ಶಶಿಧರ ಹಾಲಾಡಿ
ಜಗತ್ತಿನ ಅತಿ ಕಿರಿಯ ಚೆಸ್ ಚಾಂಪಿಯನ್ ಎಂಬ ದಾಖಲೆಯನ್ನು, ತಮಿಳುನಾಡಿನ ಗುಕೇಶ್ ಬರೆದಿದ್ದಾರೆ.
ವಿ.ಆನಂದ್ ಅವರ ನಂತರ, ನಮ್ಮ ದೇಶದಿಂದ ಎರಡನೆಯ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಗುಕೇಶ್ ಅವರ ಈ ಗೆಲುವು ಅಸಾಧಾರಣ, ಅಪ್ರತಿಮ. ಚದುರಂಗದಾಟದಲ್ಲಿ ಮೊದಲಿನಿಂದಲೂ ಪಾರಮ್ಯ ಸಾಧಿಸಿದ್ದ ಯುರೋಪಿಯನ್ ಆಟಗಾರರಿಗೆ ಸವಾಲೆಸೆಯುವಂತೆ ದಾಖಲಾಗಿರುವ ಈ ಗೆಲುವು, ವಿಶ್ವ ಚದುರಂಗ ಲೋಕದಲ್ಲಿ ಹೊಸ ಅಲೆಗಳನ್ನು ಸೃಷ್ಟಿಸಿದೆ; ಜಗತ್ತಿನ ಎಲ್ಲರೂ ನಮ್ಮ ದೇಶದ ಈ ಸಾಧನೆಯನ್ನು ಕಂಡು ಬೆರಗಾಗುವಂತೆ ಮಾಡಿದೆ. ಜತೆಗೆ, ಗುಕೇಶ್ ಅವರ ಈ ಗೆಲುವು, ನಮ್ಮ ದೇಶದಲ್ಲಿ ಇನ್ನಷ್ಟು ಚೆಸ್ ಆಟಗಾರರನ್ನು ಹುಟ್ಟು ಹಾಕುವುದರಲ್ಲಿ ಸಂಶಯವಿಲ್ಲ. 2000ದಲ್ಲಿ ವಿ.ಆನಂದ್ ಅವರು ವಿಶ್ವ ಚಾಂಪಿಯನ್ ಆದ ನಂತರ, ನಮ್ಮ ದೇಶದಲ್ಲಿ ನೂರಾರು ಪ್ರಮುಖ ಆಟಗಾರರು ಸಿದ್ಧವಾದರು; ಅದೇ ರೀತಿ ಗುಕೇಶ್ ಅವರ ಗೆಲುವು, ಭಾರತದ ಚದುರಂಗಲೋಕದಲ್ಲಿ ಹೊಸ ಗಾಳಿಯನ್ನೇ ಬೀಸಲಿದೆ!
ನಮ್ಮ ದೇಶದ ಹೆಮ್ಮೆಯ ಚೆಸ್ ಆಟಗಾರ, ತಮ್ಮ ೧೮ನೆಯ ವಯಸ್ಸಿಗೇ, ವಿಶ್ವ ಚಾಂಪಿಯನ್ ಆಗಿ, ಅತಿ ಕಿರಿಯ ಚಾಂಪಿಯನ್ ಎಂಬ ದಾಖಲೆ ಬರೆದಾಗ, ಮಾಜಿ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲಸನ್ (ನಾರ್ವೆ) ಅವರು, ಒಂದು ಕಮೆಂಟ್ ಮಾಡಿದರು ‘ಗುಕೇಶ್ ಗೆದ್ದುದ್ದು ತನ್ನ ಗುಣ ಮತ್ತು ದೃಢ ನಿಶ್ಚಯದಿಂದ’. ಅಂದರೆ, ಅತ್ಯುತ್ತಮ ಆಟವಾಡಿ ಗೆದ್ದಿದ್ದಲ್ಲ ಎಂಬರ್ಥವೂ ಬರುವಂತಿತ್ತು, ಅವರ ಆ ಮಾತು. ಅದಕ್ಕೂ ಮುನ್ನ, ಗುಕೇಶ್ ಮತ್ತು ಚೀನಾದ ಡಿಂಗ್ ಲಿರೆಂಗ್ ಅವರು ಆಟ ಆರಂಭಿಸಿದ್ದಾಗ, 14 ಪಂದ್ಯಗಳ ಆ ಸರಣಿ ಆಟದ ನಡುವೆಯೇ, ‘ಇದು ವಿಶ್ವ ಚೆಸ್ ಚಾಂಪಿಯನ್ ಮಟ್ಟದ ಆಟದಂತೆ ಕಾಣುತ್ತಿಲ್ಲ’ ಎಂದೂ ಕಾರ್ಲಸನ್ ಟೀಕಿಸಿದ್ದರು.
18 ವರ್ಷದ ಗುಕೇಶ್ ಅವರ ಆಟವು ಪ್ರಬುದ್ಧವಾಗಿಲ್ಲ ಎಂಬರ್ಥವನ್ನೂ ಕೊಡುವಂತಿತ್ತು ಅವರ ಟೀಕೆ. ನಮ್ಮ ದೇಶದ ಗುಕೇಶ್, ವಿಶ್ವ ಚಾಂಪಿಯನ್ ಆದಾಗ, ಅವರನ್ನು ಅಭಿನಂದಿಸುವ ಬದಲು, ಇನ್ನೊಬ್ಬ ಮಾಜಿ ಚೆಸ್
ಚಾಂಪಿಯನ್ ವ್ಲಾದಿಮಿರ್ ಕ್ರಾಮ್ನಿಕ್ (ರಷ್ಯಾ) ಅವರು ಬೇಸರದಿಂದ ‘ನಾವು ಕಂಡ ಚದುರಂಗದ ಆಟ ಅವಸಾನ
ಹೊಂದಿದೆ!’ ಎಂದು, ನೇರವಾಗಿ, ಮುಖಕ್ಕೆ ಹೊಡೆದಂತೆ ಟೀಕಿಸಿದರು. ಯುರೋಪಿಯನ್ ಮೂಲದ ಇವರೆಲ್ಲರಿಗೂ,
ನಮ್ಮ ದೇಶದ ೧೮ ವರ್ಷದ ಕಿರಿಯನೊಬ್ಬನು ಗೆದ್ದಿದ್ದು ಬೇಸರ ತಂದಿರಬಹುದೇ!
ಅದುವರೆಗೆ ಚಾಂಪಿಯನ್ ಆಗಿದ್ದ ಚೀನಾ ದೇಶದ ಡಿಂಗ್ ಲಿರೆಂಗ್ ಸೋತಿದ್ದರಿಂದಲೂ ಬೇಸರವಾಗಿರಬಹುದೆ? ತೃತೀಯ ಜಗತ್ತಿನ, ತುಸು ಸಾಧಾರಣ ಎಂದು ಅವರು ತಿಳಿದುಕೊಂಡಂತಹ ಭಾರತರ ದೇಶದಿಂದ ಮತ್ತೊಬ್ಬ ವಿಶ್ವ ಚಾಂಪಿಯನ್ ಉದಿಸುವುದು ಎಂದರೇನು ಎಂಬ ನಿರ್ಲಕ್ಷ್ಯವೂ ಅವರ ಈ ಕೊಂಕು ನುಡಿಗಳಿಗೆ ಕಾರಣ ಇರಬಹುದೇ? ಕಾರ್ಲಸನ್, ವ್ಲಾದಿಮಿರ್ ಮೊದಲಾದವರು, ಭಾರತೀಯ ಚೆಸ್ ಆಟಗಾರರ ಪ್ರಾಬಲ್ಯವನ್ನು, ಉನ್ನತಿಯನ್ನು, ಗೆಲುವನ್ನು ಮುಕ್ತವಾಗಿ ಸಂಭ್ರಮಿಸಿದೇ ಇದ್ದರೆ, ಅದಕ್ಕೆ ಕಾರಣಗಳನ್ನು ಹುಡುಕುವುದು ಕಷ್ಟವೇನಲ್ಲ. ಪುರಾತನ ಕಾಲದಲ್ಲಿ ಚದುರಂಗದ ಮೂಲ ಎನಿಸುವ ಆಟವು ಆವಿಷ್ಕಾರಗೋಂಡಿದ್ದೇ ನಮ್ಮ ದೇಶದಲ್ಲಾದರೂ, ಆಧುನಿಕ ಚದುರಂಗದಾಟವು, ಅವಶ್ಯವಾಗಿ ಮುಂದುವರಿದ ದೇಶಗಳ ‘ಸ್ವತ್ತಾಗಿತ್ತು’. ಈಗ ಪ್ರಚಲಿತದಲ್ಲಿರುವ ಆಟದ ನಿಯಮಗಳು, ಪಂದ್ಯವಳಿಗೂ, ಫಿಡೆ ಎಲ್ಲವನ್ನೂ ರೂಪಿಸಿದವರು ಮುಂದುವರಿದ ದೇಶಗಳು. ಪೋಲೆಂಡ್, ರಷ್ಯಾ, ಜರ್ಮನಿ, ಇಂಗ್ಲೆಂಡ್, ನಾರ್ವೆ,ಉಕ್ರೇನ್ ಮೊದಲಾದ ಐಪ್ಯ ದೇಶಗಳೇ ೨೦ನೆಯ ಶತಮಾನದಲ್ಲಿ ಚದುರಂಗದಲ್ಲಿ ಮಿಂಚಿದವು; ಅಸಾಧಾರಣ ಎನಿಸುವ ಹಲವು ಆಟಗಾರರು ಐರೋಪ್ಯ ದೇಶಗಳಲ್ಲಿದ್ದರು, ಈಗಲೂ ಇದ್ದಾರೆ.
ಅವರ ಪ್ರಾಬಲ್ಯ ಎಷ್ಟರ ಮಟ್ಟಿಗೆ ವ್ಯಾಪಿಸಿತ್ತು ಎಂದರೆ, ಅಮೆರಿಕದ ಅಪ್ರತಿಮ ಆಟಗಾರ, ವಿಶ್ವ ಚಾಂಪಿಯನ್ ಆಗಿದ್ದ ಬಾಬಿ ಫಿಷರ್ನಂತಹ ಆಟಗಾರರನ್ನು ಐರೋಪ್ಯ ಆಟಗಾರರು (ಮುಖ್ಯವಾಗಿ ಯುಎಸ್ಎಸ್ಆರ್, ರಷ್ಯಾದವರು) ಮೂಲೆಗುಂಪು ಮಾಡುವಷ್ಟು ಪ್ರಬಲರಾಗಿದ್ದರು. ಪ್ರಮುಖ ಚೆಸ್ ಪಂದ್ಯಾವಳಿಗಳಲ್ಲಿ, ರಷ್ಯಾ ಮೂಲದ ಆಟಗಾರರು, ಪರಸ್ಪರ ಒಪ್ಪಂದ ಮಾಡಿಕೊಂಡ ರೀತಿ, ತಮ್ಮ ದೇಶದ ಆಟಗಾರನೇ ಅತಿ ಹೆಚ್ಚು ಅಂಕ ಗಳಿಸುವಂತೆ ಡ್ರಾ ಅಥವಾ ಸೋಲು ಅನುಭವಿಸಿ, ಬಾಬಿ ಫಿಷರ್ ನಂತಹ ಅಪ್ರತಿಮ ಆಟಗಾರರನ್ನು ನಾಲ್ಕು ಅಥವಾ ಅದಕ್ಕಿಂತ ಕೆಳಗಿನ ಸ್ಥಾನಕ್ಕೆ (ಅಂಕಪಟ್ಟಿಯಲ್ಲಿ) ತಳ್ಳುತ್ತಿದ್ದರು! ಅವರ ಈ ತಂತ್ರವನ್ನು ಗಮನಿಸಿದ ಬಾಬಿ ಫಿಷರ್, ಅದನ್ನು ಬಹಿರಂಗವಾಗಿಯೇ ಟೀಕಿಸಿ, ರಷ್ಯಾದ ಆಟಗಾರರಿದ್ದ ಪಂದ್ಯಾವಳಿಗಳಿಂದಲೇ ದೂರ ಉಳಿಯು ತ್ತಿದ್ದ; ಅಷ್ಟೊಂದು ಸಂಖ್ಯೆಯ ಆಟಗಾರರು ಯುಎಸ್ಎಸ್ಆರ್ ಮತ್ತು ರಷ್ಯಾದಲ್ಲಿದ್ದರು! ರಷ್ಯಾದ ಪಕ್ಕದ ದೇಶ ಪೋಲೆಂಡ್ನಿಂದಲೂ ಹಲವು ಪ್ರಮುಖ ಆಟಗಾರರು ಜಾಗತಿಕ ಪಂದ್ಯಗಳಲ್ಲಿ ಮಿಂಚಿದ್ದಾರೆ. ಹೀಗಿದ್ದಾಗ, ತಮ್ಮ ಪ್ರದೇಶದ ಯಾರಾದರೊಬ್ಬರು ವಿಶ್ವ ಚಾಂಪಿಯನ್ ಆಗಲಿ, ಭಾರತದಂತಹ ದೂರ ದೇಶದವರೇಕೆ ಮುಂದೆ ಬರಬೇಕು ಎಂಬ ರಹಸ್ಯ ಆಶಯ ಅಲ್ಲಿನ ಅಟಗಾರರಲ್ಲಿದ್ದರು ಇದ್ದರಿಬಹುದೆ?
ಇಲ್ಲವಾದರೆ, ಮೊನ್ನೆ ಗುಕೇಶ್ ಗೆಲುವು ಸಾಧಿಸಿ, ಈ ಸ್ಥಾನಕ್ಕೇರಿದ ಅತಿ ಕಿರಿಯ ಆಟಗಾರ ಎಂಬ ವಿಶ್ವದಾಖಲೆ
ಬರೆದಾಗ, ಶುಭ ಹಾರೈಸುವುದನ್ನು ಬಿಟ್ಟು ‘ಚೆಸ್ ಆಟದ ಅವನತಿ’ ಎಂಬ ಟೀಕೆಯನ್ನು, ಅಲ್ಲಿನ ಮಾಜಿ ಚಾಂಪಿಯನ್ ಒಬ್ಬರು, ಏಕೆ ಮಾಡುತ್ತಿದ್ದರು? ಈಗಿನ್ನೂ 18 ವರ್ಷದ, ತಮಿಳುನಾಡಿನ ಗುಕೇಶ್, ಇನ್ನೂ ಬೆಳೆಯುವ ಅವಕಾಶವಿದೆ, ಇನ್ನೂ ಹೊಸ ಆಟದ ಶೈಲಿಯನ್ನು ರೂಢಿಸಿಕೊಳ್ಳುವ ಅವಕಶಾವಿದೆ, ಅಂತಹ ಪ್ರತಿಭಾವಂತನನ್ನು ಗುರುತಿಸಿ, ಮುಕ್ತಕಂಠದಿಂದ ಹೊಗಳಿದ್ದರೆ, ಅವರು ಸಜ್ಜನಿಕೆಯನ್ನು ತೋರಿದಂತಾಗುತ್ತಿತ್ತು; ಈಗ ಟೀಕೆಯ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿ, ತಮ್ಮ ಮನಸ್ಸಿನಲ್ಲಿ ಹುದುಗಿದ್ದ ಅಸಹನೆಯನ್ನು ತೋರಿದಂತಾಗಿದೆಯಲ್ಲವೆ? ಟೀಕಿಸಿದವರ ಸಂಖ್ಯೆ ಕಡಿಮೆಯಿದ್ದರೂ, ನಮ್ಮ ದೇಶದ ಚದುರಂಗ ಅಭಿಮಾನಿಗಳ ಮನ ನೋಯಿಸಿದ್ದಂತೂ ನಿಜ; ಮತ್ತು ಗುಕೇಶ್ನ ಸಾಧನೆಯ ಪ್ರಭಾವವನ್ನು ಕಡಿಮೆ ಮಾಡಲು ಯತ್ನಿಸಿದ್ದಂತೂ ನಿಜ.
ಅಸಾಧಾರಣ ಸಾಧನೆ
ತಮಿಳುನಾಡಿನಲ್ಲಿರುವ, ತೆಲುಗು ಭಾಷೆಯನ್ನಾಡುವ ಗುಕೇಶ್ ದೊಮ್ಮರಾಜು ಅವರು, ಸಿಂಗಪುರದಲ್ಲಿ ನಡೆದ ೧೪
ಸುತ್ತುಗಳ ಪಂದ್ಯಾವಳಿಯಲ್ಲಿ ಚೀನಾದ ಡಿಂಗ್ ಲೆರಿಂಗ್ ಅವರನ್ನು ಸೋಲಿಸಿದ್ದು ನಿಜಕ್ಕೂ ಒಂದು ಅಸಾಧಾರಣ
ಸಾಧನೆ ಎನಿಸಿದೆ. ಸಾಂಪ್ರದಾಯಿಕ ಚದುರಂಗದಲ್ಲಿ ಗುಕೇಶ್ ಪರಿಣಿತರು; ಎರಡರಿಂದ ಐದಾರು ಗಂಟೆಗಳ ತನಕ ನಡೆಯಬ್ಲಿ ಈ ರೀತಿಯ ಆಟದಲ್ಲಿ, ಆಳವಾಗಿ ಯೋಚಿಸಿ, ಕಾಯಿಗಳನ್ನು ನಡೆಸಿ, ಎದುರಾಳಿಯನ್ನು ಮಣಿಸಿ, ಕುಗ್ಗಿಸಿ, ಆತ ಮಾನಸಿಕವಾಗಿ ದಣಿದಾಗ ಮಾಡಬಹುದಾದ ಅತಿ ಚಿಕ್ಕ ತಪ್ಪುಗಳನ್ನೇ ಹಿಡಿದು, ಅದಕ್ಕೆ ತಕ್ಕಂತೆ ಕಾಯಿಗಳನ್ನು ಮುಂದಿಟ್ಟು ಸೋಲಿಸುವುದು ಈ ರೀತಿಯ ಆಟದ ವಿಶೇಷ.
ಈ ರೀತಿಯ ದೀರ್ಘ ಅವಧಿಯ ಆಟದಲ್ಲಿ ಗುಕೇಶ್ ಪರಿಣಿತರು ಎಂದು ಡಿಂಗ್ಗೆ ಗೊತ್ತಿತ್ತು; ಆದ್ದರಿಂದ, ಸಿಂಗಪುರ ದಲ್ಲಿ ನಡೆದ ಪಂದ್ಯಾವಳಿಯಲ್ಲಿ, ನಿರಂತರವಾಗಿ ಡ್ರಾ ಮಾಡಿಕೊಳ್ಳುವಲ್ಲೇ ಡಿಂಗ್ ತಮ್ಮ ಗಮನವನ್ನು ಕೇಂದ್ರೀ ಕರಿಸಿದ್ದರು. ಕೊನೆಯಲ್ಲಿ ಇಬ್ಬರೂ ಸಮಬಲ (೭ ಅಂಕ) ಪಡೆದರೆ, ನಂತರ ನಡೆಯುವ ಕಿರು ಅವಧಿಯ ಟೈ
ಬ್ರೇಕರ್ ಪಂದ್ಯವನ್ನು ಡಿಂಗ್ ಬಯಸಿದ್ದರು.
ಏಕೆಂದರೆ, ಕಡಿಮೆ ಅವಽಯ ಆಟದಲ್ಲಿ, ರ್ಯಾಪಿಡ್ ಚೆಸ್ನಲ್ಲಿ ಡಿಂಗ್ ಭಾರೀ ಪರಿಣಿತ; ಟೈ ಬ್ರೇಕರ್ ಪಂದ್ಯಗಳು
ಆ ರೀತಿಯೇ ನಡೆಯುವುದರಿಂದ, ತನ್ನ ಗೆಲುವು ಸುಲಭ ಎಂದು ಡಿಂಗ್ ಸಕಾರಣವಾಗಿಯೇ ಲೆಕ್ಕಹಾಕಿದ್ದರು. ಗುಕೇಶ್ ಗೆಲುವು ಸಾಧಿಸಿದ ನಿರ್ಣಾಯಕ ಕೊನೆಯ ಪಂದ್ಯದಲ್ಲೂ, ಡಿಂಗ್ ಅವರ ನಡೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ : ಪದೇಪದೇ ಒಂದೇ ಕಾಯಿಯನ್ನು ನಡೆಸುವುದು, ಬೇಗ ಬೇಗನೆ ಕಾಯಿಗಳನ್ನು ಪರಸ್ಪರ ಹೊಡೆದು ಬದಲಾಯಿಸಿಕೊಳ್ಳುವುದು, ಇಂತಹ ‘ಆಟ’ವನ್ನೇ ಡಿಂಗ್, ಆ ಕೊನೆಯ ಪಂದ್ಯದಲ್ಲೂ ಆಡಿದರು.
ಆದರೆ, ಗುಕೇಶ್ ಅವರಿಗೆ ಇದು ಗೊತ್ತಿತ್ತು; ದೀರ್ಘ ಅವಧಿಯು, ಸಾಂಪ್ರದಾಯಿಕ ಶೈಲಿಯ ಪಂದ್ಯದಲ್ಲೇ ಡಿಂಗ್ ಅವರನ್ನು ಸೆರೆಹಿಡಿಯಬೇಕೆಂದು ತಾಳ್ಮೆಯಿಂದ ಆಡಿದರು; ಚೀನಾದ ಹಾಲಿ ಚಾಂಪಿಯುನ್ ಮಾನಸಿಕವಾಗಿ ಸುಸ್ತಾಗುವಂತೆ ಮಾಡಿದರು. ಕೊನೆಗೊಮ್ಮೆ ಆತ ನಡೆಸಿದ ಆನೆಯನ್ನು ಬಡಿದರು, ಗೆದ್ದರು; 7.5 ಅಂಕ ಗಳಿಸಿ, ವಿಶ್ವದ ಅತಿ ಕಿರಿಯ ಚೆಸ್ ಚಾಂಪಿಯನ್ ಎಂಬ ದಾಖಲೆ ಬರೆದರು.
ಕೊನೆಯ ಆ ನಿರ್ಣಾಯಕ ಪಂದ್ಯದಲ್ಲಿ, ಡಿಂಗ್ ಅವರು ‘ಬ್ಲಂಡರ್’ (ದೊಡ್ಡ ತಪ್ಪು) ಮಾಡಿದರು, ಆದ್ದರಿಂದ ಗುಕೇಶ್ ಗೆಲ್ಲಲು ಸಾಧ್ಯವಾಯಿತು ಎಂದು, ಕೆಲವು ವಿಶ್ಲೇಷಕರು ಹೇಳಿದ್ದು, ಅದಕ್ಕೆ ಕೆಲವು ವಿದೇಶೀ ಪತ್ರಿಕೆಗಳು ಅತಿ ಪ್ರಚಾರ ನೀಡಿವೆ. ನಿಜ, ಡಿಂಗ್ ಬ್ಲಂಡರ್ ಆಟ ಆಡಿದ್ದು ನಿಜ; ಆದರೆ, ಅಂತಹ ಬುದ್ಧಿವಂತ ಆಟಗಾರ, ಹಾಲಿ ಚಾಂಪಿಯನ್ ಆ ರೀತಿ ತಪ್ಪು ನಡೆಯನ್ನು ಇಡುವಂತೆ ಮಾಡಿದ್ದು ಯಾರು? ನಮ್ಮ ದೇಶದ ಗುಕೇಶ್! ಆದ್ದರಿಂದಲೇ ಗುಕೇಶ್ ಗೆದ್ದರು, ವಿಶ್ವ ಚಾಂಪಿಯನ್ ಆದರು.
ಕಿರಿಯ ವಯಸ್ಸಿನ ಗುಕೇಶ್, ಇನ್ನಷ್ಟು ಸಾಧಿಸಬಲ್ಲರು, ಆ ತಾಕತ್ತು, ವಯಸ್ಸು ಅವರಲ್ಲಿದೆ. ಜತೆಗೆ, ಇವರ ಈ
ವಿಜಯವು, ಇನ್ನಷ್ಟು ಭಾರತೀಯ ಆಟಗಾರರಿಗೆ ಸ್ಪೂರ್ತಿ ನೀಡುತ್ತದೆ, ನಮ್ಮ ದೇಶದಲ್ಲಿ ಚದುರಂಗದಾಟ ಇನ್ನಷ್ಟು
ಎತ್ತರಕ್ಕೆ ಏರುವಂತೆ ಮಾಡುತ್ತದೆ. ಗುಕೇಶ್ ಅವರ ಗುರು, ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಸಹ
ಇದನ್ನೇ ಮಾಡಿದ್ದರು. ಗುಕೇಶ್ ಅವರ ಗೆಲುವಿನಲ್ಲಿ ಆನಂದ್ ಅವರ ಪಾತ್ರ, ಮಾರ್ಗದರ್ಶನ ಎಲ್ಲವೂ ಇದೆ. ಗುಕೇಶ್ಗೆ ಶುಭವಾಗಲಿ!
ಬಾಲ್ಯದ ಕನಸು ನನಸು
ಬಾಲಕನಾಗಿದ್ದಾಗಲೇ ಗುಕೇಶ್ ಅವರಿಗೆ ಒಂದು ಕನಸಿತ್ತು : ಅದೇನೆಂದರೆ, ಆನಂದ್ ಅವರ ರೀತಿ, ತಾನೂ ವಿಶ್ವ ಚಾಂಪಿಯನ್ ಆಗಬೇಕು, ಜತೆಗೆ, ಅತಿ ಕಿರಿಯ ವಯಸ್ಸಿನಲ್ಲೇ ಆ ಸಾಧನೆ ಮಾಡಬೇಕು ಎಂದು. ಆನಂದ್ ಅವರು ನಡೆಸುವ ಚೆಸ್ ಅಕಾಡೆಮಿಯಲ್ಲಿ ಅವರಿಗೆ ಸೂಕ್ತ ತರಬೇತಿಯೂ ದೊರಕಿತು. ಜತೆಗೆ, ವೈದ್ಯರಾಗಿದ್ದ ತಂದೆ ಡಾ.ರಜನೀಕಾಂತ್ ಅವರು, ವೃತ್ತಿಗೆ ವಿರಾಮ ನೀಡಿ, ಗುಕೇಶ್ ಅವರ ತರಬೇತಿಯಲ್ಲಿ ತಾವೂ ತೊಡಗಿಕೊಂಡರು; ತಾಯಿ ಡಾ.ಪದ್ಮಾ ಅವರು ವೃತ್ತಿನಿರತರಾಗಿ, ಸೂಕ್ತ ಬೆಂಬಲ ನೀಡಿದರು. ತಮಿಳುನಾಡಿನಲ್ಲಿ ಚದುರಂಗದಾಟಕ್ಕೆ ಸೂಕ್ತ ವಾತಾವರಣವೂ ಇದೆ. ಎಲ್ಲವೂ ಸೇರಿ, ನಮ್ಮ ದೇಶದ ಎರಡನೆಯ ವಿಶ್ವ ಚಾಂಪಿಯನ್ ಪಟ್ಟ ಗುಕೇಶ್ ಪಾಲಾಯಿತು.
ಬಲಿಷ್ಠ ಆಟಗಾರನಾರು?
ಜಗತ್ತಿನಲ್ಲಿ ಇಂದು ಅತ್ಯುತ್ತಮ ಆಟಗಾರನಾರು ಎಂದು ಕೇಳಿದರೆ, ಸ್ಪಷ್ಟ ಉತ್ತರ ಮ್ಯಾಗ್ನಸ್ ಕಾರ್ಲಸನ್. ನಾರ್ವೆ ದೇಶದ ಈ ಆಟಗಾರನು, ಫಿಡೆ ಪಟ್ಟಿಯಲ್ಲಿ 2011ರಿಂದಲೂ ನಿರಂತರವಾಗಿ ಮೊದಲ ಸ್ಥಾನದಲ್ಲಿದ್ದಾನೆ; ಜತೆಗೆ, ಈಗಲೂ ಅತ್ಯುತ್ತಮವಾಗಿ ಆಡುತ್ತಲಿದ್ದಾನೆ. ಐದುಬಾರಿ ವಿಶ್ವ ಚಾಂಪಿಯನ್, ಐದು ಬಾರಿ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್, ಏಳು ಬಾರಿ ವಿಶ್ವ ಬ್ಲಿಟ್ಸ್ ಚೆಸ್ ಚಾಂಪಿಯನ್ ಆಗಿರುವ ಈತ, ಚೆಸ್ ಇತಿಹಾಸದಲ್ಲೇ ೨೮೮೨ರಷ್ಟು
ಹೆಚ್ಚಿನ ರೇಟಿಂಗ್ ಹೊಂದಿರುವ ಏಕೈಕ ಆಟಗಾರ. ಸಿಂಗಪುರದಲ್ಲಿ ಗುಕೇಶ್ ಗೆದ್ದ ನಂತರ, ತಾನು ಕಾರ್ಲಸನ್ ಜತೆ ಆಟವಾಡಲು ಇಷ್ಟಪಡುತ್ತೇನೆ ಎಂದು ಗುಕೇಶ್ ಗೌರವದಿಂದ ಹೇಳಿದ್ದುಂಟು!
*
ವಿಶ್ವ ಚಾಂಪಿಯನ್ ಸ್ಪರ್ಧೆಯಲ್ಲಿ ಒಂದೊಮ್ಮೆ, ಮ್ಯಾಗ್ನಸ್ ಕಾರ್ಲಸನ್ ವಿರುದ್ಧ ಆಡಿದರೆ, ಅದೊಂದು ಅದ್ಭುತ
ಅನುಭವವಾದೀತು. ನಾನೀಗ ವಿಶ್ವ ಚಾಂಪಿಯನ್ ಎಂದಾಕ್ಷಣ, ಇಡೀ ಜಗತ್ತಿನ ಅತ್ಯುತ್ತಮ ಆಟಗಾರ ನಾನು ಎಂಬ
ಅರ್ಥವಲ್ಲ. ಆ ಸ್ಥಾನದಲ್ಲಿ ಕಾರ್ಲಸನ್ ಇದ್ದಾರೆ. ನಾನು ಇನ್ನಷ್ಟು ಶ್ರಮಹಾಕಿ ಮೇಲೇರಲು ಪ್ರಯತ್ನಿಸುವಂತೆ ಮಾಡಲು ಪ್ರೇರಣೆಯೆಂದರೆ, ಅದ್ಭುತ ಆಟಗಾರನಾದ ಮ್ಯಾಗ್ನಸ್ ಕಾರ್ಲಸನ್ ಅವರ ಮಟ್ಟವನ್ನು ತಲುಪುವುದು!
- ಗುಕೇಶ್ ಡಿ
ಇದನ್ನೂ ಓದಿ: Shashidhara Halady Column: ಬೇಟೆಗಾರನೊಬ್ಬನ ಪರಿಸರ ಕಾಳಜಿ