Sunday, 22nd December 2024

Pushpa 2 Movie: ‘ಪುಷ್ಪ 2’ ಚಿತ್ರ ಪ್ರದರ್ಶನದ ವೇಳೆ ಮತ್ತೊಂದು ಅವಘಡ; ಥಿಯೇಟರ್‌ನಲ್ಲಿ ವ್ಯಕ್ತಿಯ ಶವ ಪತ್ತೆ

Pushpa 2 Movie

ಹೈದರಾಬಾದ್‌: ಸುಕುಮಾರ್‌-ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ‘ಪುಷ್ಪ 2’ ಚಿತ್ರ (Pushpa 2 Movie) ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ. ಈ ಮಧ್ಯೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗಂ ಎಂಬಲ್ಲಿ ‘ಪುಷ್ಪ 2’ ಚಿತ್ರ ಪ್ರದರ್ಶಿಸುತ್ತಿದ್ದ ಥಿಯೇಟರ್‌ನಲ್ಲಿ 35 ವರ್ಷದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಚಿತ್ರದ ಪ್ರೀಮಿಯರ್‌ ಶೋ ವೇಳೆ ಡಿ. 4ರಂದು ಹೈದರಾಬಾದ್‌ನಲ್ಲಿ ನಡೆದ ಕಾಲ್ತುಳಿತಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇದಾಗಿ ವಾರದೊಳಗೆ ಈ ಅನಾಹುತ ನಡೆದಿದೆ.

ಇಲ್ಲಿನ ಸ್ಥಳೀಯ ಥಿಯೇಟರ್‌ ಒಂದರಲ್ಲಿ ಸೋಮವಾರ (ಡಿ. 9) ಅಪರಾಹ್ನ ಆಯೋಜಿಸಿದ್ದ ‘ಪುಷ್ಪ 2’ ಚಿತ್ರದ ಮ್ಯಾಟ್ನಿ ಶೋ ವೇಳೆ ಈ ದುರಂತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಯಾಣದುರ್ಗಂನ ಡೆಪ್ಯುಟಿ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್‌ ರವಿ ಬಾಬು ಈ ಬಗ್ಗೆ ಮಾಹಿತಿ ನೀಡಿ, ʼʼಮೃತರನ್ನು ವಲಸೆ ಕಾರ್ಮಿಕ ಹರಿಜನ ಮಾಧನ್ನಪ್ಪ ಎಂದು ಗುರುತಿಸಲಾಗಿದೆ. ಸೋಮವಾರ 6 ಗಂಟೆಗೆ ಥಿಯೇಟರ್‌ ಶುಚಿಗೊಳಿಸುವ ವೇಳೆ ಹರಿಜನ ಮಾಧನ್ನಪ್ಪ ಮೃತಪಟ್ಟಿರುವುದು ಕಂಡು ಬಂತುʼʼ ಎಂದು ತಿಳಿಸಿದ್ದಾರೆ.

ಕಾರಣವೇನು?

ಹರಿಜನ ಮಾಧನ್ನಪ್ಪ ಸಾವಿಗೆ ಕಾರಣ ತಿಳಿದು ಬಂದಿಲ್ಲ ಎಂದು ಅವರು ವಿವರಿಸಿದ್ದಾರೆ. ಪೊಲೀಸರು ಮಾಹಿತಿ ನೀಡಿ ಹರಿಜನ ಮಾಧನ್ನಪ್ಪ 4 ಮಕ್ಕಳನ್ನು ಅಗಲಿದ್ದಾರೆ ಎಂದಿದ್ದಾರೆ. ʼʼಅವರು ಅಪರಾಹ್ನ 2.30ಕ್ಕೆ ಥಿಯೇಟರ್‌ ಒಳಗೆ ಪ್ರವೇಶಿಸಿರುವುದು ಕಂಡು ಬಂದಿದೆ. ಕುಡಿತದ ಅಭ್ಯಾಸ ಹೊಂದಿದ್ದ ಅವರು ಆಗಮಿಸುವ ವೇಳೆಗಾಗಲೇ ಪಾನಮತ್ತರಾಗಿದ್ದರು. ಬಹುಶಃ ಇದೇ ಕಾರಣಕ್ಕೆ ಅಸುನೀಗಿರಬೇಕುʼʼ ಎಂದು ವಿವರಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಆ್ಯಕ್ಟ್‌ನ 194 ಸೆಕ್ಷನ್‌ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾಲ್ತುಳಿತ ‍ಕೇಸ್: ಥಿಯೇಟರ್‌ ಮಾಲೀಕ ಸೇರಿ ಮೂವರು ಅರೆಸ್ಟ್

ʼಪುಷ್ಪ 2ʼ ಸಿನಿಮಾದ ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತಕ್ಕೊಳಗಾಗಿ ಓರ್ವ ಮಹಿಳೆ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಭಾನುವಾರ (ಡಿ. 8) ಚಿತ್ರಮಂದಿರದಲ್ಲಿ ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಲ್ಲಿ ಸಂಧ್ಯಾ ಥಿಯೇಟರ್ ಮಾಲೀಕ, ಥಿಯೇಟರ್ ಮ್ಯಾನೇಜರ್ ಹಾಗೂ ಲೋವರ್ ಬಾಲ್ಕನಿ-ಅಪ್ಪರ್ ಬಾಲ್ಕನಿಯ ಮ್ಯಾನೇಜರ್ ಸೇರಿದ್ದಾರೆ.

ಬಂಧಿತ ಮೂವರು ಆರೋಪಿಗಳು ಸರಿಯಾದ ಭದ್ರತಾ ಕ್ರಮಗಳ ವಿಷಯದಲ್ಲಿ ತೀರಾ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲು ಅರ್ಜುನ್ ಅವರ ಭದ್ರತಾ ತಂಡವನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ ರೇವತಿ ಅವರ ಪತಿ ಭಾಸ್ಕರ್ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗಿದೆ. ಭಾರತೀಯ ನ್ಯಾಯಾಂಗ ಸಂಹಿತೆಯ 3 (5) ಜೊತೆಗೆ ಸೆಕ್ಷನ್ 105 ಮತ್ತು 118 (1) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇನ್ನು ಮೂಲಗಳ ಪ್ರಕಾರ, ಥಿಯೇಟರ್ ಮ್ಯಾನೇಜರ್, ನಟ ಅಲ್ಲು ಅರ್ಜುನ್ ಮತ್ತು ಅವರ ಭದ್ರತಾ ತಂಡದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ವಲಯ ಡಿಸಿಪಿ ಅಕ್ಷಾಂಶ್ ಯಾದವ್ ಹೇಳಿದ್ದಾರೆ.‌

ಈ ಸುದ್ದಿಯನ್ನೂ ಓದಿ: Pushpa 2 movie: ಪುಷ್ಪ-2 ಸಿನಿಮಾ ನೋಡುವ ಆತುರ; ರೈಲಿಗೆ ಸಿಲುಕಿ ಅಭಿಮಾನಿ ಸಾವು