ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದ ಬೊಮ್ಮಸಂದ್ರ ರೈಲು ನಿಲ್ದಾಣಕ್ಕೆ ತೈವಾನ್ ಕಂಪನಿ ಹೆಸರು ನಾಮಕರಣ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಇದಕ್ಕಾಗಿ ತೈವಾನ್‌ನ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಂಪನಿ ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ನಡುವೆ ಸೋಮವಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಮುಂದಿನ 30 ವರ್ಷದವರೆಗೆ ಈ ನಿಲ್ದಾಣಕ್ಕೆ ತನ್ನ ಹೆಸರನ್ನು ನಾಮಕರಣ ಮಾಡಿಕೊಳ್ಳುವ ಹಕ್ಕನ್ನು ಡೆಲ್ಟಾ ಕಂಪನಿ (Delta Electronics) ಪಡೆದಿದ್ದು, ಇದಕ್ಕಾಗಿ ಕಂಪನಿಯು ಬಿಎಂಆರ್‌ಸಿಎಲ್‌ಗೆ 65 ಕೋಟಿ ರೂ. ಪಾವತಿಸಿದೆ. ಹಳದಿ ಮಾರ್ಗದ ನಿಲ್ದಾಣಕ್ಕೆ ಹೆಸರಿಡುವುದಕ್ಕೆ ಮಾಡಿಕೊಂಡ ಮೂರನೇ ಒಪ್ಪಂದ ಇದಾಗಿದೆ. ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಸಹಿ ಹಾಕಿದರೆ, ಬಯೋಕಾನ್ ಫೌಂಡೇಶನ್ ಹೆಬ್ಬಗೋಡಿ ನಿಲ್ದಾಣಕ್ಕೆ ಒಪ್ಪಂದ ಮಾಡಿಕೊಂಡಿದೆ.
ಈ ಬಗ್ಗೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ್ ರಾವ್ ಪ್ರತಿಕ್ರಿಯಿಸಿ, ಇನ್ನೋವೇಟಿವ್ ಫೈನಾನ್ಸಿಂಗ್ ಮೆಕ್ಯಾನಿಸಂ ಯೋಜನೆಯಡಿ ಈ ಒಪ್ಪಂದವಾಗಿದ್ದು, ರಾಜ್ಯ ಸರ್ಕಾರದ ಅನುಮೋದನೆ ಪಡೆಯಲಾಗುವುದು. 10 ಕೋಟಿ ಮೊತ್ತವನ್ನು ಈಗಾಗಲೇ ಪಾವತಿಸಲಾಗಿದ್ದು, ಉಳಿದ ಮೊತ್ತ ರೂ. 55 ಕೋಟಿಯನ್ನು ಇಂದು ಪಾವತಿಸಲಾಗಿದೆ ಎಂದು ತಿಳಿಸಲಾಗಿದೆ. ಸುಸ್ಥಿರ ನಗರಾಭಿವೃದ್ಧಿ ಮತ್ತು ನಗರ ಸಾರಿಗೆಯ ಬೆಂಬಲಕ್ಕೆ ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮುಂದೆ ಬಂದಿರುವುದು ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಬೆಂಜಮಿನ್ ಲಿನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ನಿರಂಜನ್ ನಾಯಕ್ ಮಾತನಾಡಿ, ಹೊಸೂರು ರಸ್ತೆಯಲ್ಲಿ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕಾಗಿ ನಾವು ಬಿಎಂಆರ್‌ಸಿಎಲ್‌ನೊಂದಿಗೆ ಪಾಲುದಾರಿಕೆ ಹೊಂದಲು ಸಂತೋಷಪಡುತ್ತೇವೆ. ಈ ಯೋಜನೆಯು ಸಾರ್ವಜನಿಕ ಸಾರಿಗೆಯ ಹೆಚ್ಚಿನ ಬಳಕೆಯನ್ನು ಸಕ್ರಿಯಗೊಳಿಸುವ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Bomb Blast : ಗುರುಗ್ರಾಮದಲ್ಲಿ ಬಾಂಬ್ ಸ್ಪೋಟ, ಕಿಡಿಗೇಡಿ ಅರೆಸ್ಟ್- ಬಿಷ್ಣೋಯ್ ಗ್ಯಾಂಗ್ ಕೈವಾಡ ಶಂಕೆ
Namma Metro Red Line: ಬೆಂಗಳೂರಿಗರಿಗೆ ಸಿಹಿ ಸುದ್ದಿ, ನಮ್ಮ ಮೆಟ್ರೋ ರೆಡ್ ಲೈನ್‌ಗೆ ಸಂಪುಟ ಅಸ್ತು
ಬೆಂಗಳೂರು: ರಾಜಧಾನಿಯ (Bengaluru news) ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. 36.59 ಕಿಲೋಮೀಟರ್ ಉದ್ದದ ಸರ್ಜಾಪುರ-ಹೆಬ್ಬಾಳ ಮೆಟ್ರೋ ರೆಡ್ ಲೈನ್‌ಗೆ (Red Line) ರಾಜ್ಯ ಸಚಿವ ಸಂಪುಟ (Karnataka Cabinet) ಅನುಮೋದನೆ ನೀಡಿದೆ.
ನಮ್ಮ ಮೆಟ್ರೋ ಇದೀಗ ಬೆಂಗಳೂರಿನ ಜೀವನಾಡಿಗಳಲ್ಲಿ ಒಂದಾಗಿದೆ. ನಗರದ ಬಹುತೇಕ ಮಂದಿ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಮೆಟ್ರೋ ಅವಲಂಬಿಸಿದ್ದಾರೆ. ಮೆಟ್ರೋ ದಿನದಿಂದ ದಿನಕ್ಕೆ ಭಾರೀ ಜನಮನ್ನಣೆ ಪಡೆಯುತ್ತಿದೆ. ಪ್ರಯಾಣಿಕರ ಬೇಡಿಕೆ ಮೇರೆಗೆ ಮೆಟ್ರೋ ಜಾಲ ವಿಸ್ತರಣೆಯಾಗುತ್ತಲಿದೆ. ಇದೀಗ ರೆಡ್ ಲೈನ್ ಮೆಟ್ರೋ ಕಾಮಗಾರಿ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ರಲ್ಲಿ ಸರ್ಜಾಪುರ- ಹೆಬ್ಬಾಳದವರೆಗೆ ಉದ್ದೇಶಿಸಿರುವ 36.59 ಕಿಲೋ ಮೀಟರ್ ಉದ್ದದ ರೆಡ್ ಲೈನ್ ಮೆಟ್ರೋ ಕಾಮಗಾರಿ ಯೋಜನಾ ಪೂರ್ವ ಸಿದ್ಧತೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಸರ್ಜಾಪುರ-ಹೆಬ್ಬಾಳದವರೆಗೆ 36.59ಕಿ.ಮೀ ಉದ್ದದ ಮೆಟ್ರೋ ಮಾರ್ಗವನ್ನು 28,405 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. 17 ಮೆಟ್ರೋ ನಿಲ್ದಾಣ ಒಳಗೊಂಡ 22.14 ಕಿ.ಮೀ. ಎಲಿವೇಟೆಡ್ ಮಾರ್ಗ ಹಾಗೂ 11 ನಿಲ್ದಾಣ ಒಳಗೊಂಡ 14.45 ಕಿ.ಮೀ ಸುರಂಗ ಮಾರ್ಗದ ಕಾಮಗಾರಿ ನಡೆಯಲಿದೆ.
ಕೆಂಪು ಮಾರ್ಗದ ಪ್ರತಿ ಕಿಲೋ ಮೀಟರ್ ಮೆಟ್ರೋ ಮಾರ್ಗ ನಿರ್ಮಾಣಕ್ಕೆ 776 ಕೋಟಿ ರೂಪಾಯಿ ವೆಚ್ಚ ಆಗಲಿದೆ. ಈ ಹಂತ ಪೂರ್ಣ ಆದರೆ ನಗರದಲ್ಲಿ ಒಟ್ಟು 258 ಕಿಲೋ ಮೀಟರ್ ಮೆಟ್ರೋ ಮಾರ್ಗ ಸಿದ್ಧವಾಗಲಿದೆ. ಸಂಪುಟದ ಅನುಮೋದನೆ ಪಡೆದ ಈ ಯೋಜನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಆಗಲಿದೆ. ಮುಂದಿನ ಒಂದು ವರ್ಷದೊಳಗೆ ಕೇಂದ್ರದ ಅನುಮೋದನೆ ಸಿಗುವ ಸಾಧ್ಯತೆಯಿದೆ. 2026ರಲ್ಲಿ ಇದರ ಕಾಮಗಾರಿ ಆರಂಭ ಆಗಲಿದ್ದು, 2031ಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇಬ್ಬಲೂರು, ಅಗರ, ಡೈರಿ ಸರ್ಕಲ್, ಕೆಆರ್ ಸರ್ಕಲ್ ಹಾಗೂ ಹೆಬ್ಬಾಳದಲ್ಲಿ 5 ಇಂಟರ್ ಚೇಂಜ್ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಸರ್ಜಾಪುರ, ಕಾಡ ಅಗ್ರಹಾರ ರೋಡ್, ಸೋಮಪುರ, ದೊಮ್ಮಸಂದ್ರ, ಮುತ್ತನಲ್ಲೂರು ಕ್ರಾಸ್, ಕೊಡತಿ ಗೇಟ್, ಅಂಬೇಡ್ಕರ್ ನಗರ, ಕಾರ್ಮಲ್ ರಾಂ, ದೊಡ್ಡಕನ್ನೆಲಿಯಲ್ಲಿ ನಿಲ್ದಾಣಗಳಿರಲಿವೆ. ಕಲ್ಕೊಂಡರಹಳ್ಳಿ, ಬೆಳ್ಳಂದೂರು ಗೇಟ್, ಇಬ್ಬಲೂರು, ಅಗರ, ಜಕ್ಕಸಂದ್ರ, ಕೋರಮಂಗಲ 3rd ಬ್ಲಾಕ್, ಕೋರಮಂಗಲ ಎರಡನೇ ಬ್ಲಾಕ್, ಡೈರಿ ಸರ್ಕಲ್, ನಿಮ್ಹಾನ್ಸ್, ಶಾಂತಿನಗರ, ಟೌನ್ ಹಾಲ್, ಕೆಆರ್ ಸರ್ಕಲ್, ಬಸವೇಶ್ವರ ಸರ್ಕಲ್, ಬೆಂಗಳೂರು ಗಾಲ್ಫ್ ಕೋರ್ಸ್, ಮೇಕ್ರಿ ಸರ್ಕಲ್, ಪ್ಯಾಲೇಸ್ ಗುಟ್ಟಳ್ಳಿ, ವೆಟರ್ನರಿ ಕಾಲೇಜು, ಗಂಗಾನಗರ, ಹೆಬ್ಬಾಳದಲ್ಲಿ ನಿಲ್ದಾಣಗಳಿರಲಿವೆ.
ಇದನ್ನೂ ಓದಿ: Namma Metro: ನಾಗಸಂದ್ರ – ಮಾದಾವರ ನಮ್ಮ ಮೆಟ್ರೋ ಹಸಿರು ಮಾರ್ಗ ಸಂಚಾರಕ್ಕೆ ಮುಕ್ತ