Thursday, 26th December 2024

IND vs AUS: 3ನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ ಸೂಚಿಸಿದ ಹರ್ಭಜನ್‌ ಸಿಂಗ್‌!

IND vs AUS: Washington Sundar in place of R Ashwin- Harbhajan Singh's India's Predicted Playing XI for 3rd Test

ನವದೆಹಲಿ: ಆಸ್ಟ್ರೇಲಿಯಾ ವಿರುದ್ದ ಮುಂಬರುವ ಮೂರನೇ ಹಾಗೂ ಬ್ರಿಸ್ಬೇನ್‌ ಟೆಸ್ಟ್‌ (IND vs AUS) ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಬೇಕೆಂದು ಭಾರತೀಯ ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ ಸಲಹೆ ನೀಡಿದ್ದಾರೆ. ಅಲ್ಲದೆ, ನಾಯಕ ರೋಹಿತ್‌ ಶರ್ಮಾ ಅವರು ಆರನೇ ಕ್ರಮಾಂಕದಲ್ಲಿ ಮುಂದುವರಿಯಬೇಕು ಹಾಗೂ ಕೆಎಲ್‌ ರಾಹುಲ್‌ ಅವರೇ ಇನಿಂಗ್ಸ್‌ ಆರಂಭಿಸಬೇಕೆಂದು ತಿಳಿಸಿದ್ದಾರೆ.

ಎರಡನೇ ಮಗುವಿನ ಜನನದ ಕಾರಣ ರೋಹಿತ್‌ ಶರ್ಮಾ ಪರ್ತ್‌ ಟೆಸ್ಟ್‌ಗೆ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಜಸ್‌ಪ್ರೀತ್‌ ಬುಮ್ರಾ ಮುನ್ನಡೆಸಿದ್ದರು. ಅದರಂತೆ ಈ ಪಂದ್ಯದಲ್ಲಿ ಭಾರತ ತಂಡ 295 ರನ್‌ಗಳಿಂದ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ರೋಹಿತ್‌ ಶರ್ಮಾ ಸ್ಥಾನದಲ್ಲಿ ಕೆಎಲ್‌ ರಾಹುಲ್‌ ಇನಿಂಗ್ಸ್‌ ಆರಂಭಿಸಿದ್ದರು. ನಂತರ ಅಡಿಲೇಡ್‌ ಟೆಸ್ಟ್‌ಗೆ ಬಂದಿದ್ದ ರೋಹಿತ್‌ ಶರ್ಮಾ ಆರನೇ ಕ್ರಮಾಂಕದಲ್ಲಿ ಆಡಿ, ಕೆಎಲ್‌ ರಾಹುಲ್‌ಗೆ ಓಪನಿಂಗ್‌ ಬಿಟ್ಟು ಕೊಟ್ಟಿದ್ದರು.

ಡಿಸೆಂಬರ್‌ 14 ರಂದು ಬ್ರಿಸ್ಬೇನ್‌ನಲ್ಲಿ ಉಭಯ ತಂಡಗಳ ನಡುವೆ ಮೂರನೇ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಈ ಪಂದ್ಯದ ಪ್ಲೇಯಿಂಗ್‌ XI ಬಗ್ಗೆ ಮಾತನಾಡಿದ ಸ್ಪಿನ್‌ ದಂತಕತೆ ಹರ್ಭಜನ್‌ ಸಿಂಗ್‌, ಎರಡು ಬದಲಾವಣೆಯನ್ನು ಸೂಚಿಸಿದ್ದಾರೆ. ಆದರೆ, ಬ್ಯಾಟಿಂಗ್‌ ವಿಭಾಗದಲ್ಲಿ ಬದಲಾವಣೆ ಸೂಚಿಸದ ಅವರು, ಆಲ್‌ರೌಂಡ್‌ ಹಾಗೂ ವೇಗದ ಬೌಲಿಂಗ್‌ ವಿಭಾಗದಲ್ಲಿ ಬದಲಾವಣೆಯನ್ನು ಬಯಸಿದ್ದಾರೆ.

ರೋಹಿತ್‌ ಶರ್ಮಾ ಆರನೇ ಕ್ರಮಾಂಕದಲ್ಲಿ ಆಡಲಿ: ಭಜ್ಜಿ

“ಮೂರನೇ ಟೆಸ್ಟ್‌ ಪಂದ್ಯದಲ್ಲಿಯೂ ಬಹುಶಃ ಅದೇ ಬ್ಯಾಟಿಂಗ್‌ ಕ್ರಮಾಕವನ್ನು ಆಡಿಸಬಹುದು. ಏಕೆಂದರೆ ಪರ್ತ್‌ನಲ್ಲಿ ಇದು ನಮಗೆ ವರ್ಕ್‌ಔಟ್‌ ಆಗಿತ್ತು. ರೋಹಿತ್‌ ಶರ್ಮಾ ಕೂಡ ಶ್ರೇಷ್ಠ ಫಾರ್ಮ್‌ನಲಿ ಇಲ್ಲ. ಹಾಗಾಗಿ ಅವರು ಅಗ್ರ ಕ್ರಮಾಂಕದಲ್ಲಿ ಆಡುವುದು ಬೇಡ. ಯಶಸ್ವಿ ಜೈಸ್ವಾಲ್‌ ಅವರ ಜೊತೆಗೆ ಕಎಲ್‌ ರಾಹುಲ್‌ ಅವರೇ ಇನಿಂಗ್ಸ್‌ ಆರಂಭಿಸಲಿ ಹಾಗೂ ರೋಹಿತ್‌ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಆಡಲಿ,” ಎಂದು ಹರ್ಭಜನ್‌ ಸಿಂಗ್‌ ಸಲಹೆ ನೀಡಿದ್ದಾರೆ.

ಆರ್‌ ಅಶ್ವಿನ್‌ ಸ್ಥಾನಕ್ಕೆ ವಾಷಿಂಗ್ಟನ್‌ ಸುಂದರ್‌

“ಬ್ರಿಸ್ಬೇನ್‌ನಲ್ಲಿ ಆರ್‌ ಅಶ್ವಿನ್‌ ಅವರ ಸ್ಥಾನಕ್ಕೆ ವಾಷಿಂಗ್ಟನ್‌ ಸುಂದರ್‌ ಬರಬಹುದು. ಏಕೆಂದರೆ ಕಳೆದ ಪಂದ್ಯದಲ್ಲಿ ಆರ್‌ ಅಶ್ವಿನ್‌ ಹೆಚ್ಚು ಬೌಲ್‌ ಮಾಡಿರಲಿಲ್ಲ ಹಾಗೂ ಅವರು ವಿಶೇಷವಾಗಿ ಯಾವುದೇ ಅವಕಾಶವನ್ನು ಪಡೆದಿರಲಿಲ್ಲ. ಆದರೆ, ಮೊದಲನೇ ಟೆಸ್ಟ್‌ನಲ್ಲಿ ವಾಷಿಂಗ್ಟನ್‌ ಸುಂದರ್‌ ಎರಡು ವಿಕೆಟ್‌ ಕಿತ್ತಿದ್ದರು ಹಾಗೂ ಬ್ಯಾಟಿಂಗ್‌ನಲ್ಲಿ ಇವರು ಉತ್ತಮವಾಗಿದ್ದಾರೆ. ಹಾಗಾಗಿ ಇವರು ಆಡಬಹುದೆಂದು ನಾನು ಭಾವಿಸುತ್ತೇನೆ,” ಎಂದು ಮಾಜಿ ಸ್ಪಿನ್ನರ್‌ ತಿಳಿಸಿದ್ದಾರೆ.

ಪ್ರಸಿಧ್‌ ಕೃಷ್ಣಗೆ ಅವಕಾಶ

“ಫಾಸ್ಟ್‌ ಬೌಲಿಂಗ್‌ ವಿಭಾಗದಲ್ಲಿ ಒಂದು ಬದಲಾವಣೆಯನ್ನು ನಾವು ನೋಡಬಹುದು. ಹರ್ಷಿತ್‌ ರಾಣಾ ಅವರ ಸ್ಥಾನದಲ್ಲಿ ಪ್ರಸಿಧ್‌ ಕೃಷ್ಣ ಅವರು ಆಡಬಹುದು. ಅವರು ತುಂಬಾ ಎತ್ತರವಾಗಿದ್ದಾರೆ, ಇದರಿಂದ ಅವರು ಹೆಚ್ಚು ಬೌನ್ಸ್‌ ಮಾಡಬಹುದು. ಫಾಸ್ಟ್‌ ವಿಕೆಟ್‌ನಲ್ಲಿ ಅವರು ತಂಡಕ್ಕೆ ನೆರವು ನೀಡಬಹುದೆಂದು ನಾನು ಭಾವಿಸುತ್ತೇನೆಂದು,” ಎಂದು ಹರ್ಭಜನ್‌ ಸಿಂಗ್‌ ಹೇಳಿದ್ದಾರೆ.

ಮೂರನೇ ಟೆಸ್ಟ್‌ಗೆ ಹರ್ಭಜನ್‌ ಸಿಂಗ್‌ ಆಯ್ಕೆಯ ಭಾರತದ ಪ್ಲೇಯಿಂಗ್‌ XI

ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌ ರೋಹಿತ್‌ ಶರ್ಮಾ, ನಿತೀಶ್‌ ಕುಮಾರ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಪ್ರಸಿಧ್‌ ಕೃಷ್ಣ

ಈ ಸುದ್ದಿಯನ್ನು ಓದಿ: IND vs AUS: ಆಸ್ಟ್ರೇಲಿಯಾಗೆ ತೆರಳಲು ವೇಗಿ ಮೊಹಮ್ಮದ್‌ ಶಮಿ ಸಜ್ಜು! ವರದಿ