Friday, 27th December 2024

Illegal Stay : ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದ ಐವರು ಮಹಿಳೆಯರು ಅರೆಸ್ಟ್

ಮುಂಬೈ: ಮಹಾರಾಷ್ಟ್ರದ(Maharashtra) ಥಾಣೆ(Thane) ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಐವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.(Illegal Stay) ಅಕ್ರಮ ವಾಸದ ಕುರಿತು ಮಾಹಿತಿ ಸಿಕ್ಕ ಬೆನ್ನಲ್ಲೇ ಪೊಲೀಸರು ಸೋಮವಾರ(ಡಿ.9) ಭಿವಂಡಿ ಪ್ರದೇಶದಲ್ಲಿನ ವಠಾರದ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿ ವಾಸವಿದ್ದ ಐವರು ಮಹಿಳೆಯರನ್ನು ಮನೆಯಿಂದಲೇ ಬಂಧಿಸಲಾಗಿದೆ.

36 ರಿಂದ 50 ರ ಮಧ್ಯ ವಯಸ್ಕ ಮಹಿಳೆಯರು ಭಾರತದಲ್ಲಿ ನೆಲೆಸಲು ಯಾವುದೇ ಮಾನ್ಯ ದಾಖಲೆಗಳನ್ನು ನೀಡಿರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿದೇಶಿ ಪ್ರಜೆಗಳ ಕಾಯಿದೆ (Foreign Nationals Act) ಮತ್ತು ಭಾರತೀಯ ಪಾಸ್‌ಪೋರ್ಟ್ ಕಾಯ್ದೆಯ(Indian Passport Act) ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಎಫ್‌ಐಆರ್(FIR) ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಈ ಮಹಿಳೆಯರಿಗೆ ಮನೆಯನ್ನು ಬಾಡಿಗೆ ನೀಡಿದ ವ್ಯಕ್ತಿಯ ವಿರುದ್ಧವೂ ಪ್ರಕರಣ ದಾಖಲಾಗಿದೆ.‌ ಮನೆ ಮಾಲೀಕನನ್ನು ಬಂಧಿಸುವ ಸಾಧ್ಯತೆಯಿದೆ. ಮಹಿಳೆಯರು ಯಾವುದೇ ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಯೇ ಅಥವಾ ಅವರು ಅಕ್ರಮ ವಲಸಿಗರ ಜಾಲದ ಭಾಗವಾಗಿದ್ದಾರೆಯೇ ಎಂದು ನಿರ್ಧರಿಸಲು ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೂವರು ಬಾಂಗ್ಲಾ ಪ್ರಜೆಗಳ ಬಂಧನ

ಕೆಲ ತಿಂಗಳುಗಳ ಹಿಂದೆಯಷ್ಟೇ ಹಾಸನ ನಗರದಲ್ಲಿ ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ನೆಲೆಸಿದ್ದ ಮೂವರು ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೆನ್ನನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಮಾಲ್ ಅಲಿ, ಫಾರೂಕ್ ಅಲಿ, ಅಲ್ಮಲ್ ಹೊಕ್ಯು ಎಂಬ ಹೆಸರಿನ ಮೂವರು ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿತ್ತು.

ಆರೋಪಿಗಳು ನಗರದ 80 ಅಡಿ ರಸ್ತೆಯ ಗದ್ದೆಹಳ್ಳದ ನಾಲ್ಕನೇ ಅಡ್ಡ ರಸ್ತೆಯಲ್ಲಿರುವ ಜುಬೇರ್ ಎಂಬುವವರ ಮನೆ ಕಟ್ಟಡ ಕಾಮಗಾರಿ ಕೆಲಸದಲ್ಲಿ ನಿರತರಾಗಿದ್ದರು. ಅದೇ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಒಬ್ಬ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರೆ, ಉಳಿದ ಇಬ್ಬರು ಗಾರೆ ಕೆಲಸ ಮಾಡಿಕೊಂಡಿದ್ದರು ಎಂಬ ಮಾಹಿತಿಯಿತ್ತು. ಲೊಕೇಶನ್ ಆಧರಿಸಿ ಪರಿಶೀಲನೆ ನಡೆಸಿದಾಗ 80 ಅಡಿ ರಸ್ತೆಯಲ್ಲಿರುವುದು ಪತ್ತೆಯಾಗಿತ್ತು. ಮೂವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಪೆನ್ನನ್ ಮೊಹಲ್ಲಾ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿ ನಂತರ ಎಫ್‌ಐಆ‌ರ್ ದಾಖಲಿಸಿದ್ದರು.

ಮೂವರು ಬಾಂಗ್ಲಾ ಪ್ರಜೆಗಳಾಗಿದ್ದು ಪಶ್ಚಿಮ ಬಂಗಾಳದ ವಿಳಾಸ ಹೊಂದಿರುವ ಆಧಾರ್ ಕಾರ್ಡ್ ಹೊಂದಿದ್ದರು. ಆದರೆ ಅದು ನಕಲಿ ಎಂಬುದು ದೃಢಪಟ್ಟಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದರು. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಬಳಿಕ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದೆಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ: Mansoor Ali Khan: ಡ್ರಗ್ಸ್‌ ಪ್ರಕರಣದಲ್ಲಿ ತಮಿಳು ನಟ ಮನ್ಸೂರ್‌ ಅಲಿ ಖಾನ್‌ ಪುತ್ರ ಅರೆಸ್ಟ್‌