Sunday, 5th January 2025

Mohan Babu: ತಮ್ಮಿಂದ ಹಲ್ಲೆಗೊಳಗಾದ ಪತ್ರಕರ್ತನನ್ನು ಭೇಟಿಯಾಗಿ ಕ್ಷಮೆಯಾಚಿಸಿದ ನಟ ಮೋಹನ್‌ ಬಾಬು

Mohan babu

ಹೈದರಾಬಾದ್‌: ಕಳೆದ ವಾರ ಪತ್ರಕರ್ತರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸುದ್ದಿಯಾಗಿದ್ದ ತೆಲುಗು ನಟ ಮೋಹನ್‌ ಬಾಬು(Mohan Babu) ಅವರು ಇದೀಗ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತನ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಅವರು ತಮ್ಮ ನಡೆಗೆ ಕ್ಷಮೆಯಾಚಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪತ್ರಕರ್ತ ಮುಪ್ಪಿಡಿ ರಂಜಿತ್‌ ಕುಮಾರ್‌ ಹೈದರಾಬಾದ್‌ನ ಯಶೋಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲಿಗೆ ಭೇಟಿ ಕೊಟ್ಟ ಮೋಹನ್‌ ಬಾಬು ರಂಜಿತ್‌ ಕುಮಾರ್‌ ಹಾಗೂ ಅವರ ಕುಟುಂಬಸ್ಥರಲ್ಲಿ ಕ್ಷಮೆಯಾಚಿಸಿದ್ದಾರೆ.

ಈ ಬಗ್ಗೆ ರಂಜಿತ್‌ ಕುಮಾರ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮೋಹನ್‌ ಬಾಬು ಅವರು ಆಸ್ಪತ್ರೆಗೆ ಭೇಟಿ ಕೊಟ್ಟು ನನ್ನ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಅವರು ನನ್ನ ಕುಟುಂಬ ಹಾಗೂ ಇಡೀ ಪತ್ರಕರ್ತರ ಜತೆ ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕ್ಷಮಾಪನಾ ಪತ್ರ ಮೋಹನ್‌ ಬಾಬು

ಇದಕ್ಕೂ ಮುನ್ನ ಮೋಹನ್‌ ಬಾಬು ಅವರು ಟಿವಿ 9ಮಾಧ್ಯಮಕ್ಕೆ ಕ್ಷಮಾಪನಾ ಪತ್ರ ಬರೆದಿದ್ದು, ಇತ್ತೀಚೆಗೆ ಸಂಭವಿಸಿದ ದುರದೃಷ್ಟಕರ ಘಟನೆಯನ್ನು ಔಪಚಾರಿಕವಾಗಿ ತಿಳಿಸಲು ಮತ್ತು ಸಂಭವಿಸಿದ ಘಟನೆಗಳ ಬಗ್ಗೆ ನನ್ನ ಆಳವಾದ ವಿಷಾದವನ್ನು ವ್ಯಕ್ತಪಡಿಸಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ವೈಯಕ್ತಿಕ ಕೌಟುಂಬಿಕ ವಿವಾದವು ದೊಡ್ಡ ಪರಿಸ್ಥಿತಿಗೆ ತಿರುಗಿದ್ದು, ಇದರಿಂದ ನನಗೆ ತುಂಬಾ ನೋವಾಗಿದೆ ಬಾಬು ಹೇಳಿದರು.

30 ರಿಂದ 50 “ಸಮಾಜ ವಿರೋಧಿಗಳು” ತನ್ನ ಮನೆಗೆ ಬಲವಂತವಾಗಿ ನುಗ್ಗಿದ್ದರಿಂದ ಆ ಕ್ಷಣ ನಾನು ತಾಳ್ಮೆ ಕಳೆದುಕೊಂಡು ಆ ರೀತಿ ನಡೆದುಕೊಳ್ಳವಂತಾಯಿತು. ಈ ವೇಳೆ ಪತ್ರಕರ್ತರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದು ಉದ್ದೇಶಪೂರ್ವಕವಾಗಿ ನಡೆದಿರುವ ಘಟನೆ ಅಲ್ಲ. ಆದರೂ ನಾನು ಸಂತ್ರಸ್ತ ಕುಟುಂಬಂ ಹಾಗೂ ಇಡೀ ಪತ್ರಕರ್ತ ಸಹೋದರರ ಜತೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಏನಿದು ಘಟನೆ?

ಆಸ್ತಿಗಾಗಿ ಮೋಹನ್‌ ಬಾಬು ಮಕ್ಕಳಾದ ಮನೋಜ್ ಹಾಗೂ ವಿಷ್ಣು ನಡುವೆ ತಿಕ್ಕಾಟ ನಡೀತಿದೆ. ವಿಷ್ಣು ಪರ ಮೋಹನ್ ಬಾಬು ನಿಂತಿದ್ದಾರೆ. ಇತ್ತೀಚೆಗೆ ತಮ್ಮ ಆಪ್ತರ ಮೂಲದ ತಂದೆ ಮೋಹನ್ ಬಾಬು ನನ್ನ ಮೇಲೆ ಹಲ್ಲೆ ಮಾಡಿಸಿದರು ಎಂದು ಮನೋಜ್ ಆರೋಪಿಸಿದ್ದರು.

ಜಲಪಲ್ಲಿಯಲ್ಲಿರುವ ಮೋಹನ್ ಬಾಬು ನಿವಾಸದಲ್ಲಿ ಮನೋಜ್ ಅವರ ಬೌನ್ಸರ್ ಗಳು ಹಾಗೂ ಮೋಹನ್ ಬಾಬು ರಕ್ಷಣೆಗೆ ಅವರ ಹಿರಿಯ ಪುತ್ರ ವಿಷ್ಣು ನೇಮಿಸಿದ್ದ ಬೌನ್ಸರ್ ಗಳ ನಡುವೆ ಘರ್ಷಣೆ ನಡೆದಿದೆ. ಮೋಹನ್‌ಬಾಬು, ಮನೋಜ್ ಮತ್ತು ಮೌನಿಕಾಳನ್ನು ಮನೆಗೆ ಪ್ರವೇಶಿಸಲು ಬಿಡದಿದ್ದಾಗ, ಮನೋಜ್ ಗೇಟು ಮುರಿದು ಒಳಬರಲು ಯತ್ನಿಸಿದ್ದು, ಸಂಘರ್ಷ ಇನ್ನಷ್ಟು ಹೆಚ್ಚಾಗಿತ್ತು ಎನ್ನಲಾಗಿದೆ. ಇದೇ ವೇಳೆ ಮೋಹನ್‌ ಬಾಬು ಮಾಧ್ಯಮ ಪ್ರತಿನಿಧಿ ಮೈಕ್ ಹಿಡಿದು ಪ್ರತಿಕ್ರಿಯೆ ಕೇಳುತ್ತಿದ್ದಂತೆ ಆ ಮೈಕ್ ಕಿತ್ತುಕೊಂಡು ದಾಳಿ ನಡೆಸಿದ್ದರು. ಅಲ್ಲದೇ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Mohan Babu Family Dispute: ಬೀದಿಗೆ ಬಿತ್ತು ನಟ ಮೋಹನ್ ಬಾಬು ಕುಟುಂಬದ ಆಸ್ತಿ ಕಲಹ!