Monday, 23rd December 2024

Gita Jayanti 2024: ಏಕಾದಶಿಯಂದೇ ಗೀತಾ ಜಯಂತಿ ಆಚರಣೆ ಏಕೆ?

Bhagavd Gita
Aravinda Sigadal
  • ಅರವಿಂದ ಸಿಗದಾಳ್, ಮೇಲುಕೊಪ್ಪ

Gita Jayanti 2024: ಹಿಂದೂಗಳ (Hindu) ಧರ್ಮಗ್ರಂಥಗಳಾದ ಉಪನಿಷತ್ತುಗಳು ಮತ್ತು ವೇದಗಳ ಸಾರವೇ ಭಗವದ್ಗೀತೆ (Bhagavd Gita). ಭಗವದ್ಗೀತೆಯು ಮಹಾಭಾರತದ 18 ಪರ್ವಗಳಲ್ಲಿ ಒಂದಾದ ಭೀಷ್ಮ ಪರ್ವದ ಭಾಗವಾಗಿದೆ. ಭಗವದ್ಗೀತೆ ಎಂಬ ವೇದೋಪನಿಷತ್ತು ಜನಿಸಿದ್ದು ಮಾರ್ಗಶಿರ ಶುಕ್ಲ ಏಕಾದಶಿಯಂದು. ಭಗವದ್ಗೀತೆಯು ಪವಿತ್ರ ಮತ್ತು ಮಹತ್ವದ ಹಿಂದೂ ಗ್ರಂಥ.

ಮಾರ್ಗಶಿರ ಶುಕ್ಲ ಏಕಾದಶಿಯ ಈ ದಿನ (11.12.2024) ಭಗವದ್ಗೀತೆಯ ಜನ್ಮ ದಿನವಾಗಿದೆ. ಈ ದಿನವನ್ನು ಭಗವದ್ಗೀತಾ ಜಯಂತಿ ಎಂದೂ, ಗೀತಾ ಜಯಂತಿಯಂದೂ ಕರೆಯಲಾಗುತ್ತದೆ.

ಒಂದು ಲೆಕ್ಕಾಚಾರದಲ್ಲಿ, ಮಹಾಭಾರತದಲ್ಲಿನ ಕುರುಕ್ಷೇತ್ರ ಯುದ್ಧವು “ಮಾರ್ಗಶಿರ ಶುಕ್ಲ ಏಕಾದಶಿ” ಯಂದು ಪ್ರಾರಂಭವಾಯಿತು, ಅಂದರೆ ಹಿಂದೂ ಪಂಚಾಂಗ ಪದ್ದತಿಯ ತಿಂಗಳ ಮಾರ್ಗಶಿರದಲ್ಲಿ ಬೆಳೆಯುತ್ತಿರುವ ಚಂದ್ರನ 11 ನೇ ದಿನ. ಕುರುಕ್ಷೇತ್ರ ಯುದ್ಧದ ಪ್ರಾರಂಭದ ದಿನವೇ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದ್ದರಿಂದ ಈ ದಿನವನ್ನು ‘ಗೀತಾ ಜಯಂತಿ’ ಎಂದು ಕರೆಯಲಾಗುತ್ತದೆ.

ಇನ್ನೊಂದು ವಾದದ ಪ್ರಕಾರ ಕಾರ್ತಿಕ ಮಾಸದ ಕೊನೆಯ ದಿನವಾದ ಅಮಾವಾಸ್ಯೆಯಂದೇ ಯುದ್ಧ ಪ್ರಾರಂಭವಾಗಿದ್ದರೂ, ಅಲ್ಲಿಂದ ಹನ್ನೊಂದನೆಯ ದಿನದ ಏಕಾದಶಿಯಂದು (ಇಲ್ಲಿ ಮಧ್ಯದ ಒಂದು ತಿಥಿ ಉಪರಿ ಇರಬಹುದು!!?, 2024ರ ಈ ವರ್ಷವೂ ಅಷ್ಟಮಿ ಉಪರಿಯಿದ್ದಂತೆ) ಧೃತರಾಷ್ಟ್ರನ ಸಾರಥಿ ಮತ್ತು ಆಪ್ತ ಸಹಾಯಕ ಸಂಜಯನು ಯುದ್ಧದ ಸಮಗ್ರ ವರದಿಯನ್ನು ದಿವ್ಯದೃಷ್ಟಿಯಿಂದ ನೋಡಿ ಪಡೆದು, ಧೃತರಾಷ್ಟ್ರನಿಗೆ ವಿವರಿಸಲು ಪ್ರಾರಂಭಿಸಿದ್ದು ಈ ಏಕಾದಶಿಯಿಂದ. ಶ್ರೀಕೃಷ್ಣನು ಭಗವದ್ಗೀತೆಯನ್ನು ಅರ್ಜುನನಿಗೆ ಹನ್ನೊಂದು ದಿನಗಳ ಹಿಂದೆ ಅಮಾವಾಸ್ಯೆಯಂದೇ ಬೋಧಿಸಿದ್ದರೂ, ಭಗವದ್ಗೀತೆ ಸಂಜಯನ ಮೂಲಕ ಧೃತರಾಷ್ಟ್ರನಿಗೂ ಮತ್ತು ಪ್ರಪಂಚಕ್ಕೂ ದೊರೆತಿದ್ದು ಮಾರ್ಗಶಿರ ಏಕಾದಶಿಯ ದಿನವಾದ ಕಾರಣ, ಮಾರ್ಗಶಿರ ಶುಕ್ಲ ಏಕಾದಶಿಯನ್ನು ಗೀತಾ ಜಯಂತಿ ಎಂದು ಕರೆಯಲಾಗುತ್ತದೆ.

Bhagavd Gita

“ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ಮಾಮಕಾಃ ಪಾಂಡವಶ್ಚೈವ ಕಿಮಕುರ್ವತ ಸಂಜಯ?” ಅಂತ ಧೃತರಾಷ್ಟ್ರನ ಪ್ರಶ್ನೆಯೊಂದಿಗೆ ಪ್ರಾರಂಭವಾಗುವ ಭಗವದ್ಗೀತೆ, ಧೃತರಾಷ್ಟ್ರನ ಪ್ರಶ್ನೆ, ಸಂಜಯನ ಮಾತುಗಳು, ಸಂಜಯನ ಧ್ವನಿಯಲ್ಲೇ ದುರ್ಯೋಧನನ ಮಾತುಗಳು, ಜೊತೆಗೆ ಅರ್ಜುನ ಮತ್ತು ಶ್ರೀಕೃಷ್ಣನ ಪ್ರಶ್ನೋತ್ತರ ಸಂವಾದವನ್ನು, ವಿಷಯಗಳ ಅನುಕ್ರಮಣಿಕೆಗೆ ಅನುಗುಣವಾಗಿ, 700 ಶ್ಲೋಕಗಳನ್ನು 18 ಅಧ್ಯಾಯಗಳಾಗಿ ವಿಂಗಡಣೆ ಮಾಡಿ, ಮಹಾಭಾರತದ ಭೀಷ್ಮಪರ್ವ ಕಥಾಭಾಗದಲ್ಲಿ ಮುಖ್ಯಭಾಗವಾಗಿ ಸೇರಿಸಿದ್ದು ವೇದ ವ್ಯಾಸರು.

ಭಗವದ್ಗೀತೆಯಲ್ಲಿನ 700 ಶ್ಲೋಕಗಳಲ್ಲಿ, ಕೃಷ್ಣನ ಬೋಧನೆ 574 ಶ್ಲೋಕಗಳು
ಅರ್ಜುನನ ಪ್ರಶ್ನೆ 84 ಶ್ಲೋಕಗಳು
ಸಂಜಯನ ವಿವರಣೆ 41 ಶ್ಲೋಕಗಳು
ಮತ್ತು ಧೃತರಾಷ್ಟ್ರನ ಪ್ರಾರಂಭಿಕ ಪ್ರಶ್ನೆ 1.

ಸಂಜಯನ ವಿವರಣೆಯ 41 ಶ್ಲೋಕಗಳಲ್ಲಿ, 9 ಶ್ಲೋಕಗಳು ದುರ್ಯೋಧನ ಮಾತುಗಳಾಗಿದ್ದು, ದುರ್ಯೋಧನನು ಅಚಾರ್ಯ ದ್ರೋಣರಿಗೆ ಯುದ್ಧರಂಗವನ್ನು ಪರಿಚಯಿಸುವ ಮಾತುಗಳಾಗಿವೆ.

**

ಹಾಗಾದರೆ, ಭಗವದ್ಗೀತೆ ಕುರುಕ್ಷೇತ್ರ ಯುದ್ಧಕ್ಕೂ ಮೊದಲು ಇರಲಿಲ್ಲವೆ?

ಇತ್ತು.

ಇತ್ತು ಎನ್ನುವುದನ್ನು ಭಗವಂತನಾದ ಕೃಷ್ಣನು ಭಗವದ್ಗೀತೆಯಲ್ಲೇ ಹೇಳಿದ್ದಾನೆ. (ನಾಲ್ಕನೇ ಅಧ್ಯಾಯದ ಮೊದಲಿನ ಎರಡು ಶ್ಲೋಕಗಳು)

ಇಮಮ್ ವಿವಸ್ವತೇ ಯೋಗಮ್ ಪ್ರೋಕ್ತವಾನಹಮವ್ಯಯಮ್
ವಿವಸ್ವಾನ್ಮನವೇ ಪ್ರಾಹ ಮನುರಿಕ್ಷ್ವಾಕವೇ ‘ಬ್ರವೀತ್ (4.1)

ನಾನು ಈ ಶಾಶ್ವತವಾದ ಯೋಗ ವಿಜ್ಞಾನವನ್ನು (ಗೀತೆಯನ್ನು) ಸೂರ್ಯ ನಿಗೆ ತಿಳಿಸಿದೆ, ಅವನು ಅದನ್ನು ಮನುವಿಗೆ ವರ್ಗಾಯಿಸಿದನು ಮತ್ತು ಮನು ಅದನ್ನು ಇಕ್ಷ್ವಾಕುವಿಗೆ ಸೂಚಿಸಿದನು

ಏವಂ ಪರಮಪ್ರಾಪ್ತಮ್ ಇಮಂ ರಾಜರ್ಷಯೋ ವಿದು:
ಸ ಕಾಲೇನೇಹ ಮಹತಾ ಯೋಗೋ ನಷ್ಟ: ಪರಂತಪ (4.2)

“ಈ ಉತ್ತಮೋತ್ತಮ ವಿಜ್ಞಾನವು ಗುರು ಪರಂಪರೆಯಲ್ಲಿ ಬೆಳೆದು, ರಾಜರ್ಷಿಗಳು ತಮ್ಮ ಸಂಪ್ರದಾಯದಲ್ಲಿ ಮುಂದುವರಿಸಿದರು. ಆದರೆ, ಕಾಲಕ್ರಮದಲ್ಲಿ ಈ ಶಾಶ್ವತ ಗೀತ ವಿಜ್ಞಾನ ನಾಶವಾಗದೆ ಉಳಿದರೂ ನಷ್ಟವಾದಂತೆ ಕಾಣುತ್ತ, ಜನರಿಂದ ದೂರವಾಗಿದೆ”

**

ಜೀವನದ ಸತ್ಯ ದರ್ಶನ ರಹಸ್ಯದ ಈ ಭಗವದ್ಗೀತೆ, ಯುಗಾಂತರಗಳ ನಂತರ, ಹಿಂದಿನ ದ್ವಾಪರ ಯುಗ ಮುಗಿದು, ಕಲಿಯುಗ ಪ್ರಾರಂಭವಾಗುವ ಕಾಲದಲ್ಲಿ ಮತ್ತೆ ಭಗವಂತನಿಂದಲೇ ನರನಾದ ಅರ್ಜುನನಿಗೆ ಬೋಧಿಸಲ್ಪಟ್ಟು, ಸುಮಾರು 5126 ವರ್ಷಗಳ ನಂತರವೂ ಜನರನ್ನು ಸನಾತನ ಧರ್ಮದಲ್ಲಿ, ಸನ್ಮಾರ್ಗದಲ್ಲಿ ನೆಡೆಸುವ ಪವಿತ್ರ ಮಾರ್ಗದರ್ಶನವಾಗಿ, ಜೀವನದ ದಾರಿದೀಪವಾಗಿ ನಮ್ಮೊಟ್ಟಿಗಿದೆ.

ಬನ್ನಿ, ಗೀತಾ ಜಯಂತಿಯ ಈ ದಿನ, ಭಗವದ್ಗೀತೆಯ ಕೆಲವು ಅಧ್ಯಾಯಗಳನ್ನು ಪಠನ ಮಾಡುವುದರೊಂದಿಗೆ ಭಗವಂತನಾದ ಕೃಷ್ಣನ ನಮಿಸೋಣ.

ಓಂ ಶ್ರೀ ಕೃಷ್ಣಾರ್ಪಣಮಸ್ತು.