Sunday, 15th December 2024

Vishweshwar Bhat Column: ಬಡಾವಣೆ ನಿರ್ಮಿಸಲು ಹೊರಟವರು ಭವ್ಯನಗರ ಕಟ್ಟಿದರು !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

ಕತಾರ್‌ಗೆ ಕೆಲ ವರ್ಷಗಳ ಹಿಂದೆ ಹೋದಾಗ, ಅಲ್ಲಿ ಅಂಥ ಒಂದು ನಗರವೇ ಇರಲಿಲ್ಲ. ಅಲ್ಲಿ ಅಂಥದೊಂದು ನಗರ
ತಲೆಯೆತ್ತಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ದೋಹಾ ನಗರದಿಂದ ಸುಮಾರು 25 ಕಿ.ಮೀ. ದೂರದಲ್ಲಿ ಅದಕ್ಕೆ ಪರ್ಯಾಯವಾಗಿ ಮತ್ತೊಂದು ನಗರದ ಕನಸನ್ನು ಯಾರು ಕಂಡಿದ್ದರೋ ಗೊತ್ತಿಲ್ಲ. ಆದರೆ ತರುವಾಯದ ಲ್ಲೊಮ್ಮೆ ಹೋದಾಗ ಲುಸೈಲ್ ಎಂಬ ಹೊಸ ನಗರಿಯೇ ಅಲ್ಲಿ ಎದ್ದು ನಿಂತಿತ್ತು. ರಾತ್ರಿ ಮಲಗುವಾಗ ಇರಲಿಲ್ಲ, ಬೆಳಗ್ಗೆ ಏಳುವಾಗ ಅಂಗಳದಲ್ಲಿ ಇಮಾರತು ಎದ್ದು ನಿಂತಂತಾಗಿತ್ತು. ದೋಹಾ ಬಿಟ್ಟರೆ ಲುಸೈಲ್, ಕತಾರಿನ ಎರಡನೇ ಅತಿದೊಡ್ಡ ನಗರವಾಗಿ ರೂಪುಗೊಂಡಿದೆ. ಇದು ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಾಗಿ
ರೂಪುಗೊಂಡ, ಫುಟ್ಬಾಲ್ ನೆಪದಲ್ಲಿ ಕತಾರ್ ಉಡುಗೊರೆಯಾಗಿ ನೀಡಿದ ನಗರ!

ಇದು ಅಂತಿಂಥ ನಗರವಲ್ಲ. ಅಲ್ಲಿ ಏನುಂಟು, ಏನಿಲ್ಲ? ಸುಮಾರು 38 ಚದರ ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ, ನಾಲ್ಕು ಲಕ್ಷ ಐವತ್ತು ಸಾವಿರ ಮಂದಿಗೆ ವಾಸ್ತವ್ಯ ಒದಗಿಸುವ, ಆಧುನಿಕ ನಗರವೊಂದು ಹೊಂದಿರಬಹುದಾದ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಹೊಸ ನಗರವನ್ನೇ ಸೃಷ್ಟಿಸಿಬಿಟ್ಟಿದೆ. ಚಿಕ್ಕಮಕ್ಕಳು ಆಟಿಕೆ ಸಾಮಾನುಗಳಲ್ಲಿ ಮನೆ ಕಟ್ಟುವ ರೀತಿಯಲ್ಲಿ, ಹೊಸ ನಗರವನ್ನು ಕಟ್ಟಿದ್ದಾರೆ ಅಂತ ಹೇಳಿದರೆ ಅತಿಶಯೋಕ್ತಿ ಎನಿಸಬಹುದು. ಆದರೆ
ಖುzಗಿ ಲುಸೈಲ್ ನಗರದಲ್ಲಿ ನಡೆದಾಡಿದಾಗ, ಅದು ಅತಿರಂಜಿತ ಎಂದು ಅನಿಸುವುದಿಲ್ಲ.

ಕಾರಣ ಈ ನಗರ, ಪಂಚತಾರಾ ಹೋಟೆಲುಗಳು, ಮರಿನಾಸ್, ಐಲ್ಯಾಂಡ್ ರೆಸಾರ್ಟ್ಸ್, ಕಮರ್ಷಿಯಲ್ ಡಿಸ್ಟ್ರಿಕ್ಟ್,
ಲಕ್ಸುರಿ ಶಾಪಿಂಗ್ ಮಾಲ, ಗಾಲ್ ಕೋರ್ಸ್, ಮನರಂಜನಾ ತಾಣಗಳು, ವಾಟರ್ ಸ್ಪೋರ್ಟ್ಸ್, ಸ್ಟೇಡಿಯಂ, ವಾಟರ್ ಫ್ರಂಟ್ ರೆಸಿಡೆನ್ಷಿಯಲ್ ಡಿಸ್ಟ್ರಿಕ್ಟ್, ಮೆಡಿಕಲ್ ಮತ್ತು ಎಜುಕೇಶನ್ ಡಿಸ್ಟ್ರಿಕ್ಟ್,‌ ಬುಲೆವಾರ್ಡ್ ಕಮರ್ಷಿಯಲ್, ಮರೀನಾ ಡಿಸ್ಟ್ರಿಕ್ಟ್, ಕ್ವೆಟೈಫಾನ್ ಐಲ್ಯಾಂಡ್, ಬಹುರಾಷ್ಟ್ರೀಯ ಕಂಪನಿಗಳಿಗಾಗಿ (ಅಲ್ ಖರೇಯೇಜ) ನಾಲ್ಕು ಟವರುಗಳಲ್ಲಿ ಆಫೀಸು, ಮಳಿಗೆಗಳು, ಫಾರ್ಮುಲಾ ಒನ್ ರೇಸ್ ಟ್ರ್ಯಾಕ್, ವಿಶಾಲ ರಸ್ತೆಗಳು, ಮೇಲುಸೇತುವೆಗಳು, ಭೂಮಿಯೊಳಗಿನ ರೈಲುಮಾರ್ಗ ಹೀಗೆ‌ ಎಲ್ಲವನ್ನೂ ಒಳಗೊಂಡಿದೆ.

ಅಲ್ಲಲ್ಲಿ ಉದ್ಯಾನ, ಪಾಕೆಟ್ ಗಾರ್ಡನ್, ಕಾರಂಜಿ, ಸಣ್ಣ ತೊರೆ, ಗಿಡ-ಮರಗಳು. ಲುಸೈಲ್ ಅನ್ನು ಭವಿಷ್ಯತ್ತಿನ ನಗರವೆಂದು ಬಣ್ಣಿಸಲಾಗಿದೆ. ಇದನ್ನು ಬೇರೆ ಯಾವ ಆಧುನಿಕ ನಗರದೊಂದಿಗೆ ಹೋಲಿಸಲಾಗದು. ಕಾರಣ ಇದಕ್ಕಿಂತ ಲೇಟೆ ಆದ ನಗರ ಇನ್ನೊಂದಿಲ್ಲ. ಇದಕ್ಕೆ ಹೋಲಿಸಿದರೆ ಉಳಿದವೆಲ್ಲವೂ ಹಳತು. ಇದು ಹೊಸ ಜಗತ್ತಿನ
ಎ ಮಜಾ, ಮಹಾ, ಮಜಕೂರುಗಳ ಗರ್ಭದಲ್ಲಿ ಅರಳಿದ ಸುಂದರ, ದಷ್ಟಪುಷ್ಟ ನವಜಾತ ಶಿಶು!

ಲುಸೈಲ್ ನಗರವನ್ನು ಎಲ್ಲಿ ಅಭಿವೃದ್ಧಿಪಡಿಸಲಾಗಿದೆಯೋ, ಆ ಪ್ರದೇಶದಲ್ಲಿ ‘ಅಲ್ ವಸೈಲ್’ ಎಂಬ ಹೆಸರಿನ ಹೂವುಗಳು ಬೆಳೆಯುತ್ತಿದ್ದವಂತೆ. ಆ ಹೆಸರನ್ನೇ ಮೂಲವಾಗಿಟ್ಟುಕೊಂಡು‌ ‘ಲುಸೈಲ್’ ಎಂದು ನಾಮಕರಣ ಮಾಡಲಾಗಿದೆ. ಸುಮಾರು 45 ಶತಕೋಟಿ ಡಾಲರ್ ಹಣದಲ್ಲಿ ನಿರ್ಮಿಸಿರುವ ಲುಸೈಲ್ ನಗರವು 19 ಡಿಸ್ಟ್ರಿಕ್ಟ್‌ ಗಳನ್ನು ಒಳಗೊಂಡಿದೆ. ಅಲ್ಲಿ 22 ಬೇರೆ ಬ್ರಾಂಡ್‌ಗಳಿಗೆ‌ ಸೇರಿದ ಪಂಚತಾರಾ, ಸಪ್ತತಾರಾ ಹೋಟೆಲುಗಳನ್ನು ನಿರ್ಮಿಸಲಾಗಿದೆ. ಎರಡು ಗಾಲ ಕೋರ್ಸುಗಳಿವೆ.

ಇದರ ಜತೆಗೆ ಥೀಮ್ ಪಾರ್ಕ್, ಲಗೂನ್, ಬೀಚ್ ಕ್ಲಬ್, ಟೂರಿ ಸೆಂಟರ್, ಮಾನವ ನಿರ್ಮಿತ ದ್ವೀಪ, ಎರಡು ಮರಿನಾಗಳು. ಪ್ಯಾರಿಸ್‌ನಲ್ಲಿ 14ನೇ ಲೂಯಿ ನಿರ್ಮಿಸಿದ ಭವ್ಯ ‘ಪ್ಲೇಸ್ ವೆಂಡೋಮ’ ಮಾದರಿಯಲ್ಲಿ ಕಟ್ಟಿದ ಶಾಪಿಂಗ್ ಕಾಂಪ್ಲೆಕ್ಸ್‌ ಮತ್ತು ರಫೆಲ್ಸ್ ಹೋಟೆಲ್, ಲುಸೈಲ್ ನಗರದ ಪ್ರಮುಖ‌ ಆಕರ್ಷಣೆಗಳಂದು. ಪ್ಲೇಸ್ ವೆಂಡೋಮ್ ಮಾದರಿಯಲ್ಲಿ ಕಟ್ಟಿದ ಶಾಪಿಂಗ್ ಕಾಂಪ್ಲೆಕ್ಸ್ ಗೆ ಅದೇ ಹೆಸರನ್ನು ಇಡಲಾಗಿದೆ. ‌

ಈ ಕಾಂಪ್ಲೆಕ್ಸ್ ನ ಕಾರಿಡಾರುಗಳು ಹೆದ್ದಾರಿಯಷ್ಟು ಅಗಲವಾಗಿವೆ.‌ ಜಗತ್ತಿನ ಪ್ರಮುಖ ಮತ್ತು ಐಷಾರಾಮಿ ಬ್ರಾಂಡ್ ಶೋರೂಮುಗಳನ್ನು ಹೊಂದಿರುವ ಪ್ಲೇಸ್ ವೆಂಡೋಮ, ಯಾರಿಗಾದರೂ ಇಲ್ಲಿ ತನಕ ನೋಡಿರದ, ನೂತನ ಶಾಪಿಂಗ್ ಅನುಭವವನ್ನು ನೀಡಬಲ್ಲುದು. ‘ಲಕ್ಸುರಿ’ ಪದಕ್ಕೆ ಹೊಸ ಭಾಷ್ಯ ಬರೆಯುವ ತಾಣವಿದು. ಲುಸೈಲ್ ನಗರ
‘ಲುಸೈಲ್ ಐಕಾನ್’ ಎಂಬ ಸ್ಟೇಡಿಯಂ ಅನ್ನು ಸಹ ಹೊಂದಿದೆ.

ಇದು 2022ರಲ್ಲಿ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಪ್ರಮುಖ ಆಕರ್ಷಣೆಯೂ ಆಗಿತ್ತು. 90000 ಆಸನಗಳ ಸಾಮರ್ಥ್ಯ ಹೊಂದಿರುವ ಈ ಕ್ರೀಡಾಂಗಣ, ವಿಶ್ವದ ಅತ್ಯಾಧುನಿಕ ವ್ಯವಸ್ಥೆ, ಸೌಲಭ್ಯಗಳನ್ನು ಹೊಂದಿದೆ. ಕೇವಲ 16 ನಿಮಿಷಗಳಲ್ಲಿ ಇಡೀ ಸ್ಟೇಡಿಯಂ ಅನ್ನು ಬಯಸಿದ ತಾಪಮಾನಕ್ಕೆ ನಿಯಂತ್ರಿಸಬಹುದಾದ ‘ಸುವಿಧಾ’ ಇಲ್ಲಿದೆ. ಬಂಗಾರದ ಬೋಗುಣಿಯನ್ನು ಹೋಲುವ ಈ ಕ್ರೀಡಾಂಗಣವು ಆಧುನಿಕ ವಿನ್ಯಾಸ ಮತ್ತು ನಿರ್ಮಿತಿಗೆ ಮಾದರಿಯಾಗಿದೆ.

ಲುಸೈಲ್ ನಗರದ ಬುಲೆವಾರ್ಡ್‌ನಲ್ಲಿ ನಡೆಯುವಾಗ ಎಂದರಲ್ಲಿ ಕಾರಂಜಿ, ನೃತ್ಯ ಕಾರಂಜಿಗಳನ್ನು ಅಳವಡಿಸಿ
ರುವುದು ಪ್ರಮುಖ ಆಕರ್ಷಣೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ ಹಿತವಾದ ತಂಪು ಗಾಳಿ ಕೆಳಗಿನಿಂದ ತೂರಿಬಂದ
ಅನುಭವ. ರಸ್ತೆಯೊಳಗಿನಿಂದಲೇ ತಂಪು ಗಾಳಿ (ಎ.ಸಿ.) ಹೊರಸೂಸುವ ವ್ಯವಸ್ಥೆ ಕಂಡು ಕೇಳರಿಯದ್ದು. ಸಾಮಾನ್ಯ ವಾಗಿ ರಸ್ತೆಯ ಇಕ್ಕೆಲಗಳಲ್ಲಿ ಕಲ್ಲು ಅಥವಾ ಮರದ ಬೆಂಚುಗಳನ್ನು ಹಾಕುವುದು ಸಾಮಾನ್ಯ. ಆದರೆ ಲುಸೈಲ್ ನಗರದಲ್ಲಿ ಎಡೆ ಮೆತ್ತನೆಯ ಕುಶನ್ ಹಾಸು.

ಲುಸೈಲ್ ಕತೆ ಅಂದ್ರೆ, ಫಿಫಾ ಫುಟ್ಬಾಲ್‌ಗಾಗಿ ಬಡಾವಣೆ ನಿರ್ಮಿಸಲು ಹೊರಟವರು, ಒಂದು ಭವ್ಯ ನಗರವನ್ನೇ ಕಟ್ಟಿದ ಕತೆಯಾದೀತು. ಮುಂಬರುವ ದಿನಗಳಲ್ಲಿ ಲುಸೈಲ್ ನಗರ ಜಗತ್ತಿನ ಪ್ರಮುಖ ಆಕರ್ಷಣೆಯಾಗುವುದರಲ್ಲಿ ಸಂದೇಹವಿಲ್ಲ.

‘ಲೇ ಝಟನ್’ ಬರ್ಗರ್
ಸಾಮಾನ್ಯವಾಗಿ ಯಾವುದಾದರೂ ಫ್ರೆಂಚ್ ಕೆಫೆಗೆ ಹೋದರೆ, ಮೆನು ಕಾರ್ಡಿನಲ್ಲಿ ‘ಲೇ ಜ್ಲ್ಯಾಟನ್’ ಅಥವಾ ‘ಲೇ ಝಟನ್’ ಎಂಬ ಹೆಸರಿನ ಬರ್ಗರ್ ನಿಮ್ಮ ಗಮನ ಸೆಳೆಯುತ್ತದೆ. ಅನೇಕರಿಗೆ ಈ ಬರ್ಗರ್ ಇಷ್ಟವಾದರೂ, ಆರ್ಡರ್ ಮಾಡುವುದಿಲ್ಲ. ಅದರಲ್ಲೂ ಒಬ್ಬರೇ ಕೆಫೆಗೆ ಹೋದಾಗಂತೂ ಆರ್ಡರ್ ಮಾಡುವುದಿಲ್ಲ. ಇಬ್ಬರು ಹೋದಾಗ ಇದನ್ನು ಹಂಚಿ (ಶೇರ್) ಸೇವಿಸುವುದುಂಟು. ಕಾರಣ ಅದರ ಗಾತ್ರ. ಈ ಬರ್ಗರ್ ಅನ್ನು ಒಬ್ಬ ಫುಟ್ಬಾಲ್ ಆಟಗಾರನ ನೆನಪಿನಲ್ಲಿ ಮಾಡಲಾಗಿದೆ. ಆತನ ಹೆಸರು ಝಟನ್ ಇಬ್ರಾಹಿಮೊವಿಕ್. ಆತ ಸೆರಿ ಎಲ್ಲಾ ಕ್ಲಬ್, ಏಸಿ ಮಿಲಾನ್ ಮತ್ತು ಸ್ವೀಡನ್ ರಾಷ್ಟ್ರೀಯ ತಂಡದ ಪ್ರಮುಖ (ಸ್ಟ್ರೈಕರ್) ಆಟಗಾರರಬ್ಬ.

ಈತನಿಗೆ ಗಾಳಿಯಲ್ಲಿ ಚೆಂಡನ್ನು‌ ಒದೆಯುವ ಸ್ಟೈಲಿಶ್ ಆಟಗಾರ ಎಂಬ ಅಭಿದಾನ ಬೇರೆ. ನಿರಂತರವಾಗಿ ೨೦ ವರ್ಷ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸ್ವೀಡನ್ ಅನ್ನು ಪ್ರತಿನಿಧಿಸಿದ ಈತ, ಪ್ರಥಮ ದರ್ಜೆ ಆಟದಲ್ಲಿ ೫೭೦ ಗೋಲು ಗಳನ್ನು ಹೊಡೆದ ಕೀರ್ತಿಗೆ ಪಾತ್ರನಾಗಿದ್ದಾನೆ. ಈತನಿಗೆ – ಮತ್ತು ಜರ್ಮನಿಯಲ್ಲೂ ಅಪಾರ ಅಭಿಮಾನಿಗಳಿzರೆ. ಫ್ರೆಂಚ್ ಕೆಫೆ ಈತನ ಹೆಸರಿನಲ್ಲಿ ಬರ್ಗರ್ ಸಿದ್ಧಪಡಿಸಿರುವುದೇ ಅದಕ್ಕೆ ನಿದರ್ಶನ. ಈ ಬರ್ಗರ್ ಅನ್ನು ಬಾಯಲ್ಲಿ ಇಟ್ಟುಕೊಳ್ಳಲು ಆಗದಷ್ಟು ದೊಡ್ಡದು. ಇದಕ್ಕಾಗಿ ೬೦೦ ಗ್ರಾಂ ಬೀಫನ್ನು ಬಳಸಲಾಗುತ್ತದೆ. ಇದರ ಜತೆಗೆ ಬೇಕನ್,
ಚೆಡ್ಡರ್ ಚೀಸ್, ಎಮೆಂಟಲ್ ಮತ್ತು ಈರುಳ್ಳಿ ಹೊಂದಿರುವ ಆ ಬರ್ಗರ್‌ಗೆ ವಿಶೇಷ ಬನ್ ಬೇಕು. ಮೆನು ಕಾರ್ಡಿನಲ್ಲಿ ಈ ಬರ್ಗರ್ ಕೆಳಗೆ, Even Chuck Norris couldn’t fit it in his mouth ಎಂದು ಬರೆಯಲಾಗಿದೆ. (ಚಕ್ ನೋರಿಸ್ ಅಂದ್ರೆ ರೋಬೊ ಸಿನಿಮಾದ ರಜನಿಕಾಂತ್ ಇದ್ದ ಹಾಗೆ!).

ಗಿಬ್ಸ್ ಹೇಳಿದ ಆ ಮಾತು
ನೀವು ಲಾನ್ಸ್ ಗಿಬ್ಸ್ ಹೆಸರನ್ನು ಕೇಳಿರಬಹುದು ಎಂದು ಭಾವಿಸುತ್ತೇನೆ. ಇವರು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಯಶಸ್ವಿ‌ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರು. ನನ್ನ ತಲೆಮಾರಿನವರು ಕ್ರಿಕೆಟ್ ಮ್ಯಾಚುಗಳನ್ನು ನೋಡಲು ಆರಂಭಿಸಿ ದಾಗ, ಗಿಬ್ಸ್ ನಿವೃತ್ತರಾಗಿದ್ದರು. ಆದರೂ ನಾನು ಗಿಬ್ಸ್ ಆಟವನ್ನು ನೋಡಿದ್ದಕ್ಕಿಂತ, ಅವರ ಬಗ್ಗೆ ಓದಿದ್ದು, ಕೇಳಿದ್ದು ಜಾಸ್ತಿ. ಟೆಸ್ಟ್ ಪಂದ್ಯಗಳಲ್ಲಿ 309 ವಿಕೆಟ್ ಪಡೆದ ಗಿಬ್ಸ್, ರನ್ ಕೊಡುವುದರಲ್ಲಿ ಅತ್ಯಂತ ಜುಗ್ಗ. ಅವರು ಒಂದು ಓವರ್‌ಗೆ‌ ಕೊಟ್ಟಿದ್ದು ಸರಾಸರಿ ಎರಡು ರನ್ ಮಾತ್ರ. ಟೆಸ್ಟ್ ಮ್ಯಾಚಿನಲ್ಲಿ 18 ಸಲ ಐದು ಮತ್ತು ಹೆಚ್ಚು ವಿಕೆಟ್ ಹಾಗೂ 2 ಸಲ ಹತ್ತು ವಿಕೆಟ್ ಪಡೆದವರು.

ಅವರು ಕೊನೆಯ ಪಂದ್ಯ ಆಡಿದ್ದು 1975-76 ರಲ್ಲಿ. 79 ಟೆಸ್ಟ್ ಪಂದ್ಯಗಳಲ್ಲಿ ಆಡಿದ ಗಿಬ್ಸ್, ಒಂದು ಸಲವೂ ಅರ್ಧ ಶತಕ ಹೊಡೆದವರಲ್ಲ. ಅಷ್ಟು ಪಂದ್ಯಗಳಿಂದ ಅವರು ಹೊಡೆದಿದ್ದು ಐನೂರಕ್ಕಿಂತ ಕಡಿಮೆ ರನ್. ಇಂದಿಗೂ ವೆಸ್ಟ್ ಇಂಡೀಸ್‌ನ ಸಾರ್ವಕಾಲಿಕ ಐವತ್ತು ಕ್ರಿಕೆಟರುಗಳಲ್ಲಿ ಅವರ ಹೆಸರಿದೆ. ‌

ಐಸಿಸಿ ‘ಕ್ರಿಕೆಟ್ ಹಾಲ್ ಆಫ್‌ ಫೇ‌ಮ್’ನಲ್ಲಿ ಗಿಬ್ಸ್ ಕೂಡ ಸೇರಿದ್ದಾರೆ. ಗಿಬ್ಸ್ ೩೦೦ ವಿಕೆಟ್ ಗಳಿಸಿದ ಅತ್ಯಂತ ಹಿರಿಯ ಆಟಗಾರರಬ್ಬರು. ಕೊನೆಯ‌ ಪಂದ್ಯ ಆಡುವಾಗ ಅವರಿಗೆ 41 ವರ್ಷ ಆಗಿತ್ತು. ವೆಸ್ಟ್ ಇಂಡೀಸಿನ ಖ್ಯಾತ ಆಟಗಾರ ಮತ್ತು ಒಂದು ಕಾಲದ ಕ್ಯಾಪ್ಟನ್ ಕ್ಲೈವ್‌ ಲಾಯ್ಡ ಮೇಲೆ ಗಿಬ್ಸ್ ಪ್ರಭಾವ ಇದೆ. ಗಿಬ್ಸ್ ಅವರು ಲಾಯ್ಡರ ಚಿಕ್ಕಪ್ಪ. ಅವರಿಬ್ಬರೂ ಒಟ್ಟಿಗೆ ವೆ ಇಂಡೀಸ್ ತಂಡದಲ್ಲಿ ಆಡಿದವರು. ನಿವೃತ್ತಿಯ ಬಳಿಕ ಗಿಬ್ಸ್ ಅಮೆರಿಕಕ್ಕೆ ಹೋಗಿ
ನೆಲೆಸಿದರು. ಆದರೆ ಅಲ್ಲಿ ಕ್ರಿಕೆಟ್ ಬಿಟ್ಟು ಜೀವಿಸಲು ಅವರಿಗೆ ಸಾಧ್ಯವಾಗಲೇ ಇಲ್ಲ. ತಾಯ್ನಾಡಿಗೆ ಬಂದು ಕೆಲಕಾಲ, ವೆಸ್ಟ್ ಇಂಡೀಸ್ ತಂಡದ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದರು.‌

ಕೆಲ ವರ್ಷದ ಹಿಂದೆ ನಾನು ಲಂಡನ್‌ಗೆ ಹೋದಾಗ, ಕ್ರಿಕೆಟ್ ತವರು ಎಂದು ಕರೆಯಿಸಿಕೊಂಡ ಲಾರ್ಡ್ಸ್ ಮೈದಾನಕ್ಕೆ
ಹೋಗಿದ್ದೆ. ಅಲ್ಲಿನ ಮ್ಯೂಸಿಯಂನಲ್ಲಿ ಖ್ಯಾತ ಕ್ರಿಕೆಟ್ ಆಟಗಾರರ ಪ್ರಸಿದ್ಧವಾದ ಒಂದು ವಾಕ್ಯ ಅಥವಾ‌ ಹೇಳಿಕೆ ಯನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಗಿಬ್ಸ್ ಹೇಳಿದ ಒಂದು ಪುಟ್ಟ ವಾಕ್ಯ ನನ್ನ ಗಮನ ಸೆಳೆಯಿತು. ಅದು- Any time the West Indies lose, I cry.

ಇದು ಎಲ್ಲರಿಗೂ ಸಲ್ಲುವ ಕಸುಬು

ಒಂದು ಕಾಲವಿತ್ತು, ಕ್ಷೌರಿಕರೇ ತಲೆಗೂದಲು ಕತ್ತರಿಸುತ್ತಿದ್ದರು. ಈಗ ಹಾಗೇನಿಲ್ಲ, ಯಾರು ಬೇಕಾದರೂ ಆ ಉದ್ಯೋಗವನ್ನು ಮಾಡಬಹುದು. ತಲೆಗೂದಲು ಕತ್ತರಿಸುವುದನ್ನು ಕಲಿಸುವ ಅನೇಕ ಸಂಸ್ಥೆಗಳು ಹುಟ್ಟಿಕೊಂಡಿವೆ. ಅಲ್ಲಿ ಕಲಿತವರು ತಾವೇ ಕ್ಷೌರದ ಅಂಗಡಿಗಳನ್ನು ತೆರೆಯುತ್ತಿದ್ದಾರೆ. ನನಗೆ ಪರಿಚಯ ವಿರುವ ಅಯ್ಯರ್ (ಬ್ರಾಹ್ಮ ಣರು) ಎಂಬುವವರು ರಾಜರಾಜೇಶ್ವರಿನಗರದಲ್ಲಿ ಕೆಲ ವರ್ಷದ ಹಿಂದೆ ಸಲೂನ್ ಮತ್ತು ಸ್ಪಾ ಆರಂಭಿಸಿದ್ದುಂಟು, ಹತ್ತಾರು ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದುಂಟು. ಅಂದರೆ ಈ ಉದ್ಯೋಗ ಈಗ ಒಂದು ಜಾತಿಯವರ ಕಸುಬಾಗಿ ಉಳಿದಿಲ್ಲ. ಕೆಲ ವರ್ಷದ ಹಿಂದೆ ನಾನು ಒಂದು ಹೇರ್ ಕಟಿಂಗ್ ಸಲೂನ್ ಅನ್ನು ಉದ್ಘಾಟಿಸಲು ಹೋಗಿದ್ದೆ. ಅದರ
ಮಾಲೀಕರು ತಮ್ಮ ಭಾಷಣದಲ್ಲಿ, ತಮ್ಮ ಅಂಗಡಿಯಲ್ಲಿ ಎಲ್ಲಾ ಜಾತಿಯವರೂ ಇದ್ದಾರೆ ಎಂದು ಅಭಿಮಾನದಿಂದ ಹೇಳಿದರು.

ಇದು ಎಲ್ಲಾ ಉದ್ಯೋಗದಂತೆ ಒಂದು ಗೌರವಾನ್ವಿತ ಮತ್ತು ಅಗತ್ಯ ಸೇವೆಯ ಉದ್ಯೋಗ, ಕೇವಲ ಒಂದು ಜಾತಿಗೆ ಸೇರಿದ ಉದ್ಯೋಗವಾಗಿ ಉಳಿದಿಲ್ಲ. ಹೇರ್ ಕಟಿಂಗ್ ಮಾಡುವುದನ್ನು ಕಲಿಸುವ ಸಂಸ್ಥೆಗಳಲ್ಲೂ, ಎಲ್ಲಾ ಜಾತಿಯ ಹುಡುಗರೂ ಸೇರುತ್ತಿರುವುದು ಒಂದು ಆರೋಗ್ಯಕರ ಬೆಳವಣಿಗೆ. ಬೆಂಗಳೂರಿನಲ್ಲಿ 15 ದಿನ ಮತ್ತು ಒಂದು ತಿಂಗಳಲ್ಲಿ ಹೇರ್ ಕಟಿಂಗ್ ಕಲಿಸುವ ಹಲವಾರು ತರಬೇತಿ ಕೇಂದ್ರಗಳಿವೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹಗಲು ಹೊತ್ತಿನಲ್ಲಿ 2-3 ಗಂಟೆ ಸಲೂನ್‌ಗಳಲ್ಲಿ ಕಟಿಂಗ್ ಮಾಡುವ ಪ್ರವೃತ್ತಿ ಜಾಸ್ತಿ ಯಾಗಿದೆ. ನಾನು ವಾಸಿಸುವ ರಾಜರಾಜೇಶ್ವರಿ ನಗರವೊಂದ ರ, ಏನಿಲ್ಲವೆಂದರೂ 50ಕ್ಕೂ ಹೆಚ್ಚು ಸಲೂನ್‌ಗಳಿವೆ ಮತ್ತು ಎಲ್ಲಾ ಸಲೂನ್‌ ಗಳಲ್ಲೂ ಕಾಯಲೇಬೇಕು. ಕೆಲ ವರ್ಷದ ಹಿಂದೆ ನನ್ನ ಪರಿಚಯದವರೊಬ್ಬರ ಮಗ ಒಂದು ಸಲೂನ್ ಆರಂಭಿಸಿದ. ನನ್ನ ಸ್ನೇಹಿತರು ಆಹ್ವಾನ ಪತ್ರ ನೀಡಿದರು.

Crazy Coiffure ಎಂಬ ಹೆಸರಿನಲ್ಲಿ ಅವರ ಮಗ ಸಲೂನ್ ಆರಂಭಿಸಿದ್ದ. ನನಗೆ ಆ ಹೆಸರಿನ ಬಗ್ಗೆ ಅತೀವ ಸೋಜಿಗ ವಾಯಿತು. Coiffure ಅಂದ್ರೆ ಎಷ್ಟು ಜನರಿಗೆ ಅರ್ಥವಾದೀತು ಎಂಬ ಜಿeಸೆ ಕಾಡಲಾರಂಭಿಸಿತು. Coiffure ಅಂದ್ರೆ ಏನು ಅಂತ ನನ್ನ ಸ್ನೇಹಿತರಿಗೆ ಕೇಳಿದೆ. ಅದಕ್ಕೆ ಅವರು, ‘ಸರ್, ನನಗೆ ಗೊತ್ತಿಲ್ಲ. ನನ್ನ ಮಗ 75 ಲಕ್ಷ ರುಪಾಯಿ ಕೊಡು. ಒಂದು ಸಲೂನ್ ಇಡ್ತೀನಿ ಅಂತ ಹೇಳಿದ. ನಾನು ಹಣ ಕೊಟ್ಟಿದ್ದೇನೆ, ಅಷ್ಟೇ. ಈಗಿನ ಮಕ್ಕಳು ಗೊತ್ತಲ್ಲ, ಏನೇನೋ ಹೆಸರು ಇಡ್ತಾವೆ’ ಎಂದು ಹೇಳಿ ನಕ್ಕರು. ನನಗೆ ಅವರ ಮಗನ ಬಗ್ಗೆ ಅಚ್ಚರಿಯಾಯಿತು.

ಸಾಮಾನ್ಯ ಜನರಿಗೆ ಅರ್ಥ ಗೊತ್ತಿರದ ಒಂದು ಪದವನ್ನು ಅಂಗಡಿಯ ಹೆಸರನ್ನಾಗಿ ಬಳಸಿದ ಬಗ್ಗೆ ಅಷ್ಟೇ ಕುತೂಹಲವೂ ಆಯಿತು. Coiffure ಅಂದ್ರೆ ಸರಳವಾಗಿ ಹೇಳಬೇಕೆಂದರೆ ‘ಹೇರ್ ಸ್ಟೈಲ್’ ಎಂದರ್ಥ. ಅದನ್ನು ‘ಕ್ವಾಹ್ ಫ್ವರ್’ ಎಂದು ಉಚ್ಚರಿಸುತ್ತಾರೆ. ಈ ಬಗ್ಗೆ ನಾನು ನನ್ನ ಸ್ನೇಹಿತರ ಮಗನನ್ನೇ ಕೇಳಿದೆ. ಅದಕ್ಕೆ ಆತ ಹೇಳಿದ ಉತ್ತರ ಕೇಳಿ ಇನ್ನೂ ಆಶ್ಚರ್ಯವಾಯಿತು.

‘ಸರ್, Coiffure ಅರ್ಥ ಎಲ್ಲರಿಗೂ ಗೊತ್ತಿರುವುದಿಲ್ಲ ನಿಜ, ಒಪ್ಪುತ್ತೇನೆ. ಅದರ ಅರ್ಥ ಗೊತ್ತಿರುವವರೇ ಬರಬೇಕು ಎಂಬುದು ಮೂಲ ಆಶಯ. ಆ ಕ್ಲಾಸಿನ ಕಸ್ಟಮರು ಗಳಿಗೆಂದೇ ಈ ಸಲೂನ್. ಸುಮ್ಮನೆ ನಾನು Crazy Hairstyle
ಎಂದು ಹೆಸರಿಟ್ಟಿದ್ದಿದ್ದರೆ ಯಾರು ಬೇಕಾದರೂ ಬರುತ್ತಾರೆ. ನಮ್ಮದು ಎಲ್ಲಾ ಕ್ಲಾಸಿನ ಜನರಿಗೆ ಸಲ್ಲುವ ಸಲೂನ್ ಅಲ್ಲ’ ಎಂದು ಸಮರ್ಥಿಸಿಕೊಂಡ. ಆತ ಹೇಳಿದ್ದರಲ್ಲಿ ಅರ್ಥವಿದೆ ಮತ್ತು ಬಿಜಿನೆಸ್ ಸಂದೇಶವಿದೆ ಅನಿಸಿತು.

ಫಲಕ ಸಾಹಿತ್ಯ
ನಾನು ವಿದೇಶಗಳಿಗೆ ಹೋದಾಗ, ಅಲ್ಲಿನ ಫಲಕಗಳನ್ನು ಓದುವುದನ್ನು ಮರೆಯುವುದಿಲ್ಲ. ಫಲಕ ಸಾಹಿತ್ಯ ಯಾವ
ವಿನೋದ ಸಾಹಿತ್ಯಕ್ಕೂ ಕಮ್ಮಿಯಿಲ್ಲ ಎಂಬುದು ಅನೇಕ ಸಲ ಅನಿಸಿದೆ. ಕೆಲ ವರ್ಷದ ಹಿಂದೆ ನಾನು ಸ್ಕಾಟ್ಲೆಂಡಿನ ಎಡಿನ್‌ಬರಕ್ಕೆ ಹೋದಾಗ ಅಲ್ಲಿನ ರೆಸ್ಟೋರೆಂಟಿನಲ್ಲಿನ ಫಲಕ ನೋಡಿ, ನಿಜಕ್ಕೂ ವಾರದಲ್ಲಿ ಎಷ್ಟು ದಿನಗಳು ಎಂಬ ಬಗ್ಗೆ ಸಂದೇಹ ಕಾಡಿತು. ಆ ಫಲಕದ ಮೇಲೆ ಹೀಗೆ ಬರೆದಿತ್ತು- Open seven days a week and weekends. ಎಡಿನ್‌ ಬರದ ಟ್ರಾವೆಲ್ ಶಾಪ್ ಎದುರು ಕಂಡ ಒಂದು ಫಲಕ- I need a vacation of 6 months. Twice a year !. ಅಲ್ಲಿಯೇ ಕಂಡ ಇನ್ನೊಂದು ಬರಹ- You weren’t born to just pay bills and die.

ಅದೇ ನಗರದಲ್ಲಿ ನಾವು ಉಳಿದುಕೊಂಡ ಹಾಲಿಡೇ ಇನ್ ಹೋಟೆಲಿನ ಲಿಫ್ಟ್ ಬಳಿ ಕಂಡ ಒಂದು ಸಣ್ಣ ಫಲಕ- The lift is being fixed for the next day. During that time we regret that you will be unbearable. ಲಂಡನ್‌ನ ಬೀದಿಗಳಲ್ಲಿರುವ ಭಿಕ್ಷುಕರ ವರ್ತನೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಅವರು ತಮಗೆ ಭಿಕ್ಷೆ ಹಾಕಿ ಎಂದು ಗೋಗರೆಯುವುದಿಲ್ಲ ಅಥವಾ ತಮ್ಮ ಕಷ್ಟಗಳನ್ನು ದಯನೀಯವಾಗಿ ನಿವೇದಿಸಿ ಕೊಳ್ಳುವುದಿಲ್ಲ. ಅದರ ಬದಲು ತಮ್ಮ ಪಾಡಿಗೆ ತಾವು ಗೋಡೆಗೊರಗಿ ಕುಳಿತುಕೊಂಡಿರುತ್ತಾರೆ. ತಾವು ಹೇಳಬೇಕಾದುದನ್ನು ಬೋರ್ಡು ಅಥವಾ ಫಲಕಗಳಲ್ಲಿ ಬರೆದಿರುತ್ತಾರೆ. ಅದನ್ನು ಓದಿದವರ ಮನ ಕಲಕಿದರೆ, ಹಣ ಹಾಕಿ ಹೋಗುತ್ತಾರೆ.

ಅಲ್ಲಿನ ಭಿಕ್ಷುಕನೊಬ್ಬ ಬರೆದ ಈ ಫಲಕವನ್ನು ನೋಡಿ ಆತನ ಸೃಜನಶೀಲ ಮನಸ್ಸಿಗೆ ಒಂದು ಸಣ್ಣ ಸಲಾಂ
ಹಾಕಿದೆ. ಆತ ಬರೆದಿದ್ದ- This is the first year I’m not going to Maldives because of COVID-19. Normally, I do not go because I am poor. ಲಂಡನ್‌ನಲ್ಲಿ ಓಡಾಡುವಾಗ, ಸೂಟ್‌ಕೇಸ್ ಅಂಗಡಿಯ ಮುಂದೆ ಕಾಣಿಸಿದ ಫಲಕ ನೋಡಿ, ಅದನ್ನು ಬರೆದವನ ಬಗ್ಗೆ ಮನದ ಸಣ್ಣ ಮೆಚ್ಚುಗೆ ವ್ಯಕ್ತಪಡಿಸಿದೆ. ಆ ಅಂಗಡಿಯ ಮುಂದೆ ಕಂಡ ಬರಹ- Overpack. That’s why suitcases have wheels now.

ಇದನ್ನೂ ಓದಿ: @vishweshwarbhat

.