Monday, 23rd December 2024

SM Krishna Death: ಇಂದು ಸಂಜೆ ಸೋಮನಹಳ್ಳಿಯಲ್ಲಿ ಎಸ್‌ಎಂ ಕೃಷ್ಣ ಅಂತಿಮ ಸಂಸ್ಕಾರ, ಮದ್ದೂರು ಬಂದ್

SM Krishna Death

ಬೆಂಗಳೂರು: ನಿನ್ನೆ (ಮಂಗಳವಾರ) ಮುಂಜಾನೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (SM Krishna Death) ಅವರ ಅಂತ್ಯ ಸಂಸ್ಕಾರ (Funeral) ಅವರ ಹುಟ್ಟೂರು ಮಂಡ್ಯ (Mandya News) ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಬುಧವಾರ ಸಂಜೆ ನಡೆಯಲಿದೆ.

ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಕಾಫಿ ಡೇ ಹತ್ತಿರದ ಖಾಲಿ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಪುತ್ರ ಹಾಗೂ ಎಸ್.ಎಂ.ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗ್ಡೆ ಚಿತೆಗೆ ಅಗ್ನಿಸ್ಪರ್ಶ ಮಾಡಲಿದ್ದಾರೆ.

ವೇದಬ್ರಹ್ಮ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 15 ವೈದಿಕರ ತಂಡದಿಂದ ವಿಧಿ-ವಿಧಾನ ಕಾರ್ಯಗಳು ನಡೆಯಲಿವೆ. ಹಲವು ಯತಿಗಳು, ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಕೃಷ್ಣ ಅವರ ಅಂತ್ಯಕ್ರಿಯೆ ಜರುಗಲಿದೆ. ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಸೋಮನಹಳ್ಳಿಗೆ ಆಗಮಿಸಿ ಸಿದ್ಧತೆಗಳ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಬೆಳಗ್ಗೆ 8 ಗಂಟೆಯವರೆಗೆ ಸದಾಶಿವನಗರದಲ್ಲಿರುವ ಕೃಷ್ಣ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ನಂತರ ಮೃತದೇಹವನ್ನು ವಾಹನದ ಮೂಲಕ ಸೋಮನಹಳ್ಳಿಗೆ ತರಲಾಗುತ್ತದೆ. ಮಾರ್ಗಮಧ್ಯೆ ಕೆಂಗೇರಿ, ಬಿಡದಿ, ರಾಮನಗರ ಮತ್ತು ಚನ್ನಪಟ್ಟಣದ ಒಂದೊಂದು ಕಡೆ ಐದೈದು ನಿಮಿಷ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸಾರ್ವಜನಿಕರು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನ ಪಡೆಯಬಹುದು ಎಂದು ಹೇಳಿದರು.

ಹೆದ್ದಾರಿಯಲ್ಲೂ ಅಂತಿಮ ದರ್ಶನ

ಸಕಲ ಸರ್ಕಾರಿ ಗೌರವದೊಂದಿಗೆ, ಒಕ್ಕಲಿಗ ಸಂಪ್ರದಾಯದಂತೆ 3 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ. ಸಿಎಂ ಸಿದ್ದರಾಮಯ್ಯ, ಎಲ್ಲ ಸಚಿವರು ಮತ್ತು ಪಕ್ಷದ ಎಲ್ಲಾ ಶಾಸಕರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ನಾಯಕರು ಬರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಬುಧವಾರ ರಾಜ್ಯಾದ್ಯಂತ ರಜೆ ಘೋಷಿಸಲಾಗಿದೆ. ಸದನದಲ್ಲೂ ಸಂತಾಪ ಸೂಚಿಸಲಾಗಿದೆ. 3 ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಯಶವಂತ್ ವಿ. ಗುರುಕರ್ ಅವರು ಮಾತನಾಡಿ, ಬೆಂಗಳೂರಿನಿಂದ ಮದ್ದೂರಿಗೆ ತೆರಳುವ ಮಾರ್ಗಮಧ್ಯೆ ರಾಮನಗರ ಜಿಲ್ಲೆಯ ಬಿಡದಿ, ರಾಮನಗರ ಪಟ್ಟಣ, ಚನ್ನಪಟ್ಟಣದಲ್ಲಿ ಜಿಲ್ಲೆಯ ನಾಗರಿಕರು, ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆಯಲು ಜಿಲ್ಲಾಡಳಿತದಿಂದ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದರು,

ಎಸ್. ಎಂ. ಕೃಷ್ಣ ಅವರ ಪಾರ್ಥಿವ ಶರೀರವು ಬುಧವಾರ ಬೆಂಗಳೂರಿನ ಸದಾಶಿವ ನಗರದಿಂದ ಮಂಡ್ಯದ ಸೋಮನಹಳ್ಳಿಗೆ ಹಳೇ ಮೈಸೂರು ರಸ್ತೆಯಲ್ಲಿ ಹಾದುಹೋಗುತ್ತದೆ. ರಾಮನಗರ ಜಿಲ್ಲೆಯ ಬಿಡದಿಯ ಬಿ.ಜಿ.ಎಸ್ ಸರ್ಕಲ್‌ನಲ್ಲಿ ಅಂದು ಬೆಳಗ್ಗೆ 8.45 ರಿಂದ 9 ಗಂಟೆಗೆ, ರಾಮನಗರದ ಐಜೂರು ಸರ್ಕಲ್‌ನಲ್ಲಿ ಬೆಳಿಗ್ಗೆ 9.30ಕ್ಕೆ ಆಗಮಿಸುತ್ತದೆ. ನಂತರ ಚನ್ನಪಟ್ಟಣದ ಗಾಂಧಿ ಭವನ ಸರ್ಕಲ್‌ನಲ್ಲಿ ಬೆಳಗ್ಗೆ 10 ಗಂಟೆಯಿಂದ 10.15ಕ್ಕೆ ಆಗಮಿಸುತ್ತದೆ. ಈ ಸಂದರ್ಭದಲ್ಲಿ 15 ರಿಂದ 20 ನಿಮಿಷಗಳವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಇದಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇಂದು ಮದ್ದೂರು ಬಂದ್‌

ಮಾಜಿ ಮುಖ್ಯಮಂತ್ರಿ, ವಿದೇಶಾಂಗ ವ್ಯವಹಾರ ಖಾತೆಯ ಸಚಿವ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಇಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಬುಧವಾರ ಮದ್ದೂರು ಬಂದ್‌ಗೆ, ಸ್ವಯಂಪ್ರೇರಿತವಾಗಿ ಕರೆ ನೀಡಿವೆ. ಒಕ್ಕಲಿಗ ಸಂಘ, ದಲಿತ ಸಂಘಟನೆಗಳು, ಬಾರ್ ಎಂಡ್ ರೆಸ್ಟೋರೆಂಟ್ ಮಾಲೀಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲವನ್ನು ಸೂಚಿಸಿವೆ. ಬಂದ್ ಮೂಲಕ ಎಸ್.ಎಂ.ಕೃಷ್ಣ ಅವರಿಗೆ ಗೌರವ ಸಲ್ಲಿಸಲು ಸಂಘಟನೆಗಳು ನಿರ್ಧರಿಸಿವೆ.

ಇದನ್ನೂ ಓದಿ: SM Krishna Death: ಎಸ್‌ಎಂ ಕೃಷ್ಣಗೆ ಸವರಿ ಹೋದ ಪ್ರಧಾನಿ ಪದವಿ!