Monday, 16th December 2024

Vishwavani Editorial: ಚದುರಂಗ ಬಲದ ಚತುರ

ಜಗತ್ತಿನ ಅತಿ ಕಿರಿಯ ಚೆಸ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ತಮಿಳುನಾಡಿನ ಗುಕೇಶ್ ಅವರು, ವಿಶ್ವನಾಥನ್ ಆನಂದ್‌ರ ತರುವಾಯದಲ್ಲಿ ಭಾರತದ ಕೀರ್ತಿಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿರುವುದು ಹೆಮ್ಮೆಯ ಸಂಗತಿ. ತಮ್ಮ ಈ ಗೆಲುವು ವಿಶ್ವ ಚದುರಂಗ ವಲಯದಲ್ಲಿ ಹೊಸ ಸಂಚಲನೆಯನ್ನೇ ಸೃಷ್ಟಿಸಿದ್ದರೂ, ‘ನಾನೀಗ ವಿಶ್ವ
ಚಾಂಪಿಯನ್ ಎಂದಮಾತ್ರಕ್ಕೆ ಇಡೀ ಜಗತ್ತಿನ ಅತ್ಯುತ್ತಮ ಆಟಗಾರ ಎಂದರ್ಥವಲ್ಲ’ ಎಂದು ವಿನೀತರಾಗಿ ಹೇಳಿದ್ದಾರೆ ಗುಕೇಶ್.

ಅವರ ತಲೆಯೀಗ ಹೆಮ್ಮೆಯಿಂದ ನಭವನ್ನು ದಿಟ್ಟಿಸುತ್ತಿದ್ದರೂ, ಕಾಲುಗಳಿನ್ನೂ ನೆಲದ ಮೇಲೇ ಇವೆ ಎಂಬುದಕ್ಕೆ ಇದೊಂದು ಮಾತೇ ಸಾಕ್ಷಿ. ಅವರ ಈ ವಿನೀತಭಾವ ಎಲ್ಲ ಸಾಧಕರಿಗೂ ಮೇಲ್ಪಂಕ್ತಿಯಾಗಬೇಕು. ತಮ್ಮ ಚಾಂಪಿ ಯನ್‌ ಗಿರಿಯ ಮೂಲಕ ಗುಕೇಶ್ ಅವರು ಮತ್ತೊಂದು ಅಂಶದ ಕಡೆಗೂ ಗಮನ ಸೆಳೆದಿದ್ದಾರೆ, ಅದೆಂದರೆ, ‘ಕ್ರೀಡೆ’ ಎಂದ ಮಾತ್ರಕ್ಕೆ ‘ಕ್ರಿಕೆಟ್’ ಅಷ್ಟೇ ಅಲ್ಲ ಎಂಬುದು. ಹೌದು, ಭಾರತದಲ್ಲಿ ಕ್ರಿಕೆಟ್‌ಗೆ ದಕ್ಕಿರುವ ಪ್ರಚಾರ-ಪ್ರಭಾವ, ಸ್ವೀಕಾರಾರ್ಹತೆ, ಮಾನ್ಯತೆ, ಹಣಕಾಸಿನ ಹರಿವು, ಪ್ರಾಯೋಜಕತ್ವ ಇತ್ಯಾದಿಗಳು ಮಿಕ್ಕ ಒಂದಷ್ಟು ಕ್ರೀಡೆಗಳಿಗೆ ಸಿಗುವುದಿನ್ನೂ ಬಾಕಿಯಿದೆ ಎನ್ನಬೇಕು.

ಜತೆಗೆ, ಮಕ್ಕಳಿಗೆ ಕ್ರಿಕೆಟ್‌ಗೆ ಹೊರತಾದ ಕ್ರೀಡೆಯಲ್ಲಿ ಆಸಕ್ತಿಯಿದ್ದರೂ ಬಲವಂತ ಮಾಡಿ ಕ್ರಿಕೆಟ್‌ನೆಡೆಗೇ ದೂಡುವ ಪಾಲಕರೂ ಸಾಕಷ್ಟಿದ್ದಾರೆ. ಆದರೆ ಕ್ರಿಕೆಟನ್ನು ಹೊರತುಪಡಿಸಿದ ಮತ್ತಷ್ಟು ಕ್ರೀಡಾಸಾಧ್ಯತೆಗಳಿವೆ, ಪರಿಶ್ರಮ-ಪ್ರತಿಭೆ ಯನ್ನು ವಿನಿಯೋಗಿಸಿದರೆ ಅಲ್ಲೂ ಮಾನ್ಯತೆಯನ್ನು ದಕ್ಕಿಸಿಕೊಳ್ಳಬಹುದು, ಬದುಕು ಕಟ್ಟಿಕೊಳ್ಳಬಹುದು
ಎಂಬುದನ್ನು ಗುಕೇಶ್ ತೋರಿಸಿಕೊಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಮತ್ತೊಂದು ಅಪ್ರಿಯ ಸತ್ಯವನ್ನೂ ನಾವು ಮರೆಯುವಂತಿಲ್ಲ. ಎಷ್ಟೋ ಶಾಲೆಗಳಲ್ಲಿ ಆಟದ ಮೈದಾನವೇ ಇರುವುದಿಲ್ಲ; ಕ್ರೀಡೋಪಕರಣಗಳಂತೂ ಒಂದೋ ಗೆದ್ದಲು ಹಿಡಿದಿರುತ್ತವೆ ಇಲ್ಲವೇ ತುಕ್ಕಿಗೆ ಒಡ್ಡಿ ಕೊಂಡಿರುತ್ತವೆ. ಇನ್ನು ಶಾಲಾ ಕೊಠಡಿಗಳಿಗೇ ಜಾಗ ಒದಗಿಸಿಕೊಡುವುದು ತತ್ವಾರವಾಗಿರುವಾಗ, ಚದುರಂಗ, ಟೇಬಲ್ ಟೆನಿಸ್, ಷಟ್ಲ್ ಬ್ಯಾಡ್ಮಿಂಟನ್ ಮುಂತಾದ ಒಳಾಂಗಣ ಕ್ರೀಡೆಗಳಿಗೆ ಸಜ್ಜಿಕೆಗಳನ್ನು ರೂಪಿಸುವುದು ದೂರದ
ಮಾತಾಗಿಬಿಟ್ಟಿದೆ. ಇಂಥ ಬಾಬತ್ತುಗಳ ಕಡೆಗೂ ಆಳುಗರು ಮತ್ತಷ್ಟು ಗಮನ ಹರಿಸಿದಲ್ಲಿ ಗುಕೇಶ್‌ರಂಥ ಮತ್ತಷ್ಟು ಪ್ರತಿಭೆಗಳು ಹೊಮ್ಮಬಹುದು.

ಇದನ್ನೂ ಓದಿ: Vishwavani Editorial: ಗತವೈಭವಕ್ಕೆ ಮರಳಲಿ ಚಂದನವನ