ಬೆಂಗಳೂರು: ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಅಂಗೀಕಾರವಾದ ಹಿನ್ನಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಶುಕ್ರವಾರ ತಮ್ಮ ನಿವಾಸದಲ್ಲಿ ಗೋ ಪೂಜೆ ಮಾಡಿದರು.
ಗೋವಿಗೆ ಶಾಲು ಹೊದೆಸಿ, ಅರಶಿನ ಕುಂಕುಮ ಹಚ್ಚಿ, ಹೂವುಗಳನ್ನು ಅರ್ಪಿಸಿ, ಗೋಗ್ರಾಸವನ್ನೂ ಸಮರ್ಪಿಸಿ ಪೂಜೆ ನಡೆಸಿದರು. ಸಿಎಂ ಅವರ ಪುತ್ರ ಬಿ.ವೈ ರಾಘವೇಂದ್ರ, ಬಿ.ವೈ.ವಿಜಯೇಂದ್ರ ಕೂಡ ಜತೆಗೆ ಇದ್ದು ಪೂಜೆಯಲ್ಲಿ ಭಾಗ ವಹಿಸಿದರು.
ಮಾತನಾಡಿದ ಸಿಎಂ, ಗೋವನ್ನು ನಾವು ಅತ್ಯಂತ ಭಕ್ತಿ ಭಾವದಿಂದ ಕಾಣು ತ್ತೇವೆ. ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ದೇವರ ಸ್ಥಾನವಿದೆ. ಅವುಗಳಿಗೆ ಪೂಜೆ ಸಲ್ಲಿಸುತ್ತೇವೆ. ಒಳಿತಿಗಾಗಿ ಗೋವುಗಳಿಗೇ ಮೊರೆ ಹೋಗುತ್ತೇವೆ. ಇವೆಲ್ಲದರ ನಡುವೆಯೂ ಗೋಹತ್ಯೆಯಂತಹ ಕೆಲವು ಅಪಚಾರಗಳಾಗುತ್ತಿದ್ದು, ಅದನ್ನು ತಡೆಯಲು ಗೋಹತ್ಯೆ ನಿಷೇಧದ ಕಾಯ್ದೆ ಜಾರಿಗೆ ತಂದಿದ್ದೇವೆ. ಅಗತ್ಯ ಇರುವ ಕಡೆ ನಾವು ಗೋಶಾಲೆ ನಿರ್ಮಿಸುತ್ತೇವೆ. ಪಕ್ಷದ ಪ್ರಣಾಳಿಕೆಯಲ್ಲೂ ಈ ಬಗ್ಗೆ ಭರವಸೆ ನೀಡಿದ್ದೆವು. ನಮ್ಮ ಸರ್ಕಾರ ಗೋರಕ್ಷಣೆಗೆ ಬದ್ಧವಾಗಿದೆ ಎಂದರು.
ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ನಮಗೆ ಅತ್ಯಂತ ಸಂತೋಷವಾಗಿದೆ. ದೇಶದಲ್ಲಿ ಗೋವನ್ನ ದೇವರೆಂದು ಪ್ರಾರ್ಥಿಸುತ್ತೇವೆಎಂದು ಹೇಳಿದರು.