Thursday, 26th December 2024

Pushpa 2 Collection: ಬಾಕ್ಸ್‌ ಆಫೀಸ್‌ನಲ್ಲಿ ತಗ್ಗದ ‘ಪುಷ್ಪ 2’ ಅಬ್ಬರ; ಶೀಘ್ರದಲ್ಲೇ 1 ಸಾವಿರ ಕೋಟಿ ರೂ. ಕ್ಲಬ್‌ಗೆ ಎಂಟ್ರಿ

Pushpa 2 Collection

ಹೈದರಾಬಾದ್‌: ಈ ವರ್ಷದ ಬಹು ನಿರೀಕ್ಷಿತ ಚಿತ್ರ ʼಪುಷ್ಪ 2ʼ (Pushpa 2) ಅದ್ಧೂರಿಯಾಗಿ ತೆರೆ ಕಂಡಿದೆ. ಟಾಲಿವುಡ್‌ನ ಈ ಪ್ಯಾನ್‌ ಇಂಡಿಯಾ ಸಿನಿಮಾ ವಿವಿಧ ಭಾಷೆಗಳಲ್ಲಿ ರಿಲೀಸ್‌ ಆಗಿ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಟಾಲಿವುಡ್‌ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun) ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಈ ಚಿತ್ರ ಈಗಾಗಲೇ ಹಲವು ರೆಕಾರ್ಡ್‌ ಬ್ರೇಕ್‌ ಮಾಡಿದ್ದು, 1 ಸಾವಿರ ಕೋಟಿ ರೂ. ಕ್ಲಬ್‌ ಸೇರುವ ತವಕದಲ್ಲಿದೆ.

ಹಾಲಿವುಡ್‌ನ ಬಹು ನಿರೀಕ್ಷಿತ ‘ಮೋನಾ 2’ (Moana 2) ಮತ್ತು ‘ವಿಕ್‌ಡ್‌’ (Wicked) ಚಿತ್ರಗಳು ರಿಲೀಸ್‌ ಆಗಿದ್ದರೂ, ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ‘ಪುಷ್ಪ 2’ ಅಬ್ಬರ ತಣ್ಣಗಾಗುವಂತೆ ಕಾಣಿಸುತ್ತಿಲ್ಲ. ಈ ಚಿತ್ರಗಳ ಪ್ರಬಲ ಪೈಪೋಟಿಯ ನಡುವೆಯೂ ಕೋಟಿ ಕೋಟಿ ರೂ. ಬಾಚುತ್ತಿದೆ. ಭಾರತ ಹೊರತು ಪಡಿಸಿ ವಿಶ್ವಾದ್ಯಂತ ʼಪುಷ್ಪ 2ʼ ಸುಮಾರು 200 ಕೋಟಿ ರೂ. ಗಳಿಸಿದೆ.

ಎಷ್ಟಾಯ್ತು ಕಲೆಕ್ಷನ್‌?

ವರದಿಯೊಂದರ ಪ್ರಕಾರ ಅಲ್ಲು ಅರ್ಜುನ್‌ ಚಿತ್ರ ಒಟ್ಟು 880.30 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಈ ಮೂಲಕ ಬಾಲಿವುಡ್‌ನ ಈ ವರ್ಷದ ಬ್ಲಾಕ್‌ ಬ್ಲಸ್ಟರ್‌ ʼಸ್ತ್ರೀ 2ʼ ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆ. ರಾಜ್‌ ಕುಮಾರ್‌ ರಾವ್‌-ಶ್ರದ್ಧಾ‌ ಕಪೂರ್‌ ನಟನೆಯ ಹಾರರ್‌ ಕಾಮಿಡಿʼಸ್ತ್ರೀ 2ʼ ವಿಶ್ವಾದ್ಯಂತ 874.58 ಕೋಟಿ ರೂ. ಗಳಿಸಿದೆ. ಇದೀಗ ʼಪುಷ್ಪ 2ʼ ಕಣ್ಣು ಈ ವರ್ಷದ ಜೂನ್‌ನಲ್ಲಿ ತೆರೆಕಂಡ ʼಕಲ್ಕಿ 2898 ಎಡಿʼ ಚಿತ್ರದ ಕಲೆಕ್ಷನ್‌ ಮೇಲೆ ನೆಟ್ಟಿದೆ. ನಾಗ್‌ ಅಶ್ವಿನ್‌ ನಿರ್ದೇಶನದ, ಪ್ರಭಾಸ್‌-ದೀಪಿಕಾ ಪಡುಕೋಣೆ-ಅಮಿತಾಭ್‌ ಬಚ್ಚನ್‌ ನಟನೆಯ ಈ ಪ್ಯಾನ್‌ ಇಂಡಿಯಾ ಸಿನಿಮಾ ವಿಶ್ವಾದ್ಯಂತ 1,052.5 ಕೋಟಿ ರೂ. ಬಾಚಿಕೊಂಡಿದೆ. ಆ ಮೂಲಕ ಈ ವರ್ಷದ ಅತೀ ಹೆಚ್ಚು ಗಳಿಸಿದ ಭಾರತೀಯ ಚಿತ್ರ ಎನಿಸಿಕೊಂಡಿದೆ. ಈ ದಾಖಲೆಯನ್ನು ʼಪುಷ್ಪ 2ʼ ಇನ್ನೇನು ಕೆಲವೇ ದಿನಗಳಲ್ಲಿ ಮುರಿಯುವ ಸಾಧ್ಯತೆ ಇದೆ.

ಭಾರತದಲ್ಲಿ ಗಳಿಸಿದ್ದೆಷ್ಟು?

ಇತ್ತ ಭಾರತೀಯ ಬಾಕ್ಸ್‌ ಆಫೀಸ್‌ನಲ್ಲಿಯೂ ಅಲ್ಲು ಅರ್ಜುನ್‌ ಚಿತ್ರ ಮ್ಯಾಜಿಕ್‌ ಮಾಡಿದೆ. ದೇಶದ ವಿವಿಧ ಭಾಗಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದ್ದು, 5 ದಿನಗಳಲ್ಲಿ 593.45 ಕೋಟಿ ರೂ. ದೋಚಿಕೊಂಡಿದೆ. ಮೊದಲ ಸೋಮವಾರವಾದ ಡಿ. 9ರಂದು ಬರೋಬ್ಬರಿ 64.45 ಕೋಟಿ ತನ್ನದಾಗಿಸಿಕೊಂಡಿದೆ. ಈ ಪೈಕಿ ಅತೀ ಹೆಚ್ಚು ಅಂದರೆ 46.4 ಕೋಟಿ ರೂ. ಹಿಂದಿ ಅವತರಣಿಕೆಯಿಂದ ಸಂಗ್ರಹವಾದರೆ ತೆಲುಗು ವರ್ಷನ್‌ 13.9 ಕೋಟಿ ರೂ. ಸಂಗ್ರಹಿಸಿದೆ ಎನ್ನಲಾಗಿದೆ. ಟಿಕೆಟ್‌ ಬೆಲೆ ಹೆಚ್ಚಾಗಿರುವುದು ಇಷ್ಟೊಂದು ಮಟ್ಟದಲ್ಲಿ ಕಲೆಕ್ಷನ್‌ ಮಾಡಲು ಮುಖ್ಯ ಕಾರಣ ಎಂದೂ ವಿಶ್ಲೇಷಿಸಲಾಗುತ್ತಿದೆ.

2021ರಲ್ಲಿ ಬಿಡುಗಡೆಯಾದ ʼಪುಷ್ಪʼ ಚಿತ್ರದ 2ನೇ ಭಾಗ ಇದಾಗಿದ್ದು, ಬಹುತೇಕ ಅದೇ ಕಲಾವಿದರು ಮುಂದುವರಿದಿದ್ದಾರೆ. ಅದುವರೆಗೆ ಸ್ಟೈಲಿಶ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಲ್ಲು ಅರ್ಜುನ್‌ ಈ ಚಿತ್ರದ ಮೂಲಕ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದರು. ಹಳ್ಳಿ ಹೈದನ ಪಾತ್ರದಲ್ಲಿ ಕಾಣಿಸಿಕೊಂಡು ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: Pushpa 2: ʻಕರ್ಣಿ ಸೇನೆ ನಿಮ್ಮ ಮನೆಗೆ ನುಗ್ಗಿ ಥಳಿಸುತ್ತೆʼ- ಪುಷ್ಪ 2 ನಿರ್ಮಾಪಕರಿಗೆ ಬೆದರಿಕೆ