ಬೆಂಗಳೂರು: ಇಂದು ಮುಂಜಾನೆ ವಿಧಿವಶರಾದ ಹಿರಿಯ ಮುತ್ಸದ್ದಿ ಎಸ್‌ಎಂ ಕೃಷ್ಣ (SM Krishna Death) ಅವರು ಮುಖ್ಯಮಂತ್ರಿಯಾಗಿದ್ದ ಅವಧಿ (1999-2004), ಕರ್ನಾಟಕದ ರಾಜಕೀಯದಲ್ಲಿ ಅತಿ ಹೆಚ್ಚಿನ ಏಳುಬೀಳು, ಬಿಕ್ಕಟ್ಟುಗಳನ್ನು ಕಂಡ ಅವಧಿ. ಭೀಕರ ಬರಗಾಲದಿಂದ ಹಿಡಿದು ಡಾ.ರಾಜ್‌ಕುಮಾರ್ (Dr Rajkumar) ಅಪಹರಣದವರೆಗೆ ಅವರು ಹಲವು ಸಂಕಷ್ಟಗಳನ್ನು ಎದುರಿಸಿ ಸೈ ಎನಿಸಿಕೊಂಡರು.
ವೀರಪ್ಪನ್ ಅಟ್ಟಹಾಸ
ಕರ್ನಾಟಕ ಇತಿಹಾಸದಲ್ಲಿ ಅತಿ ಹೆಚ್ಚು ಸಂಕಷ್ಟಗಳನ್ನು ಎದುರಿಸಿದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ. ಅಧಿಕಾರದ ಅವಧಿಯ ಉದ್ದಕ್ಕೂ ಒಂದಲ್ಲ ಒಂದು ಸವಾಲುಗಳು ಎದುರಾಗುತ್ತಲೇ ಇದ್ದವು. ಮುಖ್ಯವಾಗಿ ರಾಜ್‌ಕುಮಾರ್ ಅಪಹರಣ ಮೂರುವರೆ ತಿಂಗಳ ಕಾಲ ಅವರ ನಿದ್ರೆಯನ್ನು ಕಸಿದುಕೊಂಡಿತು. 2000ರ ಜುಲೈನಲ್ಲಿ ವೀರಪ್ಪನ್ ವರನಟರನ್ನು ಅಪಹರಿಸಿದ. ಅಲ್ಲಿಂದಾಚೆಗೆ 108 ದಿನಗಳ ಕಾಲ ಕೃಷ್ಣ ಮುಳ್ಳಿನ ಮೇಲೆ ಕುಳಿತಂತೆ ಚಡಪಡಿಸಬೇಕಾಯಿತು. ಇದು ಇಡೀ ರಾಜ್ಯವನ್ನೇ ಅಲ್ಲೋಲ ಕಲ್ಲೋಲಗೊಳಿಸಿತ್ತು. 108 ದಿನಗಳ ಕಾಲ ಹಿಂಸಾತ್ಮಕ ಪ್ರತಿಭಟನೆಗಳು, ಅಭಿಮಾನಿಗಳ ಆತ್ಮಹತ್ಯೆಗಳು, ಒತ್ತಡಗಳು ಇದ್ದವು. ರಾಜ್‌ಗೆ ಏನಾದರೂ ಹೆಚ್ಚುಕಡಿಮೆ ಆಗಿದ್ದರೆ ರಾಜ್ಯವೇ ಹೊತ್ತಿ ಉರಿಯುತ್ತಿತ್ತು. ಕಡೆಗೂ ನಾಜೂಕಾಗಿ ಈ ಮುಳ್ಳಿನ ಬಲೆಯಿಂದ ಬಿಡಿಸಿಕೊಳ್ಳಲು ಅವರು ಸಫಲರಾದರು.
ಮಾಜಿ ಸಚಿವ ನಾಗಪ್ಪ ಅಪಹರಣ
ರಾಜ್‌ಕುಮಾರ್ ಅವರನ್ನು ಅಪಹರಿಸಿದ ವೀರಪ್ಪನ್, 2002ರ ಆಗಸ್ಟ್‌ನಲ್ಲಿ ಮಾಜಿ ಸಚಿವ ನಾಗಪ್ಪ ಅವರನ್ನೂ ಅಪಹರಿಸಿದ. ಕೊಳ್ಳೇಗಾಲ, ಚಾಮರಾಜನಗರ ಪ್ರಾಂತ್ಯಗಳು ಉದ್ವಿಗ್ನತೆಗೊಳಗಾದವು. ಈ ಬಾರಿ ರಾಜ್‌ಕುಮಾರ್ ಪ್ರಕರಣದಂತೆ ಸುಖಾಂತ್ಯವಾಗಲಿಲ್ಲ. ಸಂಧಾನ ಸಫಲವಾಗಲಿಲ್ಲ. ನಾಲ್ಕು ತಿಂಗಳ ನಂತರ ಅವರ ಕೊಳೆತ ಶವ ಪತ್ತೆಯಾಯಿತು. ಡಾ. ರಾಜಕುಮಾರ್‌ರವರನ್ನು ಬಿಡಿಸಿಕೊಂಡು ಬರಲು ಮಾಡಿದ ಗಂಭೀರ ಪ್ರಯತ್ನವನ್ನು ನಾಗಪ್ಪನವರನ್ನು ಬಿಡಿಸಿಕೊಂಡು ಬರಲು ಎಸ್‌ಎಂ ಕೃಷ್ಣ ಮಾಡಲಿಲ್ಲವೆಂಬ ಆಪಾದನೆ ಬಂತು.
ವಿಠಲೇನಹಳ್ಳಿ ಗೋಲಿಬಾರ್
2001ರಲ್ಲಿ ನುಸಿಪೀಡೆಯಿಂದ ತೆಂಗು ಬೆಳೆ ಹಳ್ಳ ಹಿಡಿದಿತ್ತು. ಬದುಕುಳಿಯುವುದಕ್ಕಾಗಿ ರೈತರು ನೀರಾ ಇಳಿಸಲು ಶುರು ಮಾಡಿದ್ದರು. ರಾಜ್ಯಾದ್ಯಂತ ನೀರಾ ಇಳಿಸುವ ಚಳವಳಿ ಶುರುವಾಗಿತ್ತು. ನೀರಾ ಇಳಿಸುವಿಕೆ ಕಾನೂನುಬದ್ಧವಾಗಿರಲಿಲ್ಲ. ಹೀಗಾಗಿ ಸರ್ಕಾರ ಅದಕ್ಕೆ ತಡೆ ಒಡ್ಡಿತ್ತು. ಚನ್ನಪಟ್ಟಣದ ವಿಠಲೇನಹಳ್ಳಿಯಲ್ಲಿ ಅಕ್ಟೋಬರ್ 9ರಂದು ಪ್ರತಿಭಟನೆ ನಿರತರಾಗಿದ್ದ ರೈತರ ಮೇಲೆ ಗೋಲಿಬಾರ್ ನಡೆದು ಇಬ್ಬರು ರೈತರು ಮೃತಪಟ್ಟರು. ವಿಪಕ್ಷಗಳು ಇದನ್ನು ಅಸ್ತ್ರವಾಗಿ ಬಳಸಿ ಕೃಷ್ಣರನ್ನು ಹಿಂಡಿಹಾಕಿದರು.
ಕಾವೇರಿ ಬಿಕ್ಕಟ್ಟು
ಬರಗಾಲ ಬಂದಿತ್ತು. ಕಾವೇರಿಯಲ್ಲಿ ನೀರಿರಲಿಲ್ಲ. ತಮಿಳುನಾಡು ಹಠ ಹಿಡಿದಿತ್ತು. ನಾಡಿನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಸಂಧಾನ ಮಾಡಲು ಯತ್ನ ಮಾಡಿದರೂ ಸಫಲವಾಗಲಿಲ್ಲ. ಅಂತಿಮವಾಗಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಬೇಕಾಯಿತು. ನಡುವೆ ಬಂದ್‌ಗಳು, ಪ್ರತಿಭಟನೆಗಳು ನಡೆದವು.
ಭೀಕರ ಬರಗಾಲ
ಕೃಷ್ಣ ಅವರ ಅವಧಿಯಲ್ಲಿ ರಾಜ್ಯದಲ್ಲಿ ಮಳೆ ಕೈಕೊಟ್ಟು ಭೀಕರ ಬರಗಾಲ ಸೃಷ್ಟಿಯಾಗಿತ್ತು. ಕೆರೆ ಕಟ್ಟೆಗಳು, ಜಲಾಶಯಗಳು ನೀರಿಲ್ಲದೆ ಒಣಗಿ ನೀರಿಗಾಗಿ ಹಾಹಾಕಾರವೇ ಎದ್ದಿತ್ತು. ಅನಾವೃಷ್ಟಿಯಿಂದ ಕಂಗೆಟ್ಟಿದ್ದ ಕೃಷ್ಣ ಸರ್ಕಾರ ಜನರ ರಕ್ಷಣೆಗೆ ವೈಜ್ಞಾನಿಕವಾಗಿ ಮೋಡ ಬಿತ್ತನೆಯಂತಹ ಪ್ರಯತ್ನ ನಡೆಸಿ ಮಳೆ ತರಿಸುವ ವಿಫಲ ಪ್ರಯತ್ನ ನಡೆಸಿತ್ತು. ಈ ವೇಳೆ ತಮಿಳುನಾಡು ಕಾವೇರಿ ನೀರಿಗಾಗಿ ಒತ್ತಡ ಹಾಕಿತ್ತು. ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ತೀವ್ರ ಸ್ವರೂಪದ ಹೋರಾಟಗಳು ಕೂಡ ನಡೆದವು.
ಬರಗಾಲ, ಮೋಡ ಬಿತ್ತನೆ
ಕೃಷ್ಣ ಆಡಳಿತದ ವೇಳೆ ರಾಜ್ಯಕ್ಕೆ ಬರಗಾಲವು ಸಹ ಬಂದೊದಗಿತ್ತು. ಆ ವೇಳೆ ರಾಜ್ಯ ಜನರ ರಕ್ಷಣೆಗೆ ವೈಜ್ಞಾನಿಕವಾಗಿ ಮೋಡ ಬಿತ್ತನೆ ಮಾಡಿ ಮಳೆ ಬರಿಸಲು ಸಹ ಕೃಷ್ಣ ಅವರು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ಈ ಪ್ಲಾನ್ ಕೈಕೊಟ್ಟಿತು. ಈ ವೇಳೆ ತಮಿಳುನಾಡು ಕಾವೇರಿ ನೀರಿಗಾಗಿ ಕ್ಯಾತೆಯನ್ನು ಸಹ ತೆಗೆಯಿತು. ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ತೀವ್ರ ಸ್ವರೂಪದ ಹೋರಾಟಗಳು ಸಹ ಜರುಗಿದವು.
ಭೂ ದಾಖಲೆಗಳ ಡಿಜಿಟಲೀಕರಣ
ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಎಸ್ಎಂ ಕೃಷ್ಣ ಅವರು ಸಿಎಂ ಆಗಿದ್ದ ವೇಳೆ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿದ್ದು, ಸರಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ, ಯಶಸ್ವಿನಿ ಯೋಜನೆ, ಬೆಂ-ಮೈ ಹೆದ್ದಾರಿ, ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿ ಮಾಡಿದ್ದು, ಐಟಿ ಬಿಟಿಯಲ್ಲಿ ಬಹುದೊಡ್ಡ ಕ್ರಾಂತಿ ಸೇರಿದಂತೆ ಇನ್ನೂ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಾರೆ.
ಇದನ್ನೂ ಓದಿ: SM Krishna Death: ಎಸ್‌ಎಂ ಕೃಷ್ಣ ನಿಧನಕ್ಕೆ ರಾಜ್ಯದಲ್ಲಿ 3 ದಿನ ಶೋಕಾಚರಣೆ, ನಾಳೆ ಶಾಲೆ- ಕಾಲೇಜು- ಕಚೇರಿಗಳಿಗೆ ರಜೆ