ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ನಮ್ಮ ಗೆಳೆಯರು, ಹತ್ತಿರದವರು ಮತ್ತು ಬಂಧು-ಬಾಂಧವರು ನಿಧನರಾದಾಗ ನಾವು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇವೆ. ಸುಖ- ಸಂತೋಷದಲ್ಲಿ ಮಾತ್ರ ಅಲ್ಲ, ಬೇರೆಯವರ ದುಃಖದಲ್ಲೂ ಪಾಲ್ಗೊಳ್ಳುವ
ಮಾನವೀಯ ಅಂತಃಕರಣ ಮೆರೆಯುವ ಸಂಸ್ಕೃತಿ ನಮ್ಮದು. ಈ ಸಂಪ್ರದಾಯ ಜಪಾನಿಯರಲ್ಲೂ ಇದೆ. ಅವರು ತಮ್ಮ ಜೀವನದಲ್ಲಿ ಭೇಟಿಯಾದ ವ್ಯಕ್ತಿಗಳು ಅಗಲಿದ ಸುದ್ದಿ ತಿಳಿದರೆ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸುತ್ತಾರೆ.
ಇಲ್ಲದಿದ್ದರೆ ಕನಿಷ್ಠ ಅವರ ಕುಟುಂಬದ ಸದಸ್ಯರಿಗೆ ಶೋಕ ಸಂದೇಶಗಳನ್ನು ಕಳುಹಿಸಿ ಸಾಂತ್ವನ ಹೇಳುತ್ತಾರೆ. ನಮ್ಮ ಕುಟುಂಬದವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸರಿಯಷ್ಟೆ. ಆದರೆ ಅಂತ್ಯಕ್ರಿಯೆ ನೆರವೇರಿದ ನಂತರ, ಅವರ ಸಮಾಧಿಯನ್ನು ನೋಡಲು ಯಾರೂ ಹೋಗುವುದಿಲ್ಲ.
ಆದರೆ ಜಪಾನಿಯರು ತಮ್ಮ ತಂದೆ-ತಾಯಿ ಅಥವಾ ಬಂಧು-ಮಿತ್ರರ ಸಮಾಧಿಗಳಿಗೆ ವರ್ಷದಲ್ಲಿ ಕನಿಷ್ಠ ಐದು ಬಾರಿಯಾದರೂ ಭೇಟಿ ನೀಡುತ್ತಾರೆ. ಸಮಾಧಿಗೆ ಭೇಟಿ ನೀಡುವುದು ಉದಾತ್ತ ಸಂಸ್ಕಾರಗಳಂದು ಎಂಬ ನಂಬಿಕೆ ಅವರಲ್ಲಿದೆ. ‘ಇಂದು ನಾವು ಸಂತಸದಿಂದ ಇದ್ದರೆ ಅದಕ್ಕೆ ಕಾರಣ ನಮಗಾಗಿ ಜೀವ ತೆತ್ತ ಆ ಹಿರಿಯರೇ. ಅವರ ಆಚಾರ-ವಿಚಾರಗಳಿಂದ ನಾವು ಸಾಕಷ್ಟು ಪ್ರಭಾವಿತರಾಗಿರುತ್ತೇವೆ. ಆಗಾಗ ಅವರ ಸಮಾಧಿಗೆ ಹೋಗುವುದರಿಂದ ನಮ್ಮ ಕಣ್ಮುಂದೆ ಅವರ ಜೀವನದ ಹಲವು ಉತ್ತಮ ಸಂಗತಿಗಳು ನಮ್ಮನ್ನು ಪ್ರಭಾವಗೊಳಿಸುತ್ತವೆ.
ಇದರಿಂದ ಅವರ ವ್ಯಕ್ತಿತ್ವದಿಂದ ನಾವು ಪ್ರೇರಣೆ ಪಡೆಯುವುದು ಸಾಧ್ಯ. ಇಂದು ನಾವು ಇರುವುದಕ್ಕೆ ಅವರೇ ಕಾರಣ. ಅಸಲಿಗೆ ಅವರು ಮಾಡದೇ ಬಿಟ್ಟು ಹೋದ ಅಪೂರ್ಣ ಕಾರ್ಯಗಳನ್ನು ನಾವು ಮುಂದುವರಿಸುತ್ತಿದ್ದೇವೆ’ ಎಂದು ಅವರು ಭಾವಿಸುತ್ತಾರೆ. ಹಾಗೆಯೇ ಸಮಾಧಿಗೆ ಹೋಗಿ, ’ನೀವು ಮಾಡದೇ ಬಿಟ್ಟ ಕೆಲಸವನ್ನು ಮುಂದುವರಿಸಲು ನನಗೆ ಶಕ್ತಿ ನೀಡಿ, ಆಶೀರ್ವಾದ ಮಾಡಿ’ ಎಂದು ಪ್ರಾರ್ಥಿಸುತ್ತಾರೆ.
ಕೆಲವರಂತೂ ಅಗಲಿದ ತಮ್ಮ ತಂದೆ-ತಾಯಿಯರ ಸಮಾಧಿಗೆ ಪ್ರತಿ ವಾರವೂ ಭೇಟಿ ನೀಡಿ ಕೆಲ ಹೊತ್ತು ಅಲ್ಲಿ ಕಳೆಯುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಅಗಲಿದವರ ಜತೆ ಸತತ ಸಂಪರ್ಕದಲ್ಲಿರುವುದರಿಂದ
ಯಶಸ್ಸನ್ನು ಸಾಧಿಸಬಹುದು ಮತ್ತು ಇನ್ನಷ್ಟು ವಿನೀತರಾಗಬಹುದು ಎಂಬುದು ಈ ಕ್ರಿಯೆಯ ಹಿಂದಿರುವ ಆಶಯ. ಬಂಧುಗಳಷ್ಟೇ ಅಲ್ಲ, ದೊಡ್ಡ ಸಾಧಕರ ಸಮಾಧಿಗೂ ಅನೇಕರು ಭೇಟಿ ನೀಡಲು ಇದೇ ಕಾರಣ.
ಸಾವಿರಾರು ಜನರನ್ನು ಸಮಾಧಿಯಲ್ಲಿ ಹೂಳಿರುತ್ತಾರೆ. ಆ ಪೈಕಿ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ದೇಶಕ್ಕೆ ಕೊಡುಗೆ ಕೊಟ್ಟಿರುತ್ತಾರೆ. ಅಗಲಿದ ನಮ್ಮ ಬಂಧುಗಳ ಸಮಾಧಿಗೆ ಹೋಗುವಾಗ ನೂರಾರು ಜನರ ಸಮಾಧಿಯನ್ನು ದಾಟಿಕೊಂಡು ಹೋಗಬೇಕಿರುವುದರಿಂದ ಅವರ ಬದುಕಿನ ಬಾಳ ಪುಟಗಳನ್ನೂ ಓದುವ ಅವಕಾಶ ಸಿಗುತ್ತದೆ. ಇದರಿಂದ ಅವರ ಜೀವನದಿಂದಲೂ ಪ್ರೇರಣೆ ಪಡೆಯಲು ಸಹಾಯಕವಾಗುತ್ತದೆ. ಪ್ರತಿ ಸಲ ಸಮಾಧಿಗೆ ಹೋದಾಗ, ಜೀವನ ಎಷ್ಟು ಅಮೂಲ್ಯ ಎಂಬ ಭಾವನೆ ನಮ್ಮನ್ನು ಆವರಿಸಿಕೊಳ್ಳುತ್ತದೆ.
ಸಮಾಧಿಗೆ ಭೇಟಿ ನೀಡಿದವರು ಸುಮ್ಮನೆ ನೋಡಿ ಬರುವುದಿಲ್ಲ. ಸಮಾಧಿಯನ್ನು ಸ್ವಚ್ಛಗೊಳಿಸಿ ಬರುತ್ತಾರೆ. ಸಾಮಾನ್ಯವಾಗಿ ಸಮಾಧಿಗೆ ಹೋಗುವಾಗ ಯಾರೂ ಬರಿಗೈಲಿ ಹೋಗುವುದಿಲ್ಲ. ಕನಿಷ್ಠ ಹೂಗುಚ್ಛವನ್ನಾದರೂ ತೆಗೆದುಕೊಂಡು ಹೋಗುತ್ತಾರೆ. ಮೂರು-ನಾಲ್ಕು ದಿನಗಳ ಬಳಿಕ ಅದು ಕೊಳೆತು ನಾರುವುದರಿಂದ ಅವುಗಳನ್ನು
ಸ್ವಚ್ಛಗೊಳಿಸುವುದು ಸಹ ಮುಖ್ಯ. ಬೇರೆ ಸಮಾಧಿಯ ಮೇಲಿನ ಕೊಳೆತ ಹೂಗುಚ್ಛ ಕಂಡರೆ, ಯಾರೂ ಸುಮ್ಮನೆ ನೋಡಿ ಹೋಗುವುದಿಲ್ಲ.
ಅದು ಇಡೀ ವಾತಾವರಣವನ್ನು ಹಾಳು ಮಾಡುವುದರಿಂದ, ಯಾರೇ ಅದನ್ನು ನೋಡಿದರೂ ಸ್ವಚ್ಛಗೊಳಿಸಲು ಮುಂದಾಗುತ್ತಾರೆ. ಪ್ರತಿ ವರ್ಷ ಆಗ 15ರ ಒಂದು ವಾರ ಮುನ್ನ ಮತ್ತು ನಂತರ ಜಪಾನಿಯರು ‘ಒಬೋನ್’ (ಶ್ರಾದ್ಧ ಅಥವಾ ಪಿತೃಪಕ್ಷ ) ಆಚರಿಸುತ್ತಾರೆ. ಆಗ ಅಗಲಿದ ಹಿರಿಯರು ಆಗಮಿಸುತ್ತಾರೆ ಎಂಬ ನಂಬಿಕೆ ಅವರದು. ಜಪಾನಿ ಯರು ಸಣ್ಣ ಸಣ್ಣ ಸಂಗತಿಗಳ ಬಗ್ಗೆ ಬಹಳ ಮಹತ್ವ ನೀಡುತ್ತಾರೆ ಎಂಬ ಸಂಗತಿಯನ್ನು ಓದಿz. ನಾನು ಅಲ್ಲಿಗೆ ಹೋದಾಗ ಈ ಅಂಶ ಹೆಜ್ಜೆ ಹೆಜ್ಜೆಗೆ ಅನುಭವಕ್ಕೆ ಬಂದಿತು.
ಇದನ್ನೂ ಓದಿ: @vishweshwarbhat