ರಾಜಬೀದಿ
ವಿನಾಯಕ ಮಠಪತಿ
ಸಾಕಷ್ಟು ವರ್ಷಗಳ ಹಿಂದೆ ಮಹಾರಾಷ್ಟ್ರದ ಶಾಸಕರೊಬ್ಬರು ಬಣ್ಣ ಬಣ್ಣದ ಶರ್ಟ್ ತೊಟ್ಟು, ಜಾಹೀರಾತು
ಹೋರ್ಡಿಂಗ್‌ನಲ್ಲಿ ಕಾಣಿಸಿಕೊಂಡಿದ್ದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿಂದು ಸದ್ದು ಮಾಡುತ್ತಿವೆ. ಅವರು ಮಾಜಿ ಪ್ರಧಾನಿ ವಾಜಪೇಯಿಯವರ ಹೃದಯ ಗೆದ್ದವರೂ ಹೌದು.
ಅವರೇ ಮಹಾರಾಷ್ಟ್ರದ ಇಂದಿನ ಸಿಎಂ ದೇವೇಂದ್ರ ಫಡ್ನವಿಸ್! ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಿ, ಅತಿಹೆಚ್ಚು ಸ್ಥಾನ ಗೆದ್ದ ಬಿಜೆಪಿಯ ದೇವೇಂದ್ರ Pಡ್ನವಿಸ್ ನಿರೀಕ್ಷೆಯಂತೆ ೩ನೇ ಅವಧಿಗೆ ಸಿಎಂ ಹುದ್ದೆ ಅಲಂಕರಿಸಿರುವುದು ನಿಮಗೆ ಗೊತ್ತಿರುವಂಥದ್ದೇ; ಆದರೆ, ಒಂದು ಕಾಲಕ್ಕೆ ಇವರು ಮಾಡೆಲಿಂಗ್‌ನಲ್ಲೂ ಸದ್ದು ಮಾಡಿದ್ದು ಸಾಕಷ್ಟು ಮಂದಿಗೆ ಗೊತ್ತಿರಲಾರದು.
1970ರಲ್ಲಿ ಜನಿಸಿದ ಫಡ್ನವಿಸ್ 27ನೇ ವಯಸ್ಸಿಗೇ ನಾಗಪುರ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್ ಹುದ್ದೆ
ಅಲಂಕರಿಸಿದ್ದರು. ನಂತರ 1999ರಲ್ಲಿ ನಾಗಪುರ ನೈಋತ್ಯ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದ ಇವರು ಈವರೆಗೂ ಸೋಲುಂಡಿಲ್ಲ. ಇಂಥ ಬಿಡುವಿರದ ರಾಜಕಾರಣದ ನಡುವೆಯೂ ಅವರು ಮಾಡೆಲಿಂಗ್‌ನಿಂದಲೂ ಜನಮನ ಸೆಳೆದಿ ದ್ದುಂಟು. ಅದು 2004ರ ಕಾಲಘಟ್ಟ. ಆಗಿನ್ನೂ ಶಾಸಕರಾಗಿದ್ದ ಫಡ್ನವಿಸ್ ಸಪೂರದೇಹಿಯೂ ಸುಂದರಾಂಗನೂ ಆಗಿದ್ದರು.
ಇದೇ ವೇಳೆಗೆ ಕಂಪನಿಯೊಂದು ತನ್ನ ಉಡುಪುಗಳ ಜಾಹೀರಾತಿಗೆ ರೂಪದರ್ಶಿಯ ಹುಡುಕಾಟದಲ್ಲಿತ್ತು. ಆಗ
ಛಾಯಾಗ್ರಾಹಕ ವಿವೇಕ ರಾನಡೆಯವರಿಗೆ ಹೊಳೆದಿದ್ದು ಫಡ್ನವಿಸ್ ಹೆಸರು.
ಶಾಸಕರಾಗಿದ್ದ ಫಡ್ನವಿಸ್ ಇದಕ್ಕೆ ಒಪ್ಪಲಿಲ್ಲ. ಆದರೆ ರಾನಡೆ ತಮ್ಮ ಗೆಳೆಯನ ನೆರವಿನಿಂದ ಫಡ್ನವಿಸ್‌ರನ್ನು ಕೊನೆಗೂ ಒಪ್ಪಿಸಿದರು. ಸುದೀರ್ಘವಾಗಿ ನಡೆದ ಫೋಟೋಶೂಟ್‌ನಲ್ಲಿ ವೈವಿಧ್ಯಮಯ ಬಟ್ಟೆಗಳನ್ನು ತೊಟ್ಟು ಫಡ್ನವಿಸ್ ಪೋಸ್ ಕೊಟ್ಟರು.
ಹೇಳಿ ಕೇಳಿ ನಾಗಪುರ ಶಾಸಕರಾಗಿದ್ದ ಫಡ್ನವಿಸ್‌ಗೆ ಸಹಜವಾಗೇ ಜನಪ್ರಿಯತೆಯೂ ಇತ್ತು. ಈ ಪಟ್ಟಣದ ೮ಕ್ಕೂ ಹೆಚ್ಚು ಜಾಹೀರಾತು ಹೋರ್ಡಿಂಗ್‌ಗಳಲ್ಲಿ ಜೀನ್ಸ್ ಪ್ಯಾಂಟ್, ಕೆಂಪು ಶರ್ಟ್ ತೊಟ್ಟ ಫಡ್ನವಿಸ್ʼರ ಫೋಟೋಗಳು ಜನರ ಗಮನ ಸೆಳೆದಿದ್ದವು. ವಾಡಿಕೆಯಂತೆ ಕುರ್ತಾ-ಪೈಜಾಮಾಧಾರಿಯಾಗಿ ಜನಸೇವೆಯಲ್ಲಿ ವ್ಯಸ್ತರಾಗಿರುತ್ತಿದ್ದ ರಾಜಕಾರಣಿಯೊಬ್ಬರು ಹೀಗೆ ಮಾಡೆಲಿಂಗ್‌ನಲ್ಲಿ ಮಿಂಚಿದ್ದು ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಅಂದು
ದೊಡ್ಡ ಸುದ್ದಿಯಾಗಿತ್ತು.
ಇದು ಅಟಲ್ ಬಿಹಾರಿ ವಾಜಪೇಯಿ ಅವರ ಗಮನಕ್ಕೂ ಬಂದು, ದೆಹಲಿಗೆ ಬರುವಂತೆ ಫಡ್ನವಿಸ್ ರಿಗೆ ಅವರು ಸೂಚಿಸಿದರು. ಅಂತೆಯೇ ತೆರಳಿದಾಗ ವಾಜಪೇಯಿಯವರು “ಆಯಿಯೇ… ಆಯಿಯೇ ಮಾಡೆಲ್ ಜೀ..” ಎಂದು ಸ್ವಾಗತಿಸಿದರಂತೆ! ತರುವಾಯದಲ್ಲಿ ದೆಹಲಿ ಹೈಕಮಾಂಡ್ ಮಟ್ಟದಲ್ಲೂ ಫಡ್ನವಿಸ್ ಆಕರ್ಷಣೀಯ ವ್ಯಕ್ತಿ
ಯಾಗಿ ಗುರುತಿಸಿಕೊಂಡಿದ್ದು ಇತಿಹಾಸ.
ತಾಳ್ಮೆ ಮತ್ತು ಸೈದ್ಧಾಂತಿಕ ಬದ್ಧತೆಯಿಟ್ಟುಕೊಂಡು ರಾಜಕಾರಣ ಮಾಡುವವರನ್ನು ಇಂದು ಹುಡುಕುವಂತಾಗಿದೆ. ಆದರೆ ರಾಜಕಾರಣದಲ್ಲಿ ಕಾಯುವಿಕೆಗೆ ಅದರದ್ದೇ ಆದ ಮಹತ್ವವಿದೆ. ‘ತಾಳಿದವನು ಬಾಳಿಯಾನು’ ಎನ್ನುವಂತೆ ಮಹಾರಾಷ್ಟ್ರ ರಾಜಕಾರಣದಲ್ಲಿ ತಾಳಿದಷ್ಟು ಬೆಳೆದು ನಿಂತವರಲ್ಲಿ ಎದ್ದು ಕಾಣುವ ಹೆಸರು ಫಡ್ನವಿಸ್. ಕೆಲವೇ ವರ್ಷಗಳ ಹಿಂದೆ ಮಹಾರಾಷ್ಟ್ರ ಬಿಜೆಪಿಯು ಕೇವಲ ನಿತಿನ್ ಗಡ್ಕರಿ ಮತ್ತು ದಿವಂಗತ ಗೋಪಿನಾಥ್ ಮುಂಡೆ ಅವರ ಹಿಡಿತದಲ್ಲಿತ್ತು. ಈ ಇಬ್ಬರು ಘಟಾನುಘಟಿಗಳ ನಡುವೆ ರಾಜ ಕೀಯ ಒಳತಿಕ್ಕಾಟಗಳು ಸಾಮಾನ್ಯವಾ ಗಿದ್ದವು. ಆದರೆ ಇವರಿಬ್ಬರ ನಡುವೆಯೂ ರಾಜ್ಯದ ಬಿಜೆಪಿ ನೇತಾರರಾಗಿ ಫಡ್ನವಿಸ್ ಹೊಮ್ಮಿದ್ದಕ್ಕೆ ಅವರ ಕಾಯುವಿಕೆ ಮತ್ತು ಪಕ್ಷನಿಷ್ಠೆಗಳೇ ಕಾರಣ ಎಂದರೆ ತಪ್ಪಾಗಲಾರದು.
ಫಡ್ನವಿಸ್‌ರ ತಂದೆ ಗಂಗಾಧರರಾವ್ ರನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ರಾಜಕೀಯ ಗುರುಸಮಾನರಾಗಿ ನೋಡುತ್ತಿದ್ದರು. ತರುವಾಯ ಫಡ್ನವಿಸ್‌ರು ಶಾಸಕರಾಗಿ ಆಯ್ಕೆಯಾಗುವುದರ ಹಿಂದೆ ಗಡ್ಕರಿಯವರ ಶ್ರಮವೂ ಸಾಕ ಷ್ಟಿತ್ತು. ನಂತರದಲ್ಲಿ ನಿರಂತರವಾಗಿ ವಿಧಾನಸಭಾ ಚುನಾವಣೆಗಳನ್ನು ಗೆಲ್ಲುತ್ತಾ ಬಂದ ಫಡ್ನವಿಸ್ 2014ರಲ್ಲಿ ಸಿಎಂ ಸ್ಥಾನ ವನ್ನು ಅಲಂಕರಿಸಿದರು; ಆದರೆ 2019ರ ಲ್ಲಾದ ರಾಜಕೀಯ ಏರಿಳಿತದಿಂದಾಗಿ ಈ ಸ್ಥಾನ ಕೈತಪ್ಪಿತ್ತು. 2022 ರಲ್ಲಿ ಮತ್ತೊಮ್ಮೆ ಈ ‘ಭಾಗ್ಯ’ ಎದುರೇ ಇದ್ದರೂ, ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗಿದ್ದರು ಫಡ್ನವಿಸ್.
ಒಮ್ಮೆ ‘ಸಿಎಂ’ ಎನಿಸಿಕೊಂಡಿದ್ದವರು, ಅನುಭವವೇ ಇರದ ವ್ಯಕ್ತಿಯ ಸಂಪುಟದಲ್ಲಿ ಪುನಃ ‘ಡಿಸಿಎಂ’ ಹುದ್ದೆ ಅಲಂಕರಿಸುವುದು ಸುಲಭಕ್ಕೆ ಜೀರ್ಣಿಸಿಕೊಳ್ಳುವ ಸಂಗತಿಯಲ್ಲ. ಆದರೆ, ಫಡ್ನವಿಸ್‌ರ ಪಕ್ಷನಿಷ್ಠೆ ಹಾಗೂ ಆ ವೇಳೆ ತೋರಿದ್ದ ಪ್ರಬುದ್ಧತೆಯಿಂದಾಗಿ ಈಗ ಮತ್ತೊಮ್ಮೆ ಸಿಎಂ ಗದ್ದುಗೆ ಅವರನ್ನು ಹುಡುಕಿಕೊಂಡು ಬಂದಿದೆ. ಪಕ್ಷನಿಷ್ಠೆ ಮತ್ತು ತಾಳ್ಮೆಯ ಜತೆಗೆ ಸಮಯಕ್ಕೆ ತಕ್ಕಂತೆ ನಿರ್ಧರಿಸುವ ಪ್ರಬುದ್ಧತೆಯಿದ್ದರೆ ರಾಜಕಾರಣಿಯೊಬ್ಬ ಏನೆಲ್ಲಾ ಪಡೆದುಕೊಳ್ಳಬಹುದು ಎಂಬುದಕ್ಕೆ ಫಡ್ನವಿಸ್ ಒಂದು ಉದಾಹರಣೆ.
ಆದರೆ ಈ ಮೇಲ್ಪಂಕ್ತಿಯು ಕರ್ನಾಟಕದ ‘ಕಮಲ’ ನಾಯಕರಿಗೆ ಈವರೆಗೂ ಅರ್ಥವಾಗದಿರುವುದು ವಿಪರ್ಯಾಸ.
ಕಳೆದ ಕೆಲ ವರ್ಷಗಳಿಂದ ‘ಮನೆಯೊಂದು ಮೂರು ಬಾಗಿಲು’ ಎಂಬಂತಾಗಿದೆ ಕರ್ನಾಟಕದ ಬಿಜೆಪಿಯ ಸ್ಥಿತಿ. ಇಲ್ಲಿನ
ಬಹುತೇಕರಿಗೆ ಅಧಿಕಾರ ಮತ್ತು ಪ್ರಚಾರದ ಹುಚ್ಚು ತಲೆಗೇರಿದ್ದು, ಪಕ್ಷನಿಷ್ಠೆ ಮತ್ತು ಸಂಯಮವನ್ನು, ಹಿರಿಯ ನಾಯಕರ ನಿರ್ಧಾರಕ್ಕೆ ಬದ್ಧವಾಗಿರುವ ಸ್ವಭಾವವನ್ನು ಇವರು ಕಳೆದುಕೊಂಡಿರುವುದು ಸ್ಪಷ್ಟ ಗೋಚರವಾಗಿದೆ.
ಇವರು ಫಡ್ನವಿಸ್ ರಿಂದ ಕಲಿಯುವುದು ಸಾಕಷ್ಟಿದೆ. ಆಗ ಮಾತ್ರವೇ, ತಮಗೇಕೆ ಫಡ್ನವಿಸ್‌ರಂತೆ ರಾಜಕೀಯದ ಉತ್ತುಂಗಕ್ಕೆ ಏರಲಾಗುತ್ತಿಲ್ಲ ಎಂಬ ಪ್ರಶ್ನೆಗೆ ಅವರಿಗೆ ಉತ್ತರ ಸಿಗುತ್ತದೆ!
ಮೂರನೇ ಅವಧಿಗೆ ಸಿಎಂ ಹುದ್ದೆ ಅಲಂಕರಿಸುವಾಗಿನ ಪ್ರಮಾಣವಚನದ ವೇಳೆ ಫಡ್ನವಿಸ್ ತಮ್ಮ ಹೆಸರಿನ ಜತೆಗೆ
ತಾಯಿಯ ಹೆಸರನ್ನೂ ಸೇರಿಸಿಕೊಂಡಿದ್ದು ಚರ್ಚೆಯ ವಿಷಯವಾಗಿದೆ. 2014 ಮತ್ತು 2019ರ ಪ್ರಮಾಣವಚನದ ವೇಳೆ ಅವರು ‘ನಾನು ದೇವೇಂದ್ರ ಗಂಗಾಧರರಾವ್ ಫಡ್ನವಿಸ್’ ಎಂದು ಉಲ್ಲೇಖಿಸಿದ್ದರು.
ಆದರೆ ಈ ಸಲ ಅವರು, ‘ನಾನು ದೇವೇಂದ್ರ ಸರಿತಾ ಗಂಗಾಧರರಾವ್ ಫಡ್ನವಿಸ್’ ಎಂದು ಹೇಳಿಕೊಂಡಿದ್ದು ಹಲವರ
ಹುಬ್ಬೇರಿಸಿತ್ತು. ಇದಕ್ಕೊಂದು ಕಾರಣವಿದೆ. ಏಕನಾಥ ಶಿಂಧೆ ಅವರು ಮಹಾರಾಷ್ಟ್ರದ ಹಿಂದಿನ ಸಿಎಂ ಆಗಿದ್ದಾಗ, ೨೦೨೪ರ ಮೇ ೧ರಿಂದ ಜನಿಸಿದ್ದ ಪ್ರತಿಯೊಂದು ಮಗುವಿನ ಹೆಸರಿನಲ್ಲಿ ತಂದೆಯ ಜತೆಗೆ ತಾಯಿಯ ಹೆಸರನ್ನೂ ಸೇರಿಸುವ ಮಹತ್ವದ ನಿರ್ಧಾರವನ್ನು ಅವರ ಸರಕಾರ ಕೈಗೊಂಡಿತ್ತು.
ಪ್ರತಿ ಮಗುವಿನ ಬೆಳವಣಿಗೆಯಲ್ಲಿ ತಂದೆಯಷ್ಟೇ ತಾಯಿಯ ಪಾತ್ರವೂ ಬಹುಮುಖ್ಯವಾಗಿರುತ್ತದೆ ಎಂಬುದು ಈ
ನಿರ್ಧಾರದ ಹಿಂದಿನ ಆಶಯವಾಗಿತ್ತು. ಈ ನಿಲುವನ್ನು ತಳೆದ ನಂತರದಲ್ಲಿ ಅಂದಿನ ಸಿಎಂ ಶಿಂಧೆ, ಡಿಸಿಎಂಗಳಾದ ಫಡ್ನವಿಸ್ ಮತ್ತು ಅಜಿತ್ ಪವಾರ್ ತಂತಮ್ಮ ಹೆಸರಿನ ಜತೆಗೆ ತಾಯಿಯ ಹೆಸರನ್ನೂ ಜೋಡಿಸಿಕೊಂಡಿದ್ದರು.ಹಾಗೆ ನೋಡಿದರೆ, ತಾಯಿ ಸರಿತಾ ಅವರು ಫಡ್ನವಿಸ್‌ರ ಮೊದಲ ರಾಜಕೀಯ ಗುರು ಎಂದರೆ ತಪ್ಪಾಗಲಾರದು.
ಆಕೆ ಫಡ್ನವಿಸ್ ಬಾಲಕನಾಗಿದ್ದಾಗ ಆರೆಸ್ಸೆಸ್‌ನ ಶಾಖೆಗಳಿಗೆ ಕೈಹಿಡಿದು ಕರೆದುಕೊಂಡು ಹೋಗುತ್ತಿದ್ದುದುಂಟು.
ಅಂದು ‘ಫಡ್ನವಿಸ್ ಕುಟುಂಬ’ ರಾಜಕೀಯವಾಗಿಯೂ ಗುರುತಿಸಿಕೊಂಡಿತ್ತು. ತಾಯಿ ಸರಿತಾ ಅವರು ವಿದರ್ಭ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕರಾಗಿದ್ದಾಗ, ತಂದೆ ಗಂಗಾಧರರಾವ್ ಅವರು ನಾಗಪುರದಿಂದ ಮಹಾ ರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ನಂತರ ಮಗ ದೇವೇಂದ್ರ ಫಡ್ನವಿಸ್ ಕಾರ್ಪೊರೇಟರ್ ಆಗಿ, 3ನೇ ಬಾರಿಗೆ ರಾಜ್ಯದ ಸಿಎಂ ಆಗುವವರೆಗೆ ಬೆಳೆದಿದ್ದರ ಹಿಂದೆ ತಾಯಿ ಸರಿತಾರ ಶ್ರಮದ ಪಾಲಿದೆ.
ಮಹಾರಾಷ್ಟ್ರ ರಾಜಕಾರಣದಲ್ಲಿನ ಮರಾಠಾ ಮತ್ತು ಹಿಂದುಳಿದ ವರ್ಗಗಳ ಜಾತಿ ಸಮೀಕರಣದ ನಡುವೆಯೂ ಬ್ರಾಹ್ಮಣ ಯುವಕನೊಬ್ಬ ತನ್ನ ಚಾಣಾಕ್ಷತೆಯಿಂದ ಯಾವ ಮಟ್ಟಕ್ಕೆ ಬೆಳೆದರು ಎಂಬುದಕ್ಕೆ ಫಡ್ನವಿಸ್ ಉತ್ತಮ ಉದಾಹರಣೆ.
(ಲೇಖಕರು ಪತ್ರಕರ್ತರು)
ಇದನ್ನೂ ಓದಿ: Vinayaka Mathapathy Column: ರಾಜಕೀಯ ಸುಳಿಯಲ್ಲಿ ಸಿಲುಕಿದ ಪ್ರತಿಮೆಗಳು