Monday, 23rd December 2024

SM Krishna Death: ಎಸ್‌ಎಂ ಕೃಷ್ಣ ಸಿಗರೇಟ್‌ ಸೇದುವಾಗ ತಂದೆಯ ಕೈಗೆ ಸಿಕ್ಕಿಬಿದ್ದ ಪ್ರಸಂಗ!

sm krishna12

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ (SM Krishna Death) ಅವರು ಕಾಲೇಜು ಓದುತ್ತಿದ್ದಾಗ ಒಮ್ಮೆ ಸಿಗರೇಟ್‌ ಸೇದುತ್ತಿರುವಾಗ ತಮ್ಮ ತಂದೆಗೆ ಸಿಕ್ಕಿಬಿದ್ದಿದ್ದರಂತೆ. ಟಿವಿ ಸಂದರ್ಶನವೊಂದರಲ್ಲಿ (Interview) ಅವರು ತಮ್ಮ ಈ ಅನುಭವವನ್ನು ಹಿಂದೆ ಹೇಳಿಕೊಂಡಿದ್ದರು.

ಕೃಷ್ಣ ಅವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ಕಲಾ ವಿಭಾಗದ ವಿದ್ಯಾರ್ಥಿಯಾಗಿ ಕಲಿಯುತ್ತಿದ್ದರು. ಅವರ ತಂದೆ ಮಂಡ್ಯ ಜಿಲ್ಲಾಡಳಿತದಲ್ಲಿ ಅಧಿಕಾರಿಯಾಗಿದ್ದರು. ಅಂತಿಮ ವರ್ಷದ ಡಿಗ್ರಿ ಕಲಿಯುತ್ತಿದ್ದ ಕೃಷ್ಣ ಹಾಗೂ ಅವರ ಕೆಲವು ಗೆಳೆಯರು ಕೆಆರ್‌ಎಸ್‌ ಅಣೆಕಟ್ಟಿಗೆ ಹೋಗೋಣ ಎಂದು ಮಾತನಾಡಿಕೊಂಡು ಅಲ್ಲಿಗೆ ಹೋದರು.

ಗೆಳೆಯರು ಒಟ್ಟಾಗಿ ಬಿಯರ್‌ ಸೇದುತ್ತ, ಸಿಗರೇಟ್‌ ಸೇದುತ್ತಿದ್ದರು. ಆಗ ಕೃಷ್ಣ ಬಿಯರ್‌ ಕುಡಿಯುತ್ತಿರಲಿಲ್ಲ, ಸಿಗರೇಟ್‌ ಮಾತ್ರ ಸೇದುತ್ತಿದ್ದರು. ಕೆಆರ್‌ಎಸ್‌ ಡ್ಯಾಮ್‌ನಲ್ಲಿ ಕೃಷ್ಣ ಅವರ ಒಬ್ಬ ಸೋದರಮಾವ ಸಿಬ್ಬಂದಿಯಾಗಿದ್ದರಂತೆ. ದುರದೃಷ್ಟವಶಾತ್‌, ಗೆಳೆಯರು ಪಾರ್ಟಿ ಮಾಡುತ್ತಿದ್ದಾಗಲೇ ಅಲ್ಲಿಗೆ ಇನ್‌ಸ್ಪೆಕ್ಷನ್‌ ನಡೆಸಲು ಕೃಷ್ಣ ಅವರ ತಂದೆ ಬಂದುಬಿಟ್ಟರಂತೆ. ಜೊತೆಗೆ ಮಾವನೂ ಇದ್ದರು. ಕೃಷ್ಣ ಅವರ ಕೈಯಲ್ಲಿದ್ದ ಸಿಗರೇಟನ್ನು ತಂದೆ ಗಮನಿಸಲಿಲ್ಲ, ಆದರೆ ಮಾವ ಗಮನಿಸಿದರು.

ಮುಂದೆ ಬಹುಶಃ ಕೃಷ್ಣ ಸಿಗರೇಟ್‌ ಸೇದುತ್ತಿದ್ದ ವಿಚಾರ ಕೃಷ್ಣರ ತಂದೆಗೆ ಮಾವ ಹೇಳಿದ್ದಿರಬೇಕು. ಮನೆಗೆ ಮರಳಿದ ಬಳಿಕ ಏನಾಗಲಿದೆಯೋ ಎಂದು ಕೃಷ್ಣ ಆತಂಕಗೊಂಡಿದ್ದರು. ಆದರೆ ತಂದೆ ಆ ವಿಚಾರ ಮಾತನಾಡಲಿಲ್ಲವಂತೆ. ಬದಲಾಗಿ, ತಾಯಿಯ ಬಳಿ, “ಅವನು ಪದವಿ ಕಲಿಯುತ್ತಿರುವ ಹುಡುಗ, ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯುವ ಪ್ರಬುದ್ಧತೆ ಬಂದಿರುತ್ತದೆ” ಎಂದು ಹೇಳಿದರಂತೆ. ಹೀಗೆ ತಮ್ಮ ತಂದೆ ಈ ಪ್ರಸಂಗವನ್ನು ಘನತೆಯಿಂದ ನಿಭಾಯಿಸಿದ್ದರು ಎಂದು ಕೃಷ್ಣ ನೆನೆದುಕೊಳ್ಳುತ್ತಾರೆ.

ಪ್ರೇಮಾ ಅವರನ್ನು ನೋಡಲು ಹೋದಾಗ ʼನಾನು ಜೈಲಿಗೆ ಹೋಗಬಹುದುʼ ಎಂದಿದ್ರಂತೆ ಕೃಷ್ಣ!

ಎಸ್‌ಎಂ ಕೃಷ್ಣ ಅವರದು ಪ್ರೇಮವಿವಾಹ ಆಗಿರಲಿಲ್ಲ, ಅವರದು ಅರೇಂಜ್ಡ್‌ ಮ್ಯಾರೇಜ್‌ ಆಗಿತ್ತು. ಪ್ರೇಮಾ ಅವರನ್ನು ಮೊದಲ ಬಾರಿ ನೋಡಲು ಹೋದಾಗ ಕೃಷ್ಣ ಅವರು “ನಾನು ಜೈಲಿಗೂ ಹೋಗುವ ಸಂಭವ ಇದೆ” ಎಂದಿದ್ದರಂತೆ. ಅದು ನಡೆದದ್ದು ಹೀಗೆ:

1966ರಲ್ಲಿ ಕೃಷ್ಣ- ಪ್ರೇಮಾ ಮದುವೆ ನಡೆಯಿತು. ಆಗ ಕೃಷ್ಣ ವಿರೋಧ ಪಕ್ಷದಲ್ಲಿದ್ದರು. ಪ್ರೇಮ ಅವರ ಊರು ತೀರ್ಥಹಳ್ಳಿಯ ಬಳಿಯ ಕುಡುಮಲ್ಲಿಗೆ. ಕಡಿದಾಳ್‌ ಮಂಜಪ್ಪ ಅವರ ಹೆಂಡತಿಯ ಅಣ್ಣ, ಪ್ರೇಮಾ ಅವರ ಅಕ್ಕನನ್ನು ಮದುವೆಯಾಗಿದ್ದರು. ಹೀಗೆ ಪ್ರೇಮಾ ಅವರ ಕುಟುಂಬ ಕಡಿದಾಳ್‌ ಮಂಜಪ್ಪನವರ ಕುಟುಂಬದೊಂದಿಗೆ ಸಂಬಂಧ ಹೊಂದಿತ್ತು. ಹೀಗೆ ಎರಡೂ ಕುಟುಂಬಗಳು ಗಂಡು- ಹೆಣ್ಣು ಮೀಟ್‌ ಮಾಡಿಸಲು ನಿರ್ಧರಿಸಿದರು.

ಪ್ರೇಮಾ ಅವರನ್ನು ನೋಡಲು ಕೃಷ್ಣ ಕುಟುಂಬ ಸಮೇತ ಕುಡುಮಲ್ಲಿಗೆಗೆ ಹೋದರು. ಪ್ರೇಮಾ ಅವರು ಅದಕ್ಕೂ ಮೊದಲು ಕೃಷ್ಣ ಅವರನ್ನು ನೋಡಿದ್ದರಂತೆ. ಇಬ್ಬರನ್ನು ಪ್ರತ್ಯೇಕವಾಗಿ ಮಾತನಾಡಲು ಕೂರಿಸಲಾಯಿತು. ಆಗ ಕೃಷ್ಣ, “ನಾನು ರಾಜಕೀಯದಲ್ಲಿದ್ದೇನೆ. ಹೀಗಾಗಿ ನನ್ನನ್ನು ಮದುವೆಯಾದರೆ ನಿನ್ನ ಬದುಕು ಹೂವಿನ ಹಾಸಿಗೆ ಆಗಲಾರದು. ನಾನು ವಿರೋಧ ಪಕ್ಷದಲ್ಲಿದ್ದೇನೆ. ಹೀಗಾಗಿ ಬಂಧನವೂ ಆಗುವ ಸಂಭವ ಇದೆ. ಇದಕ್ಕೆಲ್ಲ ತಯಾರಾಗಿದ್ದರೆ ಮುಂದುವರಿಯಬಹುದು” ಎಂದು ಕೃಷ್ಣ ಹೇಳಿದರಂತೆ.

ಪ್ರೇಮಾ ಅವರು ಇದಕ್ಕೆ ಸಿದ್ಧರಾಗಿದ್ದರಂತೆ. ಪ್ರೇಮಾ “ಓಕೆ” ಎಂದರಂತೆ. ಹೀಗೆ ಇಬ್ಬರಿಗೂ ಒಪ್ಪಿಗೆಯಾಗಿ ಮದುವೆಯೂ ಆಯಿತಂತೆ. “ಪ್ರೇಮಾ ಆರಂಭದಿಂದಲೂ ನನ್ನ ರಾಜಕೀಯ ಬದುಕಿಗೆ ಒತ್ತಾಸೆಯಾಗಿ ನಿಂತಿದ್ದವರು” ಎಂದು ಕೃಷ್ಣ ಒಂದೆಡೆ ನೆನದುಕೊಂಡಿದ್ದಾರೆ.

ಇದನ್ನೂ ಓದಿ: SM Krishna Death: ಎಸ್‌ಎಂ ಕೃಷ್ಣ ನಿಧನಕ್ಕೆ ರಾಜ್ಯದಲ್ಲಿ 3 ದಿನ ಶೋಕಾಚರಣೆ, ನಾಳೆ ಶಾಲೆ- ಕಾಲೇಜು- ಕಚೇರಿಗಳಿಗೆ ರಜೆ