Sunday, 5th January 2025

Harsha Murder Case: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಕೇಸ್ ಸಾಕ್ಷಿಗೆ ಬೆದರಿಕೆ, ಯುವಕನ ಮೇಲೆ ಎಫ್‌ಐಆರ್

harsha murder

ಶಿವಮೊಗ್ಗ : ಶಿವಮೊಗ್ಗದಲ್ಲಿ (Shivamogga News) ನಡೆದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ (Harsha murder case) ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಯಾಗಿದ್ದ ವ್ಯಕ್ತಿಗೆ ಯುವಕನೊಬ್ಬ ಕೊಲೆ ಬೆದರಿಕೆ ಹಾಕಿದ್ದು, ಇದಕ್ಕೆ ಸಂಬಂಧಿಸಿದಂತೆ ಇದೀಗ ಬೆದರಿಕೆ ಹಾಕಿದ ಯುವಕನ ವಿರುದ್ಧ ಕೇಸ್‌ ದಾಖಲು ಮಾಡಲಾಗಿದೆ.

ಕೋರ್ಟಿಗೆ ತೆರಳಿ ಸಾಕ್ಷಿ ಹೇಳದಂತೆ ಸಾಕ್ಷಿದಾರನಿಗೆ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಹರ್ಷ ಹತ್ಯೆ ಪ್ರಕರಣದಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿ ಸಾಕ್ಷಿಯಾಗಿದ್ದ. ಡಿಸೆಂಬರ್ 12ರಂದು ಎನ್ಐಎ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದ ಯುವಕ ಅನಂತರ ಸಾಕ್ಷಿ ಹೇಳದಂತೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಬಂದಿತ್ತು. ಮರುದಿನ ಕೋರ್ಟ್ ಸೂಚನೆಯ ಮೇರೆಗೆ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದ ಸೀಗೆಹಟ್ಟಿ ಬಳಿ ಎರಡು ವರ್ಷದ ಹಿಂದೆ ಹರ್ಷ ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್‌ ಬಂಕ್‌ ಉದ್ಯೋಗಿಯೊಬ್ಬನನ್ನು NIA ಸಾಕ್ಷಿಯಾಗಿ ಪರಿಗಣಿಸಿತ್ತು.ಈಗ ಆತನಿಗೆ ಅಪರಿಚಿತನೊಬ್ಬ ಬೆದರಿಕೆ ಒಡ್ಡಿರುವ ಆರೋಪ ಕೇಳಿ ಬಂದಿದೆ. ಹಿಂದೂ ಹರ್ಷ ಹತ್ಯೆಯಾದ ದಿನ ಆರೋಪಿಗಳು ಶಿವಮೊಗ್ಗದ ಪೆಟ್ರೋಲ್‌ ಬಂಕ್‌ನಲ್ಲಿ ತಮ್ಮ ಕಾರಿಗೆ ಇಂಧನ ಭರ್ತಿ ಮಾಡಿಸಿಕೊಂಡಿದ್ದರು. ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪೆಟ್ರೋಲ್‌ ಭರ್ತಿ ಮಾಡಿದ್ದ. ಈ ಕಾರಣಕ್ಕೆ ಆತನನ್ನು ಸಾಕ್ಷಿಯಾಗಿ ಪರಿಗಣಿಸಲಾಗಿತ್ತು.

ಪೊಲೀಸ್‌ ಮೇಲೆ ಹಲ್ಲೆ ಮಾಡಿದ ರೌಡಿ ಕಾಲಿಗೆ ಗುಂಡು

ಬೆಂಗಳೂರು: ಬಂಧನದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್‌ ಲೋಕಿ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ.

ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ತಾಲೂಕಿನ ಮಾಯಸಂದ್ರದಲ್ಲಿ ನಡೆದಿದೆ. ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಲೋಕೇಶ್‌ ಅಲಿಯಾಸ್‌ ಲೋಕಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಕಾಲಿಗೆ ಫೈರಿಂಗ್ ಮಾಡಿದ್ದಾರೆ.

ರೌಡಿಶೀಟರ್ ಮನೋಜ್ ಮೇಲೆ ಲೋಕಿ ಗ್ಯಾಂಗ್ ದಾಳಿ ಮಾಡಿತ್ತು. ಘಟನೆ ಬಳಿಕ ಲೋಕಿ ಮತ್ತು ಆತನ ಗ್ಯಾಂಗ್ ತಲೆಮೆರೆಸಿಕೊಂಡಿತ್ತು. ಇಂದು ಬಂಧಿಸಲು ಹೋಗಿದ್ದಾಗ ಪೊಲೀಸರ ಮೇಲೆಯೇ ಲೋಕಿ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗಾಗಿ ಜಿಗಣಿ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಫೈರಿಂಗ್ ಮಾಡಿದ್ದಾರೆ. ಗಾಯಗೊಂಡಿರುವ ರೌಡಿ ಶೀಟರ್ ಲೋಕಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೊಬೈಲ್ ಅಂಗಡಿಯ ಶಟರ್ ಮುರಿದು, ಲಕ್ಷಾಂತರ ಮೌಲ್ಯದ ಮೊಬೈಲ್ ಕಳ್ಳತನ

ಭಾನುವಾರ ತಡರಾತ್ರಿ ಬೆಂಗಳೂರಿನ ಶಿವಾಜಿನಗರದಲ್ಲಿ ಮೊಬೈಲ್ ಅಂಗಡಿ ಶಟರ್ ಮುರಿದು ಲಕ್ಷಾಂತರ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದಾರೆ. ಶಿವಾಜಿನಗರದ ಬಳಿ ಇರುವ ವಿಶ್ವಾಸ್ ಕಮ್ಯುನಿಕೇಷನ್ ಎಂಬ ಮೊಬೈಲ್ ಅಂಗಡಿಯ ಶಟರ್ ಮುರಿದು ಲಕ್ಷಾಂತರ ಮೌಲ್ಯದ ಮೊಬೈಲ್ ಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.

ರಾತ್ರೋರಾತ್ರಿ ಮೊಬೈಲ್ ಅಂಗಡಿ ಲೂಟಿ ಮಾಡಿರುವ ಖದೀಮರು, ಸಿಸಿಟಿವಿ ಕ್ಯಾಮೆರಾದಲ್ಲಿ ತಮ್ಮ ಮುಖ ಕಾಣಬಾರದೆಂದು ಮುಖಕ್ಕೆ ಮಾಸ್ಕ ಧರಿಸಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Hosur Crime: ಕೋರ್ಟ್‌ ಆವರಣದಲ್ಲಿ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ-ಅಣ್ಣಾಮಲೈ ಕಿಡಿ!