆನಿಸ್ ಆಡುವ ಹವ್ಯಾಸ ಅವರ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಟ್ಟಿತ್ತು.
ಜೊತೆಗೆ ಶಾಸ್ತ್ರೀಯ ಸಂಗೀತ ಕೇಳುವುದು ಕೂಡ ಅವರ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು. ರಾಜಕೀಯ ಒತ್ತಡದ ಸಮಯದಲ್ಲಿ ಅವರು ಸಂಗೀತದಲ್ಲಿ ಸಾಂತ್ವನವನ್ನು ಕಂಡುಕೊಳ್ಳುತ್ತಿದ್ದರು. ಎಂ.ಎಸ್.ಸುಬ್ಬುಲಕ್ಷ್ಮಿ, ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ್ ಮನ್ಸೂರ್, ಟಿ.ಚೌಡಯ್ಯ, ಲಾಲ್ಗುಡಿ ಜಯರಾಮನ್, ಬಾಲಮುರಳಿ ಕೃಷ್ಣ ಅವರಂತಹ ದಿಗ್ಗಜ ಸಂಗೀತಗಾರರ ಕಛೇರಿಗಳಲ್ಲಿ ಪಾಲ್ಗೊಳ್ಳಲು ಅವರು ಚೆನ್ನೈ, ಪುಣೆ, ಭೋಪಾಲ್ ಮತ್ತು ಜೈಪುರಗಳಿಗೆಲ್ಲ ಪ್ರಯಾಣಿಸುತ್ತಿದ್ದರು.
ಅದೇ ರೀತಿ ರಾಜಕೀಯ ವಿರೋಧಿಗಳನ್ನು ಟೀಕಿಸುವಾಗಲೂ ಕಟುವಾದ ಪದಗಳನ್ನು ಬಳಸದ ಮೃದು ಸ್ವಭಾವದ ಸಜ್ಜನರಾಗಿದ್ದರು. ಅದೇ ಸಮಯದಲ್ಲಿ, ಅವರು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಪಾಂಡಿತ್ಯವನ್ನು ಹೊಂದಿದ್ದ ಉತ್ತಮ ವಾಗ್ಮಿಯಾಗಿದ್ದರು ಮತ್ತು ಇತಿಹಾಸದ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದರು.
ಶಾಸಕರಾದ ನಂತರವೂ ಕಾನೂನು ಬೋಧನೆ
ಅಮೆರಿಕದಲ್ಲಿ ಎಲ್.ಎಲ್.ಎಂ ಪದವಿ ಪಡೆದು ಬಂದ ಕೃಷ್ಣ ಅವರು, ಕಾನೂನು ಉಪನ್ಯಾಸಕರಾಗಿದ್ದರು. ಚುನಾವಣೆಯಲ್ಲಿ ಗೆದ್ದು ಶಾಸಕರಾದ ನಂತರವೂ ಕಾನೂನು ಕಾಲೇಜಿನಲ್ಲಿ ಕಾನೂನು ಬೋಧನೆ ಮುಂದುವರಿಸಿದರು. ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಕಾನೂನು ಬೋಧಿಸಿದರು.
ಕೆನಡಿ ಅವರ ರಾಜಕೀಯ ಆರಾಧ್ಯ ದೈವ
ಜಾನ್ ಎಫ್ ಕೆನಡಿ ಅಮೆರಿಕದ ಅಧ್ಯಕ್ಷರಾಗಿದ್ದಾಗ ಫುಲ್‌ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆಯುವ ಮೂಲಕ ಯುಎಸ್‌ನಲ್ಲಿ ಎಲ್‌ಎಲ್‌ಎಂ ಅಧ್ಯಯನ ಮಾಡಿದವರು ಎಸ್‌ಎಂ ಕೃಷ್ಣ. ಕೆನಡಿಯವರನ್ನು ಯಾವಾಗಲೂ ತಮ್ಮ ರಾಜಕೀಯ ಆದರ್ಶವೆಂದು ಕೃಷ್ಣ ಪರಿಗಣಿಸಿದ್ದರು. ಪ್ರಜಾಸತ್ತಾತ್ಮಕ ತತ್ವಗಳು, ಸಮಾನತೆಯ ಆದರ್ಶಗಳೊಂದಿಗೆ ಜನರೊಂದಿಗೆ ಭಾವನಾತ್ಮಕ ಬಂಧವನ್ನು ಬೆಸೆಯುವ ಕೆನಡಿಯವರ ಶೈಲಿಯಿಂದ ಅವರು ವಿಶೇಷವಾಗಿ ಪ್ರಭಾವಿತರಾಗಿದ್ದರು. 1962ರಲ್ಲಿ ಯುಎಸ್ ಅಧ್ಯಕ್ಷೀಯ ಚುನಾವಣೆ ನಡೆದಾಗ, ಅಮೆರಿಕಕ್ಕೆ ತೆರಳಿ ಭಾರತೀಯರು ವಾಸಿಸುವ ಪ್ರದೇಶಗಳಲ್ಲಿ ಕೆನಡಿ ಪರ ಪ್ರಚಾರ ಮಾಡಿದರು. ಅವರು ತಮ್ಮ ಪ್ರಚಾರದ ಬಗ್ಗೆ ತಿಳಿಸಲು ಕೆನಡಿಗೆ ಪತ್ರವನ್ನು ಸಹ ಕಳುಹಿಸಿದ್ದರು. ಕೆನಡಿಯವರು ಕೃಷ್ಣಗೆ ವೈಯಕ್ತಿಕವಾಗಿ ಪ್ರತ್ಯುತ್ತರ ನೀಡಿ ಅಪಾರ ಧನ್ಯವಾದಗಳನ್ನು ಸಲ್ಲಿಸಿದ್ದರು.
ವಿಗ್ ಧರಿಸುತ್ತಿದ್ರಾ?
ಕೃಷ್ಣ ಅವರ ಸೊಗಸಾದ ತಲೆಕೂದಲು ವಿಗ್ ಎಂಬುದು ಅವರ ಆಪ್ತವಲಯದಲ್ಲಿ ಕೇಳಿಬರುತ್ತಿದ್ದ ಮಾತು. ಆದರೆ ಕೃಷ್ಣ ಎಂದೂ ಅದು ಇಲ್ಲದೆ ಕಾಣಿಸಿಕೊಂಡವರೇ ಅಲ್ಲ. ಹಲವು ದಶಕಗಳ ಕಾಲ ಅವರು ವಿಗ್ ಅನ್ನು ಧರಿಸಿಕೊಂಡೇ ಸಾರ್ವಜನಿಕ ಜೀವನವನ್ನು ನಿರ್ವಹಿಸಿದರು. ಈ ಕುರಿತ ರಹಸ್ಯವನ್ನು ಕಾಪಾಡಿಕೊಂಡರು. ವಿಗ್ ಅನ್ನು ಕಾಪಾಡಿಕೊಳ್ಳುವುದು ಕಷ್ಟ ಎಂಬ ಕಾರಣಕ್ಕಾಗಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾರ ಹಾಕಿಸಿಕೊಳ್ಳುವಾಗ ಜಾಗರೂಕರಾಗಿರುತ್ತಿದ್ದರು. ಮೈಸೂರು ಪೇಟ ಹಾಕಿಸಿಕೊಳ್ಳಲು ಸುತರಾಂ ಒಪ್ಪುತ್ತಿರಲಿಲ್ಲ. ಮುಖ್ಯಮಂತ್ರಿಯಾಗಿದ್ದಾಗ, ಅವರ ವಿಗ್ ಅನ್ನು ಒಂದು ರೈತ ಸಂಘಟನೆಯವರು ಎಳೆದುಹಾಕಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎಂದು ಇಂಟಲಿಜೆನ್ಸ್ ಮಾಹಿತಿ ನೀಡಲಾಗಿತ್ತು. ಇದಕ್ಕಾಗಿ ಕೃಷ್ಣ ಅವರಿಗೆ ಹೆಚ್ಚುವರಿ ರಕ್ಷಣೆ ನೀಡಲಾಗಿತ್ತು.
ಇದನ್ನೂ ಓದಿ: SM Krishna Death: ರಾಜ್‌ಕುಮಾರ್ ಅಪಹರಣ ಪ್ರಕರಣವನ್ನು ಎಸ್‌ಎಂ ಕೃಷ್ಣ ಎದುರಿಸಿದ್ದು ಹೇಗೆ?